Explainer: ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನೇ ಆಯ್ಕೆ ಮಾಡಿದ್ದೇಕೆ? ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರವೇನು? ಇಲ್ಲಿದೆ ವರುಣಾ ಗ್ರೌಂಡ್ ರಿಪೋರ್ಟ್
ಸ್ಥಳೀಯ ನಾಯಕರನ್ನೇ ಬಿಟ್ಟು ವಿ ಸೋಮಣ್ಣರನ್ನ ಸಿದ್ದರಾಮಯ್ಯ ವರುಣಾದಲ್ಲಿ ಕಣಕ್ಕಿಳಿಸಿದ್ಯಾಕೆ? ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನೇ ಯಾಕೆ ಆಯ್ಕೆ? ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರವೇನು? ವರುಣಾ ಕ್ಷೇತ್ರದಲ್ಲಿ ಯಾವ ಸಮುದಾಯದ ಎಷ್ಟು ಮತಗಳು ಇವೆ? ಈ ಎಲ್ಲಾ ಸಮಗ್ರ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ವರುಣಾ ವಿಧಾನಸಭಾ ಕ್ಷೇತ್ರ (Varuna Assembly Constituency)ಇಡೀ ರಾಜ್ಯದ ಗಮನ ಸೆಳೆದಿದೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ (Siddaramaiah), ಇನ್ನೊಂದು ಬಾರಿ ಮುಖ್ಯಮಂತ್ರಿಯಾಗಬೇಕೆನ್ನುವುದು ಅವರ ಇರಾದೆ. ಹೀಗಾಗಿ ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೊದಲ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿದ್ದರು. ಆದ್ರೆ, ಹೈಕಮಾಂಡ್ ಸರ್ವೆಯಲ್ಲಿ ಸಿದ್ದರಾಮಯ್ಯನವರಿಗೆ ಕೋಲಾರ ಸೇಫ್ ಅಲ್ಲ ಎನ್ನುವುದು ವರದಿಯಿಂದ ಬಂದಿದೆ. ಹೀಗಾಗಿ ಸ್ವತಃ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯನವರನ್ನು ಯಾವುದೇ ಕಾರಣಕ್ಕೂ ಕೋಲಾರದಲ್ಲಿ ನಿಲ್ಲಬೇಡಿ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಪುತ್ರನನ್ನು ಹಿಂದಕ್ಕೆ ಸರಿಸಿ ವರುಣಾದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ನಾಯಕನನ್ನು ಹಣಿಯಲು ಹಲವು ಲೆಕ್ಕಾಚಾರಗೊಂದಿಗೆ ಪ್ರಬಲ ನಾಯಕ ವಿ ಸೋಮಣ್ಣ(V Somanna) ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: ಈ ಬಾರಿ ವರುಣಾದಲ್ಲಿ ಸಚಿವ ಸೋಮಣ್ಣ ಸ್ಪರ್ಧೆ ಬಗ್ಗೆ ಅಪ್ಪ-ಮಗ ಹೇಳಿದ್ದೇನು?
ಈ ಮೊದಲು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಜಯೇಂದ್ರ ಅವರನ್ನು ತಮ್ಮ ಸ್ವಕ್ಷೇತ್ರ ಶಿಕಾರಿಪುರದಿಂದ ಕಣಕ್ಕಿಳಿಸಲು ಬಯಸಿರುವ ಬಿಎಸ್‌ವೈ, ಈ ಕುರಿತು ಹೈಕಮಾಂಡ್ ಮನವೋಲಿಸುವಲ್ಲಿ ಸಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಮತ್ತೋರ್ವ ಪ್ರಬಲ ನಾಯಕ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ವರುಣಾ ಕ್ಷೇತ್ರದಲ್ಲಿರುವ ಲಿಂಗಾಯತ ಸಮುದಾಯದ ಪ್ರಾಬಲ್ಯ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ವಿ. ಸೋಮಣ್ಣ, ವರುಣಾ ಕ್ಷೇತ್ರದ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸಮರ್ಥರು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ ಎನ್ನಲಾಗುತ್ತಿದೆ.
