2023ರ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ರಣತಂತ್ರ, ಇತ್ತ ರಿವರ್ಸ್ ಆಪರೇಷನ್​ಗೆ ಕೈ ಪ್ಲ್ಯಾನ್!

| Updated By: ರಮೇಶ್ ಬಿ. ಜವಳಗೇರಾ

Updated on: Jan 13, 2023 | 10:37 PM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜಧಾನಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​, ಬಿಜೆಪಿ ಶತಾಯಗತಾಯ ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ನಗಾರಿ ಬಾರಿಸಲೇಬೇಕು ಎಂದು ತಂತ್ರ, ಪ್ರತಿತಂತ್ರ ಹೆಣೆಯುತ್ತಿವೆ.

2023ರ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ರಣತಂತ್ರ, ಇತ್ತ ರಿವರ್ಸ್ ಆಪರೇಷನ್​ಗೆ ಕೈ ಪ್ಲ್ಯಾನ್!
ಸಾಂದರ್ಭಿಕ ಚಿತ್ರ
Follow us on

ಮುಂಬರುವ ವಿಧಾನಸಭೆ (Karnataka Assembly Elections 2023) ಕದನ ಕುರುಕ್ಷೇತ್ರ ಈಗಿನಿಂದಲೇ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜ್ಯದಲ್ಲಿ ಚುಕ್ಕಾಣಿ​ ಹಿಡಿಯಬೇಕು ಎಂದು ಕಾಂಗ್ರೆಸ್​ ಹಾಗೂ ಬಿಜೆಪಿ  ಜಿದ್ದಿಗೆ ಬಿದ್ದವರಂತೆ ರಣಕಹಳೆ ಮೊಳಗಿಸಿದ್ದಾರೆ. ಇಷ್ಟು ದಿನ ಗೆಲ್ಲುವ ಕ್ಷೇತ್ರಗಳಲ್ಲಿ ಗೇಮ್​ ಪ್ಲ್ಯಾನ್​ ಮಾಡುತ್ತಿದ್ದ ‘ಕೈ’, ಕಮಲ ಈಗ ರಾಜಧಾನಿ ಬೆಂಗಳೂರಿನಲ್ಲಿ (Bengaluru)  ಅಶ್ವಮೇಧ ಸಾರುವುದಕ್ಕೆ ಸನ್ನದ್ಧವಾಗಿದೆ.  ನಮ್ಮದೇ ಅಧಿಪತ್ಯ ಇರಬೇಕು ನಮ್ಮದೇ ಪಾರುಪತ್ಯ ಮೇರೆಯಬೇಕು ಎಂದು ತೆರೆಮರೆಯಲ್ಲೇ ತಂತ್ರ ಪ್ರತಿತಂತ್ರಗಳನ್ನ ಹೆಣೆಯುತ್ತಿವೆ.

ಹೌದು..ಹೇಗಾದರೂ ಮಾಡಿ ಈ ಬಾರಿ ಬೆಂಗಳೂರಿನಲ್ಲಿ ನಿರಾಯಸವಾಗಿ ಗೆಲವು ಸಾಧಿಸಬೇಕು ಎಂದು ಕೇಸರಿ ಪಾಳೆಯ ಮೆಗಾ ರಣತಂತ್ರಗಳನ್ನ ಹೆಣೆದುಕೊಂಡು ಕೂತಿದೆ. ಇದಕ್ಕಾಗಿ ಅದ್ಯಾರಿಂದ ರಾಜ್ಯದಲ್ಲಿ ಚುಕ್ಕಾಣಿ ಹಿಡಿದ್ರೋ.. ಅದ್ಯಾರಿಂದ ಸಂಖ್ಯಾಬಲ ಹೆಚ್ಚಿಸಿಕೊಂಡ್ರೋ ಅವರ ಮೂಲಕವೇ ಕಾಂಗ್ರೆಸ್​ಗೆ ಕೌಂಟರ್​ ಕೊಟ್ಟು ಪಕ್ಷ ಬಲವರ್ಧನೆಗೆ ಬಿಜೆಪಿ ಸ್ಕೆಚ್​ ಹಾಕಿದೆ. 28 ಕ್ಷೇತ್ರಗಳಿರುವ ಬೆಂಗಳೂರಿನಲ್ಲಿ ಬಿಜೆಪಿ ದೊಡ್ಡ ಮೊತ್ತದ ಖಾತೆ ತೆರೆಯಬೇಕು ಅಂತ ಕನಸಿನ ಗೋಪುರವನ್ನೇ ಕಟ್ಟಿಕೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಗೆದ್ದು ಕಾಂಗ್ರೆಸ್​​ಗೆ ಪಾಠ ಕಲಿಸಬೇಕು ಎಂದು ಶಪಥಗೈದಿದೆ.

ಇದನ್ನೂ ಓದಿ: ಮನೆ ದೇವರ ಭವಿಷ್ಯವಾಣಿಯನ್ನು ಧಿಕ್ಕರಿಸಿದ ಸಿದ್ದರಾಮಾಯ್ಯ, 2 ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಭವಿಷ್ಯಕ್ಕೆ ಸಿದ್ದು ಹೇಳಿದ್ದಿಷ್ಟು

28 ಕ್ಷೇತ್ರಗಳಲ್ಲಿ 22 ಕ್ಷೇತ್ರ ಗೆಲ್ಲಲು ಬಿಗ್ ಟಾರ್ಗೆಟ್

28 ಕ್ಷೇತ್ರಗಳಲ್ಲಿ ಈ ಬಾರಿ ಏನಾದ್ರು ಮಾಡಿ 22 ಕ್ಷೇತ್ರ ಗೆಲ್ಲಲೇ ಬೇಕು ಅಂತ ಬಿಗ್​ ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯ 15 ಕ್ಷೇತ್ರದಲ್ಲಿ ಕೇಸರಿ ಬಾವುಟ ನೆಟ್ಟಿರುವ ಬಿಜೆಪಿ, ಸ್ವಲ್ಪ ಕಷ್ಟ ಪಟ್ಟರೆ ಇನ್ನಷ್ಟು ಕ್ಷೇತ್ರಗಳನ್ನ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಮಡಿದೆ. ಪ್ರಮುಖವಾಗಿ ಬ್ಯಾಟರಾಯನಪುರ, ಶಿವಾಜಿನಗರ, ಜಯನಗರ, ಹೆಬ್ಬಾಳ ಇಲ್ಲಿ ವಿಜಯಪತಾಕೆ ಹಾರಿಸಲು ತಂತ್ರಗಾರಿಕೆಗೆ ಮುಂದಾಗಿದೆ. ಇಷ್ಟೇ ಅಲ್ಲ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕಡೆ ಗಮನ ಹರಿಸಿ, ಕಾಂಗ್ರೆಸ್​ನಿಂದ ಬಂದ ವಲಸಿಗರನ್ನ ಇಟ್ಟುಕೊಂಡು, 2ನೇ ಹಂತದ ನಾಯಕರನ್ನ ಸೆಳೆಯಲು ಯತ್ನ ನಡೆಸಿದೆ.

2ನೇ ಹಂತದ ನಾಯಕರನ್ನ ಬೆಳೆಸದೇ ಮಹಾ ಎಡವಟ್ಟು

ಒಂದು ಅವಧಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್​ ಅಧಿಪತ್ಯವೇ ಹೆಚ್ಚಿತ್ತು. ಆದ್ರೆ, ಈಗ ಕಾಂಗ್ರೆಸ್​​ಗೆ ಖಡಕ್​ ಕ್ಯಾಂಡಿಡೇಟ್​ಗಳದ್ದೇ ಟೆನ್ಷನ್​.. ಸರಿಯಾದ ಅಭ್ಯರ್ಥಿ ಇಲ್ಲದೇ ಕಾಂಗ್ರೆಸ್​​ಗೆ ಏಳು, ಬೀಳು ಎಂಬಾತಾಗಿದೆ. ಪ್ರಮುಖವಾಗಿ ಯಶವಂತಪುರ, ಆರ್​​.ಆರ್​ ನಗರ & ಕೆ.ಆರ್​ ಪುರಂದಲ್ಲಿ ಆಪರೇಷನ್​ ಕಮಲದಿಂದ ಕಾಂಗ್ರೆಸ್​ ಮೂರು ಪ್ರಮುಖ ಕ್ಷೇತ್ರಗಳೇ ಲಾಸ್​ ಆದ್ವು.. ಎಸ್​​.ಟಿ ಸೋಮಶೇಖರ್​ ವಲಸೆಯಿಂದ ಯಶವಂತಪುರ ಮಿಸ್ ಆದ್ರೆ, ಮುನಿತ್ನರಿಂದ ಆರ್​.ಆರ್​ ನಗರ ಕಳೆದುಕೊಳ್ಳುವಂತಾಯ್ತು.

