Karnataka Polls 2023: ಮೋದಿ ಸೇರಿದಂತೆ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಪ್ರಚಾರ: ಯಾರ್ಯರು ಎಲ್ಲೆಲ್ಲಿ?
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಂದು ಕೂಡ ಹಲವು ನಾಯಕರು ರಾಜ್ಯದಲ್ಲಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದು, ಇವರ ದಿನದ ವೇಳಾ ಪಟ್ಟಿ ಇಲ್ಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಬ್ಬರದ ಪ್ರಚಾರ ನಡೆಸಿದ್ದಾರೆ. ಈಗಾಗಲೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah), ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಪ್ರಧಾನಿ ಮೋದಿಯವರು ಕಳೆದ ಒಂದು ವಾರದಲ್ಲಿ 2 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಇಂದು (ಮೇ.5) ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ಬಳ್ಳಾರಿ ನಗರದ ಕಪ್ಪಗಲ್ ರಸ್ತೆಯ ಸತ್ಯಂ ಕಾಲೇಜು ಮುಂಭಾಗದ ಮೈದಾನದಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳ್ಳಾರಿ ಸಮಾವೇಶದ ಬಳಿಕ ಪ್ರಧಾನಿ ಮೋದಿ ತುಮಕೂರಿಗೆ ತೆರಳಿದ್ದಾರೆ. ಜಿಲ್ಲೆಯ 11 ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಸಂಜೆ 4:50ಕ್ಕೆ ಗಂಟೆಗೆ ನಗರಕ್ಕೆ ಆಗಮಿಸಲಿದ್ದಾರೆ. ಸಂಜೆ 5 ಗಂಟೆಯಿಂದ 5:50 ರವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ಒಂದು ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 80 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರರನ್ನ ಉದ್ದೇಶಿಸಿ ಸುಮಾರು 30 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ.
ಕಲಬುರಗಿಗೆ ಜೆಪಿ ನಡ್ಡಾ ಆಗಮನ
ಇಂದು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಲಿದ್ದಾರೆ. ಸಂಜೆ 5.30 ಕ್ಕೆ ಸೇಡಂ ಆಗಮಿಸುವ ಜೆಪಿ ನಡ್ಡಾ, ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ್ ಪರ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಪಟ್ಟಣದಲ್ಲಿ ವಿವಿಧ ಮಠಾದೀಶರೊಂದಿಗೆ ಜೊತೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ರಾತ್ರಿ ಕಲಬುರಗಿ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇದನ್ನು ಓದಿ: ಇಂದು ತುಮಕೂರು ನಗರಕ್ಕೆ ಮೋದಿ ಭೇಟಿ: ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ವಾಹನ ಸಂಚಾರ ನಿರ್ಬಂಧ
ತವರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತಯಾಚನೆ
ಮೈಸೂರು: ಇಂದು (ಮೇ.05) ಕೂಡ ಸ್ವಕ್ಷೇತ್ರ ವರುಣಾದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಮತಯಾಚಿಸಲಿದ್ದಾರೆ. ಸಿದ್ದರಾಮಯ್ಯ ಪರ ಸ್ಟಾರ್ ನಟ, ನಟಿಯರು ರೋಡ್ಶೋ ನಡೆಸಲಿದ್ದಾರೆ. ವರುಣಾ ಕ್ಷೇತ್ರದ 23 ಗ್ರಾಮಗಳಲ್ಲಿ ನಟರಾದ ಶಿವರಾಜ್ಕುಮಾರ್, ದುನಿಯಾ ವಿಜಯ್, ಮಾಜಿ ಸಂಸದೆ, ನಟಿ ರಮ್ಯಾ ಸೇರಿದಂತೆ ಹಲವರು ಪ್ರಚಾರ ಮಾಡುತ್ತಾರೆ.
ಬರೋಬ್ಬರಿ 23 ಗ್ರಾಮಗಳಲ್ಲಿ ರೋಡ್ ಶೋ ವೇಳಾಪಟ್ಟಿ
ಬೆಳಿಗ್ಗೆ 9:00ಕ್ಕೆ ಚಿಕ್ಕಳ್ಳಿ , 9:30ಕ್ಕೆ ಭುಗತಗಳ್ಳಿ, 10:00ಕ್ಕೆ ವಾಜಮಂಗಲ, 10:30ಕ್ಕೆ ಮೆಲ್ಲಹಳ್ಳಿ, ಮಧ್ಯಾಹ್ನ 12:00 ಕ್ಕೆ ಹಾರೋಹಳ್ಳಿ, 1:00 ಕ್ಕೆ ಮಾದೇಗೌಡನ ಹುಂಡಿ, 1:30ಕ್ಕೆ ರಂಗನಾಥಪುರ, 2:00 ಕ್ಕೆ ರಂಗಾಚಾರಿ ಹುಂಡಿ, 2:30 ಕ್ಕೆ ರಂಗಸಮುದ್ರ, 3:00 ಕ್ಕೆ ಇಟ್ಟುವಳ್ಳಿ, 3:30 ಕ್ಕೆ ಕುಪ್ಪೆ ಗ್ರಾಮದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಸಂಜೆ 4:00 ಕ್ಕೆ ತುಂಬಲ, 4:30ಕ್ಕೆ ಮುತ್ತತ್ತಿ, 5:00ಕ್ಕೆ RP ಹುಂಡಿ, 5:30 ಕ್ಕೆ ಎಡತೊರೆ, 6:00 ಕ್ಕೆ ಗರ್ಗೇಶ್ವರಿ, 6:30 ಕ್ಕೆ ಹಳೆ ತಿರುಮಕೂಡಲ ಸರ್ಕಲ್, ರಾತ್ರಿ 7:00ಕ್ಕೆ ಹೊಸ ತಿರುಮಕೂಡಲ ಸರ್ಕಲ್, 7:30 ಕ್ಕೆ ಭೈರಾಪುರ ಬಾಬೂ ಜಗಜೀವನ ರಾಮ್ ಪುತ್ಥಳಿ, 8:00 ಕ್ಕೆ ಟಿ. ನರಸೀಪುರ – ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮೂಲಕ ಬಸ್ ಸ್ಟಾಂಡ್, 8:30 ಕ್ಕೆ ಟಿ ನರಸೀಪುರ ಬೃಂದಾವನ ಹಾಸ್ಪಿಟಲ್ ಎದುರುಗಡೆ ಅಂಬೇಡ್ಕರ್ ಫೋಟೋಗೆ ಪುಷ್ಪಾರ್ಚನೆ, 9:00 ಕ್ಕೆ ವಿವೇಕ ನಗರದ ಮೂಲಕ ಹೆಳವರಹುಂಡಿ ಸರ್ಕಲ್, 9.30 ಕ್ಕೆ ಕೆಎಚ್‌ಬಿ ಸರ್ಕಲ್ ಮೂಲಕ ವಿದ್ಯೋದಯ ಸರ್ಕಲ್ ಆಲುಗೂಡುನಲ್ಲಿ ಮತಯಾಚಿಸಿ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ.
ಕೋಲಾರದಲ್ಲಿಂದು ನಟ ಕಿಚ್ಚ ಸುದೀಪ್ ರೋಡ್ ಶೋ
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂದು (ಮೇ.05) ಮಧ್ಯಾಹ್ನ ನಟ ಕಿಚ್ಚ ಸುದೀಪ್ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಪರ ಮತಯಾಚಿಸಲಿದ್ದಾರೆ. ಸುದೀಪ್ ಆಗಮನ ಹಿನ್ನಲೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಮಾಲೂರು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗೇ ಮೈಸೂರಿನ ಟಿ ನರಸೀಪುರ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಟಿ ನರಸೀಪುರ ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ ಪರ ಮಧ್ಯಾಹ್ನ 3.45 ರಿಂದ ಸಂಜೆ 4.45ರವರೆಗೆ ಮತಯಾಚಿಸಲಿದ್ದಾರೆ. ಸಂಜೆ 5.30 ರಿಂದ 6.30ರವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ಬಿಜೆಪಿ ಅಭ್ಯರ್ಥಿ ಕವೀಶ್ ಗೌಡ ಪರ ಪ್ರಚಾರ ಮಾಡುತ್ತಾರೆ.
ವರುಣಾ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಮತಬೇಟೆ\
ಮೈಸೂರು: ರಾಜ್ಯದ ಗಮನವನ್ನು ಕೇಂದ್ರೀಕರಿಸಿಕೊಂಡಿರುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಂಟ್ರಿ ಕೊಡಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ, ಗರ್ಗೇಶ್ವರಿ, ಟಿ.ನರಸೀಪುರದಲ್ಲಿ ಪ್ರಚಾರ ನಡೆಸಿ ನಂತರ ವರುಣಾ ಕ್ಷೇತ್ರದಲ್ಲಿ ರೋಡ್ಶೋ ನಡೆಸಲಿದ್ದಾರೆ.
ಹಳೆ ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಹಳೆ ಮೈಸೂರಿನಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದು, ಟಿ ನರಸೀಪುರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ. ಸಂಜೆ 4.30ಕ್ಕೆ ಬನ್ನೂರಿನಲ್ಲಿ ಶಾಸಕ, ಅಭ್ಯರ್ಥಿ ಅಶ್ವಿನ್ ಕುಮಾರ್ ಪರ ಪ್ರಚಾರ ಮಾಡುತ್ತಾರೆ. 5.30ಕ್ಕೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ಶಾಸಕ, ಅಭ್ಯರ್ಥಿ ಜಿಟಿ ದೇವೇಗೌಡ ಪರ ಮತಯಾಚಿಸಲಿದ್ದಾರೆ. ಸಂಜೆ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಹಾಸನ ರಾಜಕೀಯ ರಣಕಣದಲ್ಲಿಂದು ಬಿಜೆಪಿ ನಾಯಕರ ಅಬ್ಬರ ಪ್ರಚಾರ
ಹಾಸನ: ಜಿಲ್ಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಚಾರ ಸಭೆಯಲ್ಲಿ ಬಾಗಿಯಾಗಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸಕಲೇಶಪುರದಲ್ಲಿ ಬಹಿರಂಗ ಸಭೆ, 11-35ಕ್ಕೆ ಅರಕಲಗೂಡಿನಲ್ಲಿ ಬಹಿರಂಗ ಸಭೆ, ಮಧ್ಯಾಹ್ನ 2 ಗಂಟೆಗೆ ಬೇಲೂರಿನಲ್ಲಿ ಬಹಿರಂಗ ಸಭೆಯಲ್ಲಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 am, Fri, 5 May 23