Karnataka Assembly Election Highlights: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಕಾರ್ಯನಿರತವಾಗಿವೆ. ಕಾಂಗ್ರೆಸ್ ಈಗಾಗಲೆ 2 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕೈ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಇನ್ನು ಜೆಡಿಎಸ್ 1 ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಶ್ರೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಇಂದು ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿ ಬಿಡುಗಡೆಗೊಳಿಸುತ್ತಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದು, ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಇಂದಿನ ಅಪ್ಡೇಟ್ಸ್
ಕೋಲಾರ: ಅನುಮತಿ ಪಡೆಯದೆ ಜಾಲತಾಣದಲ್ಲಿ ಪೋಸ್ಟ್ ಹಿನ್ನೆಲೆ ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೇರಿ ಇಬ್ಬರಿಗೆ ಚುನಾವಣಾಧಿಕಾರಿಗಳು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಕೋಲಾರ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಹಾಗೂ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಕೋಲಾರ ತಾಲೂಕು ಚುನಾವಣಾಧಿಕಾರಿ ವೆಂಕಟಲಕ್ಷ್ಮೀ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾಧಿಕಾರಿಗಳು ಹದ್ದಿನಕಣ್ಣು ಇಟ್ಟಿದೆ.
ತುಮಕೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 13 ಗ್ರಾಮಗಳಿಂದ ಮತದಾನ ಬಹಿಷ್ಕರಿಸಿದ್ದಾರೆ. ಕ್ರಷರ್ ತೆರೆಯಲು ಗ್ರಾಮಸ್ಥರು ಬಿಡದೆ ಹೋರಾಟ ನಡೆಸುತ್ತಿದ್ದಾರೆ. 13 ಗ್ರಾಮಗಳ ನಿವಾಸಿಗಳಿಗೆ ಮನವಿಗೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಅಧಿಕಾರಿಗಳ ನಡೆಗೆ ಬೇಸತ್ತು ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು.
ಬೆಂಗಳೂರು: ಅಮುಲ್, ಮಹಾರಾಷ್ಟ್ರ ಗಡಿ ವಿಚಾರವಾಗಿ ಕೆಲವರು ಮಾತಾಡ್ತಿಲ್ಲ. ಹೋರಾಟಗಾರರು ಹಾಗೂ ಕಲಾವಿದರೆಲ್ಲರೂ ಸುಮ್ಮನೇ ಇದ್ದಾರೆ. ಅಮುಲ್, ಮಹಾರಾಷ್ಟ್ರ ಗಡಿ ವಿಚಾರವಾಗಿ ಯಾರೂ ಮಾತಾಡ್ತಿಲ್ಲ. ಗಡಿ ಭಾಗದ ನಮ್ಮ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ ಘೋಷಿಸಿದೆ. ಇತಿಹಾಸದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ನೈತಿಕಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಪರೋಕ್ಷವಾಗಿ ಖರ್ಗೆ ಸಿಎಂ ಆದರೆ ತ್ಯಾಗಕ್ಕೆ ಸಿದ್ಧ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಖರ್ಗೆ ಏನು ಇಚ್ಛೆ ಪಡ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು. ಖರ್ಗೆ ಕೈಕೆಳಗೆ ಕೆಲಸ ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ. ಖರ್ಗೆ ನಮ್ಮ ಪಕ್ಷದ ಆಸ್ತಿ, ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ನನಗಿಂತ ರಾಜಕೀಯದಲ್ಲಿ ದೊಡ್ಡವರು ಎಂದು ಹೇಳಿದರು.
