4 ಭಾಗಗಳಿಂದ ಯಾತ್ರೆ, 200 ರೋಡ್ ಶೋ, 224 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ: ಬಿಜೆಪಿ ಎಲೆಕ್ಷನ್ ರೂಟ್ ಮ್ಯಾಪ್ ಸಿದ್ಧ

| Updated By: ರಮೇಶ್ ಬಿ. ಜವಳಗೇರಾ

Updated on: Feb 04, 2023 | 7:06 PM

ಮುಂಬರುವ ವಿಧಾನಸಭೆ ಎಲೆಕ್ಷನ್‌ಗೆ ಬಿಜೆಪಿಯಿಂದ ಭರದ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಎಲೆಕ್ಷನ್ ರೂಟ್ ಮ್ಯಾಪ್ ರೆಡಿಯಾಗಿದೆ.

4 ಭಾಗಗಳಿಂದ ಯಾತ್ರೆ, 200 ರೋಡ್ ಶೋ, 224 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ: ಬಿಜೆಪಿ ಎಲೆಕ್ಷನ್ ರೂಟ್ ಮ್ಯಾಪ್ ಸಿದ್ಧ
Follow us on

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಗೆಲುವಿನ ರಣಕಹಳೆ ಮೊಳಗಿಸಲು ರಾಜ್ಯ ಕೇಸರಿ ಪಡೆ ಗುಜರಾತ್ ಮಾಡೆಲ್ ಕರ್ನಾಟಕದಲ್ಲೂ (Karnataka)​ ಕೂಡಾ ಅಪ್ಲೈ ಮಾಡುವುದಕ್ಕೆ ತಂತ್ರ ರೂಪಿಸಿದೆ. ಇದಕ್ಕೆ ಪೂರಕವೆಂಬಂತೆ ಗುಜರಾತ್​ ರೀತಿ ಕರ್ನಾಟಕದಲ್ಲಿ ಸಮಾವೇಶ ಹಾಗೂ ರೋಡ್ ಶೋ ಆಯೋಜಿಸಲು ತೀರ್ಮಾನಿಸಲಾಗಿದೆ. ಇಂದು ಬೆಂಗಳೂರಿನ ಅರಮನೆ ಮೈದಾನ (Palace Ground) ದಲ್ಲಿ ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಎಲೆಕ್ಷನ್ ರೂಟ್ ಮ್ಯಾಪ್ ಸಿದ್ಧವಾಗಿದೆ. ಅಲ್ಲದೇ 224 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Poll 2023: ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹ-ಪ್ರಭಾರಿಯಾಗಿ ಅಣ್ಣಾಮಲೈ ನೇಮಕ

224 ಕ್ಷೇತ್ರಗಳಿಗೂ ಉಸ್ತುವಾರಿ

ರಾಜ್ಯ ಬಿಜೆಪಿ (BJP) ಚುನಾವಣಾ (Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಹಾಗೂ ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರನ್ನು ಹೈಕಮಾಂಡ್ ನೇಮಕ ಮಾಡಿದೆ. ಇದರ ಬೆನ್ನಲ್ಲೇ ಇತ್ತ ರಾಜ್ಯ ಬಿಜೆಪಿ ವಿಧಾನಸಭೆ ಚುನಾವಣೆಗೆ ಕ್ಷೇತ್ರ ಉಸ್ತುವಾರಿಗಳನ್ನು ನೇಮಿಸಿದೆ. 224 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಉಸ್ತುವಾರಿಗಳಿಗೆ ಕ್ಷೇತ್ರವಾರು ರಾಜಕೀಯ ಚಿತ್ರಣ, ಎಲೆಕ್ಷನ್‌ ಟ್ರೆಂಡ್, ವಿಪಕ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ಒಪ್ಪಿಸುವ ಜವಾಬ್ದಾರಿ ನೀಡಲಾಗಿದೆ.

4 ಭಾಗಗಳಿಂದ ರಥಯಾತ್ರೆ

4 ಭಾಗಗಳಿಂದ ರಥಯಾತ್ರೆ ಸ್ವರೂಪದ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಒಟ್ಟು ನಾಲ್ಕು ತಂಡಗಳಿಂದ ರಥಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಯಾತ್ರೆ ವಿಜಯ ಸಂಕಲ್ಪ ರಥ ರಥಯಾತ್ರೆ ನಡೆಯಲಿದೆ. ಕೆಲವು ಕಡೆ ರಾಷ್ಟ್ರೀಯ ನಾಯಕರು ಮತ್ತು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Karnataka Assembly Poll 2023: ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೇಂದ್ರ ಚುನಾವಣಾಧಿಕಾರಿಗಳಿಂದ ಪೂರ್ವ ತಯಾರಿ ಪರಿವೀಕ್ಷಣೆ

ಬೆಂಗಳೂರಿನ ಕೆಂಪೇಗೌಡ ಪ್ರತಿಮೆ, ಚಾಮರಾಜನಗರದ ಮಹದೇಶ್ವರ ಬೆಟ್ಟ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದಿಂದ ಯಾತ್ರೆ ಶುರುವಾಗಲಿದ್ದು, ದಾವಣಗೆರೆಯಲ್ಲಿ ಮುಕ್ತಾಯವಾಗಲಿದೆ. ಬೃಹತ್ ಸಮಾವೇಶದ ಮೂಲಕ ದಾವಣಗೆರೆಯಲ್ಲಿ ರಥಯಾತ್ರೆ ಅಂತ್ಯಗೊಳಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 26ರಿಂದ ರಥಯಾತ್ರೆ ಆರಂಭವಾಗಿ ಮಾರ್ಚ್ 23ರಂದು ಅಂತ್ಯವಾಗು ಸಾಧ್ಯತೆ ಇದೆ.

ಜಿಲ್ಲೆ, ತಾಲೂಕುಗಳಲ್ಲಿ ರೋಡ್ ಶೋ

ಒಂದು ಕಡೆ ರಥಯಾತ್ರೆ ನಡೆದರೆ ಮತ್ತೊಂದೆಡೆ ಮುಂದಿನ 2 ತಿಂಗಳಲ್ಲಿ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. BJP ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಂದ 200 ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲಾ ಮೋರ್ಚಾಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಆಯೋಜಿಸಲು ಪ್ಲ್ಯಾನ್ ಮಾಡಲಾಗಿದೆ.