ಕಾಂಗ್ರೆಸ್ನ 3 ಪಟ್ಟಿ ಬಿಡುಗಡೆ: ಒಟ್ಟು 209 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ: ಬಾಕಿ ಉಳಿದ ಆ 15 ಕ್ಷೇತ್ರಗಳಾವುವು?
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಅಳೆದು ತೂಗಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದ್ರೆ, ಇನ್ನೂ 15 ಕ್ಷೇತ್ರಗಳಿಗೆ ಟಿಕೆಟ್ ಬ್ಯಾಲೆನ್ಸ್ ಇಟ್ಟುಕೊಂಡಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು: 224 ಕರ್ನಾಟಕ ವಿಧಾನಸಭೆ ಕ್ಷೇತ್ರಗಳ (Karnataka Assembly Elections 2023) ಪೈಕಿ ಕಾಂಗ್ರೆಸ್(C0ngress)ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಈ ಮೂಲಕ 58 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿತ್ತು. ಇದೀಗ ಇಂದು(ಏಪ್ರಿಲ್ 15) 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಇದರೊಂದಿಗೆ ಕಾಂಗ್ರೆಸ್ 209 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ. ಅದರಲ್ಲೂ ಹಾಲಿ ಶಾಸಕರಿರುವ 4 ಕ್ಷೇತ್ರಗಳ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹಲವು ಲೆಕ್ಕಾಚಾರಗಳನ್ನು ಹಾಕುತ್ತಿದೆ.
ಬಾಕಿ ಇರುವ 15 ಕ್ಷೇತ್ರಗಳು
ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು , ರಾಯಚೂರು ಸಿಟಿ, ಶಿಗ್ಗಾoವಿ, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸೂರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ದಕ್ಷಿಣ, ಮಂಗಳೂರು-ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ, ಚಿಕ್ಕಮಗಳೂರು, ಹರಿಹರ.
ಹಾಲಿ 4 ಕ್ಷೇತ್ರಗಳ ಟಿಕೆಟ್ ಘೋಷಿಸದ ಕಾಂಗ್ರೆಸ್
3ನೇ ಪಟ್ಟಿಯಲ್ಲಿ 19 ಹೊಸ ಮುಖಗಳಿಗೆ ಮಣೆ ಹಾಕಿರುವ ಕಾಂಗ್ರೆಸ್, ಹಾಲಿ ಶಾಸಕರಿರುವ 4 ಕ್ಷೇತ್ರಗಳ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಶಿಡ್ಲಘಟ್ಟ(ವಿ.ಮುನಿಯಪ್ಪ), ಲಿಂಗಸೂಗೂರು( ಡಿಎಸ್ ಹೂಲಗೇರಿ), ಪುಲಿಕೇಶಿ ನಗರ(ಅಖಂಡ ಶ್ರೀನಿವಾಸ್ ಮೂರ್ತಿ), ಹರಿಹರ(ಎಸ್ ರಾಮಪ್ಪ) ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ.
ಜಗದೀಶ್ ಶೆಟ್ಟರ್ ನಡೆ ಮೇಲೆ ಕೈ ಅಭ್ಯರ್ಥಿ ಆಯ್ಕೆ
ಇನ್ನು ಹುಬ್ಬಳ್ಳಿ ದಕ್ಷಿಣ ಕ್ಷೇತ್ರದ ಟಿಕೆಟ್ ಬಾಕಿ ಉಳಿಸಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿಕೊಂಡು ಬಂದಿರುವ ಬಿಜೆಪಿಯ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ. ಹೀಗಾಗಿ ಅವರು ಬಿಜೆಪಿ ವಿರುದ್ಧ ಬಂಡಾಯ ಎದ್ದೇಳುವುದು ಖಚಿತವಾಗಿದೆ ಎನ್ನಲಾಗಿದೆ, ಇದಕ್ಕೆ ಪೂರಕವೆಂಬಂತೆ ಶೆಟ್ಟರ್ ಈಗಾಗಲೇ ಬೆಂಬಲಿಗರ ಸಭೆ ನಡೆಸಿದ್ದು, ಟಿಕೆಟ್ ಸಿಗದಿದ್ದರೂ ಈ ಬಾರಿ ಸ್ಪರ್ಧೆ ಮಾಡಿಯೇ ತೀರುತ್ತೇನೆಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರ ನಡೆ ಮೇಲೆ ಟಿಕೆಟ್ ಘೋಷಣೆ ಮಾಡಲು ಕಾಂಗ್ರೆಸ್ ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದೆ.
ಸಿಎಂ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ
ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಕಾಂಗ್ರೆಸ್ ಚಿಂತನೆ ನಡೆಸಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಹೆಚ್ಚಿವೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಕಟ್ಟಿ ಹಾಕಲು ಪಂಚಮಸಾಲಿ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕೋ? ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ? ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತಿದೆ.
ಈ ಹಿಂದೆ ಪಂಚಮಸಾಲಿಯ ಪ್ರಭಾವಿ ನಾಯಕ ಮಾಜಿ ಸಚಿವ ವಿನಯ್ ಕುಲರ್ಣಿ ಅವರನ್ನು ಶಿಗ್ಗಾಂವಿಯಿಂದ ಕಣಕ್ಕಿಳಿಸುವ ಸಂಬಂಧ ಚರ್ಚೆಗಳು ನಡೆದಿದ್ದವು. ಆದರೆ, ಕೊನೆ ಕ್ಷಣದಲ್ಲಿ ವಿನಯ್ ಅವರಿಗೆ ಅವರ ತವರು ಕ್ಷೇತ್ರವಾದ ಧಾರವಾಡ ಟಿಕೆಟ್ ನೀಡಲಾಗಿದೆ. ಈಗ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಗೆ ಠಕ್ಕರ್ ಕೊಡಲು ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sat, 15 April 23