ವರುಣಾ ಕ್ಷೇತ್ರದ ಜಾತಿ ಲೆಕ್ಕಾಚಾರ
ವರುಣಾ ಕ್ಷೇತ್ರದಲ್ಲಿ ಒಟ್ಟು 221050 ಮತದಾರರಿದ್ದಾರೆ. ಈ ಪೈಕಿ 111980 ಪುರಷರಿದ್ದರೆ, 109052 ಮಹಿಳಾ ಮತದಾರರಿದ್ದಾರೆ. ಇತರೆ 13 ಮತದಾರರು ಇದ್ದಾರೆ. ಹಾಗಾದ್ರೆ, ವರುಣಾದಲ್ಲಿ ಯಾವೆಲ್ಲ ಸಮುದಾಯಗಳ ಎಷ್ಟು ಮತಗಳು ಇವೆ ಎನ್ನುವುದನ್ನು ನೋಡುವುದಾದರೆ, ವರುಣಾ ಕ್ಷೇತ್ರದಲ್ಲಿ ಸುಮಾರು 55 ಸಾವಿರದಷ್ಟು ಲಿಂಗಾಯತ ಮತದಾರರಿದ್ದಾರೆ. ಹಾಗೆಯೇ ಒಕ್ಕಲಿಗ ಸಮುದಾಯದ ಜನಸಂಖ್ಯೆ ಸುಮಾರು 12 ಸಾವಿರದಷ್ಟಿದೆ. ಅದೇ ರೀತಿ 35 ಸಾವಿರದಷ್ಟು ಕುರುಬರು, 12 ಸಾವಿರದಷ್ಟು ಇತರ ಹಿಂದುಳಿದ ವರ್ಗಗಳ ಸಮುದಾಯದವರು, 43 ಸಾವಿರದಷ್ಟು ದಲಿತರು ಮತ್ತು ಸುಮಾರು 23 ಸಾವಿರದಷ್ಟು ನಾಯಕ ಸಮುದಾಯದ ಮತಗಳಿವೆ. ಹೀಗಾಗಿ ಸಿದ್ದರಾಮಯ್ಯ ಅವರು ಕುರುಬ ಮತ್ತು ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಬಿಜೆಪಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರ ಹೆಣೆಯುತ್ತಿದೆ. ಹೀಗಾಗಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದರೆ ಈ ಎರಡೂ ಸಮುದಾಯಗಳ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಸೋಮಣ್ಣರನ್ನೇ ಆಯ್ಕೆ ಮಾಡಿದ್ದೇಕೆ?
ರಾಜ್ಯ ಬಿಜೆಪಿ ಸರ್ಕಾರ ಇತ್ತೀಚಿಗಷ್ಟೇ ಒಕ್ಕಲಿಗರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕಲ್ಪಿಸಿದೆ. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲಾಗಿದ್ದು, ಎಸ್‌ಸಿ, ಎಸ್‌ಟಿ ಹಾಗೂ ದಲಿತ ಸಮುದಾಯದ ಬಹುಪಾಲು ಮತಗಳು ಸುಲಭವಾಗಿ ದೊರೆಯಲಿದೆ ಎಂಬ ವಿಶ್ವಾಸ ಬಿಜೆಪಿಗೆ ಇದೆ. ಹೀಗಾಗಿ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸುವುದರಿಂದ ಲಿಂಗಾಯತ ಮತಗಳು ಮತ್ತು ಮೀಸಲಾತಿಯ ಕಾರಣಕ್ಕೆ ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸುಲಭವಾಗಿ ಬಾಚಿಕೊಳ್ಳಬಹುದು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಹಾಕಿದೆ. ಹೀಗಾಗಿಯೇ ಜಾತಿ ಲೆಕ್ಕಾಚಾರದ ಆಧಾರ ಮೇಲೆ ಬಿಜೆಪಿ ಹೈಕಮಾಂಡ್ ಪ್ರಭಾವಿ ಲಿಂಗಾಯತ ನಾಯಕನಿಗೆ ಮಣೆ ಹಾಕಿದೆ.
.ಲಿಂಗಾಯತ ಬಾಹುಳ್ಯದ ವರುಣಾದಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನೇ ಕಣಕ್ಕಿಳಿಸಿ ಸಿದ್ದರಾಮಯ್ಯ ಅವರು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡದಂತೆ ಕಟ್ಟಿ ಹಾಕುವುದು ಬಿಜೆಪಿ ಹೈಕಮಾಂಡ್ ಗೇಮ್ ಪ್ಲಾನ್. ಹೀಗಾಗಿ ಲಿಂಗಾಯತ ಪ್ರಬಲ ನಾಯಕನನ್ನೇ ಹುಡುಕುತ್ತಿದ್ದ ಹೈಕಮಾಂಡ್ಗೆ ಮೊದಲು ಕಣ್ಣಿಗೆ ಬಿದ್ದಿದ್ದು, ವಿಜಯೇಂದ್ರ. ಆದ್ರೆ, ಯಡಿಯೂರಪ್ಪ, ವಿಜಯೇಂದ್ರ ಅವರನ್ನು ವರುಣಾ ಕ್ಷೇತದಿಂದ ಕಣಕ್ಕಿಳಿಸಲು ಸುತರಾಂ ಒಪ್ಪಿಲ್ಲ. ಹೀಗಾಗಿ ನಂತರ ತೀವ್ರ ಶೋಧ ನಡೆಸಿದ ಹೈಕಮಾಂಡ್ಗೆ ಸಿಕ್ಕಿದ್ದೇ ಮತ್ತೋರ್ವ ಪ್ರಭಾವಿ ಲಿಂಗಾಯತ ನಾಯಕ ಸೋಮಣ್ಣ.
