ಯಾವುದೇ ಪಕ್ಷದ ಪ್ರಚಾರ ಇದ್ರೂ ಇಲ್ಲಿ ಕೇಸರಿ ಧ್ವಜಗಳದ್ದೇ ಹವಾ, ಬೇರೆ ಧ್ವಜಗಳಿಗೆ ಅವಕಾಶ ಇಲ್ಲ; ಯಾವುದು ಈ ಕ್ಷೇತ್ರ? ಏನಿದು ಅಂತೀರಾ ಈ ಸ್ಟೋರಿ ನೋಡಿ
ಸಾಮಾನ್ಯವಾಗಿ ಕೇಸರಿ ಟೋಪಿ. ಕೇಸರಿ ಶಾಲು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ರೋಡ್ ಶೋನಲ್ಲಿ ನೀವು ನೋಡಿರ್ತೀರಾ. ಆದ್ರೆ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರದಲ್ಲೊಂದಾದ ಈ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರಚಾರ ಸಭೆ, ರೋಡ್ ಶೋ ಇರಲಿ. ಕೇಸರಿ ಟೋಪಿ, ಕೇಸರಿ ಶಾಲು, ಕೇಸರಿ ಧ್ವಜಗಳದ್ದೇ ಹವಾ. ಬಹಿರಂಗ ಪ್ರಚಾರಕ್ಕೆ ಇನ್ನು ಎರಡೇ ದಿನ ಬಾಕಿ ಇರುವಾಗ ಕೇಸರಿ ಶಾಲು, ಟೋಪಿಗೆ ಡಿಮ್ಯಾಂಡ್ ಹೇಗಿದೆ? ಅಷ್ಟಕ್ಕೂ ಯಾವುದು ಈ ಕ್ಷೇತ್ರ ಅಂತೀರಾ? ಇಲ್ಲಿದೆ ನೋಡಿ.
ಬೆಳಗಾವಿ: ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ(Belagavi)ಯಲ್ಲಿ ಚುನಾವಣಾ ಪ್ರಚಾರ ಅಖಾಡ ರಂಗೇರಿದೆ. ಬಹಿರಂಗ ಪ್ರಚಾರಕ್ಕೆ ಇನ್ನೇನು ಎರಡು ದಿನಗಳು ಬಾಕಿ ಇದ್ದು, ಅದ್ದೂರಿ ರೋಡ್ ಶೋ, ಸಮಾವೇಶ ಮಾಡುವ ಮೂಲಕ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಿರತವಾಗಿವೆ. ಅದರಲ್ಲೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಕೇಸರಿ ಕಲರವ ಜೋರಾಗಿದೆ. ರಾಜಕೀಯ ಬದ್ಧವೈರಿಗಳಾದ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯದ ಕದನದಿಂದ ಈ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವೆನಿಸಿದೆ. ಲಕ್ಷ್ಮೀ ಹೆಬ್ಬಾಳ್ಕರ್ನ್ನುಸೋಲಿಸಲೇಬೇಕೆಂದು ತಮ್ಮ ಶಿಷ್ಯ ನಾಗೇಶ್ ಮನ್ನೋಳಕರ್ಗೆ ಬಿಜೆಪಿ ಟಿಕೆಟ್ ಕೊಡಿಸಿರುವ ರಮೇಶ್ ಜಾರಕಿಹೊಳಿ, ಪ್ರಚಾರಕ್ಕೆ ತಮ್ಮ ರಾಜಕೀಯ ಗುರು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಕರೆಸಿದ್ರು. ಇತ್ತ ನಾನೇನು ಕಮ್ಮಿ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಾರಾಷ್ಟ್ರದ ಮಾಜಿ ಸಿಎಂಗಳಾದ ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾನ್ ಕರೆಯಿಸಿ ಪ್ರಚಾರ ಮಾಡಿದ್ದಾರೆ.