ಬೆಂಗಳೂರು: ಭಾರತ, ಸಂವಿಧಾನವನ್ನು ಉಳಿಸುವುದಕ್ಕೆ ಜೈ ಭಾರತ ಎಂಬ ಕಾರ್ಯಕ್ರಮಕ್ಕೆ ಏ. 16 ರಂದು ಚಾಲನೆ ನೀಡಲಾಗುತ್ತಿದೆ, ಅಂದೇ ಕಾಂಗ್ರೆಸ್ ಇಂದಿರಾ ಗಾಂಧಿ ಭವನ ಉದ್ಘಾಟನೆಗೆ ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು: ನಮ್ಮ ನಂದಿನಿಯನ್ನು ನಾವು ಬೆಳಸಬೇಕು. ಆ ಮೂಲಕ ನಮ್ಮ ರೈತರ ಹಾಲನ್ನು ನಾವು ತೆಗೆದುಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಬೇಕು. ಕಾಂಗ್ರೆಸ್ ಇದಕ್ಕೆ ಬದ್ಧವಾಗಿದೆ. ನಮ್ಮ ರಾಜ್ಯದ ರೈತರನ್ನು ಉಳಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಆ ಮೂಲಕ ನಿರುದ್ಯೋಗ ಯುವಕರಿಗೆ ಉದ್ಯೋಗವಕಾಶ ಒದಗಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಕೆಟ್ ವಂಚಿತ ಮುಖಂಡರಿಗೆ ಸಮಾಧಾನಪಡಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ನನಗೂ ಇದೆ. ಬಿಜೆಪಿಯವರಗೂ
ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೆಳಗಾವಿ: ಕಾಂಗ್ರೆಸ್ಗೆ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಸ್ಟಾರ್ ಪ್ರಚಾರಕ ಎಂದು KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿ, ಪ್ರಧಾನಿ ಮೋದಿ ಬಂದರೆ ಅಂತಹದ್ದೇನೂ ಎಫೆಕ್ಟ್ ಆಗುವುದಿಲ್ಲ. ಮೋದಿ ತಮ್ಮ ಪಕ್ಷದ ಪ್ರಚಾರ ಮಾಡಿ ಅವರ ಸಿದ್ಧಾಂತ ಹೇಳ್ತಾರೆ. ಅವರು ಬಂದ್ರೆ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದರು.
ಬೀದರ್: ಮೇ 13ರಂದು ಜನ ಯಾರಿಗೆಲ್ಲ ಉತ್ತರಿಸುತ್ತಾರೋ ಕಾದು ನೋಡಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸರ್ಕಾರದ ಯೋಜನೆ ಮುಂದಿಟ್ಟು ಜನರ ಬಳಿ ಹೋಗುತ್ತೇವೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರಚಾರ ಮಾಡುತ್ತೇವೆ. ಎಸ್ಡಿಪಿಐ, ಪಿಎಫ್ಐ ಒಂದೇ ನಾಣ್ಯದ 2 ಮುಖ ಇದ್ದಂತೆ. ಎಸ್ಡಿಪಿಐ, ಪಿಎಫ್ಐ ಕಾಂಗ್ರೆಸ್ನ ಬಿ ಟೀಂ ಎಂದರು.
ತುಮಕೂರು: ಮಾಜಿ ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸಹ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿತ್ತು. ಸದ್ಯ ಈ ಕುರಿತಾಗಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ. 2 ಕ್ಷೇತ್ರದ ಗೊಂದಲ ಯಾಕೆ ಬಂತೋ ಗೊತ್ತಿಲ್ಲ ಎಂದಿದ್ದಾರೆ.
ಬೆಂಗಳೂರು: ಭಾಷಣದ ವೇಳೆ ನಟಿ ಶೃತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಭಾಷಣ ಮಾಡುವ ಸಂಧರ್ಭದಲ್ಲಿ ನಿಮ್ಮ ವಂಶ ಬಿಟ್ಟು ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್ ಗೆ ಮತ ಹಾಕಿ, ನಿಮ್ಮ ವಂಶ ಬಿಟ್ಟು ಬೇರೆ ದೇಶದ ವಂಶ ಬೆಳೆಯಬೇಕು ಎಂದರೆ ಕಾಂಗ್ರೆಸ್ಗೆ ಮತ ನೀಡಿ. ದೇಶದ ವಂಶ ಬೆಳೆಯಬೇಕು ಎಂದರೆ ಬಿಜೆಪಿಗೆ ಮತ ನೀಡಿ ಎಂದು ನಟಿ ಶೃತಿ ಭಾಷಣ ಮಾಡಿದ್ದರು. ಈ ರೀತಿಯಾದ ನಟಿ ಶೃತಿ ಪ್ರಚೋದನಕಾರಿ ಭಾಷಣ ಮಾಡಿ ಮತದಾರರನ್ನು ಒಲಿಸಿಕೊಳ್ಳುವ ಯತ್ನ ಮಾಡಿದ್ದಾರೆ . ಅವರ ಮೇಲೆ ಕ್ರಮ ತೆಗದುಕೊಳ್ಳಿ ಎಂದು ದೂರು ನೀಡಲಾಗಿದೆ.
