ಗದಗ: ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ (Dr. Chandru Lamani) ರಾಜೀನಾಮೆ ಕೊನೆಗೂ ಅಂಗೀಕಾರವಾಗಿದ್ದು, ನಿಟ್ಟುಸಿರುಬಿಟ್ಟಿದ್ದಾರೆ. ಆರೋಗ್ಯ ಇಲಾಖೆಯೂ ಡಾ. ಚಂದ್ರು ಲಮಾಣಿ ಅವರಿಗೆ ಷರತ್ತು ಬದ್ಧ ರಾಜೀನಾಮೆಗ ಅಂಗೀಕರಿಸಿದೆ. ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ. ಇತ್ತೀಚೆಗೆ ರಾಜೀನಾಮೆ ಪತ್ರ ಸಲ್ಲಿಸುವಂತೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಡಾ: ಚಂದ್ರು ಲಮಾಣಿಗೆ ಸೂಚನೆ ನೀಡಿದ್ದರು. ಅದೇ ರೀತಿಯಾಗಿ ನಿನ್ನೆಯಷ್ಟೇ ರಾಜೀನಾಮೆ ಅಂಗೀಕರಿಸದಂತೆ ಗದಗ ಡಿಸಿ ಕೂಡ ಪತ್ರ ಬರೆದಿದ್ದರು. ರಾಜಕೀಯ ಅಖಾಡಕ್ಕೆ ಧುಮಕಬೇಕು ಎನ್ನುವ ಕಾರಣಕ್ಕೆ ಸರ್ಕಾರಿ ವೈದ್ಯ ಹುದ್ದೆಗೆ 31 ಆಗಷ್ಟ 2021ಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಎರಡು ವರ್ಷಗಳಾದರೂ ಈವರಿಗೆ ರಾಜೀನಾಮೆ ಮಾತ್ರ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಡಾ. ಚಂದ್ರು ಲಮಾಣಿ ಸಂಕಷ್ಟಕ್ಕೆ ಈಡಾಗಿದ್ದರು.
ಡಾ: ಚಂದ್ರು ಲಮಾಣಿಯವರು 2018 ಜುಲೈ 21 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭ ಮಾಡಿದ್ದರು. ಇದರ ಮದ್ಯದಲ್ಲಿ ಅವರ ಮೇಲೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 2021 ಅಗಸ್ಟ್ 31 ರಂದು ರಾಜಿನಾಮೆ ಸಲ್ಲಿಸಿ, ಹೊರಗಡೆ ಬಂದಿದ್ದರು. ಆದರೆ ಇದುವರೆಗೂ ಅವರ ರಾಜೀನಾಮೆ ಅಂಗೀಕಾರವಾಗಿರಲಿಲ್ಲ.
ಇದನ್ನೂ ಓದಿ: ಡಾ: ಚಂದ್ರು ಲಮಾಣಿಗೆ ತೊಡಕಾದ ಸರ್ಕಾರಿ ವೈದ್ಯಕೀಯ ವೃತ್ತಿ: ಇಂದೇ ರಾಜೀನಾಮೆ ಅಂಗೀಕಾರ ಪತ್ರ ಸಲ್ಲಿಸಲು ಬಿಜೆಪಿ ಗಡುವು
ಓರ್ವ ಸರ್ಕಾರಿ ನೌಕರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬರೋದಿಲ್ಲ, ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯಲ್ಲಿ ಕೂಗು ಕೇಳಿ ಬಂದಿತ್ತು. ಗದಗ ಜಿಲ್ಲಾ ಎಸ್ಸಿ ಘಟಕ ಜಿಲ್ಲಾ ಉಪಾಧ್ಯಕ್ಷ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದರು. ಒಂದು ವೇಳೆ ನೀಡಿದ್ದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದಿದ್ದರು.
ಚಂದ್ರು ಲಮಾಣಿ ಸರ್ಕಾರಿ ನೌಕರ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ನಿನ್ನೆಯಷ್ಟೇ ಪತ್ರ ಬರೆದಿದ್ದರು. ಚಂದ್ರು ಲಮಾಣಿ ಅವರು 2021, ಜುಲೈ 31 ರಂದು ರಾಜಿನಾಮೆ ನೀಡಿದ್ದು, ಇದುವರೆಗೆ ಅಗೀಕಾರವಾಗಿಲ್ಲ. ಅವರು ಈವರೆಗೂ ಸರ್ಕಾರಿ ನೌಕರನೇ ಆಗಿದ್ದಾರೆ.
ಇದನ್ನೂ ಓದಿ: ಡಾ. ಚಂದ್ರು ಲಮಾಣಿ ಈವರೆಗೂ ಸರ್ಕಾರಿ ನೌಕರನೇ; ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಮುಂದುವರಿದ ಸಂಕಷ್ಟ
ರಾಜಕೀಯ ಪ್ರಭಾವ ಬೆಳೆಸಿ ಬಿಜೆಪಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ 2021 ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು ಉಪ ನಿಯಮ 5 ಅನ್ನು ಉಲ್ಲಂಘಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