ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರ; ಜಗದೀಶ್ ಶೆಟ್ಟರ್ ಹೇಳಿದ್ದೇನು?
ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ಬ್ಯಾನ್ ವಿಚಾರ ಭಾರೀ ಚರ್ಚೆಯಾಗುತ್ತಿದ್ದು, ಇಮೇಜ್ ಡ್ಯಾಮೇಜ್ ಕಂಟ್ರೋಲ್ಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಹಾಗಿದ್ದರೆ ಬಿಜೆಪಿಯಿಂದ ಕಾಂಗ್ರೆಸ್ಗೆ ಹೋದ ಜಗದೀಶ್ ಶೆಟ್ಟರ್ ನಿಲುವೇನು? ಇಲ್ಲಿದೆ ನೋಡಿ.
ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಬಜರಂಗದಳ (Bajrang Dal) ಬ್ಯಾನ್ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಿರೋಧ, ಸಮರ್ಥನೆಗಳು ವ್ಯಕ್ತವಾಗುತ್ತಿದ್ದು, ಹಿಂದೂ ಸಂಘಟನೆಗಳಿಂದ ಕಾಂಗ್ರೆಸ್ ನಡೆ ಖಂಡಿಸಿ ಹನುಮಾನ್ ಚಾಲೀಸಾ ಪಠಣೆ ಅಭಿಯಾನ ನಡೆಯುತ್ತಿದೆ. ಬಜರಂಗದಳದ ಬ್ಯಾನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar), ಇದರ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ ಎಂದು ಹೇಳಿದ್ದಾರೆ.
ಬಜರಂಗದಳ ಬ್ಯಾನ್ ಮಾಡುವುದಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಇಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಸಂಘ ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರ. ಹೀಗಾಗಿ ನಾನು ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಬಜರಂಗದಳ ನಿಷೇಧಕ್ಕೆ ಬಾರಿ ವಿರೋಧ: ರಾಜ್ಯದೆಲ್ಲೆಡೆ ಮೊಗಳಗಿದ ಹನುಮಾನ್ ಚಾಲೀಸಾ
ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೋಲಿಸಲು ರಾಜ್ಯಕ್ಕೆ ಗುಜರಾತ್ ಟೀಮ್ ಆಗಮಿಸಿದ ವಿಚಾರವಾಗಿ ಬೆಳಗಾವಿಯ ಮಹಾಂತ ಭವನದಲ್ಲಿ ಮಾತನಾಡಿದ ಶೆಟ್ಟರ್, ಯಾರೂ ಏನೇ ಮಾಡಿದರೂ ಏನೂ ಮಾಡಲು ಸಾಧ್ಯವಿಲ್ಲ. ಇವತ್ತು ಜನರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇದೆ. ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
ಕೊಪ್ಪಳ, ವಿಜಯಪುರ, ಹಾವೇರಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಯೂ ಜನರ ಬೆಂಬಲ ಸಿಗುತ್ತಿದೆ ಎಂದು ಹೇಳಿದ ಜಗದೀಶ್ ಶೆಟ್ಟರ್, ಇಂದು ಗಜೇಂದ್ರಗಡ, ನರಗುಂದ, ಕಿತ್ತೂರಲ್ಲಿ ಪ್ರಚಾರ ಮಾಡಿದ್ದೇನೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕಾಗಿದೆ. ಹೀಗಾಗಿ ನಾನೇ ಸ್ವತಃ ಇಲ್ಲಿ ಪ್ರಚಾರಕ್ಕೆ ಬಂದಿರುವೆ ಎಂದರು.
ಜಗದೀಶ್ ಶೆಟ್ಟರ್ ಸಭೆಗೆ ಹೋಗಬೇಡಿ ಅಂತಾ ನಿಮ್ಮ ಹಳೆಯ ಸ್ನೇಹಿತರು ಫೋನ್ ಮಾಡಿ ಮುಖಂಡರಿಗೆ ಹೇಳುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಇರಬಹುದು. ಆದರೆ ಜನರು ಬಂದೇ ಬರುತ್ತಾರೆ. ಯಾರದ್ದೋ ಒತ್ತಾಯಕ್ಕೆ ಬರದೇ ಇರುವ ಪ್ರಶ್ನೆಯೇ ಇಲ್ಲ. ಯಾರು ಬರಬೇಕು ಅಂತಾ ಇದ್ದಾರೋ ಅಂತಹವರು ಬಂದೇ ಬರುತ್ತಾರೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