ವರುಣಾದಲ್ಲಿ ಸ್ಪರ್ಧಿಸುವಂತೆ ಹೇಳಿದ್ಯಾರು? ಸ್ಪರ್ಧೆಗೆ ಒಪ್ಪಿಕೊಳ್ಳಲು ಕಾರಣ ಯಾರು? ಸೀಕ್ರೆಟ್ ಬಿಚ್ಚಿಟ್ಟ ವಿ ಸೋಮಣ್ಣ
ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ವಿ ಸೋಮಣ್ಣ ಅವರಿಗೆ ಹೇಳಿದ್ಯಾರು? ಸ್ಪರ್ಧೆಗೆ ಕಾರಣರಾದವರು ಯಾರು? ಎನ್ನುವುದನ್ನು ಸೋಮಣ್ಣ ಬಿಚ್ಚಿಟ್ಟಿದ್ದಾರೆ.

ಮೈಸೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಪ್ರಬಲ ನಾಯಕ ವಿ ಸೋಮಣ್ಣ ಕಣಕ್ಕಿಳಿದಿರುವುದು. ಹೌದು…ಇದೇ ಕೊನೆ ಚುನಾವಣೆ ಎಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಗೆಲ್ಲಲೇಬೇಕೆಂದು ಅಳೆದು ತೂಗಿ ಅಂತಿಮವಾಗಿ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿದ್ದಾರೆ. ಆದ್ರೆ, ಸಚಿವ ವಿ ಸೋಮಣ್ಣ ಅವರು ವರುಣಾ ಕ್ಷೇತ್ರಕ್ಕೆ ಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಹೆಸರು ಪ್ರಕಟವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಂಚನ ಸೃಷ್ಟಿಸಿತ್ತು. ಹಾಗಾದ್ರೆ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವಂತೆ ಹೇಳಿದ್ಯಾರು? ಸೋಮಣ್ಣ ಯಾರಿಗೆ ಮಾತಿಗೆ ಒಪ್ಪಿಕೊಂಡರು? ಈ ಎಲ್ಲಾ ಅಂಶಗಳನ್ನು ಸ್ವತಃ ಸೋಮಣ್ಣ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ, ಕೆಲಕಾಲ ಬಿಗುವಿನ ವಾತಾವರಣ
ಇಂದು (ಮೇ.02) ವರುಣಾ ಕ್ಷೇತ್ರದ ಹೊಸಕೋಟೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸೋಮಣ್ಣ, ನಾನು ಇಲ್ಲಿ ಚುನಾವಣೆಗೆ ನಿಲ್ಲಲು ಕಾರಣ ಅಮಿತ್ ಶಾ ಹಾಗೂ ನರೇಂದ್ರ ಮೋದಿ. ನಾನು ಒಪ್ಪಿಕೊಳ್ಳಲು ಕಾರಣ ಬಿ ಎಸ್ ಯಡಿಯೂರಪ್ಪ. ವಿಜಯನಗರದಂತೆ ಅಭಿವೃದ್ಧಿ ಮಾಡಲು ಇಲ್ಲಿಗೆ ಕಳುಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಸಿಎಂ ಆಗಿದ್ದೆ ಎನ್ನುವ ಸಿದ್ದರಾಮಯ್ಯಗೆ ಪ್ರಶ್ನೆ ಕೇಳಿರುವ ಸೋಮಣ್ಣ, ಸಿದ್ದರಾಮಯ್ಯ ಅವರೇ ವರುಣಾ ಕ್ಷೇತ್ರವಾಗಿ 15 ವರ್ಷ ಆಗಿದೆ. ನೀವು 10 ವರ್ಷ ನಿಮ್ಮ ಮಗ 05 ವರ್ಷ ಶಾಸಕರಾಗಿದ್ದೀರಾ. ಮೂರು ತಾಲ್ಲೂಕಿನಲ್ಲಿರುವ ಕ್ಷೇತ್ರವನ್ನು ಒಂದು ಮಾಡಲು ಆಗಲಿಲ್ಲ ಏಕೆ? 7 ಜಿಲ್ಲಾ ಪಂಚಾಯತಿ ಜನರ ಬಳಿಗೆ ಹೋಗಿದ್ದೀರಾ ? ಅವರ ಸಮಸ್ಯೆ ಏನು ಎಂದಯ ಕೇಳಿದ್ದೀರಾ ? ನಿಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಎಂದು ಜನರ ಬಳಿ ಕೇಳಿದ್ದೀರಾ ? ನಿಮ್ಮನ್ನು ಸಿಎಂ ಮಾಡಿದ ಕ್ಷೇತ್ರದ ಜನರ ಋಣ ತೀರಿಸಿದ್ದೀರಾ? ಎಂದು ಪ್ರಶ್ನಿಸಿರುವ ಸೋಮಣ್ಣ, ಸಿದ್ದರಾಮಯ್ಯ ಬಡಾ ಬಡಾ ಕಾಮ್ ಕುಚ್ ಬೀ ನಹೀ ಕಿಯಾ ಎಂದು ಹಿಂದಿಯಲ್ಲಿ ವಾಗ್ದಾಳಿ ನಡೆಸಿದರು.
ವರುಣಾವನ್ನು ಛಿದ್ರ ಛಿದ್ರ ಮಾಡಿ ನೀವು ಮಾತ್ರ ಭದ್ರಕೋಟೆ ಕಟ್ಟಿಕೊಂಡಿದ್ದೀರಾ? 15 ವರ್ಷ ನೀವು ಅವರಿಗೆ ಅವಕಾಶ ಕೊಟ್ಟಿದ್ದೀರಾ. ನನಗೆ 5 ವರ್ಷ ಅವಕಾಶ ಕೊಡಿ. ಅವರು 15 ವರ್ಷದಲ್ಲಿ ಮಾಡದನ್ನು ಮಾಡುತ್ತೇನೆ. ನನಗೆ ನೊಗ ಇಟ್ಟು ಹೋಗದಂತೆ ತಡೆಯುತ್ತೀರಾ? ಇದೆನಾ ಪ್ರಜಾಪ್ರಭುತ್ವ ? ಎಂದು ಸಿದ್ದರಾಮಯ್ಯಗೆ ಪ್ರಶ್ನಿಸಿರುವ ಸೋಮಣ್ಣ, ಡಬಲ್ ಇಂಜಿನ್ ಸರ್ಕಾರ ಇದೆ. 24 ಗಂಟೆ ಕೆಲಸ ಮಾಡುತ್ತಿದ್ದೇನೆ ಎಂದು ಹಿಂದಿಯಲ್ಲಿ ಅಮಿತ್ ಶಾಗೆ ಹೇಳಿದರು.
ನಾನು ಸಿದ್ದರಾಮಯ್ಯ ಭಾಷೆ ಬಳಸಬಹುದು. ಆದರೆ ಬಳಸುವುದಿಲ್ಲ. ತಾಯಿ ಚಾಮುಂಡೇಶ್ವರಿ, ಮಹಾದೇಶ್ವರನ ಕೃಪೆ ನನಗಿದೆ. ಗೆಲ್ಲುತ್ತೇನೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ




