AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HD Kumaraswamy: ಬೊಮ್ಮಾಯಿ ಪರ ಸುದೀಪ್ ಪ್ರಚಾರ ವರ್ಕೌಟ್ ಆಗಲ್ಲ; ಹೆಚ್​ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಟ ಸುದೀಪ್ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಆದರೆ, ಇದರಿಂದ ದೊಡ್ಡ ಪ್ರಯೋಜನವಾಗದು ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

HD Kumaraswamy: ಬೊಮ್ಮಾಯಿ ಪರ ಸುದೀಪ್ ಪ್ರಚಾರ ವರ್ಕೌಟ್ ಆಗಲ್ಲ; ಹೆಚ್​ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ
Ganapathi Sharma
|

Updated on: Apr 05, 2023 | 3:39 PM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪರ ನಟ ಸುದೀಪ್ (Kichcha Sudeep) ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಆದರೆ, ಇದರಿಂದ ದೊಡ್ಡ ಪ್ರಯೋಜನವಾಗದು ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಮೇಲಿನ ವಿಶ್ವಾಸದಿಂದ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದು, ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದರಿಂದ ಪ್ರಯೋಜನವಾಗದು ಎಂದು ಹೇಳಿದ್ದಾರೆ.

ನಟರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ನಟರನ್ನು ನೋಡಲು ಜನರು ಬರುತ್ತಾರೆ. ಕೆಲವು ಕಡೆ ಕಾಂಗ್ರೆಸ್ ಪರ, ಕೆಲವು ಕಡೆ ಬಿಜೆಪಿ ಪರ ಪ್ರಚಾರ ಮಾಡುವ ನಟರು ಇದ್ದಾರೆ. ಆದರೆ ಅವರೆಲ್ಲ ಒಂದು ಪಕ್ಷಕ್ಕೆ ಸ್ಥಿರವಾಗಿ ಪ್ರಚಾರ ಮಾಡುವುದಿಲ್ಲ. ಅವರವರ ಬಾಂಧವ್ಯದ ಮೇಲೆ ಪ್ರಚಾರಕ್ಕೆ ಬರುತ್ತಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು’

ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಕೆಲವು ಕಡೆ ಪ್ರಚಾರಕ್ಕೆ ಬರಲಿದ್ದಾರೆ. ಯಾವ ಚಿತ್ರ ನಟರನ್ನು ಕೂಡಾ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಟರಲ್ಲಿ ಎಲ್ಲಾ ವರ್ಗದ ಜನರಿಗೂ ಬೇಕಾದವರು ಇರುತ್ತಾರೆ. ಹೀಗೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಹಾಳು ಮಾಡಬಾರದು ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ವ್ಯಂಗ್ಯ

ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್‌ ಪ್ರಚಾರ ಮಾಡುವ ವಿಚಾರವಾಗಿ ಕಾಂಗ್ರೆಸ್ ವ್ಯಂಗ್ಯವಾಡಿದೆ. ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ತಮ್ಮ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಬಸವರಾಜ ಬೊಮ್ಮಾಯಿ ಅವರು ಇದೀಗ ಚಿತ್ರ ನಟರ ಎದುರು ಶರಣಾಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇದನ್ನೂ ಓದಿ: Kichcha Sudep: ಬೊಮ್ಮಾಯಿ ಪರವಷ್ಟೇ ಸುದೀಪ್ ಪ್ರಚಾರವಾ? ಇಲ್ಲಿದೆ ಸುದೀಪ್ ಚುನಾವಣಾ ಪ್ರಚಾರದ ಇತಿಹಾಸ

ಬಿಜೆಪಿಯಲ್ಲಿ ವರ್ಚಸ್ಸು ಹೊಂದಿರುವ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