ವರುಣಾ ಕ್ಷೇತ್ರದ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸೋಮಣ್ಣ ಸಮರ್ಥರು ಎಂದು ಅವರನ್ನು ಅಂತಿಮಗೊಳಿಸಿದೆ. ಅಲ್ಲದೇ ಸೋಮಣ್ಣ ಬೇರು ಮಟ್ಟದ ರಾಜಕಾರಣವನ್ನು ಚೆನ್ನಾಗಿ ಬಲ್ಲವರಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ ಅನುಭವಿದೆ. ಸೋಮಣ್ಣ ಹಾಗೂ ಸಿದ್ದರಾಮಯ್ಯ ಒಟ್ಟೊಟ್ಟಿಗೆ ರಾಜಕೀಯ ಪ್ರವೇಶ ಮಾಡಿದವರು. ಕ್ಷೇತ್ರದ ರಾಜಕೀಯ ನಾಡಿ ಮಿಡಿತ ಅರಿಯುವ ಚಾಣಾಕ್ಷತನ ಸೋಮಣ್ಣನವರಲ್ಲಿದೆ ಎನ್ನುವುದು. ಈ ಎಲ್ಲ ಕಾರಣಗಳಿಂದಾಗಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರೇ ಸೂಕ್ತ ಅಭ್ಯರ್ಥಿ ಎಂದು ಹೈಕಮಾಂಡ್ ಆಯ್ಕೆ ಮಾಡಿದೆ.
ಯಡಿಯೂರಪ್ಪನವರ ಮೂಲಕ ಲಿಂಗಾಯತ ಮತಗಳನ್ನು ಸೆಳೆಯುವ ಪ್ಲಾನ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಿಂಗಾಯತ ಸಮುದಾಯ ಸರ್ವೋಚ್ಛ ನಾಯಕರೆಂದೇ ಗುರುತಿಸಿಕೊಂಡಿದ್ದಾರೆ. ಅವರ ಮೂಲಕ ವರುಣಾ ಕ್ಷೇತ್ರದ ಲಿಂಗಾಯತ ಸಮುದಾಯಗಳ ಮತಗಳನ್ನು ಸೆಳೆಯುವ ತಂತ್ರವನ್ನೂ ಸಹ ಹೈಕಮಾಂಡ್ ಮಾಡಿದೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ಯಡಿಯೂರಪ್ಪನವರ ಜತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ವರುಣಾದಲ್ಲಿ ಸೋಮಣ್ಣ ಜೊತೆ ಕೈಜೋಡಿಸಬೇಕು. ಇಬ್ಬರೂ ಸೇರಿಕೊಂಡು ಲಿಂಗಾಯತ ಮತಗಳನ್ನು ಕ್ರೂಢೀಕರಿಸುವ ಕೆಲಸ ಮಾಡಬೇಕು. ಇದರೊಂದಿಗೆ ಸೋಮಣ್ಣ ಗೆಲುವಿಗೆ ಶ್ರಮಿಸಬೇಕು ಎಂದು ಯಡಿಯೂರಪ್ಪಗೆ ಹೈಕಮಾಂಡ್ ಸೂಚಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸಿದ್ದರಾಮಯ್ಯಗೆ ಅದೃಷ್ಟದ ಕ್ಷೇತ್ರ ವರುಣಾ
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ತಿರುವು ಕೊಟ್ಟಿದ್ದು ಚಾಮುಂಡೇಶ್ವರಿ ಉಪಚುನಾವಣೆಯಾದರೂ ವರುಣಾ ಕ್ಷೇತ್ರಕ್ಕೂ ಅವರಿಗೂ ಅವಿನಾಭಾವ ನಂಟಿದೆ. ಅವರ ಹುಟ್ಟೂರು ಇಲ್ಲಿಯೇ ಇದ್ದರೆ ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರವಾಗಿದೆ. ಇದುವರೆಗೂ ನಡೆದ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಸಿದ್ದರಾಮಯ್ಯ ಗೆದ್ದಿದ್ದರೆ, ಒಂದು ಬಾರಿ ಅವರ ಪತ್ರ ಯತೀಂದ್ರ ಸಿದ್ದರಾಮಯ್ಯ ಗೆಲುವು ಕಂಡಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ ಎರಡನೇ ಬಾರಿ ಗೆದ್ದು ಸಿಎಂ ಹುದ್ದೇಗೆರಿದ್ದರು. ಕ್ಷೇತ್ರದಲ್ಲಿ ಬೇರೆ ಪಕ್ಷದ ಪ್ರಬಲ ಅಭ್ಯರ್ಥಿ ಇಲ್ಲದಿರುವುದರಿಂದ ವರುಣಾ ಕ್ಷೇತ್ರ ಅಪ್ಪ-ಮಕ್ಕಳ ಹಿಡಿತದಲ್ಲಿದೆ.
