ಮೈಸೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರ ನಾಯಕರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 30ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಪ್ರಸಿದ್ಧ ಜಂಬೂ ಸವಾರಿ ಮಾರ್ಗದಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ನಡೆಯಲಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ಜಗಮಗಿಸುತ್ತಿದೆ. ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸಾಗುವ ಮೊದಲು ಮೈಸೂರಿನಲ್ಲಿ ನಡೆಯಲಿರುವ ರೋಡ್ ಶೋ ನರೇಂದ್ರ ಮೋದಿ ಅವರ ಕೊನೆಯ ಕಾರ್ಯಕ್ರಮವಾಗಿದೆ.
ಮೈಸೂರಿನಲ್ಲಿ ನರೇಂದ್ರ ಮೋದಿಯವರ ರೋಡ್ ಶೋ ಭಾನುವಾರ ಸಂಜೆ 5:45 ಕ್ಕೆ ಪ್ರಾರಂಭವಾಗಿ 6:30 ಕ್ಕೆ ಮುಕ್ತಾಯಗೊಳ್ಳಲಿದೆ. ನಗರದ ಗನ್ ಹೌಸ್ ವಿದ್ಯಾಪೀಠದಿಂದ ರೋಡ್‌ಶೋ ಆರಂಭಗೊಂಡು ಎಲ್‌ಐಸಿ ವೃತ್ತದಲ್ಲಿ ಕೊನೆಗೊಳ್ಳಲಿದೆ. 5.3 ಕಿಲೋಮೀಟರ್ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಜನರು ರೋಡ್‌ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: PM Narendra Modi Speech: ಅಂಬೇಡ್ಕರ್ರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದ ಕಾಂಗ್ರೆಸ್; ಮೋದಿ ಆರೋಪ
ಭಾನುವಾರ, ಹಳೇ ಮೈಸೂರು ಪ್ರದೇಶದ ರಾಮನಗರದ ಶೆಟ್ಟಿಹಳ್ಳಿಯಲ್ಲಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ, ಅಲ್ಲಿ ಸುತ್ತಮುತ್ತಲಿನ 10 ಕ್ಷೇತ್ರಗಳಿಂದ ಸುಮಾರು 50,000 ಜನರು ಸೇರುವ ನಿರೀಕ್ಷೆಯಿದೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಮನಗರದಲ್ಲಿ ನಡೆದ ಕಾರ್ಯಕ್ರಮದ ನಂತರ ಪ್ರಧಾನಿಯವರು ರೋಡ್ ಶೋಗಾಗಿ ಮೈಸೂರಿಗೆ ತೆರಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರ ಭದ್ರಕೋಟೆ ಎಂದು ಪರಿಗಣಿಸಲಾದ ರಾಮನಗರಕ್ಕೆ ಇದು ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದೆ.
ನರೇಂದ್ರ ಮೋದಿ ಅವರು ಏಪ್ರಿಲ್ 29 ರ ಶನಿವಾರದಿಂದ ಕರ್ನಾಟಕಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ತಮ್ಮ ಎರಡು ದಿನಗಳ ಭೇಟಿಯಲ್ಲಿ ಆರು ಸಾರ್ವಜನಿಕ ಸಭೆಗಳು ಮತ್ತು ಎರಡು ರೋಡ್ ಶೋ ನಡೆಸಲಿದ್ದಾರೆ. ಫೆಬ್ರವರಿಯಿಂದ ಕರ್ನಾಟಕಕ್ಕೆ ನರೇಂದ್ರ ಮೋದಿ ಅವರ ಒಂಬತ್ತನೇ ಭೇಟಿ ಇದಾಗಿದೆ.
ವಿಧಾನಸಭಾ ಚುನಾವಣೆ ಸಂಬಂಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:40 pm, Sat, 29 April 23