Karnataka Assembly Election 2023 Highlights News Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು 4 ದಿನ ಮಾತ್ರ ಬಾಕಿ ಉಳಿದಿದ್ದು, ಪ್ರಚಾರಕ್ಕೆ ಮೇ 8 ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತದೆ. ಈ ಹಿನ್ನೆಲೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಮತಯಾಚನೆಯನ್ನು ಜೋರಾಗಿಯೇ ನಡೆಸಿದ್ದಾರೆ. ಬಿಜೆಪಿಯ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿನ್ನೆ (ಮೇ.05) ಮತಯಾಚಿಸಿದರು. ವಿಶೇಷವಾಗಿ ವರುಣಾ ವಿಧಾನಸಭಾ ಕ್ಷೇತ್ರ ಕೇಂದ್ರಬಿಂದುವಾಗಿತ್ತು. ವಿಪಕ್ಷನಾಯಕ ಸಿದ್ದರಾಮಯ್ಯ ಪರ ಕನ್ನಡ ಚಲನಚಿತ್ರ ನಟರು ಸಾಥ್ ನೀಡಿದ್ದರು. ಅತ್ತ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರೇ ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮತಬೇಟೆಯಾಡಿದರು. ಇದರೊಂದಿಗೆ ಲೇಟೆಸ್ಟ್ ಅಪ್ಡೇಟ್ಸ್
ಹಾಸನ: ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ನನಗೆ ಮಾಹಿತಿಯಿಲ್ಲ ಎಂದು ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಘಟನೆ ಬಗ್ಗೆ ತಿಳಿದುಕೊಂಡು ಮಾತಾಡುತ್ತೇನೆ.
ಚಿಕ್ಕಬಳ್ಳಾಪುರ: ಕಿಚ್ಚ ಸುದೀಪ್ ರೋಡ್ ಶೋಗೆ ಚಲನಚಿತ್ರ ನಟನಟಿಯರು ಸಾಥ್ ನೀಡಿದರು. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ರೋಡ್ ಶೊ. ನಡೆಯಿತು. ಹಾಸ್ಯ ನಟ ಬ್ರಹ್ಮಾನಂದಂ, ನಟಿ ಹರ್ಷಿಕಾ ಪೂಣಚ್ಚ, ಅನು ಪ್ರಭಾಕರ್, ಅನು ಪೂವಮ್ಮ, ದಿವ್ಯ ಉರುಡುಗ, ಕವಿತಾ, ಭುವನ್ ಸಾಥ್ ನೀಡಿದ್ದಾರೆ. ಕಳೆದ ಒಂದು ವಾರದಿಂದ ಚಿಕ್ಕಬಳ್ಳಾಪುರದಲ್ಲೇ ನಟ ನಟಿಯರು ಬೀಡು ಬಿಟ್ಟಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿ ಆಗಮಿಸುವ ರಸ್ತೆಗೆ ಬೈಕ್‌ನಲ್ಲಿ ಸವಾರರಿಬ್ಬರು ಎಂಟ್ರಿಯಾಗಿದ್ದಾರೆ. HAL ಏರ್‌ಪೋರ್ಟ್‌ನಿಂದ ರಾಜಭವನಕ್ಕೆ ಆಗಮಿಸುವ ವೇಳೆ ಘಟನೆ ನಡೆದಿದೆ. ಕೆಲಕಾಲ ಪೊಲೀಸರಿಗೆ ಇಬ್ಬರು ಸವಾರರು ಗೊಂದಲ ಉಂಟುಮಾಡಿದ್ದಾರೆ. ಬೈಕ್ ಮೂಲಕ ರಾಜಭವನದ ಪಕ್ಕದ ರೋಡ್‌ನಿಂದ ಎಂಟ್ರಿ ನೀಡಿದ್ದು, ಬ್ಯಾರಿಕೇಡ್ ಹಾಕಿದ್ದರೂ ನುಗ್ಗಲು ಯತ್ನಿಸಿದ್ದಾರೆ. ಬಳಿಕ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಬೈಕ್ ಬೆನ್ನತ್ತಿ ಹೋಗಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮತಯಾಚನೆಗೆ ತೆರಳಿದ್ದ ಮಹಿಳಾ ಕಾರ್ಯಕರ್ತೆಗೆ ನಿಂದಿಸಿ ಧಮ್ಕಿ ಹಾಕಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತೆ ಶ್ಯಾಮಲಾಗೆ ನಿಂದನೆ ಮಾಡಿದ್ದು, ನಿಂದಿಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿದೆ. ಮತ ಕೇಳಲು ನಮ್ಮ ಏರಿಯಾಗೆ ಬರ್ತಿಯಾ ಎಂದು ನಿಂದಿಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಧಮ್ಕಿ ಹಾಕಿದ್ದಾರೆ.
