ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನ: ಲಕ್ಷ್ಮಣ ಸವದಿ ರಾಜೀನಾಮೆ

ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಲಕ್ಷ್ಮಣ ಸವದಿ ರೂಪದಲ್ಲಿ ಮೊದಲ ವಿಕೆಟ್ ಪತನವಾಗಿದೆ, ಬಿಜೆಪಿ ರಾಜೀನಾಮೆ ನೀಡುವುದಾಗಿ ಸವದಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನ: ಲಕ್ಷ್ಮಣ ಸವದಿ ರಾಜೀನಾಮೆ
ಲಕ್ಷ್ಮಣ ಸವದಿ
Follow us
ರಮೇಶ್ ಬಿ. ಜವಳಗೇರಾ
|

Updated on:Apr 12, 2023 | 10:45 AM

ಬೆಳಗಾವಿ: ಮಾಜಿ ಉಪಮುಖ್ಯಂತ್ರಿ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ(Laxman Savadi) ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಅಥಣಿ ವಿಧಾನಸಭೆ ಕ್ಷೇತ್ರದ ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಲಕ್ಷ್ಮಣ ಸವದಿ  ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನಿಡುವುದಾಗಿ ಘೋಷಣೆ ಮಾಡಿದರು. ಬೆಳಗಾವಿಯ ಅಥಣಿಯಲ್ಲಿ ಇಂದು(ಏಪ್ರಿಲ್ 12) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸವದಿ, ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಆ ಗುರು ನನಗೆ ವಿಷ ಕೊಟ್ಟು ಕುಡಿ ಅಂದ್ರು ಕುಡಿಯುತ್ತೇನೆ. ಅವರಿಗೂ ನಾನು ಕ್ಷಮೆ ಕೇಳುತ್ತೇನೆ. ಅವರು ಹಾಕಿದ ಗೆರೆ ದಾಟುತ್ತಿದ್ದೇನೆ. ಅವರ ವಿಚಾರಧಾರೆ ದಾಟಿ ಹೋಗುತ್ತಿರುವುದರಿಂದ ಕ್ಷಮೆ ಇರಲಿ. ನಿಮ್ಮ ಅಂತರಾಳದಲ್ಲಿ ನನಗೆ ಆಶೀರ್ವಾದ ಬೇಕು ಎಂದರು.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿಯ ಅತಿರಥ ಲಕ್ಷಣ್ ಸವದಿಗೆ ಕಾಂಗ್ರೆಸ್ ಗಾಳ

ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಅನೇಕ ಪಕ್ಷದ ಮುಖಂಡರು ನನ್ನನ್ನು ಸಂಪರ್ಕ ಮಾಡಿದ್ದಾರೆ. ನಾಳೆ ಸಂಜೆ ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡುತ್ತೇನೆ. ಸವದಿ ಯಾವತ್ತೂ ಒಳಗೊಂದು ಹೊರಗೊಂದು ಮಾತನಾಡಲ್ಲ. ವಿಧಾನಸಭೆಯಲ್ಲಿ ನಡೆದ ಘಟನೆಯಿಂದ ರಾಜೀನಾಮೆ ಕೊಡಬೇಕಾಯ್ತು. ಈ ಪ್ರಕರಣದಿಂದ ನನ್ನ ಗುರುಗಳ ಕಣ್ಣಲ್ಲಿ ನೀರು ಬಂದಿತ್ತು ಎಂದು ಆ ದಿನಗಳನ್ನು ನೆನೆದರು.