ಮರಾಠಾ ಮತದಾರರನ್ನು ಓಲೈಸಲು ಕೇಸರಿ ಟೋಪಿ, ಶಾಲು, ಧ್ವಜಗಳ ಮೊರೆ
ಇನ್ನು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್, ಎಂಇಎಸ್ ಅಭ್ಯರ್ಥಿ ಆರ್.ಎಂ.ಚೌಗುಲಾ ಪ್ರಚಾರಕ್ಕೆ ಹೋದಲ್ಲೆಲ್ಲ ಕೇಸರಿ ಪೇಟ ಧರಿಸಿಯೇ ಹೋಗುತ್ತಾರೆ. ಸಾಮಾನ್ಯವಾಗಿ ಕೇಸರಿ ಶಾಲು ಕೇಸರಿ ಟೋಪಿ ಧರಿಸಿದ ಕಾರ್ಯಕರ್ತರ ಸಮಾವೇಶ ಇದ್ರೆ, ಇದು ಬಿಜೆಪಿ ಸಮಾವೇಶ ಇರಬಹುದೇನೋ ಅಂತಾ ಜನ ಊಹಿಸಿಕೊಳ್ಳುತ್ತಾರೆ. ಆದ್ರೆ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹಾಗಿಲ್ಲ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಎಂಇಎಸ್, ಜೆಡಿಎಸ್ ಹೀಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಕೇಸರಿ ಅಂದ್ರೆ ಪ್ರೀತಿ. ಅದಕ್ಕೆ ಕಾರಣ ಇಲ್ಲಿಯಿರುವ ಮರಾಠಾ ಮತದಾರರು. ರಾಜ್ಯದಲ್ಲಿಯೇ ಅತಿಹೆಚ್ಚು ಮರಾಠಾ ಮತದಾರರು ಇರೋದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮರಾಠಾ ಮತದಾರರು ಇದ್ದು ಇವರನ್ನು ಓಲೈಸಲು ರಾಜಕೀಯ ಪಕ್ಷಗಳು ಕೇಸರಿ ಟೋಪಿ, ಶಾಲು, ಧ್ವಜಗಳ ಮೊರೆ ಹೋಗಿವೆ. ಪರಿಣಾಮ ಬೆಳಗಾವಿಯಲ್ಲಿ ಅತಿ ಹೆಚ್ಚು ಕೇಸರಿ ಶಾಲು, ಟೋಪಿ, ಧ್ವಜ, ಪೇಟ ಮಾರಾಟ ಜೋರಾಗಿದೆ. ವ್ಯಾಪಾರಿಗಳು ಸಹ ಫುಲ್ ಖುಷ್ ಆಗಿದ್ದಾರೆ.
ಇನ್ನು ಬೆಳಗಾವಿ ಗ್ರಾಮೀಣ ಅಷ್ಟೇ ಅಲ್ಲ ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲೂ ಕೇಸರಿ ಪಾಲಿಟಿಕ್ಷ್ ಜೋರಾಗಿದೆ. ಆದ್ರೆ, ಬೆಳಗಾವಿ ಗ್ರಾಮೀಣಕ್ಕೆ ಹೋಲಿಸಿದ್ರೆ ಕಡಿಮೆಯೇ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ(ಮೇ.4) ರಾತ್ರಿ ಅದ್ಧೂರಿ ಸಮಾವೇಶ ಆಯೋಜನೆ ಮಾಡಿದ್ದರು. ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚೌಹಾನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಕೇಸರಿ ಪೇಠ ಧರಿಸಿದ್ದು ವಿಶೇಷವಾಗಿತ್ತು. ಇತ್ತ ನಿನ್ನೆಯೇ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್ ಪರ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಸಹ ಪ್ರಚಾರ ಮಾಡಿದ್ದು ಈ ವೇಳೆಯೂ ಎಲ್ಲಿ ನೋಡಿದಲ್ಲೂ ಕೇಸರಿ ಧ್ವಜ, ಎಲ್ಲರ ಕೊರಳಲ್ಲೂ ಕೇಸರಿ ಶಾಲುಗಳೇ ರಾರಾಜಿಸುತ್ತಿದ್ದವು.