ಕೊಪ್ಪಳ: ಗಂಗಾವತಿಗೆ ಆಗಮಿಸಿದ್ದು ಬಹಳ ಖುಷಿಯಾಗಿದೆ. ಅಂಜನಾದ್ರಿ ಬೆಟ್ಟದ ದರ್ಶನ ಪಡೆದಿದ್ದು ನನ್ನ ಪುಣ್ಯ ಎಂದು ಗಂಗಾವತಿಯಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದರು. ಗಂಗಾವತಿ ಪಟ್ಟಣದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ 2014 ರಲ್ಲಿ ದೊಡ್ಡ ಬದಲಾವಣೆ ಆಯ್ತು ಎಂದರು.
ಚಿಕ್ಕಮಗಳೂರು: ಬಾದಾಮಿಯಿಂದ ನಾನು ಓಡಿಹೋಗಿಲ್ಲ, ನಾನೇ ಬೇಡವೆಂದು ಸ್ಪರ್ಧಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಾದಾಮಿ ಕ್ಷೇತ್ರದ ಜನ ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು. ಐದಾರು ಬಾರಿ ನಮ್ಮ ಮನೆ ಬಳಿಗೆ ಬಂದು ಒತ್ತಾಯ ಮಾಡಿದ್ದರು. ಬಾದಾಮಿ ಕ್ಷೇತ್ರದ ದೂರ ಎಂದು ನಾನೇ ಸ್ಪರ್ಧೆ ಮಾಡಲಿಲ್ಲ ಎಂದು ಹೇಳಿದರು.
ಹುಬ್ಬಳ್ಳಿ: ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 40 ಪರ್ಸೆಂಟ್ ಸರ್ಕಾರ ಕರ್ನಾಟಕದ ಜನರನ್ನು ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿ: ಜನರ ವಿಶ್ವಾಸ, ಪ್ರೀತಿ ಇರುವವರಿಗೂ ನನ್ನನ್ನು ಸೋಲಿಸಲು ಆಗುವುದಿಲ್ಲ. ಇದು ಕರ್ನಾಟಕ, ಗುಜರಾತ್ ಅಲ್ಲ, ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಇದು ಹುಬ್ಬಳ್ಳಿ, ಅಹಮದಾಬಾದ್ ಅಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಧಾನಿ ಮೋದಿ, ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು, ಇನ್ನೂ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಪೊಲಿಟಿಕಲ್ ವಾರಂಟಿಯೇ ಮುಗಿದಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು. ಜಿಲ್ಲೆಯ ಸೇಡಂ ಕ್ಷೇತ್ರ ವ್ಯಾಪ್ತಿಯ ಸುಲೆಪೇಟ್ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಹೇಳುತ್ತಲೇ ಇರ್ತಾರೆ, ಆದರೆ ಏನೂ ಮಾಡಲ್ಲ. ಗಾಂಧಿ ವಂಶಕ್ಕೆ ರಾಮನ ಬಗ್ಗೆ ಅಲರ್ಜಿ ಇದೆ. ಹಾಗಾಗಿ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಹಾವೇರಿ: ನನ್ನದೊಂದು ಸಣ್ಣ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು. ‘ಪ್ರತಿ ಮನೆ ಮನೆಗೆ ಭೇಟಿ ನೀಡಿ ನನ್ನ ನಮಸ್ಕಾರಗಳನ್ನು ತಿಳಿಸಿ’ ‘ಮೋದಿ ಹಾವೇರಿಗೆ ಆಗಮಿಸಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ’. ಅವರೆಲ್ಲರ ಆಶೀರ್ವಾದದಿಂದ ಸೇವೆ ಮಾಡಲು ಹೆಚ್ಚಿನ ಶಕ್ತಿ ಸಿಗಲಿದೆ ಎಂದಿದ್ದಾರೆ.
ಹಾವೇರಿ: ಡಬಲ್ ಇಂಜಿನ್ ಸರ್ಕಾರ ಬಡವರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿತ್ತಿದೆ. ಜಿಲ್ಲೆಯ ಸಂತ ಕನಕದಾಸದ ಜನ್ಮಸ್ಥಳ. ಸಮಾಜದಲ್ಲಿ ಏಕತೆಗಾಗಿ ಕನಕದಾಸರು ಹೋರಾಟ ಮಾಡಿದ್ದರು. ಜಾತಿ ಹೆಸರಿನಲ್ಲಿ ಎಂದೂ ಹೋರಾಟ ಮಾಡಬೇಡಿ ಎಂದಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ಮೋದಿ ಗುಡುಗಿದರು.