ಉತ್ತರ ಕನ್ನಡ: ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡದಂತೆ ಮುಸ್ಲಿಂ ಸಂಘಟನೆ ಎಐಸಿಸಿಗೆ ಪತ್ರ ಬರೆದಿದೆ. ನಿವೇದಿತ್ ಆಳ್ವಾ ಕುಮಟಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಇವರಿಗೆ ಟಿಕೆಟ್ ನೀಡದಂತೆ ವಿರೋಧ ವ್ಯಕ್ತವಾಗುತ್ತಿದೆ. ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿದರೆ ನಾವು ಜೆಡಿಎಸ್ ಗೆ ಬೆಂಬಲ ಸೂಚಿಸುತ್ತೆವೆ. ಕುಮಟಾ ಕ್ಷೇತ್ರದ ಸ್ಥಳೀಯರಾದ
ಶಿವಾನಂದ ಹೆಗಡೆ ಕಡತೋಕಗೆ ಟಿಕೆಟ್ ನೀಡಿ. ಕ್ಷೇತ್ರದ ಬಗ್ಗೆ ಅರಿವಿಲ್ಲದೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಬೇಡಿ ಎಂದು ಹೊನ್ನಾವರದ ಜಮಾತ್-ಉಲ್-ಮುಸ್ಲಿಮೀನ್ ಅಧ್ಯಕ್ಷ ಆಜಾದ್ ಅನ್ನಿಗೇರಿ, ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ: ಮೀಸಲಾತಿಯಲ್ಲಿ ಮರಾಠ ಸಮುದಾಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರ್ಕಾರಗಳು ಅನ್ಯಾಯ ಮಾಡಿವೆ. ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಬಿಸಿ ಮುಟ್ಟಿಸುತ್ತೇವೆ. 2012ರಲ್ಲಿ ಎನ್.ಶಂಕರಪ್ಪ ಮರಾಠಿಗರ ಬಗ್ಗೆ ಅಧ್ಯಯನ ನಡೆಸಿದ್ದರು. 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಗಮನಹರಿಸಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಭರವಸೆಯೂ ಹುಸಿಯಾಯಿತು. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮರಾಠ ಸಮುದಾಯದವರಿದ್ದಾರೆ. 2-ಡಿ ಮೀಸಲಾತಿಯಲ್ಲಿ ಮರಾಠರಿಗೆ ಮೀಸಲಾತಿ ನೀಡಿದ್ದು ಸರಿಯಲ್ಲ. ನಮ್ಮ ಸಮುದಾಯಕ್ಕೆ 2ಎ ನಲ್ಲೇ ಪ್ರತ್ಯೇಕ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಸಮುದಾಯದ ಮುಖಂಡ ನಾರಾಯಣ ಗಣೇಶ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ: ಕಾಂಗ್ರೆಸ್ನ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸ್ವಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ತೇರದಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಉಮಾಶ್ರೀ ಅವರಿಗೆ ನೀಡಿದ್ದಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿನವ ರೇವಣ ಸಿದ್ದೇಶ್ವರ ಶ್ರೀ, ಮೃತ್ಯುಂಜಯಶ್ರೀ, ಪಂಡಿತ ಪಟ್ಟಣ್ ಶ್ರೀ, ಮಲ್ಲಪ್ಪ ಬಾವಿಕಟ್ಟಿ ಚಂದ್ರಶೇಖರ ಶಿವಪೂಜ್ಯ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ಡಾ.ಮಲ್ಲೇಶಪ್ಪ ಎಸ್.ದಡ್ಡೆ ಅವರಿಗೆ ಟಿಕೆಟ್ ನೀಡಿ ಒತ್ತಾಯಿಸಿದ್ದಾರೆ.
ತೇರದಾಳದಲ್ಲಿ60 ಸಾವಿರ ಲಿಂಗಾಯತ ನೇಕಾರರಿದ್ದಾರೆ. ಇಡೀ ಬಾಗಲಕೋಟೆ ಜಿಲ್ಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ನೇಕಾರರಿದ್ದಾರೆ. ಬಹಳ ಹಿಂದಿನಿಂದಲೂ ಮಲ್ಲೇಶಪ್ಪ ದಡ್ಡೆನವರ ಕುಟುಂಬ ಕಾಂಗ್ರೆಸ್ ಜೊತೆಗಿದೆ.
