ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಪ್ರಭಾವಿ ಬಿಜೆಪಿ ನಾಯಕನನ್ನು ಸೆಳೆದ ಕಾಂಗ್ರೆಸ್, ವಿನಯ್ ಕುಲಕರ್ಣಿಗೆ ಕೊಂಚ ರಿಲೀಫ್

ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್​ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ನಾಯಕನನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದರಿಂದ ವಿನಯ್ ಕುಲಕರ್ಣಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಪ್ರಭಾವಿ ಬಿಜೆಪಿ ನಾಯಕನನ್ನು ಸೆಳೆದ ಕಾಂಗ್ರೆಸ್, ವಿನಯ್ ಕುಲಕರ್ಣಿಗೆ ಕೊಂಚ ರಿಲೀಫ್
Follow us
ರಮೇಶ್ ಬಿ. ಜವಳಗೇರಾ
|

Updated on: Apr 23, 2023 | 1:30 PM

ಧಾರವಾಡ: ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿಗೆ ಕಾಂಗ್ರೆಸ್ ಹಾಕಿದ್ದ ಗಾಳ ಸಕ್ಸಸ್ ಆಗಿದೆ. ನಿನ್ನೆಯಷ್ಟೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಮತ್ತು ತವಣಪ್ಪ ಅಷ್ಟಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಎಲ್ಲವೂ ಫಲಪ್ರದವಾಗಿದ್ದು, ಇಂದು(ಏಪ್ರಿಲ್ 23) ಧಾರವಾಡ ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್​ ಬೆನ್ನಲ್ಲೇ ತವಣಪ್ಪ ಅಷ್ಟಗಿ ಅವರನ್ನು ಸೆಳೆಯುವಲ್ಲಿ ಕಾಂಗ್ರೆಸ್​ ಯಶಸ್ವಿಯಾಗಿದೆ. ತವಣಪ್ಪ ಅಷ್ಟಗಿ ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಅಮೃತ್ ದೇಸಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡಿದ್ದ ತವಣಪ್ಪ ಅಷ್ಟಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ಅವರನ್ನು ಕಾಂಗ್ರೆಸ್ ನಾಯಕರು​ ಮನವೊಲಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿಲ್ಲ. ಇದರಿಂದ ಸಂಕಷ್ಟದಲ್ಲಿ ಅವರಿಗೆ ತವಣಪ್ಪ ಅಷ್ಟಗಿ ಆಗಮನದಿಂದ ಕೊಂಚ ರಿಲೀಫ್​ ಆದಂತಾಗಿದೆ.

