ಲಕ್ಷ್ಮಣ ಸವದಿ ಮನವೊಲಿಕೆ ಮುಂದಾದ ಹೈಕಮಾಂಡ್​: 3 ಬಾರಿ ಗೆದ್ದ ನಾಯಕನಿಗೆ ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಯ ಹಿರಿಯ ನಾಯಕರು, ಅವರು ಪಕ್ಷದಲ್ಲೇ ಇರುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​​ಸಿಂಗ್​ ಹೇಳಿದ್ದಾರೆ.

ಲಕ್ಷ್ಮಣ ಸವದಿ ಮನವೊಲಿಕೆ ಮುಂದಾದ ಹೈಕಮಾಂಡ್​: 3 ಬಾರಿ ಗೆದ್ದ ನಾಯಕನಿಗೆ ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು
ಲಕ್ಷ್ಮಣ ಸವದಿ
Follow us
|

Updated on: Apr 12, 2023 | 1:51 PM

ನವದೆಹಲಿ: ಕಳೆದ ಒಂದು ವಾರದಿಂದ ಅಳಿದು ತೂಗಿ ತಡರಾತ್ರಿ (ಏ.11) ರಂದು ಬಿಜೆಪಿ (BJP) 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿತು. ಈ ಟಿಕೆಟ್​ ಘೋಷಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ಹೇಳಿದಂತೆಯೇ ಹಲವು ಅಚ್ಚರಿಗಳಿಗೆ ಸಾಕ್ಷಿಯಾಯಿತು. ಗುಜರಾತ್​ (Gujarat) ಮಾಡಲ್​ನಂತೆ ಕಮಲ ಹೈಕಮಾಂಡ್​ 52 ಜನ ಹೊಸಬರಿಗೆ ಮಣೆ ಹಾಕಿದೆ. ಹಾಗೇ ಹಾಲಿ ಶಾಸಕರಿಗೆ ಕೋಕ್​ ಕೊಟ್ಟಿದೆ. ಸಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಹಲವು ಶಾಸಕರಿಗೆ ಬಿಜೆಪಿ ಮತ್ತೆ ಈ ಬಾರಿ ಟಿಕೆಟ್ ನೀಡಿದೆ. ಇದರಲ್ಲಿ ಅಥಣಿಯ ವಿಧಾನಸಭಾ ಕ್ಷೇತ್ರದ (Athani Assembly Constituency) ಹಾಲಿ ಶಾಸಕ ಮಹೇಶ್​ ಕುಮಟಳ್ಳಿ (Mahesh Kumatalli) ಕೂಡ ಒಬ್ಬರು. ಈ ಮೂಲಕ ಮಾಜಿ ಡಿಸಿಎಂ, ಪಕ್ಷದ ಹಿರಿ ನಾಯಕ, ಘಟಾನುಘಟಿ ನಾಯಕರಾದ ಲಕ್ಷ್ಮಣ ಸವದಿ (Laxman Savadi) ಅವರಿಗೆ ಟಿಕೆಟ್​​ ಮಿಸ್​ ಆಗಿದೆ. ಲಕ್ಷ್ಮಣ ಸವದಿ ನನಗೆ ಟಿಕೆಟ್​ ನೀಡಿ ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಾ ಬಂದಿದ್ದರು. ಆದರೂ ಕೂಡ ಸವದಿಗೆ ಟಿಕೆಟ್​ ಒಲಿದು ಬರಲಿಲ್ಲ. ಇದರಿಂದ ಅಸಮಾಧಾನಗೊಂಡ ಲಕ್ಷ್ಮಣ ಸವದಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​​ಸಿಂಗ್​ ಮಾತನಾಡಿ ಸವದಿ ಬಿಜೆಪಿಯ ಹಿರಿಯ ನಾಯಕರು, ಅವರು ಪಕ್ಷದಲ್ಲೇ ಇರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಮತ್ತೋರ್ವ ನಾಯಕ ನಿವೃತ್ತಿ ಘೋಷಣೆ: ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್​ ಅಂಗಾರ ಗುಡ್​ ಬೈ

ದೆಹಲಿ ಟಿವಿ9 ಜೊತೆಗೆ ಮಾತನಾಡಿದ ಅವರು ಪಕ್ಷದ ನಿಲುವಿನಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

3 ಬಾರಿ ಶಾಸಕರಾಗಿದ್ದರು ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿಯವರು 2004, 2008 ಮತ್ತು 2013 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಗೆಲ್ಲುವ ಮೂಲಕ ಹ್ಯಾಟ್ರಿಕ್​ ಬಾರಿಸಿದ್ದರು. 2018ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಮಹೇಶ ಕುಮಟಳ್ಳಿ ಅವರು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್‌ ಸವದಿ ಅವರನ್ನು ಸೋಲಿಸಿದ್ದರು. 2019ರಲ್ಲಿ ಶಾಸಕ ಮಹೇಶ ಕುಮಟಳ್ಳಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದ ನಂತರ 2019ರಲ್ಲಿ ಉಪಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಅವರನ್ನು ಸೋಲಿಸಿ ಮಹೇಶ್‌ ಕುಮಟಳ್ಳಿ ಗೆಲುವು ಸಾಧಿಸಿದ್ದರು. ನಂತರ ಬಿಎಸ್​ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು.

ಈ ವೇಳೆ ಲಕ್ಷ್ಮಣ ಸವದಿಯವರನ್ನು ಎಂಎಲ್​ಸಿ ಮಾಡುವ ಮೂಲಕ ವಿಧಾನಪರಿಷತ್​ಗೆ ಆಯ್ಕೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.

ಅಥಣಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮರಾಠಾ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮಾಜದ ಮತದಾರರು ಇದ್ದಾರೆ. ಈ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