ಮರು ಎಣಿಕೆ ಮಾಡಿದರಾದರೂ ಬಿಜೆಪಿ ಅಭ್ಯರ್ಥಿ ಕೋರ್ಟ್​ ಮೊರೆ: ಯಾವ ಕ್ಷೇತ್ರ? ಏನಾಯ್ತು? ಈ ಸ್ಟೋರಿ ನೋಡಿ

|

Updated on: May 14, 2023 | 8:01 AM

ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಫಲಿತಾಂಶ ನಿನ್ನೆ(ಮೇ.13) ಹೊರಬಿದ್ದಿತ್ತು. ಆದರೆ, ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಮಾತ್ರ ಬಹಳ ಕುತೂಹಲ ಕೆರಳಿಸುವಂತಿತ್ತು. ಜೊತೆಗೆ ಕೆಲವೊಂದು ವಿವಾದ ಹಾಗೂ ಗಲಾಟೆಗೂ ಕಾರಣವಾಯಿತು. ಈ ಕುರಿತು ಇಲ್ಲಿದೆ ನೋಡಿ.

ಮರು ಎಣಿಕೆ ಮಾಡಿದರಾದರೂ ಬಿಜೆಪಿ ಅಭ್ಯರ್ಥಿ ಕೋರ್ಟ್​ ಮೊರೆ: ಯಾವ ಕ್ಷೇತ್ರ? ಏನಾಯ್ತು? ಈ ಸ್ಟೋರಿ ನೋಡಿ
ಮತ ಎಣಿಕೆ ಫಲಿತಾಂಶ ಹಿನ್ನಲೆ ಬೆಂಬಲಿಗರ ಪ್ರತಿಭಟನೆ
Follow us on

ಕೋಲಾರ: ಜಿಲ್ಲೆಯ ಮಾಲೂರು(Malur) ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಿನ್ನೆ(ಮೇ.13) ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿತ್ತು. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಒಂದು ರೀತಿಯಾದರೆ ಮಾಲೂರು ಕ್ಷೇತ್ರದ ಮತಎಣಿಕೆ ಮಾತ್ರ ಇಡೀ ಜಿಲ್ಲೆಯ ಹಾಗೂ ರಾಜ್ಯದ ಜನರಿಗೆ ಕುತೂಹಲಕ್ಕೆ ಕಾರಣವಾಗಿತ್ತು. ಕಾರಣ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ನಂಜೇಗೌಡ(nanjegowda), ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ(K S Manjunath Gowda) ಹಾಗೂ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​(Hoodi Vijaykumar) ನಡುವೆ ಜಿದ್ದಾ ಜಿದ್ದಿ ಪೈಪೋಟಿ ಏರ್ಪಟ್ಟಿತ್ತು. ಆರಂಭದಲ್ಲಿ ​ಕಾಂಗ್ರೆಸ್ ಅಭ್ಯರ್ಥಿ, ನಂತರ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ನಂತರ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​ ಒಬ್ಬರಾದ ಮೇಲೆ ಒಬ್ಬರು ಮುನ್ನಡೆ ಸಾಧಿಸಿಕೊಂಡು ಬಂದರು. ಆದರೆ, ಒಂದು ಹಂತದಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​ 1500 ದಿಂದ 2000 ಮತಗಳ ಅಂತರದಲ್ಲಿ ಸುಮಾರು ಏಳೆಂಟು ಸುತ್ತು ಮುನ್ನಡೆ ಸಾಧಿಸಿಕೊಂಡು ಬಂದರು.

ಆದರೆ ಕೊನೆ ಎರಡು ಸುತ್ತುಗಳಲ್ಲಿ ಹೂಡಿ ವಿಜಯ್​ಕುಮಾರ್​ಗೆ ಕೊಂಚ ಹಿನ್ನಡೆಯಾಗಿ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಕೇವಲ ನೂರು ಇನ್ನೂರು ಮತಗಳ ಅಂತರದಲ್ಲಿ ಹಗ್ಗ ಜಗ್ಗಾಟ ಶುರುವಾಗಿತ್ತು. ಕೊನೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕೇವಲ 248 ಮತಗಳ ಅಂತರದಲ್ಲಿ ಜಯಗಳಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿತ್ತು. ಆದರೆ ಸ್ಥಳಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಕೆ.ಎಸ್​.ಮಂಜುನಾಥಗೌಡ ಗೆಲುವಿನ ವಿರುದ್ದ ಪ್ರತಿಭಟಿಸಿ ಮರು ಎಣಿಕೆಗೆ ಆಗ್ರಹಿಸಿದರು. ಈ ವೇಳೆ ಮರುಎಣಿಕೆ ಮಾಡಿದರಾದರೂ ಬಿಜೆಪಿ ಅಭ್ಯರ್ಥಿ ಕೋರ್ಟ್​ನ ಮೊರೆ ಹೋಗುವುದಾಗಿ ಹೇಳಿದ್ರು.

