ಬಿಜೆಪಿ ಪರ ಪ್ರಚಾರ ಮಾಡ್ತಾರಾ ರಿಷಬ್​​ ಶೆಟ್ಟಿ? ಸಿಎಂ ಬೊಮ್ಮಾಯಿ ಕೊಟ್ಟ ಸ್ಪಷ್ಟನೆ ಇಲ್ಲಿದೆ

|

Updated on: Apr 13, 2023 | 4:07 PM

ಬಸವರಾಜ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದಾಗ ಚಿತ್ರ ನಟ ರಿಷಬ್ ಅವರೂ ದೇಗುಲದಲ್ಲಿದ್ದುದು, ಮುಖ್ಯಮಂತ್ರಿಗಳ ಪಾದ ಮುಟ್ಟಿ ನಮಸ್ಕರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕೊಲ್ಲೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ದೇಗುಲಗಳಿಗೆ ಭೇಟಿ ನೀಡಿದ್ದು ಗುರುವಾರ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಚಿತ್ರ ನಟ ರಿಷಬ್ (Rishab Shetty) ಅವರೂ ದೇಗುಲದಲ್ಲಿದ್ದು, ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೊಮ್ಮಾಯಿ ದೇಗುಲ ಪ್ರವೇಶಿಸುತ್ತಿದ್ದಂತೆಯೇ ಅವರನ್ನು ಎದುರಾದ ರಿಷಬ್, ಕಾಲು ಮುಟ್ಟಿ ನಮಸ್ಕರಿಸಿರುವ ವಿಡಿಯೋ ಪ್ರಸಾರವಾಗಿದ್ದು ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ನಟ ಸುದೀಪ್ ಅವರು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ನಾನು ಹೇಳಿದವರ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆ ಎಂದು ಬೊಮ್ಮಾಯಿಯೂ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ರಿಷಬ್ ಅವರು ಬೊಮ್ಮಾಯಿಯನ್ನು ಭೇಟಿಯಾಗಿದ್ದಾರೆ. ರಿಷಬ್ ಶೆಟ್ಟಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆಯೇ ಎಂಬ ವದಂತಿಗಳು ಹರಿದಾಡಿವೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ ರಿಷಬ್ ಪ್ರಚಾರ ಮಾಡುವ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕೆ ಆಗಿಲ್ಲ. ಇದೊಂದು ಆಕಸ್ಮಿಕ ಭೇಟಿಯಷ್ಟೇ ಎಂದಿದ್ದಾರೆ.

ಇದನ್ನೂ ಓದಿ: Karnataka Assembly Polls: ಮುಖ್ಯಮಂತ್ರಿ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ತೆರಳಿದ್ದಾಗ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಸಿಕ್ಕರು!

ಪ್ರಚಾರದ ವಿಚಾರವಾಗಿ ಈವರೆಗೆ ನಟ ರಿಷಬ್​​ ಶೆಟ್ಟಿ ಜತೆ ಯಾವುದೇ ಮಾತುಕತೆ ನಡೆದಿಲ್ಲ. ಆದರೆ, ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಅವರು ಆಕಸ್ಮಿಕವಾಗಿ ದೇವಸ್ಥಾನದಲ್ಲಿ ನನಗೆ ಸಿಕ್ಕಿದ್ದಾರೆ. ನಾನು ಬರುವ ಮೊದಲೇ ರಿಷಬ್​ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಅವರು ಅಲ್ಲಿದ್ದುದು ನನಗೆ ಆಶ್ಚರ್ಯ ಉಂಟು ಮಾಡಿತು. ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇವು ಯಾವುವೂ ಪೂರ್ವ ನಿರ್ಧರಿತ ಆಗಿರಲಿಲ್ಲ. ರಿಷಬ್ ಈ ಹಿಂದೆ ಕೂಡ ನಮ್ಮ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ದಾರೆ. ಬಿಜೆಪಿ, ನಾಯಕತ್ವ ಬಗ್ಗೆ ರಿಷಬ್​​ ಒಲವಿರುವ ಮಾತಾಡಿದ್ದಾರೆ. ಆದರೆ, ಪ್ರಚಾರದ ವಿಚಾರವಾಗಿ ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನು ಎಂಬ ಆಶೀರ್ವಾದ ಕೊಡುತ್ತಾಳೆ ನೋಡೋಣ ಎಂದು ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