ಬೇಸರಗೊಂಡಿದ್ದ ಬಾಬುರಾವ್ ಚಿಂಚನಸೂರುಗೆ ಮಹತ್ವದ ಭರವಸೆ ನೀಡಿ ಮನವೊಲಿಸಿದ ಬಿಜೆಪಿ ನಾಯಕರು
ಅಸಮಾಧಾನಗೊಂಡು ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದ ಬಿಜೆಪಿ ಹಿರಿಯ ನಾಯಕ ಬಾಬುರಾವ್ ಚಿಂಚನಸೂರು ಅವರಿಗೆ ಬಿಜೆಪಿ ನಾಯಕರು ಮಹತ್ವದ ಭರವಸೆವೊಂದನ್ನು ನೀಡಿ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಬೆಂಗಳೂರು: ಪಕ್ಷದ ಕೆಲ ನಾಯಕರ ನಡೆಯಿಂದ ಅಸಮಾಧಾನಗೊಂಡು ಕಾಂಗ್ರೆಸ್ಗೆ ಘರ್ ವಾಪಸ್ಸಿಗೆ ನಿರ್ಧರಿಸಿದ್ದ ಬಿಜೆಪಿ ಹಿರಿಯ ನಾಯಕ, MLC ಬಾಬುರಾವ್ ಚಿಂಚನಸೂರು(baburao chinchansur )ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಹೌದು…ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬುರಾವ್ ಚಿಂಚನಸೂರು ಅವರು ಮತ್ತೆ ವಾಪಸ್ ಕಾಂಗ್ರೆಸ್ಗೆ ಸೇರಲು ತೀರ್ಮಾನಿಸಿದ್ದರು ಎನ್ನಲಾಗಿತ್ತು. ಆದ್ರೆ, ಕೊನೆಗೆ ನಳಿನ್ ಕುಮಾರ್ ಕಟೀಲ್, ಎನ್ ರವಿ ಕುಮಾರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬುರಾವ್ ಚಿಂಚನಸೂರು ಮನಸ್ಸು ಬದಲಿಸಿ ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಘೋಷಿಸಿದ್ದಾರೆ.
ನಿನ್ನೆ(ಫೆ.13) ರವಿ ಕುಮಾರ್ ಅವರು ಚಿಂಚನಸೂರು ಅವರನ್ನು ಸಮಾಧಾನಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಕರೆದೊಯ್ದಿದ್ದರು. ಬೆಂಗಳೂರಿನ ಆರ್.ಟಿ.ನಗರದ ಸಿಎಂ ನಿವಾಸದಲ್ಲಿ ನಡೆದ ಸಂಧಾನ ಸಭೆ ಕೊನೆಗೆ ಯಶಸ್ವಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಹೀಗಾಗಿ ನಿಮ್ಮ ನಾಯಕತ್ವದ ಅವಶ್ಯಕತೆ ಪಕ್ಷಕ್ಕೆ ಬೇಕಿದೆ. ಮುಂದೆ ನಮ್ಮ ಸರ್ಕಾರ ಬರುತ್ತೆ, ಆಗ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಬುರಾವ್ ಚಿಂಚನಸೂರ್ಗೆ ಭರವಸೆ ನೀಡಿದ್ದಾರೆ. ಇದರಿಂದ ಬಾಬುರಾವ್ ಚಿಂಚನಸೂರ್ ಮನಸ್ಸು ಬದಲಿಸಿ ಬಿಜೆಪಿಯಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ.
ಇನ್ನು ಈ ಬಗ್ಗೆ ಇಂದು(ಫೆ.14) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಾಬುರಾವ್ ಚಿಂಚನಸೂರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕೇವಲ ವದಂತಿ ಅಷ್ಟೇ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಲ್ಲೇ ಸಾಯುತ್ತೇನೆ. ಗುರುಮಿಟ್ಕಲ್ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ. ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ ಈ ಬಾರಿ ಪುತ್ರ ಪ್ರಿಯಾಂಕ್ ಖರ್ಗೆ ಸೋಲಿಸಿಸುತ್ತೇನೆ ಎಂದು ಗುಡುಗಿದರು.