ಧಾರವಾಡದಲ್ಲಿ ಕಾಂಗ್ರೆಸ್ ಸೇರ್ಪಡೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತವನಪ್ಪ ಅಷ್ಟಗಿ, ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಸಿಗಲಿಲ್ಲ. ಗೌರವಕ್ಕೆ ಧಕ್ಕೆ ಬರುವ ಕೆಲಸ ಶಾಸಕ ಅಮೃತ ದೇಸಾಯಿ ಮಾಡಿದ್ದಾರೆ. ಆರು ಸಲ ಸೋತವರನ್ನು ನಾವು ಶಾಸಕರನ್ನಾಗಿ ಮಾಡಿದ್ದೆವು, ತನು-ಮನ-ಧನದಿಂದ ಕಾರ್ಯಕರ್ತರೆಲ್ಲ ಸೇರಿ ಆಯ್ಕೆ ಮಾಡಿದ್ದೆವು. ಆದ್ರೆ, ಅವರು ಕಾರ್ಯಕರ್ತರನ್ನೂ ಕಡೆಗಣಿಸಿದರು. ಹೀಗಾಗಿ ನಮಗೆ ಮತ್ತು ಕಾರ್ಯಕರ್ತರಿಗೆ ಜಾರಕಿಹೊಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ಹೇಳಿದ್ದರಿಂದ ಕಾಂಗ್ರೆಸ್ ಸೇರಿದ್ದೇವೆ. ನಾಳೆ ನಾಮಪತ್ರ ವಾಪಸ್ ಪಡೆಯುವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಒಂದು ವಿಶ್ವಾಸದ ಮೇಲೆ ಇದ್ದೆವು. ಆದರೆ ಸಿಗಬೇಕಾದ ಗೌರವ ಅಲ್ಲಿ ಸಿಗಲಿಲ್ಲ. ಸಾಮಾಜಿಕ ನ್ಯಾಯದ ವಿಶ್ವಾಸದಿಂದ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ವಿಧಿಸಿಲ್ಲ. ಗೌರವ ಬಯಸಿ ಸೇರಿದ್ದೇವೆ. ಮೊದಲು ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ಆ ಬಳಿಕ ಕೆಜೆಪಿ, ಬಿಜೆಪಿಯಲ್ಲಿ ಇದ್ದೆ. ಈಗ ಮರಳಿ ಕಾಂಗ್ರೆಸ್ ಸೇರಿದ್ದೇನೆ ಎಂದರು.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಇನ್ನು ಈ ಬಗ್ಗೆ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ವರಿಷ್ಠರ ಸೂಚನೆ ಮೇರೆಗೆ ತವನಪ್ಪ ಅಷ್ಟಗಿ ಮನೆಗೆ ಬಂದಿದ್ದು, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರು ನಮ್ಮ ಪಕ್ಷದ ಪರ ಕೆಲಸ ಮಾಡಲಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಈಗ ನಾಮಪತ್ರ ವಾಪಸ್ ಪಡೆಯುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಬೆಂಬಲ ನೀಡುತ್ತಾರೆ. ನಾವೇ ಅಷ್ಟಗಿಯವರನ್ನೇ ಸಂಪರ್ಕ ಮಾಡಿದ್ದೆವು. ನಾವು ಬಂದು ಮನವಿ ಮಾಡಿದ್ದಕ್ಕೆ ಒಪ್ಪಿಕೊಂಡಿದ್ದಾರೆ. ಅವರ ಶಕ್ತಿಗನುಗುಣವಾಗಿ ಸ್ಥಾನಮಾನ ನೀಡುತ್ತೇವೆ. ಅವರು ಕಾಂಗ್ರೆಸ್​ ಸೇರ್ಪಡೆ ಎಫೆಕ್ಟ್ ಕ್ಷೇತ್ರದ ಜೊತೆಗೆ ಬೇರೆ ಕಡೆಯೂ ಆಗಲಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆದಿದ್ದ ಮೊದಲ ಸಭೆ

ಹೌದು… ತವಣಪ್ಪ ಅಷ್ಟಗಿ ಅವರನ್ನು ಪಕ್ಷಕ್ಕೆ ಸೆಳೆಯುವ ಸಂಬಂಧ ಶನಿವಾರ ಬೆಳಗಾವಿಯಲ್ಲಿ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೇರಿದಂತೆ ಇತರೆ ನಾಯಕರು ಸಭೆ ಮಾಡಿದ್ದರು. ಆಪ್ತರೊಬ್ಬರ ಮನೆಯಲ್ಲಿ ಭೇಟಿಯಾಗಿ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ಚರ್ಚೆ ಬಳಿಕ ಹಲಗಾದ ಜೈನ ಬಸ್ತಿಯ ಸಿದ್ದಸೇನ ಮುನಿಗಳ ಆಶೀರ್ವಾದ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿನಯ್ ಪರ ಪ್ರಚಾರ ಮಾಡುವುದಾಗಿ ಅಷ್ಟಗಿ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಇಂದು ಧಾರವಾಡದಲ್ಲಿರುವ ತವಣಪ್ಪ ಅಷ್ಟಗಿ ಮನೆಗೆ ಕಾಂಗ್ರೆಸ್​ ನಾಯಕರು ಆಗಮನಿಸಿ ಅಧಿಕೃತವಾಗಿ ಆಹ್ವಾನ ಕೊಟ್ಟ ಪಕ್ಷಕ್ಕೆ ಸೇರಿಸಿಕೊಂಡರು.

ಕರ್ನಾಟಕ ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