ದ್ವೇಷ ರಾಜಕಾರಣಕ್ಕೆ ಬಿತ್ತು ಬ್ರೇಕ್; ಒಬ್ಬರನೊಬ್ಬರು ಸೋಲಿಸಲು ಪಣತೊಟ್ಟು ಮಕಾಡೆ ಮಲಗಿದ ಅತಿರಥ ಮಹಾರಥ ನಾಯಕರು
ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ವೈಯಕ್ತಿಕ ಪ್ರತಿಷ್ಠೆ ಜತೆಗೆ ದ್ವೇಷದ ರಾಜಕಾರಣಕ್ಕೂ ಸಾಕ್ಷಿಯಾಗಿತ್ತು. ಅತಿರಥ ಮಹಾರಥ ನಾಯಕರೇ ಒಬ್ಬರನೊಬ್ಬರು ಸೋಲಿಸಲು ಪಣತೊಟ್ಟಿದ್ದರು. ರಾಜಕೀಯ ದ್ವೇಷದಿಂದಾಗಿ ಈ ಬಾರಿ ವಿರೋಧಿಗಳನ್ನ ಸೋಲಿಸಿ, ಮನೆಗೆ ಕಳುಹಿಸುವ ರಣತಂತ್ರ ಮಾಡಿದ್ದ ಎಲ್ಲ ನಾಯಕರು ಇದೀಗ ಮಕಾಡೆ ಮಲಗಿದ್ದು ಕಿಚ್ಚಿನ ರಾಜಕಾರಣಕ್ಕೆ ಮತದಾರರು ತಣ್ಣೀರೆರಚುವ ಕೆಲಸ ಮಾಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಚುನಾವಣೆ ಇರಲಿ ನಾಯಕರು ಜಿದ್ದಿಗೆ ಬೀಳ್ತಾರೆ, ಆ ಚುನಾವಣೆಯನ್ನ ವೈಯಕ್ತಿಕವಾಗಿ ತೆಗೆದುಕೊಳ್ತಾರೆ. ವಿರೋಧಿಗಳನ್ನ ಮಣಿಸಿ ಮನೆಗೆ ಕಳುಹಿಸಲು ನಾನಾ ತಂತ್ರಗಳನ್ನ ಮಾಡುತ್ತಾರೆ. ಇಲ್ಲಿ ಗೆಲುವಿನ ಲೆಕ್ಕಾಚಾರಕ್ಕಿಂತ ಸೋಲಿಸುವ ಲೆಕ್ಕಾಚಾರದಲ್ಲೇ ನಾಯಕರು ಹೆಚ್ಚು ಸಕ್ಸಸ್ ಆಗಿದ್ದು ಈ ಹಿಂದೆ ನೋಡಿದ್ದೇವೆ. ಆದ್ರೆ, ಈ ಬಾರಿ ನಡೆದ ವಿಧಾನಸಭಾ ಚುನಾವಣೆ(Karnataka Assembly Election) ಈ ಎಲ್ಲ ಆಟಕ್ಕೂ ಬ್ರೇಕ್ ಹಾಕಿ ಜಿಲ್ಲಾ ನಾಯಕರ ಲೆಕ್ಕಾಚಾರವನ್ನ ಉಲ್ಟಾ ಮಾಡಿದೆ. ವಿರೋಧಿಗಳನ್ನ ಸೋಲಿಸಲು ಹೋರಟವರಿಗೆ ಹಿನ್ನಡೆಯಾಗಿ ಮತದಾರರು ಮೇಲುಗೈ ಸಾಧಿಸಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಒಬ್ಬರನ್ನೊಬ್ಬರು ಸೋಲಿಸುವುದಾಗಿ ದೊಡ್ಡ ದೊಡ್ಡ ನಾಯಕರೇ ಹೇಳಿಕೆ ನೀಡಿ ಮುಖಭಂಗ ಅನುಭವಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುತ್ತೇನೆಂದು ಪಣತೊಟ್ಟಿದ್ದ ರಮೇಶ್ ಜಾರಕಿಹೊಳಿ ಮುಖಭಂಗ ಅನುಭವಿಸಿದ್ರೇ, ಇತ್ತ ಗೋಕಾಕ್ನಲ್ಲಿ ರಮೇಶ್ ಸೋಲಿಸಲು ಹೋದ ಹೆಬ್ಬಾಳ್ಕರ್ಗೂ ಹಿನ್ನಡೆಯಾಗಿದೆ. ರಮೇಶ್ ವಿರುದ್ದ ಲಿಂಗಾಯತ ಸಮುದಾಯದ ಹೊಸ ಮುಖಕ್ಕೆ ಟಿಕೆಟ್ ಕೊಡಿಸಿ ಪ್ಲ್ಯಾನ್ ಮಾಡಿದ್ದ ಹೆಬ್ಬಾಳ್ಕರ್ ಕೂಡ ಸೋತಿದ್ದಾರೆ. ಇತ್ತ ಅಥಣಿಯಲ್ಲಿ ಲಕ್ಷ್ಮಣ ಸವದಿ ಸೋಲಿಸಲು ಹೋದ ಸಾಹುಕಾರ್ ರಮೇಶ್ ಅಲ್ಲಿ ಕೂಡ ತೀವ್ರ ಹಿನ್ನಡೆ ಅನುಭವಿಸಿದ್ದು, ಅತೀ ಹೆಚ್ಚು ಮತಗಳ ಅಂತರದಿಂದ ಸವದಿ ಗೆದ್ದು, ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ನಾಡದ್ರೋಹಿ ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಬೆಳಗಾವಿಗರು; ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿಯೂ ಸೋಲು
ಇನ್ನು ಒಂದು ಕಡೆ ರಮೇಶ್ ಜಾರಕಿಹೊಳಿ ಮತ್ತೊಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ ಒಟ್ಟಾಗಿ ರಮೇಶ್ ಸೋಲಿಸುವುದರಲ್ಲಿ ಹಿನ್ನಡೆಯಾಗಿದ್ರೇ, ಇತ್ತ ರಮೇಶ್ಗೂ ಕೂಡ ಮುಖಭಂಗವಾಗಿದೆ. ಇನ್ನೊಂದು ಕಡೆ ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿ ಸೋಲಿಸಲು ಹೋಗಿದ್ದ ಜೊಲ್ಲೆ ದಂಪತಿಗೆ ಹಿನ್ನಡೆಯಾಗಿದ್ರೆ, ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಸೋಲಿಸಲು ಹೋಗಿದ್ದ ಜಾರಕಿಹೊಳಿ ಬ್ರದರ್ಸ್ ಆಟ ನಡೆಯಲಿಲ್ಲ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ್ ಪಾಟೀಲ್ ಸೋಲಿಸಲು ಪ್ಲ್ಯಾನ್ ಮಾಡಿದ್ದ ಸತೀಶ್ ಜಾರಕಿಹೊಳಿಗೆ ಮತದಾರರು ಕೈಹಿಡಿಯಲಿಲ್ಲ. ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಸಾಕಷ್ಟು ರಣತತಂತ್ರ ಮಾಡಿದ್ದ ಈ ಎಲ್ಲ ನಾಯಕರಿಗೆ ಮತದಾರರು ಶಾಕ್ ನೀಡಿದ್ದು, ಒಳ ಹೊಡೆತ ಕೊಡಲು ಹೋದವರು ಸೈಲೆಂಟ್ ಆಗುವಂತೆ ಮಾಡಿದೆ.
ಒಟ್ಟಾರೆ ಯಾರನ್ನೂ ಯಾರು ಸೋಲಿಸಲು ಆಗಲ್ಲಾ, ಎನೇ ಇದ್ರೂ ಅದು ಮತದಾರರ ಕೈಯಲ್ಲಿದೆ ಅನ್ನೋದನ್ನ ಬೆಳಗಾವಿ ಜಿಲ್ಲಾ ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಭೀತು ಮಾಡಿದ್ದಾರೆ. ಇಲ್ಲಿಯವರೆಗೂ ತಮ್ಮ ವೈಯಕ್ತಿಕ ವರ್ಚಸ್ಸು ಮೇಲೆ ಯಾರನ್ನ ಬೇಕಾದ್ರೂ ಸೋಲಿಸಬಹುದು ಅಂದುಕೊಂಡು ಓಡಾಡ್ತಿದ್ದ ಕೆಲ ನಾಯಕರು ಈ ಚುನಾವಣೆಯಿಂದ ಪಾಠ ಕಲಿತಿದ್ದು. ಇನ್ನಾದರೂ ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ದಿ ಕೆಲಸ ಮಾಡಿ ಮತದಾರರ ಮನಸ್ಸು ಗೆಲ್ಲುವ ಕೆಲಸ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.
ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Sun, 21 May 23