ಇದನ್ನೂ ಓದಿ:Karnataka Assembly Election: ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅಪರಾಧಗಳದ್ದೇ ಸದ್ದು; ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆ

ಬಿಜೆಪಿ ಅಭ್ಯರ್ಥಿ ಮತಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್​ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ಶುರುವಾಯಿತು. ಈ ವೇಳೆ ಅಲ್ಲಿದ್ದ ಕಾರ್ಯಕರ್ತರನ್ನ ತಡೆಯಲು ಹೋದ ಪೊಲೀಸರು ಹಾಗೂ ಬಿಎಸ್​ಎಫ್​ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಎಸ್ಪಿ ನಾರಾಯಣ್​ ಪರಿಸ್ಥಿತಿಯನ್ನು ನಿಯಂತ್ರಿಸಿ, ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಕೂರಿಸಿ, ಮಾತನಾಡಿಸಲು ಮುಂದಾದರಾದರೂ ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಸಂಸದ ಮುನಿಸ್ವಾಮಿ ಹಾಗೂ ಕಾಂಗ್ರೆಸ್​ನ ವಿಧಾನಪರಿಷತ್ ಸದಸ್ಯ ನಜೀರ್​ ಅಹಮದ್, ಅನಿಲ್​ ಕುಮಾರ್​ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಎಲ್ಲರನ್ನೂ ಹೊರಕಳಿಸಿ ಕೇವಲ ಅಭ್ಯರ್ಥಿಗಳ ಸಮ್ಮುಖದಲ್ಲಿ ಉದ್ಬವವಾಗಿದ್ದ ಗೊಂದಲ ನಿವಾರಣೆಗೆ ಅವರು ಹೇಳುವ ಐದು ಬೂತ್​ಗಳ ವಿವಿಪ್ಯಾಟ್​ಗಳನ್ನು ಎಣಿಕೆ ಮಾಡಿದರು. ಸುಮಾರು ಎರಡು ಗಂಟೆಗೂ ಅಧಿಕಕಾಲ ವಿವಿಪ್ಯಾಟ್​ಗಳನ್ನು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಎಣಿಸಲಾಯಿತು. ಅಷ್ಟಕ್ಕೂ ಸಮಾಧಾನಗೊಳ್ಳದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಕೋರ್ಟ್​ನ ಮೊರೆ ಹೋಗುವುದಾಗಿ ಹೇಳಿದ್ರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅವರು ಎಲ್ಲಿಗೆ ಬೇಕಾದ್ರು, ಹೋಗಲಿ. ಇದು ಜನರು ಕೊಟ್ಟಿರುವ ತೀರ್ಪು ಎಂದರು. ಅಲ್ಲದೆ ಈ ಬಾರಿ ಕಾಂಗ್ರೆಸ್​ ಸರ್ಕಾರ ಬಂದಿದ್ದು, ನನ್ನ ಕನಸಿನ ಮಾಲೂರು ನಿರ್ಮಾಣ ಮಾಡುವುದಾಗಿ ಹೇಳಿದ್ರು. ಮಾಲೂರು ಕ್ಷೇತ್ರ ಹಲವು ಕುತೂಹಲ ಹಾಗೂ ರೋಚಕತೆಗೆ ದಾರಿ ಮಾಡಿಕೊಟ್ಟಿದ್ದ ಮಾಲೂರು ಕೊನೆಗೆ ಗೊಂದಲಗಳ ಮೂಲಕವೇ ಕೊನೆಯಾಗಿದ್ದು, ಮುಂದೆ ಈ ವಿವಾದ ಎಲ್ಲಿಯವರೆಗೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