ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಚಿತ್ತರಗಿ ಶ್ರೀ, ಪೇಚಿಗೆ ಸಿಲುಕಿದ ಸಂಘಟಕರು
ಬಾಗಲಕೋಟೆಯ ಕೂಡಲಸಂಗಮದ ಬಸವ ವೇದಿಕೆಯಲ್ಲಿ ಇಂದು ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ ಈ ಕಾರ್ಯಕ್ರಮದಲ್ಲಿ ಚಿತ್ತರಗಿ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಪ್ರಸ್ತಾಪಿಸಿದರು.
ಬಾಗಲಕೋಟೆ: ಪ್ರಸ್ತುತ ರಾಷ್ಟ್ರ ನಾಯಕರು ಬಸವೇಶ್ವರರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಬಸವಣ್ಣನವರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಎಂದು ಇಳಕಲ್ನ ಚಿತ್ತರಗಿ ಶ್ರೀಗಳು ಹೇಳಿದ್ದಾರೆ. ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾಗಿಯಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳು ಮೋದಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕಾರ್ಯಕ್ರಮದ ಸಂಘಟಕರು ಪೇಚಿಗೆ ಸಿಲುಕಿದರು. ಇನ್ನೊಂದೆಡೆ, ಪ್ರಾಸ್ತಾವಿಕ ಭಾಷಣ ಮಾಡಿದ ಡಾ. ಸಿದ್ದರಾಮ ಸ್ವಾಮೀಜಿ ಅವರು ರಾಹುಲ್ ಗಾಂಧಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು. ರಾಹುಲ್ ಗಾಂಧಿಯನ್ನ ಯುವಕರ ಕಣ್ಮಣಿ ಎಂದು ಬಣ್ಣಿಸಿದರು.
ನೀವು ನಮ್ಮ ಜನ ನಾಯಕ, ಒಬ್ಬ ಜನ ನಾಯಕರ ಜಯಂತಿಗೆ ದೂರದಿಂದ ಬಂದಿದ್ದಕ್ಕೆ ಧನ್ಯವಾದ ತಿಳಿಸಿದ ಸಿದ್ದರಾಮ ಸ್ವಾಮೀಜಿ, ಬಸವಣ್ಣನವರ ಬಗ್ಗೆ ರಾಹುಲ್ ಗಾಂಧಿಗೆ ಮಾಹಿತಿ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ಹಿಂದಿಯಲ್ಲೇ ಮಾತನಾಡಿದರು. ಬಸವಣ್ಣನವರ ಜೀವನ, ಸಾಧನೆ ಬಗ್ಗೆ ಮಾತನಾಡುವುದು ಹೆಮ್ಮೆಯ ಸಂಗತಿ. ಕೂಡಲಸಂಗಮ ನಮ್ಮೇಲ್ಲರ ಶ್ರದ್ಧಾ ಕೇಂದ್ರವಾಗಿದೆ. ಕೂಡಲಸಂಗಮಕ್ಕೆ ಭೇಟಿ ನೀಡಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ. ಮೂಢನಂಬಿಕೆ, ಕಂದಾಚಾರ ದೂರ ಮಾಡಲು ಬಹಳ ದೊಡ್ಡ ಹೆಜ್ಜೆ ಬಸವಣ್ಣ ಇಟ್ಟಿದ್ದರು ಎಂದರು.
ಇದನ್ನೂ ಓದಿ: Basava Jayanti: ಬಸವೇಶ್ವರರಿಗೆ ನಮಿಸಿ ಅವರ ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ ಎಂದ ಪ್ರಧಾನಿ ಮೋದಿ
ವಚನಗಳು ಲಿಂಗಾಯತ ಧರ್ಮದ ಸಂವಿಧಾನ: ಸಿದ್ದರಾಮ ಶ್ರೀ
ವಚನಗಳು ಲಿಂಗಾಯತ ಧರ್ಮದ ಸಂವಿಧಾನ ಎಂದು ನಂಬಲಾಗುತ್ತದೆ. ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ, ಧಾರ್ಮಿಕ ಸ್ಥಾನಮಾನವನ್ನು ಬಸವಣ್ಣನವರು ಕಲ್ಪಿಸಿಕೊಟ್ಟಿದ್ದರು ಎಂದು ಹೇಳಿದ ಸಿದ್ದರಾಮ ಶ್ರೀ, ಬಸವಣ್ಣನವರು ವಿನಯವಂತಿಕೆಯಿಂದ ಬಹಳ ದೊಡ್ಡ ನಾಯಕರಾಗಿ ಬೆಳೆದರು. ಲಿಂಗಾಯತ ಧರ್ಮ, ಸಮುದಾಯ, ಸಂಪ್ರದಾಯ ಇರುವವರೆಗೂ ಬಸವಣ್ಣನವರ ಆದರ್ಶಗಳಿರುತ್ತದೆ ಎಂದರು.
ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಸನ್ಮಾನ
ಬಸವ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿ ಗೌರಿವಸಲಾಯಿತು. ವಿಜಯಾನಂದ ಕಾಶಪ್ಪನವರ್ ದಂಪತಿ ರಾಹುಲ್ ಗಾಂಧಿಗೆ ಬೆಳ್ಳಿಯ ಬಸವಣ್ಣ ಪ್ರತಿಮೆ ನೀಡಿ ಗೌರವಿಸಿದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲ ಗಣ್ಯರಿಗೂ ಸನ್ಮಾನ ಮಾಡಿ ಸತ್ಕಾರ ಮಾಡಲಾಯಿತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sun, 23 April 23