ತುಮಕೂರು: ಪ್ರಚಾರ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (G Parameshwara) ಮೇಲೆ ಕಲ್ಲೆಸೆದಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ನಡೆದಿದೆ. ಪ್ರಚಾರ ವೇಳೆ ಜಿ. ಪರಮೇಶ್ವರ್ರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಪರಮೇಶ್ವರ್ ಮೇಲೆ ಕಲ್ಲೆಸೆಯಲಾಗಿದೆ ಎನ್ನಲಾಗುತ್ತಿದೆ. ಕೂಡಲೇ ತಲೆಯನ್ನು ಹಿಡಿದುಕೊಂಡ ಜಿ. ಪರಮೇಶ್ವರ್ ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ವೈದ್ಯ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದು, ಡಾ.ಜಿ.ಪರಮೇಶ್ವರ್ಗೆ ಕಲ್ಲೇಟು ಬಿದ್ದು ತಲೆಗೆ ಗಾಯವಾಗಿದೆ. ತುಮಕೂರಿನ ನಿವಾಸದಲ್ಲಿ ಚಿಕಿತ್ಸೆ ನೀಡಲಾಗಿದೆ. ಪರಮೇಶ್ವರ್ ತಲೆಗೆ ಒಂದೂವರೆ ಇಂಚಿನಷ್ಟು ಗಾಯವಾಗಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಡಾ.ಜಿ.ಪರಮೇಶ್ವರ್ ನಿವಾಸದ ಬಳಿ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ.
ಚಿಕ್ಕಮಗಳೂರು: ತಾಲೂಕಿನ ಸಾದರಹಳ್ಳಿಯಲ್ಲಿ ಪ್ರಚಾರ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ಉಂಟಾಗಿದೆ. ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಮುಖಾಮುಖಿಯಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಹೆಚ್.ಡಿ.ತಮ್ಮಯ್ಯ ಪ್ರಸ್ತಾಪಿಸಿದ್ದು, ಈ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಸಿಟಿ ರವಿ ಕಾರಿನಲ್ಲಿದ್ದಾಗ ಕಾರ್ಯಕರ್ತರಿಂದ ಕಿರಿಕ್ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು H.D.ತಮ್ಮಯ್ಯ ಸಮಾಧಾನಪಡಿಸಿದರು.
ಇದನ್ನೂ ಓದಿ: ಪುಲಿಕೇಶಿನಗರದಲ್ಲಿ ಬಿರುಸಿನ ಪ್ರಚಾರ: ಮುಸ್ಲಿಂ ಮತ ಸೆಳೆಯಲು ಮೂರು ಪಕ್ಷಗಳಿಂದ ಪೈಪೋಟಿ
ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದ ಆರೋಪ ಮಾಡಿದ್ದರು. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿತ್ತು. ಅಭ್ಯರ್ಥಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪ್ರಚಾರ ರಥದಲ್ಲಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದರು.
ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗಿತ್ತು. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ; ಹಲವೆಡೆ ರಸ್ತೆ ಸಂಚಾರಕ್ಕೆ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗಗಳ ವಿವರ
ಚಿಕ್ಕಮಗಳೂರು: ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದಿತ್ತು. ಯಾರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡೋಣ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿಸಿಸಿ ಸಂಯೋಜಕ ಪವನ್ ಮೇಲೆ ವಿರೋಧಿ ಬಣ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ಇರುವಂತೆ ಹೇಳಿದ್ದಕ್ಕೆ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ವಿರುದ್ಧವೂ ಕಿಡಿಕಾರಲಾಗಿತ್ತು.
ಅರ್ಜಿ ಸಲ್ಲಿಸಿರುವವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿದ್ದರು. ತಮ್ಮಯ್ಯಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಒತ್ತಾಯಸಿದ್ದು, ಈ ವೇಳೆ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ದಂಗಲ್ ಶುರುವಾಗಿದ್ದು, ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Fri, 28 April 23