ರಾಮನಗರ: ಜೆಡಿಎಸ್ (JDS) ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಒಳಜಗಳ ಶುರುವಾಗಿದೆ. ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ (Bhavani Revanna) ಸ್ಪರ್ಧೆ ವಿಚಾರವಾಗಿ ಕುಟುಂಬದಲ್ಲೇ ಬಿರುಕು ಬಿಟ್ಟಿದೆ. ಈ ವಿಚಾರವಾಗಿ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧಿಸುವುದಾದರೇ ರಾಮನಗರದಿಂದ ನನಗೆ (ಶಾಸಕಿ ಅನಿತಾ ಕುಮಾರಸ್ವಾಮಿ) ನೀಡಿ ಎಂದು ಅನಿತಾ ಕುಮಾರಸ್ವಾಮಿಯವರು (Anita Kumarswamy) ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ವಿಚಾರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು (Nikhil Kumarswmay) ಮಾತನಾಡಿ ಶಾಸಕಿ ಅನಿತಾ ಕುಮಾರಸ್ವಾಮಿ ಟಿಕೆಟ್ ಕೇಳ್ತಿದ್ದಾರೆ ಎಂಬುದು ಊಹಾಪೋಹ. ಚುನಾವಣಾ ರಾಜಕೀಯದಿಂದ ಅನಿತಾ ಕುಮಾರಸ್ವಾಮಿಯವರು ಹಿಂದೆ ಸರಿದಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ವರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷ ಹೇಳಿದರೆ ನಾನೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ. ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಬೇಕಿರುವುದು ಅನಿವಾರ್ಯ. ಪಂಚರತ್ನ ಯೋಜನೆ ಜಾರಿಗೆ ತರಲು 4 ತಿಂಗಳಿಂದ ಪ್ರಯತ್ನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮೋದಿ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ತಂತ್ರ: ಕರ್ನಾಟಕದಲ್ಲಿ 20 ರ‍್ಯಾಲಿ ಮಾಡಲಿರುವ ಪ್ರಧಾನಿ
ದೇವೇಗೌಡರ ಕುಟುಂಬದಲ್ಲಿ ಕದನ ವಿಚಾರವಾಗಿ ಮಾತನಾಡಿದ ಅವರು ನಮಗೆ ಅತ್ಯಂತ ನೋವಾಗುವ ವಿಚಾರ. ಎಲ್ಲಿಂದ ಊಹಾಪೋಹಗಳು ಬರುತ್ತವೆ ಎಂದು ಗೊತ್ತಿಲ್ಲ. ಅನಿತಾ ಕುಮಾರಸ್ವಾಮಿಯವರು ಟಿಕೆಟ್ ಕೇಳುತ್ತಿದ್ದಾರೆ ಎಂದು ಗೊಂದಲ ಸೃಷ್ಠಿ ಆಗಿದೆ. ಅವರು ಸಂಘಟನೆ ಮಾಡುತ್ತಿದ್ದಾರೆ. ಅನಿತಾ ಕುಮಾರಸ್ವಾಮಿಯವರಿಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ಇದರ ಬಗ್ಗೆ ಚರ್ಚೆ ಆಗಿಲ್ಲ ಎಂದು ಅನಿತಾ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ, ನಿಖಿಲ್ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಕಣಕ್ಕಿಳಿದಿದ್ದರು. ಎರಡೂ ಕಡೆ ಗೆಲುವು ಸಾಧಿಸಿದ್ದರು. ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕೆ ಇಳಿಸಿದರು. ಅನಿತಾ ಕುಮಾರಸ್ವಾಮಿ ಜಯಬೇರಿ ಬಾರಿಸಿದರು. ಈಗ ಅನಿತಾ ಕುಮಾರಸ್ವಾಮಿಯವರು ಪುತ್ರ ನಿಖಿಲ್ ಕುಮಾರಸ್ವಾಮಿಯವರಿಗೆ ಕೇತ್ರ ಬಿಟ್ಟು ಕೊಟ್ಟಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:29 pm, Tue, 4 April 23