ಹೀಗಾಗಿ ಡಾ.ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಗೆಲ್ಲಬಹುದು. ಆದರೆ ಉಮಾಶ್ರೀ ಈಗಾಗಲೇ ಗೆದ್ದು ಸಚಿವರಾಗಿದ್ದರು. ಈಗ ಯುವಕ ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದಾರೆ.
ಮಂಡ್ಯ: ಮಂಡ್ಯದ ಕೆರೆ ಅಂಗಳ ನಿವಾಸಿಗಳು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. 15 ವರ್ಷಗಳಿಂದ ಮೂಲಸೌಕರ್ಯ ಕಲ್ಪಿಸಿಲ್ಲ. ಚುನಾವಣಾ ವೇಳೆ ವೋಟ್ ಕೇಳಲು ಮಾತ್ರ ಜನಪ್ರತಿನಿಧಿಗಳು ಆಗಮಿಸುತ್ತಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸಲ್ಲ. ಚರಂಡಿ, ರಸ್ತೆ, ಕುಡಿಯುವ ನೀರು ಸೌಲಭ್ಯ ನಮಗೆ ಕಲ್ಪಿಸಿಲ್ಲ. ಮೂಲಸೌಕರ್ಯ ಸಿಗುವವರೆಗೂ ಮತದಾನ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟನೆ ಮೂಲಕ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ದೊಡ್ಡಬಳ್ಳಾಪುರದ ಕೆಲ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಜಾಲಪ್ಪ ಪುತ್ರ ನರಸಿಂಹಸ್ವಾಮಿ ಮತ್ತೆ ಪಕ್ಷಕ್ಕೆ ವಾಪಸಾಗಿದ್ದಾರೆ. ಬಿಜೆಪಿಗೆ ಹೋಗಬೇಡಿ ಅಂತ ನರಸಿಂಹಸ್ವಾಮಿಗೆ ನಾನು ಹೇಳಿದ್ದೆ. ಕಾಂಗ್ರೆಸ್ನಲ್ಲೇ ಇರಬೇಕೆಂದು ಆಸೆಪಟ್ಟು ವಾಪಸ್ ಬಂದಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಈ ಬಾರಿಯೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆನೆಕಲ್: ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ಯಾರಾ ಮಿಲಟರಿ ಪಡೆ ಹಾಗೂ ಪೊಲೀಸರು ಪರೇಡ್ ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ, ಹೆಬ್ಬಗೋಡಿ, ಏರಿಯಾಗಳಲ್ಲಿ ಹಾಗೂ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆ ವ್ಯಪ್ತಿಯಲ್ಲಿ ಪಥಸಂಚಲನ ನಡೆಸಿದ್ದಾರೆ.
ತುಮಕೂರು: ಕಾಂಗ್ರೆಸ್ನ ಮಾಜಿ ಶಾಸಕ ಷಫಿ ಅಹ್ಮದ್ ರಾಜಿನಾಮೆ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಟಿಕೆಟ್ ಕೈ ತಪ್ಪಿದಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಶಿಷ್ಯ ಕೊಂಡವಾಡಿ ಚಂದ್ರಶೇಖರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರವಾನೆ ಮಾಡಿದ್ದಾರೆ.
ಕೋಲಾರ: ಏಪ್ರಿಲ್ 10 ರಂದು ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ. ರಾಹುಲ್ ಗಾಂಧಿಯವರ ಕಾರ್ಯಕ್ರಮ ಇದು ಎರಡನೇ ಬಾರಿಗೆ ಮುಂದೂಡಲಾಗಿದ್ದು, ಏಪ್ರಿಲ್-16 ರಂದು ಸಮಾವೇಶ ನಡೆಸುವುದಾಗಿ ನಿಶ್ಚಯಿಸಲಾಗಿದೆ.
ಬೆಂಗಳೂರು: ಇಂದು ಮಧ್ಯಾಹ್ನ ರಾಜ್ಯ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
Published On - 10:51 am, Sat, 8 April 23