ಸೌಜನ್ಯಕ್ಕಾದರೂ ಮೊದಲು ನನ್ನ ಜೊತೆ ಚರ್ಚೆ ಮಾಡಬೇಕಿತ್ತು. ಮುಂದಿನ ದಿನಗಳಲ್ಲಿ ಸಿಎಂ ಆಗಿ, ಪ್ರಧಾನಿ ಆಗುವ ಅವಕಾಶ ಇದೆ. ಪ್ರಧಾನಿ ಆಗಿ ನೋಡುವ ಆಸೆ ಇದೆ. ಅವರು ಈ ರಾಷ್ಟ್ರದ ಪ್ರಧಾನಮಂತ್ರಿ ಆಗಲು ಯಾರು ತಪ್ಪಿಸಲ್ಲ ಅಂದುಕೊಂಡಿದ್ದೇನೆ. ಮೋದಿಗೆ 75 ವರ್ಷ ಆದ ಬಳಿಕ ಅವರಿಗೆ ಅವಕಾಶ ಸಿಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ವ್ಯಂಗ್ಯವಾಡಿದರು.

ಬಿಜೆಪಿ ಎಲ್ಲ ಹಿರಿಯರಿಗೆ, ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್ ಸೇರಿ ಎಲ್ಲರಿಗೆ ಅಭಿನಂದನೆ. ನನ್ನಿಂದ ಏನಾದರೂ ತಪ್ಪಾದರೆ ಕ್ಷಮಿಸಿ ನನಗೆ ಹಾರೈಸಿ ಎಂದು ಹೇಳುವೆ. ನನಗೆ ಆಸೆ ಇದೆ, ನನ್ನ ಹಿರಿಯರು ಮತ್ತೆ ಎರಡನೇ ಬಾರಿ ಸಿಎಂ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಅವರಿಗೆ ಎರಡನೇ ಬಾರಿ ಸಿಎಂ ಆಗಲ್ಲ, ಬಹುತೇಕ ಅವರಿಗೆ ಪ್ರಧಾನಿಗೆ ಅವಕಾಶ ಇದೆ ಎಂದು ಪರೋಕ್ಷವಾಗಿ ಬೊಮ್ಮಯಿಗೆ ಟಾಂಗ್ ಕೊಟ್ಟರು.

ನಿನಗೆ ಟಿಕೆಟ್​ ಕೊಡುವುದಕ್ಕೆ ಆಗಲ್ಲ ಸುಮ್ಮನೆ ಬಿದ್ದುಕೊಂಡು ಇರು ಎಂದು ಹೇಳಿದ್ರೆ ಕೇಳುತ್ತಿದ್ದೆ. ನನಗೆ ಅವರ ಮೇಲೆ ದ್ವೇಷ ಇಲ್ಲ. ಅವರ ತಂದೆ ಸಿಎಂ ಆಗಿದ್ದ ದಿನದಿಂದಲೂ ಒಳ್ಳೆಯ ಸಂಬಂಧ ಇದೆ. ಸಿ.ಸಿ.ಪಾಟೀಲ್ ಹಾಗೂ ನನ್ನ ವಿನಂತಿ ಮನ್ನಿಸಿ ಬಿಜೆಪಿಗೆ ಬಂದ್ರು. ನಾನು ಸಿ‌‌.ಸಿ‌‌.ಪಾಟೀಲ್ ಸೇರಿ ಬೊಮ್ಮಾಯಿರ‌ನ್ನು ಬಿಜೆಪಿಗೆ ಸೇರ್ಪಡೆ ಮಾಡಿಸಿದ್ವಿ. ಅವರು ಬೃಹತ್ ನೀರಾವರಿ ಸಚಿವರಾಗಿ ಸಿಎಂ ಆಗಿ ಕಾರ್ಯನಿರ್ವಹಿಸುವುದು ನನಗೆ ಬಹಳ ಸಂತೋಷ ಆಗಿದೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆ ಹೇಳುತ್ತೇನೆ. ನಾನು ಎಲ್ಲೇ ಇರಲಿ ಹೇಗೆ ಇರಲಿ ಅಲ್ಲಿ ನನ್ನ ಗುರು ಇದ್ದಾರೆ, ಆ ಗುರುವನ್ನು ಮಾತ್ರ ಮರೆಯಲ್ಲ. ಅವರಿಗೆ ನಾನು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನನ್ನ ಕ್ಷಮಿಸಬೇಕು ಎಂದು ಹೇಳುತ್ತೇನೆ ಎಂದರು.

ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಲೈವ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:25 am, Wed, 12 April 23