ಟಿಕೆಟ್ಗಾಗಿ ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು, ಕೈಯಲ್ಲಿ ಬಾಟಲಿ ಹಿಡಿದು ಬಿಜೆಪಿ ನಾಯಕನ ಹೈಡ್ರಾಮಾ
ಒಂದೇ ಬಿಜೆಪಿ ನಾಯಕರು ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ಮಾಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮುಖಂಡ ಟಿಕೆಟ್ಗಾಗಿ ದೊಡ್ಡ ಹೈಡ್ರಾಮಾ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಈಗಾಗಲೇ ದಿನಾಂಕ ನಿಗದಿಯಾಗಿದೆ. ಆದ್ರೆ, ಬಿಜೆಪಿ (BJP) ಇನ್ನೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈ ಬಾರಿ ಬಿಜೆಪಿ ಹೈಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಟಿಕೆಟ್ಗಾಗಿ ನಾಯಕರು ನಾನಾ ಕಸರತ್ತು ನಡೆಸಿದ್ದಾರೆ. ತಮ್ಮ ನಾಯಕರ ಮೂಲಕ ಟಿಕೆಟ್ಗಾಗಿ ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಟಿಕೆಟ್ಗಾಗಿ ಬಿಜೆಪಿ ನಾಯಕರೊಬ್ಬರು ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು, ಕೈಯಲ್ಲಿ ಬಾಟಲಿ ಹಿಡಿದು ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಹೌದು…ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಎನ್ನುವರು ಈ ಬಾರಿ ಟಿಕೆಟ್ ನೀಡಬೇಕೆಂದು ಪಟ್ಟ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಗಮನ ಸೆಳೆಯಲು ರಾಜೇಂದ್ರ ಅಂಬಲಿ ಅವರು ಇಂದು ಬೆಂಗಳೂರಿನಲ್ಲಿ ಕುತ್ತಿಗೆಗೆ ನೇಣು ಕುಣಿಕೆ ರೀತಿ ಹಾಕಿಕೊಂಡು, ಕೈಯಲ್ಲಿ ಬಾಟಲಿ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಸಚಿವ ಡಾ. ಸುಧಾಕರ್ ಎದುರು ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು, ಕೈಯಲ್ಲಿ ಬಾಟಲಿ ಹಿಡಿದುಕೊಂಡು ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಇದೆಲ್ಲ ಸರಿಯಲ್ಲ ಎಂದು ಹೇಳಿ ಸುಧಾಕರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕೈ ಟಿಕೆಟ್ ತಪ್ಪಿದಕ್ಕೆ ಕಣ್ಣೀರು ಹಾಕಿದ ಕೈ ನಾಯಕಿ
ಮೇಲಿನದ್ದು ಬಿಜೆಪಿ ನಾಯಕನ ಕಥೆಯಾಗಿದ್ದರೆ, ಇತ್ತ ಕಾಂಗ್ರೆಸ್ ನಾಯಕಿ ಸಹ ಟಿಕೆಟ್ ಕೈತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾ ಮಲ್ಲೇಶ್ ನಾಯ್ಕ ಅವರು ಕಣ್ಣೀರಿಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕಾಂಗ್ರೆಸ್ ಟಿಕೆಟ್ಗಾಗಿ ಕಸರತ್ತು ನಡೆಸಿದ್ದರು. ಆದ್ರೆ, ಅಂತಿಮವಾಗಿ ಕಾಂಗ್ರೆಸ್ ಬಸವಂತರಾಯಪ್ಪ ಎನ್ನುವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಸಮಧಾನಗೊಂಡಿರುವ ಸವಿತಾ ಮಲ್ಲೇಶ್ ನಾಯ್ಕ ಇಂದು ಸುದ್ದಿಗೋಷ್ಠಿಯಲ್ಲಿ ತಾಯಿ ಜೊತೆ ಕಣ್ಣೀರು ಹಾಕಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