ತಾಂತ್ರಿಕ ಸಮಸ್ಯೆ ಹಿನ್ನೆಲೆ ಹೆಚ್‌ಡಿ ದೇವೇಗೌಡ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಮಾಜಿ ಪ್ರದಾನಿ ಹೆಚ್‌ಡಿ ದೇವೇಗೌಡ ಅವರು ತೆರಳುತ್ತಿದ್ದ ಹೆಲಿಕಾಪ್ಟರ್ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ತುರ್ತು ಭೂಸ್ಪರ್ಶ ಮಾಡಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರದ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.
ಹಾಸನ: ಮಾಜಿ ಪ್ರದಾನಿ ಹೆಚ್‌ಡಿ ದೇವೇಗೌಡ (HD Deve Gowda) ಅವರು ತೆರಳುತ್ತಿದ್ದ ಹೆಲಿಕಾಪ್ಟರ್ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರದ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ. ಮೇಲೆ ಹಾರಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಪೈಲೆಟ್ ಕೆಳಗಿಳಿಸಿದ್ದಾರೆ. ಬಳಿಕ ಸಮಸ್ಯೆ ಸರಿಪಡಿಸಿ ಮತ್ತೆ ತೆರಳಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಹೆಚ್‌ಡಿ ದೇವೇಗೌಡ, JDS ರಾಜ್ಯಾಧ್ಯಕ್ಷ ಇಬ್ರಾಹಿಂ ಜೆಡಿಎಸ್ ಅಭ್ಯರ್ಥಿ ಪ್ರಯಾಣಿಸಿದ್ದು, ಎಚ್.ಕೆ.ಕುಮಾರಸ್ವಾಮಿ ಪರ ಮತಯಾಚಿಸಿ ಸಕಲೇಶಪುರದಿಂದ ಅರಕಲಗೂಡಿಗೆ ತೆರಳುತ್ತಿದ್ದರು.
ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್ಗೆ ಬಂದಿಳಿದಿದ್ದರು.
ಇದನ್ನೂ ಓದಿ: Honnavar: ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಾಗ ಹೆಲಿಪ್ಯಾಡ್ನಲ್ಲಿ ಬೆಂಕಿ; ತಪ್ಪಿದ ದುರಂತ
ಈ ವೇಳೆ, ಹೆಲಿಪ್ಯಾಡ್ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಸಂಭಾವ್ಯ ದುರಂತ ತಪ್ಪಿದೆ.
ಕಾಂಗ್ರೆಸ್ ಸೋಲುವ ಸಂಕೇತವಾ?
ಮಂಗಳವಾರ ಡಿಕೆ ಶಿವಕುಮಾರ್ ಅವರು ಜಕ್ಕೂರು ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಹೆಲಿಕಾಪ್ಟರ್ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. ಅದೃಷ್ಟವಶಾತ್ ಹೆಲಿಕಾಪ್ಟರ್ನಲ್ಲಿದ್ದವರಿಗೆ ಯಾವುದೇ ಹಾನಿಯಾಗಿರಲಿಲ್ಲ. ಘಟನೆ ಬಳಿಕ ಬಜರಂಗದಳ ನಿಷೇಧಿಸುವುದಾಗಿ ಹೇಳಿದ ಒಂದೇ ಗಂಟೆಯಲ್ಲಿ ಜಟಾಯು ತಕ್ಕ ಪಾಠ ಕಲಿಸಿದ್ದಾನೆ. ಇದು ರಾಮ-ಹನುಮನ ಕೋಪ ಎನ್ನಲಾಗಿತ್ತು. ಮತ್ತೊಂದೆಡೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ಸೋಲುವುದಕ್ಕೆ ಇದು ಸಂಕೇತ ಎನ್ನುವ ಮಾತುಗಳು ಹರಿದಾಡುತ್ತಿವೆ.
ಬಿಜೆಪಿ ಪ್ರಚಾರ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ ಆರೋಪ
ರಾಯಚೂರು: ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಾಗ ಮೈಸೂರು, ತುಮಕೂರು ಭಾಗದಲ್ಲಿ ಕಲ್ಲು ತೂರಾಟಗಳಾದ ಬೆನ್ನಲ್ಲೆ ಇದೀಗ ರಾಯಚೂರಿನಲ್ಲಿಯೂ ಕಲ್ಲು ತೂರಾಟವಾಗಿತ್ತು. ಜಿಲ್ಲೆಯ ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ತುರ್ವಿಹಾಳ ಪಟ್ಟಣದಲ್ಲಿ ಬಿಜೆಪಿ ಪ್ರಚಾರ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ ಆರೋಪ ಕೇಳಿಬಂದಿತ್ತು.
ಏ.28 ಬೆಳಿಗ್ಗೆಯಿಂದ ಕ್ರುಸರ್ ವಾಹನದ ಮೂಲಕ ಬಿಜೆಪಿ ಕಾರ್ಯಕರ್ತರು ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರ ಮಾಡುತ್ತಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಬೆಂಬಲಿಗರಿಂದ ಕ್ರುಸರ್ ವಾಹನದ ಗಾಜು ಒಡೆದು ಅಟ್ಟಹಾಸ ಮೆರೆದಿರುವ ಆರೋಪ ಕೇಳಿಬಂದಿತ್ತು. ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Thu, 4 May 23