ಕಳೆದ 3 ಚುನಾವಣೆಯ ಫಲಿತಾಂಶ
- ಕಳೆದ ಚುನಾವಣೆಯಲ್ಲಿ ಅಂದರೆ 2018ರಲ್ಲಿ ಯತೀಂದ್ರ ಸಿದ್ದರಾಮಯ್ಯ 96,435 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ಟಿ ಬಸವರಾಜು 37,819 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇನ್ನು ಜೆಡಿಎಸ್ 28,123 ಮತಗಳನ್ನು ಪಡೆದುಕೊಂಡಿತ್ತು.
- 2013ರಲ್ಲಿ ಸಿದ್ದರಾಮಯ್ಯ 74,385 ಮತಗಳನ್ನು ಪಡೆದುಕೊಂಡಿದ್ದರೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾಪು ಸಿದ್ದಲಿಂಗಸ್ವಾಮಿ 54,744 ಮತಗಳನ್ನು ಪಡೆದುಕೊಂಡಿದ್ದರು.
- 2008ರ ಚುನಾವಣೆಯಲ್ಲಿ ಸಿದ್ದರಾಮಯ್ಯ 71,908 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿಯ ಎಲ್.ರೇವಣಸಿದ್ದಯ್ಯ ಎನ್ನುವರು 53,071 ಮತ ಪಡೆದು ಗಮನಸೆಳೆದಿದ್ದರು.
ಕ್ಷೇತ್ರದಲ್ಲಿ ಜೆಡಿಎಸ್ ಹೇಗಿದೆ?
ಇಲ್ಲಿ ಜೆಡಿಎಸ್ ಅಷ್ಟಾಗಿ ಪ್ರಬಲ್ಯ ಇಲ್ಲ. ಜೆಡಿಎಸ್ನ ಅಭಿಷೇಕ್ ಎಸ್ ಮನೇಗರ್ ಪ್ರಭಾವಿ ಅಭ್ಯರ್ಥಿ ಅಲ್ಲವಾದರೂ. ಕಳೆದ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ 28,123 ಮತಗಳನ್ನು ಪಡೆದುಕೊಂಡಿದ್ದರು. ಇದೀಗ ಈ ಬಾರಿಯೂ ಸಹ ಅವರೇ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಜೆಡಿಎಸ್ ಸಹ ಬಿಜೆಪಿಗೆ ಒಳಗಿಂದೊಳಗೆ ಬೆಂಬಲಿಸುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಸಹ ಕ್ಷೇತ್ರದಲ್ಲಿ ಹರಿದಾಡುತ್ತಿವೆ.
ವರುಣಾ ಟಿಕೆಟ್ ಘೋಷಣೆ ಬೆನ್ನಲ್ಲೇ ಯಡಿಯೂರಪ್ಪ ಮೊರೆ ಹೋದ ಸೋಮಣ್ಣ
ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ತೀವ್ರ ಚರ್ಚೆ ಹುಟ್ಟಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ಮುನಿಸು ಶಮನವಾದಂತೆ ಕಾಣಿಸುತ್ತಿದೆ. ವರುಣಾದಿಂದ ಟಿಕೆಟ್ ಘೋಷಣೆ ಬೆನ್ನಲ್ಲೇ ಸಚಿವ ವಿ ಸೋಮಣ್ಣ ಮುನಿಸು ಮರೆತು ಬಿಎಸ್ ಯಡಿಯೂರಪ್ಪನವರ ಮೊರೆ ಹೋಗಿದ್ದಾರೆ. ಇಂದು (ಏಪ್ರಿಲ್ 12) ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದರು. ಲಿಂಗಾಯತ ಸಮುದಾಯಗಳ ವೋಟ್ ಸೆಳೆಯುವ ಸಂಬಂಧ ಹಾಗೂ ವರುಣಾ ಕ್ಷೇತ್ರದ ರಾಜಕೀಯ ಚಿತ್ರಣದ ಬಗ್ಗೆ ಚರ್ಚಿಸಿದ್ದು, ವರುಣಾದಲ್ಲಿ ನಿಮ್ಮ ಆಶೀರ್ವಾದ ಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ಪ್ರಯೋಗ ಮಾಡಿದ್ದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಲೈವ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