ಹಾವೇರಿ: ಕಾಂಗ್ರೆಸ್ನ ಸುಳ್ಳು ಗ್ಯಾರಂಟಿಗೆ ಬಡವರು ಮೋಸ ಹೋಗಿದ್ದಾರೆ. 50 ವರ್ಷಗಳ ಹಿಂದೆ ಗರೀಬಿ ಹಠಾವೋ ಮಾಡೋದಾಗಿ ಹೇಳಿದ್ದರು. 50 ವರ್ಷಗಳಿಂದ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಡವರ ಕಲ್ಯಾಣ ಮತ್ತು ಸಶಕ್ತೀಕರಗೊಳಿಸುವುದು ಬಿಜೆಪಿ ಮೊದಲ ಆದ್ಯತೆ. ಬಡವರಿಗೆ ಉಚಿತ ರೇಷನ್, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪಿಎಂ ಆವಾಸ್ ಯೋಜನೆ ಮೂಲಕ ಬಡವರಿಗೆ ಮನೆ ಕೊಟ್ಟಿದ್ದೇವೆ. ಬಡವರ ಸಶಕ್ತೀಕರಣಗೊಳಿಸುವುದು ಸಾಮಾಜಿಕ ನ್ಯಾಯ ಎಂದು ಪ್ರಧಾನಿ ಮೋದಿ ಹೇಳಿದರು.
ಹಾವೇರಿ: ವಿಶ್ವದಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು. 10ನೇ ಸ್ಥಾನದಲ್ಲಿ ಇದ್ದಾಗ ದೇಶದ ಜನರಿಗೆ ಯಾರಿಗೂ ಗೊತ್ತಿರಲಿಲ್ಲ. 10ರಿಂದ 9ನೇ ಸ್ಥಾನಕ್ಕೆ ಬಂದಾದಲೂ ದೇಶದ ಜನರಿಗೆ ಗೊತ್ತಿರಲಿಲ್ಲ. 9ರಿಂದ 8ನೇ ಸ್ಥಾನಕ್ಕೆ ಬಂದಾಗ ಏನೋ ಆಗ್ತಿದೆ ಅಂತ ಹೇಳಿದರು. 6ರಿಂದ 5ನೇ ಸ್ಥಾನಕ್ಕೆ ಬಂದಾಗ ದೇಶದ ಜನರು ಗಮನಹರಿಸಿದ್ರು. ದೇಶದಲ್ಲಿ ದೊಡ್ಡ ಬದಲಾವಣೆಯಾಗ್ತಿದೆ ಅಂತಾ ಜನರು ನೋಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 5ನೇ ಸ್ಥಾನಕ್ಕೆ ತಂದಿದ್ದೇವೆ ಎಂದು ಹೇಳಿದರು.
ಹಾವೇರಿ: ಕಾಂಗ್ರೆಸ್ನ ಸುಳ್ಳು ಗ್ಯಾರಂಟಿಗಳ ಇತಿಹಾಸವನ್ನು ಒಮ್ಮೆ ನೋಡಿ ಎಂದು ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದರು. ಹಿಮಾಚಲ ಪ್ರದೇಶದಲ್ಲಿ ಸುಳ್ಳು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದರು. ಆದರೆ ಸರ್ಕಾರ ರಚಿಸಿದ ಮೇಲೆ ಯಾವುದೇ ಘೋಷಣೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಹಾವೇರಿ: ಕಾಂಗ್ರೆಸ್ನ ತುಷ್ಟೀಕರಣದಿಂದ ಕರ್ನಾಟಕ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದರು. ಲಿಂಗಾಯತ, ಹಿಂದುಳಿದ ವರ್ಗದ ಜನರು ಸಿಟ್ಟಿನಲ್ಲಿ ಇದ್ದಾರೆ. ಚುನಾವನೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು.
ಹಾವೇರಿ: ಕಾಂಗ್ರೆಸ್ ಪಿಎಫ್‌ಐ, ಎಸ್‌ಡಿಪಿಐ ಕಪಿಮುಷ್ಟಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಪಿಎಫ್‌ಐ, ಎಸ್‌ಡಿಪಿಐ ಒತ್ತಾಯಕ್ಕೆ ಮಣಿದು ಬಜರಂಗದಳ ಬ್ಯಾನ್ ಮಾಡಲು ಹೊರಟಿದೆ. ಬಜರಂಗದಳ ಬ್ಯಾನ್ ಬಗ್ಗೆ ಯಾರಿಗಾದ್ರೂ ತಾಕತ್ ಇದೆಯಾ ಎಂದು ಕಿಡಿಕಾರಿದರು.
ಬಾದಾಮಿ: ತಾಂತ್ರಿಕ ದೋಷ ಹಿನ್ನೆಲೆ ಪ್ರಧಾನಿ ಮೋದಿ ಭದ್ರತಾ ಸೇನಾ ಹೆಲಿಕಾಪ್ಟರ್ ಟೇಕ್ ಆಪ್ ಆಗದೆ ಸ್ಥಳದಲ್ಲೇ ನಿಂತ್ತಿದೆ. ಒಂದು ಭದ್ರತಾ ಎಮ್ಐ 18 ಸೇನಾ ಹೆಲಿಕಾಪ್ಟರ್ ಹೆಲಿಪ್ಯಾಡ್‌ನಲ್ಲೇ ಉಳಿದಿದೆ. ಎರಡು ಹೆಲಿಕಾಪ್ಟರ್ಗಳು ಹಾವೇರಿಗೆ ಪ್ರಯಾಣ ಬೆಳೆಸಿವೆ. ಒಂದು ಹೆಲಿಕಾಪ್ಟರ್ ಪುನಃ ಬಂದು ಟೇಕ್ ಆಪ್ ಆಗದ ಹೆಲಿಕಾಪ್ಟರ್ನಲ್ಲಿನ ಭದ್ರಯಾ ಸಿಬ್ಬಂದಿ ಕರೆದೊಯ್ಯಲಾಯಿತು.
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಹಾವೇರಿ ಜಿಲ್ಲೆಗೆ ಬಂದಿದ್ದಾರೆ. ಇಂದು ಬಿಜೆಪಿಯ ವಿಜಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಹೊರವಲಯದಲ್ಲಿ ಬಿಜೆಪಿ ನವ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸುಳ್ಳು ಗ್ಯಾರಂಟಿ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೊವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ ಎಂದು ಹೇಳಿದರು.
ಉಡುಪಿ: ಪಿಎಫ್ಐಗೆ ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು. ಜಿಲ್ಲೆಯ ಕಾರ್ಕಳದಲ್ಲಿ ಬಿಜೆಪಿ ಬೃಹತ್ ಸಮಾವೇಶ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಉತ್ಸಾಹ ನೋಡಿದ್ರೆ ಬಿಜೆಪಿ ಬರುವುದರ ಸೂಚನೆಯಾಗಿದೆ.
ಬೆಳಗಾವಿ: ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕಳ್ಳತನದ ಸರ್ಕಾರ ಕಳ್ಳತನವನ್ನೇ ಮಾಡೋದು ಎಂದು ಹೇಳಿದರು. ಇಡೀ ದೇಶದಲ್ಲೇ ಅತೀ ಭ್ರಷ್ಟ ಸರ್ಕಾರ ಇದ್ದರೆ ಬಿಜೆಪಿ ಸರ್ಕಾರ. 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಮೋದಿಗೆ ಪತ್ರ ಬರೆದಿದ್ದರು. ಪ್ರಧಾನಿಯವರೇ ಭ್ರಷ್ಟಾಚಾರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಪರ ಪ್ರಚಾರಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಏರ್‌ಪೋರ್ಟ್‌ನಿಂದ ಖಾಸಗಿ ಹೋಟೆಲ್ಗೆ ತೆರಳಿದ್ದು, ಉತ್ತರ ಕನ್ನಡ ಭಾಗದಲ್ಲಿ ರಾಜಕೀಯ ಬೆಳವಣಿಗೆ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ.
ಬಾದಾಮಿ: ಬಿಜೆಪಿ ಬಡವರು, ಹಿಂದುಳಿದವರಿಗೆ ಅನೇಕ ಯೋಜನೆ ತಂದಿದೆ ಎಂದು ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತದಲ್ಲೇ ಮೊಬೈಲ್ಗಳನ್ನು ತಯಾರಿಸುತ್ತಿದ್ದೇವೆ. ಈ ಹಿಂದೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ದೇಶದಲ್ಲಿಂದು ಮೊಬೈಲ್ ತಯಾರಿಸುವ 200 ಘಟಕಗಳಿವೆ. ಕಾಂಗ್ರೆಸ್ನ ಗುಲಾಮಿತನದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದರು.
ಬಾದಾಮಿ: ಮೂಲಸೌಕರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಕಾಮಗಾರಿ ನಡೀತಿವೆ. ಪಿಎಂ ವಿಶ್ವಕರ್ಮ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ಎಲ್ಇಡಿ ಬಲ್ಬ್ಗಳನ್ನು ವಿತರಣೆ ಮಾಡಿದೆ. ಕುಂಬಾರ, ಕಮ್ಮಾರ, ವಿಶ್ವಕರ್ಮ ಮತ್ತು ಅಕ್ಕಸಾಲಿಗರು ನಮ್ಮ ಶಕ್ತಿ. ಇಳಕಲ್ ಸೀರೆ, ಗುಳೇದಗುಡ್ಡದ ಖಣದ ಸೀರೆ ದೇಶದ ಗೌರವ. ಈ ಬಗ್ಗೆ ಕಾಂಗ್ರೆಸ್ ಎಂದೂ ಗಮನಹರಿಸುವ ಕೆಲಸ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಗುರುತಿಸಿ ಗೌರವಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಾದಾಮಿ: ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಪ್ರವಾಸೋದ್ಯಕ್ಕೆ ಒತ್ತು ನೀಡಲಾಗುವುದು ಎಂದು ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದರು. ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿ ಸಮಾವೇಶ ಭಾಷಣದಲ್ಲಿ ದಿ.ಇಬ್ರಾಹಿಂ ಸುತಾರ್ ಬಗ್ಗೆ ಮೋದಿ ಪ್ರಸ್ತಾಪ ಮಾಡಿದರು.
