ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದಕ್ಕೆ ಪುಷ್ಟಿ ನೀಡಿತೇ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ?
ಜೆಡಿಎಸ್ ಅಭ್ಯರ್ಥಿಗಳು ಪ್ರದರ್ಶಿಸುತ್ತಿರುವ ನಡೆ, ಕುಮಾರಸ್ವಾಮಿಯವರ ಹೇಳಿಕೆಗಳು ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನ್ನು ಬೆಂಬಲಿಸಿ ಒಳಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯ ಕುರಿತಾದ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.
ಬೆಂಗಳೂರು: ವಿಜಯಪುರ ನಗರ ಜೆಡಿಎಸ್ (JDS) ಅಭ್ಯರ್ಥಿ ಬಿಎಚ್ ಮಹಾಬರಿ ಚುನಾವಣೆಯಿಂದ ಹಿಂದೆ ಸರಿದು ಕಾಂಗ್ರೆಸ್ (Congress) ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಒಪ್ಪಂದಕ್ಕೆ ಸಂಬಂಧಿಸಿದ ಚರ್ಚೆ ಜೋರಾಗಿದೆ. ಈ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ನೀಡಿರುವ ಪ್ರತಿಕ್ರಿಯೆ ಕೂಡ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯಿಂದ ಹಿಂದೆ ಸರಿಯುವ ಬಗ್ಗೆ ಭಾನುವಾರ ನಿರ್ಧಾರ ಪ್ರಕಟಿಸಿದ್ದ ಮಹಾಬರಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಹಾಗೂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿಯೇ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವ ಕಡೆ ಅದಕ್ಕೆ ಬಲ ತುಂಬಬೇಕು ಎಂದು ಈ ಹಿಂದೆ ಕುಮಾರಸ್ವಾಮಿ ಭಾಷಣವೊಂದರಲ್ಲಿ ಹೇಳಿದ್ದರು. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಪೂರ್ಣ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಮಹಾಬರಿ ತಿಳಿಸಿದ್ದರು.
ಇಂದು (ಸೋಮವಾರ) ವಿಜಯಪುರಕ್ಕೆ ಭೇಟಿ ನೀಡಿರುವ ಕುಮಾರಸ್ವಾಮಿ ಅವರ ಬಳಿ ಮಾಧ್ಯಮ ಪ್ರತಿನಿಧಿಗಳು, ಮಹಾಬರಿ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಗ್ಗೆ ಹಾಗೂ ಕಾಂಗ್ರೆಸ್‍ಗೆ ಶಕ್ತಿ ತುಂಬಬೇಕು ಎಂದು ಹೇಳಿದ್ದರ ಕುರಿತು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಹೆಚ್ಡಿಕೆ ನಂತರ, ಕಾಂಗ್ರೆಸ್ ಪ್ರಬಲವಾಗಿರುವ ಕಡೆಗಳಲ್ಲಿ ಆ ಪಕ್ಷಕ್ಕೆ ಬಲ ತುಂಬುವಂತೆ ಹೇಳಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ – ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಬಿಜೆಪಿ ಆರೋಪಕ್ಕೆ ಪುಷ್ಟಿ ದೊರೆತಂತಾಗಿದೆ.
‘ಕಾಂಗ್ರೆಸ್ – ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು’
ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕು ಪೂರಕವಾಗಿ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಇದರಿಂದ ಸಾಬೀತಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
‘ಕೈ’ ಅಭ್ಯರ್ಥಿಗೆ ಮತ ನೀಡಿ ಎಂದಿದ್ದ ಭೋಜೇಗೌಡ
ಜೆಡಿಎಸ್‍ಗೆ ಬಿಟ್ಟು ಕಾಂಗ್ರೆಸ್‍ಗೆ ಮತ ಹಾಕಿ ಎಂದು ಪರಿಷತ್ ಸದಸ್ಯ ಎಸ್ಎಲ್ ಭೋಜೇಗೌಡ ಹೇಳಿದ್ದಾರೆ ಎನ್ನಲಾದ ಆಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಕಾರ್ಯಕರ್ತರ ಜೊತೆ ಮಾತನಾಡಿದ್ದ ಭೋಜೇಗೌಡ, ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರನ್ನು ಬೆಂಬಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈ ಬಾರಿ ನೀವೆಲ್ಲಾ ಸೇರಿ ಕಾಂಗ್ರೆಸ್‍ಗೆ ಮತ ನೀಡಬೇಕು. ಈ ಬಾರಿ ಒಂದು ಸಲ ಈ ರೀತಿ ಮಾಡಿ ಎಂದು ಹೇಳಿದ್ದರು.
‘ಬಿ ಟೀಮ್’ ಆರೋಪ
ಜೆಡಿಎಸ್ ಅನ್ನು ಕಾಂಗ್ರೆಸ್ನ ಬಿ ಟೀಮ್ ಎಂದು ಬಿಜೆಪಿ ಹಿಂದಿನಿಂದಲೂ ಟೀಕಿಸುತ್ತಾ ಬಂದಿದೆ. ಅದೇ ರೀತಿ ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಟೀಕಿಸುತ್ತಾ ಬಂದಿದೆ. ಆದರೆ, ಇದೀಗ ಜೆಡಿಎಸ್ ಅಭ್ಯರ್ಥಿಗಳು ಪ್ರದರ್ಶಿಸುತ್ತಿರುವ ನಡೆ, ಕುಮಾರಸ್ವಾಮಿಯವರ ಹೇಳಿಕೆಗಳು ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನ್ನು ಬೆಂಬಲಿಸಿ ಒಳಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯ ಕುರಿತಾದ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