ಇನ್ನು ಬೆಳಗಾವಿ ರಾಜಕಾರಣದ ಇತಿಹಾಸ ನೋಡೋದಾದ್ರೆ ಬೆಳಗಾವಿಯಲ್ಲಿ 90ರ ದಶಕದವರೆಗೆ ಎಂಇಎಸ್ ಶಾಸಕರು ಆಯ್ಕೆಯಾಗಿ ಬರುತ್ತಿದ್ದರು. ನಾಡದ್ರೋಹಿ ಕೃತ್ಯಗಳನ್ನು ಮಾಡುತ್ತಾ ಪದೇಪದೇ ಪುಂಡಾಟಿಕೆ ಮೆರೆಯುತ್ತಿದ್ದ ಎಂಇಎಸ್ ಭಗವಾನ್ ಧ್ವಜ, ಕೇಸರಿ ತನ್ನ ಅಪ್ಪನ ಸ್ವತ್ತು ಎಂಬ ರೀತಿ ವರ್ತನೆ ಮಾಡುತ್ತಿತ್ತು. ಆದ್ರೆ, ಸದ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಬೆಳಗಾವಿ ನಗರ, ಕರ್ನಾಟಕ ಮಹಾರಾಷ್ಟ್ರ ಗೋವಾಗೆ ಸಂಪರ್ಕ ಕೊಂಡಿಯಾಗಿರುವ ನಗರ. ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿರುವುದರಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಸಂಸ್ಕೃತಿ ಪ್ರಭಾವ ಇದೆ. ರಾಜ್ಯದಲ್ಲೇ ಅತಿ ಹೆಚ್ಚು ಮರಾಠಾ ಮತಗಳು ಈ ಕ್ಷೇತ್ರದಲ್ಲಿ ಇರುವುದರಿಂದ ರಾಜಕೀಯ ಪಕ್ಷಗಳು ಕೇಸರಿ ಮೊರೆ ಹೋಗುತ್ತವೆ. ಕರ್ನಾಟಕದಲ್ಲಿ ನಿಮಗೆ ಕಾಂಗ್ರೆಸ್ ಸಮಾವೇಶಗಳಲ್ಲಿ ಕೇಸರಿ ಟೋಪಿ, ಕೇಸರಿ ಶಾಲು ಕಾಣಲ್ಲ. ಆದ್ರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೀವು ಇದನ್ನು ಕಾಣಬಹುದು ಅಂತಾರೆ ಬೆಳಗಾವಿಯ ಹಿರಿಯ ಪತ್ರಕರ್ತ.
ಇದನ್ನೂ ಓದಿ:ಈ ಕ್ಷೇತ್ರದಲ್ಲಿ ಶುರುವಾಗಿದೆ ದೇಣಿಗೆ ರಾಜಕೀಯ; ಜೆಡಿಎಸ್ ಅಭ್ಯರ್ಥಿಗೆ ಹೋದಲೆಲ್ಲ ಹರಿದು ಬರ್ತಿದೆ ಹಣ
ರಾಜ್ಯ ರಾಜಕಾರಣದ್ದೇ ಒಂದು ತೂಕವಾದ್ರೆ, ಬೆಳಗಾವಿ ರಾಜಕಾರಣದ್ದೇ ಒಂದು ತೂಕ ಎಂಬ ಮಾತಿದೆ. ಇದು ಚುನಾವಣಾ ಪ್ರಚಾರ ಅಖಾಡದಲ್ಲಿಯೂ ಸಹ ಸಾಬೀತಾಗಿದೆ. ಮರಾಠಾ ಮತಗಳ ಓಲೈಕೆಗೆ ರಾಜಕೀಯ ಪಕ್ಷಗಳ ಕೇಸರಿ ಪಾಲಿಟಿಕ್ಷ್ ಜೋರಾಗಿದೆ. ರಾಜಕಾರಣ ಏನೇ ಇರಲಿ ನಮಗೆ ಒಳ್ಳೆಯ ವ್ಯಾಪಾರ ಆಗುತ್ತಿದೆಯಲ್ಲ ಎಂದು ವ್ಯಾಪಾರಸ್ಥರು ಮಾತ್ರ ಫುಲ್ ಖುಷ್ ಆಗಿದ್ದಾರೆ.
ವರದಿ: ಮಹಾಂತೇಶ ಕುರಬೇಟ್ ಟಿವಿ9 ಬೆಳಗಾವಿ
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