ದಾವಣಗೆರೆ: ಈಗಾಗಲೇ ಮೂರು ಸಲ ಶಾಸಕರಾಗಿ ಒಂದು ಬಾರಿ ಸಚಿವರಾಗಿರುವ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ(M. P. Renukacharya) ಅವರು ನಿನ್ನೆ(ಏ.20) ಐದನೇ ಬಾರಿ ಚುನಾವಣಾ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಹಿರೇಕಲ್ಮಠದ ಚನ್ನಪ್ಪಸ್ವಾಮೀ ಮಠದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಜನರ ಜೊತೆ ಮೆರವಣಿಗೆಯಲ್ಲಿ ತೆರಳಿದ ರೇಣುಕಾಚಾರ್ಯ ಅವರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿ, ಈ ಸಲ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದು ಸೂರ್ಯ ಚಂದ್ರರಷ್ಟೆ ಸತ್ಯ. ನಿನ್ನೆ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮುಖಂಡರು ಮಾಜಿ ಸಿಎಂ ಯಡಿಯೂರಪ್ಪ ನೇತ್ರತ್ವದಲ್ಲಿ ಸಭೆ ಮಾಡಿ ವೀರಶೈವ ಲಿಂಗಾಯತರಿಗೆ ಸಿಎಂ ಪಟ್ಟ ನೀಡುವಂತೆ ಸಂದೇಶ ನೀಡಲಾಗಿದೆ ಎಂದರು. ಇನ್ನು ರೇಣುಕಾಚಾರ್ಯ ಅವರ ಹೆಸರಿನಲ್ಲಿ ಚರಾಸ್ತಿ ಎಷ್ಟಿದೆ? ಸ್ಥಿರಾಸ್ತಿ ಎಷ್ಟಿದೆ? ಇವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಏನೇನಿದೆ? ಎಷ್ಟೆಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿಕೊಂಡಿದ್ದಾರೆ; ಮೊಯ್ದೀನ್ ಬಾವಾ ಗಂಭೀರ ಆರೋಪ
ಎಂಪಿ ರೇಣುಕಾಚಾರ್ಯ ಆಸ್ತಿ ವಿವರ ಹೀಗಿದೆ
ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು 2.84 ಕೋಟಿ ಮೌಲ್ಯದ ಚರಾಸ್ತಿ, 6.44 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ ಪತ್ನಿ ಸುಮಾ ಹೆಸರಿನಲ್ಲಿ 1 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಇಬ್ಬರು ಮಕ್ಕಳಾದ ಚಂದನ ಮತ್ತು ಚೇತನಾ ಹೆಸರಿನಲ್ಲಿ 20.16 ಲಕ್ಷ ರೂಪಾಯಿ ಆಸ್ತಿ ಇರುವುದಾಗಿ ಘೋಷಣೆ ಮಾಡುವ ಮೂಲಕ ಒಟ್ಟು 11.40ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ. ಮತ್ತು ಐದು ಕೋಟಿ ನಾಲ್ಕು ಲಕ್ಷ ರೂಪಾಯಿ ಸಾಲ ರೇಣುಕಾಚಾರ್ಯ ಅವರ ಮೇಲಿದೆ. ಇದರ ಜೊತೆಗೆ ಇವರ ವಿರುದ್ಧ ಐದು ಅಪರಾಧ ಪ್ರಕರಣಗಳು ಕೋರ್ಟ್ನಲ್ಲಿ ತನಿಖಾ ಹಂತದಲ್ಲಿದೆ ಎಂದು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.