ಇನ್ನು ಭೈರತಿ ಬಸವರಾಜ್​ರಿಂದ ಕೆ.ಆರ್​ ಪುರಂ ಕೈ ತಪ್ಪಿ ಹೋಯ್ತು. ಇಷ್ಟೆಲ್ಲಾ ಆಪರೇಷನ್​ ನಡೆದ್ರೂ ಕಾಂಗ್ರೆಸ್​ ಪಕ್ಷ ಸಂಘಟನೆ ಮಾಡಿಯೇ ಇಲ್ಲ. ಇದರ ಜತೆಗೆ ಆಪರೇಷನ್​ ಆದ ಕ್ಷೇತ್ರಗಳಲ್ಲಿ 2ನೇ ಹಂತದ ನಾಯಕರನ್ನ ಬೆಳೆಸದೇ ಕಾಂಗ್ರೆಸ್​ ಎಡವಿದ್ದಲ್ಲದೇ, ನೆಲೆ ಇಲ್ಲದ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪಕ್ಷ ಸಂಘಟನೆ ಮಾಡದೇ ಕೈ ಚೆಲ್ಲಿ ಕುಳಿತಿದ್ದು, ಬೆಂಗಳೂರಿನಲ್ಲಿ ದೊಡ್ಡ ಪೆಟ್ಟು ತಿನ್ನುವಂತಾಯ್ತು. ಇಷ್ಟೆಲ್ಲಾ ಪೆಟ್ಟು ಒಳೇಟುಗಳ ನಡುವೆ ಕಾಂಗ್ರೆಸ್​ ಬೆಂಗಳೂರಿನಲ್ಲಿ ಪುಟಿದೇಳೋಕೆ ಸ್ಕೆಚ್​ ಹಾಕಿದೆ.. ಗೆಲುವಿನ ಸವಾಲುಗಳನ್ನ ಮೆಟ್ಟಿ ನಿಲ್ಲೋಕೆ ರಣತಂತ್ರ ಹೆಣೆದಿದ್ದು, ಬಿಜೆಪಿ ಆಪರೇಷನ್​ಗೆ ದೊಡ್ಡ ಸರ್ಜರಿ ಮಾಡೋಕೆ ಸಿದ್ಧವಾಗ್ತಿದ್ಯಂತೆ..

2023 ರ ಚುನಾವಣೆಗೆ ರಿವರ್ಸ್ ಆಪರೇಷನ್​ಗೆ ಪ್ಲ್ಯಾನ್!

2023 ರಲ್ಲಿ ರಿವರ್ಸ್​ ಆಪರೇಷನ್​ಗೆ ಪ್ಲ್ಯಾನ್​ ಮಾಡಿರುವ ಕಾಂಗ್ರೆಸ್​​, ರಾಜರಾಜೇಶ್ವರಿ ನಗರದಲ್ಲಿ ರಾಜನಾಗಲು ರಣತಂತ್ರ ಹೆಣೆದಿದೆ. ಆರ್.ಆರ್.ನಗರದಲ್ಲಿ ಡಿ.ಕೆ.ಸುರೇಶ್ ಹೊಸ ತಂತ್ರಗಾರಿಕೆ ಮಾಡಿದ್ದು, ಮುನಿರತ್ನ ಸೋಲಿಸಲು ಹೊಸ ದಾಳ ಉರುಳಿಸುವ ಪ್ಲ್ಯಾನ್​ ಇದ್ಯಂತೆ. ಅಚ್ಚರಿ ಅಂದ್ರೆ ಅಗತ್ಯಬಿದ್ರೆ ಸ್ವತಃ ಡಿ.ಕೆ.ಸುರೇಶ್ ಕಣಕ್ಕಿಳಿಯೋ ಸಾಧ್ಯತೆ ಇದ್ಯಂತೆ.. ಇನ್ನು ಕೆ.ಆರ್​.ಪುರಂನಲ್ಲಿ ಭೈರತಿ ವಿರುದ್ಧ ಬಾಣ ಬಿಡುವುದಕ್ಕಾಗಿ, ಬಿಜೆಪಿಯಲ್ಲಿನ ನಂದೀಶ್ ರೆಡ್ಡಿ ಸೆಳೆಯೋಕೆ ಸ್ಕೆಚ್​ ಹಾಕಲಾಗಿದ್ಯಂತೆ. ಯಶವಂತಪುರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಾಗಿ ಸರ್ಚ್ ಮಾಡ್ತಿರುವ ಕಾಂಗ್ರೆಸ್​, ಒಂದು ವೇಳೆ ವಲಸಿಗರು ಪಕ್ಷಕ್ಕೆ ಘರ್​ವಾಪ್ಸಿ ಆಗಬಹುದು ಅಂತ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರಂತೆ.

ಒಟ್ಟಾರೆ ರಾಜಧಾನಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​, ಬಿಜೆಪಿ ಶತಾಯಗತಾಯ ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ನಗಾರಿ ಬಾರಿಸಲೇಬೇಕು ಎಂದು ತಂತ್ರ, ಪ್ರತಿತಂತ್ರ ಹೆಣೆಯುತ್ತಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