ಬಿಜೆಪಿ ಪಕ್ಷವು ನನಗೆ ತಾಯಿ ಇದ್ದಂತೆ. ನಾನೆಂದೂ ದ್ರೋಹ ಮಾಡುವುದಿಲ್ಲ. ಬಿಜೆಪಿಗೆ ದ್ರೋಹ ಮಾಡಿದರೆ ತಾಯಿಗೆ ಮೋಸ ಮಾಡಿದಂತೆ. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಏನೆಂದು ಗೊತ್ತಾಗಲಿದೆ. ಕಲ್ಯಾಣ ಕರ್ನಾಟಕದಲ್ಲಿ ನಾನು ಮತ್ತು ರವಿ ಕುಮಾರ್ ಒಡಾಡುತ್ತೇವೆ. ನನಗೆ ಪಕ್ಷದ ಮೇಲೆ ಯಾವುದೇ ಮುನಿಸಿಲ್ಲ. ಕಾಂಗ್ರೆಸ್ಗೆ ಹೋಗುತ್ತೇನೆ ಎನ್ನುವ ವದಂತಿ ಕೇಳಿಬಂದಿತ್ತು.. ಮಗ ಮುನಿಸಿಕೊಂಡು ಹೋದರೆ ತಾಯಿ ಕರೆಯುತ್ತಾಳೆ. ಹಾಗೇಯೇ ನಾನು ಕಾಂಗ್ರೆಸ್ಗೆ ಹೋಗುವುದು ಸುಳ್ಳು. ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಸಿಎಂ ಭೇಟಿಗೂ ಮುನ್ನ ಬಾಬುರಾವ್ ಚಿಂಚನಸೂರು ಬಿವೈ ವಿಜಯೇಂದ್ರ ಹಾಗೂ ರವಿ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ಅದೇ ವೇಳೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ಸಿಎಂ ಭೇಟಿಗೆ ಸಮಯ ಕೊಡುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಸಭೆ ಬಳಿಕ ಕೊನೆಗೆ ರವಿ ಕುಮಾರ್ ಅವರು ಬಾಬುರಾವ್ ಚಿಂಚನಸೂರು ಅವರನ್ನ ಸಿಎಂ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದರು. ಈ ವೇಳೆ ಬೊಮ್ಮಾಯಿ, ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಮಂತ್ರಿ ಮಾಡುವ ಭರವಸೆ ಜೊತೆಗೆ ಗುರುಮಿಟ್ಕಲ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವಿಧಾನಪರಿಷತ್ತಿನ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೇಲ್ಮನೆಯ ಒಂದು ಸ್ಥಾನಕ್ಕೆ ಬಿಜೆಪಿ, ಬಾಬುರಾವ್ ಚಿಂಚನಸೂರ್ ಅವರನ್ನು ಆಯ್ಕೆ ಮಾಡಿತ್ತು. ಅಲ್ಲದೇ ಅವರನ್ನು ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದೆ.
ಚಿಂಚನಸೂರ್, ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ. ಚಿಂಚನಸೂರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಇದೆ ಗುರುಮಠಕಲ್ ನಲ್ಲಿ ಸತತ ಎರಡು ಬಾರಿ ಗೆಲವು ಸಾಧಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಪ್ತ ಖಾತೆಗಳ ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ (ಹಾಲಿ ರಾಜ್ಯ ಸಭಾ ಸದಸ್ಯ) ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಾಬುರಾವ್ ಚಿಂಚನಸೂರ್ ಪ್ರಮುಖ ಪಾತ್ರವಹಿಸಿದ್ದರು.
Published On - 5:27 pm, Tue, 14 February 23