ಸಚಿವ ಸ್ಥಾನಕ್ಕಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಲಡಾಯಿ, 5 ಲಿಂಗಾಯತ ಶಾಸಕರಲ್ಲಿ ಯಾರಿಗೆ ಮಂತ್ರಿ ಭಾಗ್ಯ?
ಸಚಿವ ಸ್ಥಾನಕ್ಕಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಲಡಾಯಿ, 5 ಲಿಂಗಾಯತ ಶಾಸಕರಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಬೆಳಗಾವಿ ಜಿಲ್ಲೆಯ 5 ಲಿಂಗಾಯತ ಶಾಸಕರ ಮಧ್ಯೆ ಸಚಿವ ಸ್ಥಾನಕ್ಕಾಗಿ ಫೈಟ್ ಶರುವಾಗಿದೆ. ಲಕ್ಷ್ಮಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಅಥವಾ ಗಣೇಶ್ ಹುಕ್ಕೇರಿ, ಅಶೋಕ್ ಪಟ್ಟಣ್, ಮಹಾಂತೇಶ ಕೌಜಲಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಬೆಳಗಾವಿ: ಬೆಂಗಳೂರು (Bengaluru) ಹೊರತುಪಡಿಸಿದರೇ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ (Belagavi). ಒಟ್ಟು ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಶಾಸಕರು ಆಯ್ಕೆಯಾಗಿದ್ದು, ಈ ಪೈಕಿ ಮೊದಲ ಹಂತದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಶಿಷ್ಯ ಸತೀಶ್ ಜಾರಕಿಹೊಳಿ (Satish Jarkiholi) ಅವರಿಗೆ ಸಚಿವ ಸ್ಥಾನ ಒಲಿದಿದೆ. ಇದೀಗ 5 ಲಿಂಗಾಯತ (Lingayat) ಶಾಸಕರ ಮಧ್ಯೆ ಸಚಿವ ಸ್ಥಾನಕ್ಕಾಗಿ ಫೈಟ್ ಶರುವಾಗಿದೆ. ಲಕ್ಷ್ಮಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಅಥವಾ ಗಣೇಶ್ ಹುಕ್ಕೇರಿ, ಅಶೋಕ್ ಪಟ್ಟಣ್, ಮಹಾಂತೇಶ ಕೌಜಲಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಜಿಲ್ಲೆಗೆ ಕನಿಷ್ಠ 3 ಸ್ಥಾನ ಸಿಗುವ ನಿರೀಕ್ಷೆಯಲ್ಲಿ ನಾಯಕರು
ಜಿಲ್ಲೆಯ 11 ಶಾಸಕರ ಪೈಕಿ 7 ಶಾಸಕರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಎಸ್‌ಸಿ, ಎಸ್‌ಟಿ, ಬ್ರಾಹ್ಮಣ, ಮುಸ್ಲಿಂ ಸಮುದಾಯದ ತಲಾ ಒಬ್ಬರು ಶಾಸಕರಿದ್ದಾರೆ. ಇಬ್ಬರು ಎಂಎಲ್‌ಸಿಗಳು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಇದೀಗ ಐವರು ಲಿಂಗಾಯತ ಶಾಸಕರ ಮಧ್ಯೆ ಸಚಿವ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ತಮ್ಮ ತಮ್ಮ ನಾಯಕರ ಮೂಲಕ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಲಾಭಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ್ ಸವದಿ ಕಸರತ್ತು ನಡೆಸಿದ್ದಾರೆ. ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂಲಕ ತಮಗೆ ಅಥವಾ ಮಗ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆಯಿಂದ ಬಿಜೆಪಿಯಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ: ಸಿದ್ದರಾಮಯ್ಯ
ಮತ್ತೊಂದಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಸಚಿವ ಸ್ಥಾನ ಪಡೆಯಲು ಅಶೋಕ್ ಪಟ್ಟಣ್, ಮಹಾಂತೇಶ ಕೌಜಲಗಿ ಲಾಭಿ ನಡೆಸಿದ್ದಾರೆ. ಈ ಐವರು ನಾಯಕರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಮೂರು ಬಣದಲ್ಲೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಶಿಷ್ಯ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಟ್ಟ ಮಾತಿನಂತೆ ಲಕ್ಷ್ಮಣ್ ಸವದಿ ಅಥಣಿ ಜೊತೆ ಕಾಗವಾಡ, ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಲ ಹಂತದಲ್ಲೇ ಸಚಿವ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಲಕ್ಷ್ಮಣ ಸವದಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಗೆ ನಿರಾಸೆಯಾಗಿದೆ.
ಮಹಿಳಾ ಕೋಟಾದಡಿ ತಮಗೆ ಸಚಿವ ಸ್ಥಾನ ನೀಡುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದರೇ, ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ತಮಗೆ ಅಥವಾ ಸತತ ಮೂರು ಬಾರಿ ಚಿಕ್ಕೋಡಿ-ಸದಲಗಾದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಗಣೇಶ್ ಹುಕ್ಕೇರಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪ್ರಕಾಶ್ ಹುಕ್ಕೇರಿ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಪ್ರಕಾಶ್ ಹುಕ್ಕೇರಿ 2014ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ತ್ಯಜಿಸಿ ಲೋಕಸಭೆಗೆ ಸ್ಪರ್ಧಿಸಿದ್ದರು. ಹೀಗಾಗಿ ಈ ಬಾರಿ ತಮಗೆ ಇಲ್ಲ ತಮ್ಮನ ಮಗನಿಗೆ ಸಚಿವ ಸ್ಥಾನ ನೀಡಲು ಪ್ರಕಾಶ್ ಹುಕ್ಕೇರಿ ಪಟ್ಟು ಹಿಡಿದ್ದಾರೆ. ಪ್ರಾದೇಶಿಕ ಸಮಾನತೆ, ಸಮುದಾಯವಾರು ಬೇಡಿಕೆ ಈಡೇರಿಸುವ ಅಡಕತ್ತರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಲುಕಿದೆ. ಈ ಬಾರಿ 39 ಲಿಂಗಾಯತ ಸಮುದಾಯದ ಶಾಸಕರು ಆಯ್ಕೆಯಾದ ಹಿನ್ನೆಲೆ ಸಂಪುಟ ವಿಸ್ತರಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ತುಪ್ಪವಾಗುತ್ತಾ ಕಾದು ನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Sun, 21 May 23