ಬಾದಾಮಿ: ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳುತ್ತಿದ್ದರು ದೆಹಲಿಯಿಂದ 1 ರೂ. ಬಿಡುಗಡೆ ಆದರೆ ಜನರಿಗೆ 15 ಪೈಸೆ ತಲುಪುತ್ತೆ. ರಾಜೀವ್ ಗಾಂಧಿ ಹೇಳಿಕೆಯಂತೆ ಕಾಂಗ್ರೆಸ್ 85% ಪಡೆಯುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ. ಇದರಿಂದ ಮಧ್ಯವರ್ತಿಗಳು, ಕಮಿಷನ್ ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಾದಾಮಿ: ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣ ರಾಜಕಾರಣ ಮುಂದುವರಿದಿದೆ. ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದರು. ಸಿದ್ದರಾಮಯ್ಯರನ್ನು ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.
ಬಾದಾಮಿ: ಕರ್ನಾಟಕದ ಜನರು ನೀಡಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಒಂದೇ ಕೂಗು ಕೇಳಿಬರುತ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1 ಮಾಡುವ ಗುರಿಯಿದೆ. ಬಿಜೆಪಿಗೆ ಜನರ ಬೆಂಬಲ ಸಹಿಸಲಾಗದೆ ಕಾಂಗ್ರೆಸ್ನವರು ಬೈಯ್ಯುತ್ತಿದ್ದಾರೆ. ಕಾಂಗ್ರೆಸ್ನವರು ನನಗೆ, ಬಿಜೆಪಿಗೆ ಬೈದಷ್ಟು ಕಮಲ ಅರಳಲಿದೆ ಎಂದು ಹೇಳಿದರು.
ಬಾದಾಮಿ: ಚಾಲುಕ್ಯರ ಸಾಮ್ರಾಜ್ಯದ ರಾಜಧಾನಿ ಬಾದಾಮಿ ಜನರಿಗೆ, ಬನಶಂಕರಿ ದೇವಿ ಭೂಮಿಗೆ ನಮ್ಮ ನಮಸ್ಕಾರಗಳು ಎಂದು ಸಮಾವೇಶದಲ್ಲಿ ಕನ್ನಡದಲ್ಲೇ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಬೆಂಗಳೂರಿನಲ್ಲಿ ಜನತಾ ಜನಾರ್ದನನ ದರ್ಶನ ಮಾಡಿ ಬಂದಿರುವೆ. ಸುಮಾರು 26ಕ್ಕಿಂತ ಹೆಚ್ಚು ಕಿ.ಮೀ. ರೋಡ್ಶೋ ಮಾಡಿ ಬಂದಿದ್ದೇನೆ. ವೃದ್ಧರು, ಮಹಿಳೆಯರು, ಮಕ್ಕಳು, ಉದ್ಯೋಗಿಗಳು ಆಗಮಿಸಿದ್ದರು ಎಂದರು.
ಬಾಗಲಕೋಟೆ: ಮೋದಿ ಪ್ರತಿ ಮನೆಗೂ ಉಜ್ವಲ ಯೋಜನೆಯಡಿ ಗ್ಯಾಸ್ ಕೊಟ್ಟಿದ್ದಾರೆ ಎಂದು ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರು ನೀಡಲಾಗಿದೆ. ಈ ರಾಜ್ಯದ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ಹೇಳಿದರು.
ಬಾಗಲಕೋಟೆ: ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿ ಚುನಾವಣಾ ಸಮಾವೇಶ ವೇದಿಕೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು, ಸಮಾವೇಶಕ್ಕೆ ಆಗಮಿಸಿರುವ ಕಾರ್ಯಕರ್ತರಿಗೆ ನಮಸ್ಕರಿಸಿದರು. ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದಿಂದ ಪ್ರಧಾನಿ ಮೋದಿಗೆ ಸನ್ಮಾನ ಮಾಡಲಾಯಿತು.
