ಚಂದ್ರಶೇಖರ್ ಸಾವು ಪ್ರಕರಣ: ಹೊನ್ನಾಳಿ ಸಿಪಿಐ ವಿರುದ್ಧ ರೇಣುಕಾಚಾರ್ಯ ಗರಂ
ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯ ಪೊಲೀಸ್ ಠಾಣೆಯಲ್ಲಿದ್ದ ತಮ್ಮನ ಮಗು ಕಾರು ನೋಡಲು ತೆರಳಿದ್ದಾರೆ.
ದಾವಣಗೆರೆ: ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವನ್ನಪ್ಪಿದ್ದು, ಇವರ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇವರ ಕಾರು ತುಂಗಾ ಕಾಲುವೆ ಸಿಕ್ಕಿದ್ದು, ಸದ್ಯ ಕಾರು ಹೊನ್ನಾಳಿ ಠಾಣೆಯ ಆವರಣದಲ್ಲಿದೆ. ಈ ಕಾರನ್ನು ನೋಡಲು ಶಾಸಕ ರೇಣುಕಾಚಾರ್ಯ ಪೊಲೀಸ್ ಠಾಣೆಗೆ ಹೋಗಿದ್ದು, ಈ ವೇಳೆ ಹೊನ್ನಾಳಿ ಸಿಪಿಐ ಸಿದ್ದನಗೌಡಗೆ ಶಾಸಕ ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಕಾರಿನ ಕಾರಿನ ಮೇಲೆ ಟಾರ್ಪಲ್ ಹಾಕಿದ್ದರು. ಹೀಗಾಗಿ ರೇಣುಕಾಚಾರ್ಯ ಕಾರು ನೋಡಬೇಕು ಮತ್ತು ಕಾರಿನ ವಿಡಿಯೋ ಮಾಡಿಸಬೇಕು ಟಾರ್ಪಲ್ ತೆಗೆಯಲು ಹೇಳಿದ್ದಾರೆ. ಇದಕ್ಕೆ ಸಿಪಿಐ ಅನುಮತಿ ನೀಡಲಿಲ್ಲ. ಈ ಸಂಬಂಧ ಗರಂ ಆದ ರೇಣುಕಾಚಾರ್ಯ ನನಗೆ ಯಾರ ಮೇಲೂ ನಂಬಿಕೆಯಿಲ್ಲ. ಪೊಲೀಸರು ನ್ಯಾಯ ಕೊಡಿಸುವುದು ಬೇಡ, ಅನುಮತಿ ನೀಡಿ. ಕಾರು ಪತ್ತೆ ಹಚ್ಚಿದ್ದು ನಮ್ಮ ಕಾರ್ಯಕರ್ತರು, ಪೊಲೀಸರಲ್ಲ ಎಂದು ಹರಿಹಾಯ್ದರು. ಚಂದ್ರು ಸಾವಿನ ಬಗ್ಗೆ ನನ್ನ ಬಳಿಯೂ ಚರ್ಚೆ ಮಾಡಬಹುದಿತ್ತು. ಪ್ರಾಥಮಿಕ ತನಿಖೆ ಮೊದಲು ನನ್ನಿಂದಲೇ ಶುರುವಾಗಬೇಕಿತ್ತು. ಎಡಿಜಿಪಿ ಅಲೋಕ್ಕುಮಾರ್ ತಪ್ಪು ಸಂದೇಶ ಕೊಡುತ್ತಿದ್ದಾರೆ. ಅಲೋಕ್ಕುಮಾರ್ ವಿರುದ್ಧ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆದವರು ಬೋಗಸ್ ತನಿಖೆ ಮಾಡ್ತಿದ್ದಾರೆ- ಎಡಿಜಿಪಿ ಅಲೋಕ್ ವಿರುದ್ದ ರೇಣುಕಾಚಾರ್ಯ ನೇರ ವಾಗ್ದಾಳಿ
ತಮ್ಮ ತಮ್ಮನ ಪುತ್ರ ಚಂದ್ರಶೇಖರ್ ಅಕಾಲಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೇರವಾಗಿ ಎಡಿಜಿಪಿ ಅಲೋಕ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಿಯಾದ ತನಿಖೆ ಮಾಡದೆಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಅಧಿಕಾರಿ ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆಗಿದ್ದರು. ಅವರಿಂದ ಯಾವ ರೀತಿ ಉತ್ತಮ ತನಿಖೆ ಆಗುತ್ತದೆ? ಪೊಲೀಸರು ಬೋಗಸ್ ತನಿಖೆ ಮಾಡಿದ್ದಾರೆ. ಚಂದ್ರು ಶವ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ. ಚಂದ್ರ ಕಾರು ಓವರ್ ಸ್ಪೀಡ್ ಆಂತಾ ಹೇಳುತ್ತಿದ್ದಾರೆ. ಅದರೆ ಇದು ಕೊಲೆ. ಕೆಲವು ಫೋಟೋ ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ. ಪಾರದರ್ಶಕ ತನಿಖೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಚಂದ್ರಶೇಖರ್ ಸೇವಾ ಕಾರ್ಯಗಳನ್ನ ಮುಂದುವರಿಸುತ್ತೇವೆ. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡ್ತೇವೆ ಎಂದೂ ರೇಣುಕಾಚಾರ್ಯ ಇದೇ ವೇಳೆ ಹೇಳಿದರು.
