ಮತ ಚಲಾಯಿಸಲು ಗೋವಾದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಸಾವಿರಾರು ಕಾರ್ಮಿಕರು: ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ
ನಾಳೆ (ಮೇ.10) ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆ ಗೋವಾ ಸರ್ಕಾರ ಕಾರ್ಮಿಕರಿಗೆ ನಾಳೆ ವೇತನ ಸಹಿತ ರಜೆ ಘೋಷಿಸಿದೆ. ಈ ಹಿನ್ನೆಲೆ ಮತದಾನದ ಮಾಡಲು ಉತ್ತರ ಕರ್ನಾಟಕದ ಸಾವಿರಾರು ಕಾರ್ಮಿಕರು ಗೋವಾದಿಂದ ಸ್ವಗ್ರಾಮಗಳತ್ತ ಆಗಮಿಸುತ್ತಿದ್ದಾರೆ.
ಬೆಳಗಾವಿ: ನಾಳೆ (ಮೇ.10) ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ (Voting) ನಡೆಯುವ ಹಿನ್ನೆಲೆ ಗೋವಾ ಸರ್ಕಾರ (Goa Government) ಕಾರ್ಮಿಕರಿಗೆ ನಾಳೆ ವೇತನ ಸಹಿತ ರಜೆ ಘೋಷಿಸಿದೆ. ಈ ಹಿನ್ನೆಲೆ ಮತದಾನದ ಮಾಡಲು ಸಾವಿರಾರು ಕನ್ನಡಿಗರು (Kannadigas) ಗೋವಾದಿಂದ ಸ್ವಗ್ರಾಮಗಳತ್ತ ಆಗಮಿಸುತ್ತಿದ್ದಾರೆ. ಇದರಿಂದ ಗೋವಾದಿಂದ ರಾಜ್ಯಕ್ಕೆ ಆಗಮಿಸುವ ಬಸ್‌ಗಳೆಲ್ಲವೂ ಫುಲ್ ರಶ್ ಆಗಿವೆ. ಇನ್ನು ಕೆಲವೊಂದಿಷ್ಟು ರಾಜಕೀಯ ಪಕ್ಷಗಳ ನಾಯಕರು ಈ ಕಾರ್ಮಿಕರಿಗೆ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಬೆಳಗಾವಿ ತಾಲೂಕಿನ ಪೀರನವಾಡಿ ಚೆಕ್ಪೋಸ್ಟ್ನಲ್ಲಿ ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.
ವೇತನ ಸಹಿತ ಕಾರ್ಮಿಕರಿಗೆ ರಜೆ ಘೋಷಿಸಿದ ಗೋವಾ ಸರ್ಕಾರ
ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಗೋವಾ ಸರ್ಕಾರವು ಮೇ 10 ರಂದು ವೇತನ ಸಹಿತ ರಜೆ ಘೋಷಿಸಿದೆ. ಇದು ಸರ್ಕಾರಿ ಮತ್ತು ಕೈಗಾರಿಕಾ ನೌಕರರು ಸೇರಿದಂತೆ ಎಲ್ಲಾ ಖಾಸಗಿ ಕಂಪನಿಗಳಿಗೂ ಅನ್ವಯವಾಗಲಿದೆ. ಈ ನಿರ್ಧಾರದಿಂದ ಗೋವಾದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಮರಳಿ ಮತದಾನ ಮಾಡಲು ನೆರವಾಗಲಿದೆ. ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಕಾರಣದಿಂದಾಗಿ ಅಂದು ಗೋವಾ ಸರ್ಕಾರ ರಜೆ ಘೋಷಿಸಿದೆ. ಗೋವಾ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ಮೂರ್ಖ ನಿರ್ಧಾರ ಎಂದು ಕರೆದಿವೆ.
ಈ ರಜೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಬಹುದು ಎಂದು ಗೋವಾ ರಾಜ್ಯ ಕೈಗಾರಿಕೆಗಳ ಸಂಘ ಹೇಳಿದೆ. ವಾಸ್ತವವಾಗಿ, ಗೋವಾ ಸರ್ಕಾರವು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾರಣ ಮೇ 10 ರಂದು ವೇತನ ಸಹಿತ ರಜೆಯನ್ನು ಘೋಷಿಸಿ ಸೋಮವಾರ ಅಧಿಸೂಚನೆಯನ್ನು ಹೊರಡಿಸಿತು.
ಇದನ್ನೂ ಓದಿ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆ; ಮತದಾನದ ಹಕ್ಕಿನಿಂದ ವಂಚಿತರಾದ್ರಾ ಸಾರಿಗೆ ಸಿಬ್ಬಂದಿ?
ಮೇ 10 ರಂದು ಎಲ್ಲಾ ಸರ್ಕಾರಿ ಮತ್ತು ಕೈಗಾರಿಕಾ ನೌಕರರು ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಗೋವಾ ಫಾರ್ವರ್ಡ್ ಪಾರ್ಟಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ.
ಗೋವಾ ರಾಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್, ರಾಜ್ಯ ಸರ್ಕಾರದ ಈ ನಿರ್ಧಾರ ಮೂರ್ಖತನ ಎಂದು ಬಣ್ಣಿಸಿದ್ದಾರೆ. ಇದಲ್ಲದೆ, ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ರಾಜ್ಯ ಸರ್ಕಾರವನ್ನು ಟೀಕಿಸಿದರು ಮತ್ತು ಈ ನಿರ್ಧಾರವನ್ನು ಮೂರ್ಖ ನಿರ್ಧಾರ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Tue, 9 May 23