ಬೆಳಗಾವಿ: ಭಾರತದ ಜನರು ನರೇಂದ್ರ ಮೋದಿ ನಂಬುತ್ತಾರೆ. ಮೋದಿಯನ್ನು ಮಲ್ಲಿಕಾರ್ಜುನ ಖರ್ಗೆ ವಿಷದ ಸರ್ಪ ಎನ್ನುತ್ತಾರೆ. ಖರ್ಗೆಯವರೇ ಮೋದಿಯನ್ನು ಎಷ್ಟು ಟೀಕಿಸುತ್ತೀರೋ ಟೀಕಿಸಿ. ನೀವು ಎಷ್ಟು ಬೈಯ್ಯುತ್ತೀರೋ ಕಮಲ ಅಷ್ಟು ಅರಳುತ್ತದೆ. ನರೇಂದ್ರ ಮೋದಿಯನ್ನು ಎಷ್ಟು ಬೈದರೂ ನಿಮಗೆ ಹೊಟ್ಟೆ ತುಂಬಿಲ್ಲ. ಅದಕ್ಕೆ ಬಜರಂಗಬಲಿ ವಿರುದ್ಧ ಕಾಂಗ್ರೆಸ್ನವರು ನಿಂತಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹರಿಹಾಯ್ದರು.
ಹುಬ್ಬಳ್ಳಿ: ಹುಬ್ಬಳ್ಳಿಯವರು ಹೂವಿನಂತ ಮನಸಿನವರು. ಹುಬ್ಬಳ್ಳಿ ಅಂದ ತಕ್ಷಣ ಒಂದು ಸ್ಪೆಷಲ್ ಕನೆಕ್ಷನ್. ನನಗೆ ಅದೃಷ್ಟದ ಜಾಗ ಇದು. ನಾನು ಇಲ್ಲಿ ಮಾಡಿದ ಸಿನಿಮಾ ಎಲ್ಲ ಹಿಟ್ ಆಗಿದೆ. ಅಪ್ಪಾಜಿ ಕಾಲದಿಂದಲೂ ನಮಗೆ ಹುಬ್ಬಳ್ಳಿ ಸ್ಪೆಷಲ್. ನಾನು ಇಲ್ಲಿಗೆ ಬಂದಾಗ ಯಾವಾಗಲೂ ಜಗದೀಶ್ ಶೆಟ್ಟರ್ ಮನೆಗೆ ಹೋಗುತ್ತಿದ್ದೆ ಎಂದು ಜಗದೀಶ್ ಶೆಟ್ಟರ್ ಪ್ರಚಾರ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬೆಳಗಾವಿ: ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ ಪಕ್ಷದವರು ಬೆಳಗಾವಿಯ ಹಿಂಡಲಗಾ ಜೈಲಿಗೆ ಹಾಕಿದ್ದರು. ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್.ಕಾಂಗ್ರೆಸ್ ಪದೇಪದೇ ಸಾವರ್ಕರ್‌ಗೆ ಅಪಮಾನ ಮಾಡುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ್ ಅಪಮಾನ ಮಾಡುತ್ತೀರಿ. ನೀವು 10 ಜನ್ಮ ಹುಟ್ಟಿಬಂದರೂ ಸಾವರ್ಕರ್‌ರಂತಹ ಬಲಿದಾನ ನೋಡಕ್ಕಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚಿಕ್ಕಮಗಳೂರು: ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ. ಪಿಎಫ್‌ಐ ಸಂಘಟನೆಯನ್ನು ಬಿಜೆಪಿ ಸರ್ಕಾರ ಬುಡಸಮೇತ ಕಿತ್ತುಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಮುನ್ನಡೆಯುತ್ತಿದೆ. ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬೆಂಗಳೂರು: ನಗರದಲ್ಲಿ ಸುದೀರ್ಘ 26 ಕಿಮೀ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಮುಕ್ತಾಯವಾಗಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇಗುಲ ಬಳಿ ಅಂತ್ಯವಾಗಿದ್ದು, ಕಾಡುಮಲ್ಲೇಶ್ವರ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಬೆಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಡೆಯುತ್ತಿದ್ದು, ಚಾಮರಾಜಪೇಟೆ ತಲುಪಿದೆ. ಈ ಹಿನ್ನೆಲೆ ಸೌತ್ ಎಂಡ್ ಸರ್ಕಲ್ ಮತ್ತು ಆರುಮುಗಂ ಸರ್ಕಲ ವರೆಗೆ ಸಂಚಾರ ಅನುವು ಮಾಡಿಕೊಡಲಾಗಿದೆ.