ಇನ್ನು ಮೃತ ಚಂದ್ರಶೇಖರ್ ಅವರ ತಂದೆ ಎಂಪಿ ರಮೇಶ್ ಟಿವಿ 9 ಜೊತೆ ಮಾತನಾಡುತ್ತಾ ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗನ ಕೊಲೆ ಆಗಿದೆ. ಮನೆಯಿಂದ ಹೋಗುವಾಗ ಒಳ ಉಡುಪು (ಚಡ್ಡಿ) ಇತ್ತು. ಆದ್ರೆ ಶವ ಸಂಸ್ಕಾರ ಮಾಡುವಾಗ ಒಳ ಉಡುಪು ಇರಲಿಲ್ಲ. ಜೊತೆಗೆ ಮರ್ಮಾಂಗ ಬಾತುಕೊಂಡಿತ್ತು. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರ್ ಹಿಂಭಾಗದ ಇಂಡಿಕೇಟರ್ ಸಹ ಒಡೆದಿದೆ. ಬೇರೆ ಕಡೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿ ಹಾಕಿದ್ದಾರೆ. ನಾವು ದೇವರನ್ನ ಕೇಳಿದ್ದೆವು. ನೀರಿನ ಸುತ್ತ ಮುತ್ತ ಹುಡುಕಾಡಿ ಎಂದು ಹೇಳಿದ್ದರು. ನಮ್ಮ ಕಾರ್ಯಕರ್ತರೇ ಕಾರು ಪತ್ತೆ ಹಚ್ಚಿದ್ದು. ಪೊಲೀಸರೇನೂ ಪ್ರಕರಣ ಪತ್ತೆ ಹಚ್ಚಿಲ್ಲ. ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಾರಿ ತಪ್ಪಿಸಬೇಡಿ. ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚಿ ಎಂದು ರಮೇಶ ಆಗ್ರಹಿಸಿದ್ದಾರೆ.
ವಿಳಂಬವಾಗಲಿದೆ ಚಂದ್ರು ದೇಹದ ವೈದ್ಯಕೀಯ ಪರೀಕ್ಷೆ ವರದಿ:
ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರನ ಶವದ ಕೈಗೆ ಹಗ್ಗ ಕಟ್ಟಲಾಗಿದೆ ಎಂದು ವಿಡಿಯೋ ಹಂಚಿಕೊಂಡ ರೇಣುಕಾಚಾರ್ಯ ಹೇಳಿದ್ದಾರೆ. ಆದರೆ ಚಂದ್ರಶೇಖರ ಶವ ಕಾರ್ ನಿಂದ ಹೊರ ತೆಗೆಯುವಾಗ ಕೈ ಬಳಿಯ ಚರ್ಮ ಕಿತ್ತುಕೊಂಡು ಬಂದಿರುವ ಶಂಕೆಯಿದೆ. ಇದು ಹಗ್ಗನಾ, ಚರ್ಮನಾ ಎಂಬುದರ ಬಗ್ಗೆ ವೈದ್ಯಕೀಯ ವರದಿಯಿಂದ ತಿಳಿದುಬರಬೇಕಿದೆ. ಆದರೆ ಶವ ಐದು ದಿನ ನೀರಿನಲ್ಲಿ ಇದ್ದಿದ್ದರಿಂದ ವೈದ್ಯಕೀಯ ವರದಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಚಂದ್ರಶೇಖರ ಶವ ಐದು ದಿನ ನೀರಿನಲ್ಲಿ ಇದ್ದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ವರದಿ ವಿಳಂಬವಾಗಲಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳ ರವಾನೆ ಮಾಡಿದ್ದಾರೆ. ಕನಿಷ್ಠ ಮೂರು ದಿನವಾದ್ರು ಬೇಕು ವರದಿ ಬರಲು. ಸೋಮವಾರ ಸಂಜೆ ವೇಳೆಗೆ ಶವ ಪರೀಕ್ಷೆ ವರದಿ ಪೊಲೀಸರ ಕೈಗೆ ಸೇರುವ ಸಾಧ್ಯತೆಯಿದೆ.
