ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ರಿಪೋರ್ಟ್‌ನ (Gujarat Exit polls 2022 ) ಪ್ರಕಾರ ಬಿಜೆಪಿ ಗೆಲುವಿನ ಹಿಂಟ್ ಸಿಕ್ಕಿದೆ. ಮೋದಿ ಹವಾ, ಮೋದಿ ಇಮೇಜ್ ಎಲ್ಲವೂ ವರ್ಕೌಟ್ ಆಗಿದೆ. ಎದುರಾಳಿಗಳನ್ನ ನೆಲಸಮ ಮಾಡಿ ಮತ್ತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶವನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಗುಜರಾತ್‌ನಲ್ಲಿ ಮತಬುಟ್ಟಿಯನ್ನ ಸೆಳೆದು ತರುವಂತಹ ಹವಾ ಇಟ್ಟಿರೋ ಮೋದಿ ಈ ಬಾರಿಯೂ ಕಮಲ ಅರಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಇನ್ನು ಎಕ್ಸಿಟ್ ಪೋಲ್ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಡಿಸೆಂಬರ್ 06) ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ 66ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಿನ್ನೆ(ಡಿ.05) ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಸಂಬಂಧ ವಿವಿಧ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶ ಬಿಜೆಪಿ ಗೆ ಗೆಲುವು ಎನ್ನುವುದನ್ನು ಸೂಚಿಸಿದೆ. ಎಕ್ಸಿಟ್ ಪೋಲ್ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ವಿಶ್ವಾಸ ವ್ಯಕ್ತಪಡಿಸಿದರು.
ಜನ ಸುಳ್ಳು ಆರೋಪಗಳಿಗೆ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲ ಕೊಡುವುದಿಲ್ಲ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಗುಜರಾತ್ ನಲ್ಲಿ ಇದು 7ನೇ ಬಾರಿಯ ಗೆಲುವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಒಳ್ಳೆಯ ಪರಿಣಾಮ ಆಗಲಿದೆ. ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ. ಅಂದರೆ ಜನ ಅಭಿವೃದ್ಧಿ ಕಾರ್ಯವನ್ನ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಗುಜರಾತ್ ಮತದಾನೋತ್ತರ ಸಮೀಕ್ಷೆ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತ್ ವರ್ಷ್ ನಡೆಸಿದ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಬಿಜೆಪಿಗೆ 125ರಿಂದ 130 ಸ್ಥಾನ ಬರಬಹುದು ಅಂತಾ ಅಂದಾಜಿಸಿದೆ. ಕಾಂಗ್ರೆಸ್‌ಗೆ 40ರಿಂದ 50, ಆಮ್ ಆದ್ಮಿಗೆ 3ರಿಂದ 5 ಸ್ಥಾನ ಬಂದ್ರೆ, ಇತರರು 3ರಿಂದ 7 ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತಾ ಲೆಕ್ಕಾಚಾರ ಹಾಕಲಾಗಿದೆ. ಹಾಗೆಯೇ ಎಬಿಪಿ ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 134 ಸ್ಥಾನ, ಕಾಂಗ್ರೆಸ್ 37, ಆಪ್ 7, ಇತರರು 4 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಅಂತಾ ಗೊತ್ತಾಗಿದೆ. ಇನ್ನೂ ರಿಪಬ್ಲಿಕ್ ಮತ್ತು ಪಿ ಮಾರ್ಕ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 128ರಿಂದ 148, ಕಾಂಗ್ರೆಸ್‌ಗೆ 30ರಿಂದ 42, ಆಪ್‌ಗೆ 2ರಿಂದ 10 ಸ್ಥಾನ ಸಿಗಲಿದೆ ಅಂತಾ ಅಂದಾಜಿಸಲಾಗಿದೆ
ಇನ್ನೂ ನ್ಯೂಸ್ ಎಕ್ಸ್ ಜನ್ ಕಿ ಬಾತ್ ಸರ್ವೆ ಪ್ರಕಾರ ಬಿಜೆಪಿ 117ರಿಂದ 140 ಸ್ಥಾನಗಳು, ಕಾಂಗ್ರೆಸ್‌ಗೆ 34ರಿಂದ 51 ಸ್ಥಾನಗಳು, ಆಪ್‌ಗೆ 6ರಿಂದ 13 ಸ್ಥಾನ ಹಾಗು ಇತರರು 1 ಕ್ಷೇತ್ರದಲ್ಲಿ ಜಯಗಳಿಸೋ ಸಾಧ್ಯತೆ ಇದೆ. ಅಲ್ಲದೇ ಆಜ್ ತಕ್, ಇಂಡಿಯಾ ಟುಡೇ ಮತ್ತು ಎಕ್ಸಿಮ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಬಿಜೆಪಿ 129ರಿಂದ 151 ಸ್ಥಾನ ಗಳಿಸಲಿದೆ ಅಂತಾ ಅಂದಾಜಿಸಲಾಗಿದೆ. ಹಾಗೆಯೇ ಕಾಂಗ್ರೆಸ್ 16ರಿಂದ 30, ಆಪ್ 09ರಿಂದ 21, ಇತರರು 2 ಕ್ಷೇತ್ರಗಳಲ್ಲಿ ಗೆಲ್ಲೋ ಸಾಧ್ಯತೆ ಇದೆ ಅಂತಾ ಆಜ್ ತಕ್ ಸಮೀಕ್ಷೆ ಹೇಳಿದೆ. ಹಾಗೆಯೇ ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಜೆಪಿ 139 ಸ್ಥಾನ, ಕಾಂಗ್ರೆಸ್ 30, ಆಪ್ 11, ಇತರರು 2 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ
ಒಟ್ಟಿನಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಹುತೇಕ ಸರ್ವೆಯಲ್ಲಿ ಬಿಜೆಪಿಯೇ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಅನ್ನೋ ಲೆಕ್ಕ ಹೊರಬಿದ್ದಿದೆ. ಡಿಸೆಂಬರ್ 8ರಂದು ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ಗೆಲುವು ಎನ್ನುವುದು ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