ಬೆಂಗಳೂರು: ಪ್ರಿಯಾಂಕ್ ಖರ್ಗೆ ಹೆಂಡತಿ ಮಕ್ಕಳನ್ನು ಸಾಪ್ ಮಾಡುತ್ತೇನೆ. ನನ್ನ ಬಳಿ ಅವರ ನಂಬರ್ ಇಲ್ಲಾ. ನಂಬರ್ ಇದ್ದಿದ್ದರೇ ಅವರ ಹೆಂಡತಿ ಮಕ್ಕಳನ್ನು ಸಾಪ್ ಮಾಡುತ್ತೇನೆ ಎಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿ: ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಕುರಿತು, ಮಣಿಕಂಠ ರಾಠೋಡ ಮಾತಾಡಿದ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ತಿರುಚಲಾಗಿದೆಯೋ ಏನು ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ ಅವರು ಲಿಂಗಾಯತ ಮತಗಳ ಬೇಡ ಎಂಬ ಸುದ್ದಿ ಫೇಕ್. ಈಗಾಗಲೇ ಈ ಬಗ್ಗೆ ದೂರು ಸಹ ದಾಖಲು ಮಾಡಲಾಗಿದೆ ಎಂದರು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನೋಡಲು ಭೂತಾನ್, ಮಾಲ್ಡೀವ್ಸ್, ನೇಪಾಳದಿಂದ ಅಧಿಕಾರಿಗಳು ಆಗಮಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ದಾರಿಯುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸುತ್ತಿದ್ದಾರೆ.
ಬೆಂಗಳೂರು: ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದೆ. ಪ್ರಧಾನಿ ಮೋದಿಯವರಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಜೊತೆಯಾಗಿದ್ದಾರೆ.
ಬೆಂಗಳೂರು: ರೋಡ್ ಶೋ ವೇಳೆ ಪ್ರಧಾನಿ ಮೋದಿಯವರನ್ನು ಮದುವೆಗೆ ಆಹ್ವಾನಿಸಲು ಬಾವಿ ದಂಪತಿ ಆಗಮಿಸಿದ್ದಾರೆ. ಬಾವಿ ದಂಪತಿ ಸೌತ್ ಎಂಡ್ ಸರ್ಕಲ್ನಲ್ಲಿ ಬ್ಯಾನರ್ ಹಿಡಿದು ನಿಂತಿದ್ದಾರೆ. “ಮೋದಿಜಿ ನೀವೂ ನಮ್ಮ ಮದುವೆಗೆ ಬರಬೇಕು” ಅಂತಾ ಬ್ಯಾನರ್ ಹಿಡಿದು ಕರೆಯಲು ಯುವ ಜೋಡಿ ರೆಡಿಯಾಗಿದ್ದಾರೆ.
ಬೆಂಗಳೂರು: ಮಹಾನಗರದಲ್ಲಿ ಇಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ಶೋ ಅನ್ನು ವೀಕ್ಷಿಸಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಶ್ರೀಗಳು ಆಗಮಿಸಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು (ಮೇ.06) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಲಿರುವ ಸೋನಿಯಾ ಗಾಂಧಿಯವರು, ನಗರದ ಸೆಟ್ಲಮೆಂಟ್‌ನ ಹಾಕಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚಿಸಲಿದ್ದಾರೆ. ಸಾಯಂಕಾಲ 6 ಗಂಟೆಯವರೆಗೆ ಸಮಾವೇಶ ನಡೆಯಲಿದೆ. ಕಾರ್ಯಕ್ರಮ ಮುಗಿಸಿ ಮತ್ತೆ ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ರಾಜ್ಯಕ್ಕೆ ಸೋನಿಯಾ ಗಾಂಧಿ ಬರುತ್ತಿದ್ದಾರೆ.
ಬೆಳಗಾವಿ: ಇಂದು ಕುಂದಾನಗರಿ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ. ಮಧ್ಯಾಹ್ನ 2 ಕ್ಕೆ ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ.
ಯಾದಗಿರಿ: ಇಂದು ಯಾದಗಿರಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಯಾದಗಿರಿ ನಗರಕ್ಕೆ ಆಗಮಿಸಲಿರುವ ಸ್ಮೃತಿ ಇರಾನಿ ನಗರದ ಎನ್‌ವಿಎಂ ಹೋಟೆಲ್ ಮುಂದೆ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ, ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಪರ ಮತಯಾಚಿಸಲಿದ್ದಾರೆ.
ಚಿಕ್ಕಮಗಳೂರು: ಇಂದು (ಮೇ.6) ಕಾಫಿನಾಡು ಚಿಕ್ಕಮಗಳೂರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ. ಶೃಂಗೇರಿ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಪರ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 10.15 ಕ್ಕೆ ಹರಿಹರಪುರ ಹೆಲಿಪ್ಯಾಡ್ ಆಗಮಿಸಿ ಅಲ್ಲಿಂದ
ರಸ್ತೆ ಮೂಲಕ ಕೊಪ್ಪಕ್ಕೆ ತೆರಳಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 1:10ಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ರೋಡ್ಶೋ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಮತಯಾಚಿಸಲಿದ್ದಾರೆ.