ಚಂದ್ರಶೇಖರ ಸಾವಿನ ಪ್ರಕರಣ ಪತ್ತೆ ಹಚ್ಚಿದ ಅನುಭವೀ ಫೋಟೋಗ್ರಾಫರ್:
ಐದು ದಿನಗಳಿಂದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಪೊಲೀಸರಿಂದ ಅದನ್ನು ಪತ್ತೆ ಹಚ್ಚಲು ಆಗಿರಲಿಲ್ಲ. ಆದ್ರೆ ಹಗಲು ರಾತ್ರಿ ಬೈಕ್ ನಲ್ಲಿ ಡ್ರೋಣ್ ಕ್ಯಾಮರಾ ಹಿಡಿದುಕೊಂಡು ಸುತ್ತಾಡುತ್ತಿದ್ದ ಹೊನ್ನಾಳಿ ಮೂಲದ ಶ್ರೀಕಾಂತ್ ಎಂಬ ಹೆಸರಿನ ಫೋಟೋಗ್ರಾಫರ್ ತುಂಗಾ ಕಾಲುವೆಯಲ್ಲಿ ಕಾರ್ ಇರುವುದು ಪತ್ತೆ ಹಚ್ಚಿ ಪ್ರಕರಣ ಬೇಧಿಸಲು ನೆರವಾದರು. ಫೋಟೋಗ್ರಾಫರ್ ಶ್ರೀಕಾಂತ್ 25 ವರ್ಷಗಳಿಂದ ಫೋಟೋಗ್ರಫಿ ಮಾಡಿಕೊಂಡು ಬಂದಿದ್ದಾರೆ. ಶ್ರೀಕಾಂತ್, ಕಾರ್ ಇರುವುದರ ಬಗ್ಗೆ ಸಂಶಯಗೊಂಡು ಸೇತುವೆ ಕೆಳಗೆ ಡ್ರೋಣ್ ಕ್ಯಾಮರಾ ಬಿಟ್ಟು ಚಂದ್ರಶೇಖರ ಸಾವಿನ ಪ್ರಕರಣ ಬೆಳಕಿಗೆ ತಂದಿದ್ದಾರೆ.
ಶಾಸಕ ಎಂಪಿ ರೇಣುಕಾಚಾರ್ಯ ಸಹೋದರ ಪುತ್ರನ ಸಾವಿನ ಪ್ರಕರಣದಲ್ಲಿ ಪೊಲೀಸರ ವಿರುದ್ದ ಶಾಸಕ ರೇಣುಕಾಚಾರ್ಯ ರೊಚ್ಚಿಗೆದ್ದಿರುವುದು ಯಾಕೆ?
ಪೊಲೀಸರ ಇನ್ವೆಷ್ಟಿಗೇಷನ್ ಬಗ್ಗೆ ಶಾಸಕರು ಅಪಸ್ವರ ಎತ್ತಿರುವುದರ ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುವಲ್ಲಿ ದಾವಣಗೆರೆ ಪೊಲೀಸರು ಎಡವಿದ್ದಾರೆಂದು ಅಸಮಾಧಾನ. ಇಲ್ಲಿಯವರೆಗೂ ಲಾಸ್ಟ್ ಡೆ ಕಾಲ್ ಲೀಸ್ಟ್ ಮಾತ್ರ ಕಲೆ ಹಾಕಿದ್ದಾರೆ. ಆದ್ರೆ ಅವರನ್ನ ಕರೆದು ವಿಚಾರಣೆ ನಡೆಸಿಲ್ಲವೆಂದು ಕುಟುಂಬಸ್ಥರು ಸಿಟ್ಟಿಗೆದ್ದಿದ್ದಾರೆ. ಆದ್ರೆ ಪೊಲೀಸ್ ಮೂಲಗಳು ಹೇಳುವುದೇ ಬೇರೆ. ಸದ್ಯ ಚಂದ್ರಶೇಖರ್ ಸಾವಿನ ಕುರಿತು ತನಿಖೆ ನಡೆಸುತ್ತಿರುವ ದಾವಣಗೆರೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದಾರೆ.
ವರದಿ-ಬಸವರಾಜ ಮುದನೂರ್ tv9 ಚಿತ್ರದುರ್ಗ
Published On - 7:32 pm, Sat, 5 November 22