AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಕೇಳಿದ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ

ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕೇಳಿದ ಪತ್ರ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕಿಸಿದೆ.

ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಕೇಳಿದ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಕೇಳಿದ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
Rakesh Nayak Manchi
|

Updated on:Apr 28, 2023 | 5:36 PM

Share

ಬೆಂಗಳೂರು: ಕೇಂದ್ರಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಚಿಕ್ಕಮಗಳೂರಿನಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕೇಳಿದ ಪತ್ರ ಕಾಂಗ್ರೆಸ್ (Congress) ಮತ್ತು ಜೆಡಿಎಸ್ ಕೈ ಸೇರಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಕಾರ ಚುನಾವಣಾ ಆಯೋಗದ ಜವಾಬ್ದಾರಿ, ಹೊಣೆಗಾರಿಕೆಯನ್ನು ಬಿಜೆಪಿ ಪಕ್ಷ ತೆಗೆದುಕೊಂಡ ಹಾಗಿದೆ. ಇದು ಅಪಾಯಕಾರಿ. ಚುನಾವಣಾ ಆಯೋಗ ಇದರ ಬಗ್ಗೆ ಕ್ರಮ ಕೈಗೊಳ್ಳಲೇಬೇಕು ಎಂದು ಜೆಡಿಎಸ್ (JDS) ಒತ್ತಾಯಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಜೆಡಿಎಸ್, “ಸೋಲಿನ ಭಯ ರಾಜ್ಯ ಬಿಜೆಪಿಗೆ ಅದೆಷ್ಟು ಕಾಡುತ್ತಿರಬೇಕು! ಅದಕ್ಕಾಗಿ ಚುನಾವಣೆಯನ್ನು ತಾನೇ ನಡೆಸುತ್ತಿದ್ದೇನೆ ಎಂದು ಭಾವಿಸಿದೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಕಾರ ಚುನಾವಣಾ ಆಯೋಗದ ಜವಾಬ್ದಾರಿ, ಹೊಣೆಗಾರಿಕೆಯನ್ನು ಬಿಜೆಪಿ ಪಕ್ಷ ತೆಗೆದುಕೊಂಡ ಹಾಗಿದೆ! ಇದು ಅಪಾಯಕಾರಿ. ಚುನಾವಣಾ ಆಯೋಗ ಇದರ ಬಗ್ಗೆ ಕ್ರಮ ಕೈಗೊಳ್ಳಲೇಬೇಕು” ಎಂದು ಒತ್ತಾಯಿಸಿದೆ.

“ಮತಗಟ್ಟೆಗಳನ್ನು ಸೂಕ್ಷ್ಮ, ಅತೀ ಸೂಕ್ಷ್ಮ ಎಂದು ವಿಂಗಡಿಸುವ ಕೆಲಸ ಚುನಾವಣಾ ಆಯೋಗದ್ದು. ಸೋಲುವ ಭೀತಿಯಲ್ಲಿ ಮತಗಟ್ಟೆಗಳನ್ನು ತನ್ನ ಪರವಾಗಿ ಬಳಸಿಕೊಳ್ಳುವ ಪಿತೂರಿ ಶೋಭಾ ಅವರು ಬರೆದಿರುವ ಈ ಪತ್ರದಲ್ಲಿ ಕಾಣುತ್ತಿದೆ. ಬಿಜೆಪಿಯು ತನ್ನ ವಿರುದ್ಧದ ಮತದಾರರನ್ನು ಸೇನಾಪಡೆಗಳ ಮೂಲಕ ನಿಯಂತ್ರಿಸುವ, ಹೆದರಿಸುವ ಹುನ್ನಾರ ಇದರಲ್ಲಿ ಅಡಗಿದೆ” ಎಂದು ಜೆಡಿಎಸ್ ಟೀಕಿಸಿದೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ ನಿಷೇಧ; ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, “ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಭಾರತೀಯ ಜನತಾ ಪಕ್ಷವೋ? ಪಕ್ಷದ ಪದಾಧಿಕಾರಿಗಳು ನಿರ್ಧರಿಸಲಿರುವುದು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನೋ? ಬಿಜೆಪಿ ಪರ ಮತ್ತು ವಿರೋಧಿ ಮತದಾರರು ಇರುವ ಮತಗಟ್ಟೆಗಳನ್ನೋ?” ಎಂದು ಪ್ರಶ್ನಿಸಿದ್ದಾರೆ.

“ತಮ್ಮ ಬಿಜೆಪಿ ಪಕ್ಷದ ಪರವಾಗಿಲ್ಲದ ಮತದಾರರು ಇರುವ ಮತಗಟ್ಟೆಗಳಲ್ಲಿ‌ ಭದ್ರತೆಯ ನೆಪದಲ್ಲಿ ಕೇಂದ್ರ ಸೇನಾಪಡೆಗಳನ್ನು ನಿಯೋಜಿಸಿ ಮತದಾರರನ್ನು ಬೆದರಿಸಿ ಅವರು ಮತದಾನ ಮಾಡದಂತೆ ತಡೆಯುವುದು ಈ ಪತ್ರದ ದುರುದ್ದೇಶವಾಗಿದೆ. ಚುನಾವಣಾ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವ ಹೊಣೆ ಚುನಾವಣಾ ಆಯೋಗದಲ್ಲವೇ? ಇದನ್ನು ನಡೆಸಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದ್ದಾರೆ.

“ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಈ ಪತ್ರ ಬರೆದಿರುವುದನ್ನು ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರವೇ ಈ ಅಕ್ರಮ ಚಟುವಟಿಕೆಯಲ್ಲಿ ಷಾಮೀಲಾಗುರುವುದು ಸ್ಪಷ್ಟವಾಗಿದೆ. ಕೇಂದ್ರ ಚುನಾವಣಾ ಆಯುಕ್ತರು ತಕ್ಷಣ ಮಧ್ಯೆಪ್ರವೇಶಿಸಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ವಿಚಾರಣೆಗೊಳಪಡಿಸಿ ಅವರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನಿಷೇಧಿಸಬೇಕು. ಅವರು ಪಕ್ಷದ ನಾಯಕರು ಮತ್ತು ಅಭ್ಯರ್ಥಿಗಳಿಂದ ಪಡೆದಿರುವ ಮಾಹಿತಿಯನ್ನು ವಶಕ್ಕೆ ಪಡೆಯಬೇಕು” ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 28 April 23