ಬೆಂಗಳೂರು: ಇಂದು (ಮೇ.07) ಪ್ರಧಾನಿ ನರೇಂದ್ರ ಮೋದಿಯವರು ಬಾದಾಮಿಯಲ್ಲಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಒಟ್ಟು 7 ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬಾದಾಮಿ ಪಟ್ಟಣದ ಹೊರವಲಯದ ಬನಶಂಕರಿ ಲೆಔಟ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಹುಬ್ಬಳ್ಳಿಯಿಂದ 2.50ಕ್ಕೆ ಎಮ್ ಐ -17 ಮೂರು ಸೇನಾ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರಿಗೆ 25 ಜನ ಬಿಜೆಪಿ ಪ್ರಮುಖರು ಸ್ವಾಗತಿಸಲಿದ್ದಾರೆ. 3 ಗಂಟೆಗೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದಾರೆ. ಸುಮಾರು 2 ಲಕ್ಷ ಜನರನ್ನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಬೆಂಗಳೂರು: ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಹ್ನಾ 1 ಗಂಟೆವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆ ಈ ರಸ್ತೆಗಳು ಬಂದ್ ಇರಲಿವೆ.
ರಾಜ ಭವನ ರಸ್ತೆ. ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್ ಬಿ ಐ ಲೇಔಟ್ ಜೆಪಿ ನಗರ, ಶಿರ್ಸಿ ಸರ್ಕಲ್, ಜೆಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್, ಆಮುರ್ಗಂ ಸರ್ಕಲ್, ಬುಲ್ ಟೆಂಪಲ್ ರೋಡ್, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿಆರ್ ಮಿಲ್, ಚಾಮಾರಾಜಪೇಟೆ ಮುಖ್ಯ ರಸ್ತೆ.
ಬಾಳೆಕಾಯಿ ಮಂಡಿ, ಕೆ ಪಿ ಅಗ್ರಹಾರ.
ಮಾಗಡಿ ರೋಡ್, ಚೇಳೂರುಪಾಳ್ಯ ರೋಡ್, ಎಂಸಿ ಸರ್ಕಲ್, ವೆಸ್ಟ್ ಆಫ್ ಕಾರ್ಡ್ ರೋಡ್, ಎಂ ಸಿ ಲೇಔಟ್ , ನಾಗರ ಭಾವಿ ಮುಖ್ಯ ರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಎಂಟನೇ ಮುಖ್ಯರಸ್ತೆ ಬಸವೇಶ್ವರ ನಗರ, ಬಸವೇಶ್ವರ ನಗರ ಹದಿನೈದನೇ ಮುಖ್ಯ ರಸ್ತೆ, ಶಂಕರ್ ಮಠ, ಮೋದಿ ಅಸ್ಪತ್ರೆ ರೋಡ್, ನವರಂಗ್ ರಸ್ತೆ, ಎಂ ಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ.
ಬೆಂಗಳೂರು: ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಹ್ನಾ 1 ಗಂಟೆವರೆಗೆ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ಮಾರ್ಗ ಹೀಗಿದೆ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ->ಸಾರಕ್ಕಿ ಜಂಕ್ಷನ್-> ಸೌತ್ ಎಂಡ್ ಸರ್ಕಲ್->ಕೃಷ್ಣರಾವ್ ಪಾರ್ಕ್->ರಾಮಕೃಷ್ಣ ಆಶ್ರಮ-> ಮಕ್ಕಳ ಕೂಟ->ಟೌನ್ ಹಾಲ್->ಕಾವೇರಿ ಭವನ->ಮೆಜೆಸ್ಟಿಕ್-> ಮಾಗಡಿ ರೋಡ್->GT ವರ್ಲ್ಡ್ ಮಾಲ್->ಹೌಸಿಂಗ್ ಬೋರ್ಡ್->ಬಸವೇಶ್ವರ ನಗರ->ಶಂಕರ ಮಠ ಸರ್ಕಲ್-> ಮೋದಿ ಆಸ್ಪತ್ರೆ ರಸ್ತೆ->ನವರಂಗ್ ಸರ್ಕಲ್->ಮಹಾಕವಿ ಕುವೆಂಪು ರಸ್ತೆ->ಮಲ್ಲೇಶ್ವರಂ ಸರ್ಕಲ್ ->ಸಂಪಿಗೆ ರಸ್ತೆ-> ಸರ್ಕಲ್ ಮಾರಮ್ಮ ದೇವಸ್ಥಾನ.
ಬೆಂಗಳೂರು: ಇಂದು (ಮೇ 6) ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಮಾಡಲಿದ್ದಾರೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ರೋಡ್ ಶೋ ನಡೆಸಲು ಅವಕಾಶ ನೀಡಲಾಗಿದೆ. ನಗರದ 13 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 23 ಕಿಲೋ ಮೀಟರ್ ರೋಡ್ಶೋ ನಡೆಸಲಿದ್ದಾರೆ.
Published On - 6:57 am, Sat, 6 May 23