ಸಿದ್ದರಾಮಯ್ಯ ಸೋಲುವುದು ಬೇಡ, ಈ ಬಾರಿ ಅವರು ಗೆಲ್ಲಲಿ: ಸಚಿವ ಸುಧಾಕರ್ ಅಚ್ಚರಿ ಹೇಳಿಕೆ
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಪ್ರಮುಖವಾಗಿದ್ದು, ಭಾರೀ ಸುದ್ದಿಯಲ್ಲಿದೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಜಿ್ಲ್ಲೆಯಲ್ಲಿ ರಾಜಕೀಯ ರಂಗೇರಿದೆ. ಅದರಲ್ಲೂ ಈ ಬಾರಿ ಸಿದ್ದು ಸೋಲಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಇದರ ಮಧ್ಯೆ ಸಚಿವ ಸುಧಾಕರ್, ಸಿದ್ದರಾಮಯ್ಯ ಸೋಲುವುದು ಬೇಡ ಎಂದಿದ್ದಾರೆ.
ಚಿಕ್ಕಬಳ್ಳಾಪುರ: ಕಳೆದ ಒಂದು ವರ್ಷದಿಂದಲೂ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೊನೆಗೂ ಅಳೆದು ತೂಗಿ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆಯೇ ಎಲ್ಲಾ ಪಕ್ಷಗಳ ಚಿತ್ತ ಸಿದ್ದರಾಮಯ್ಯನವರತ್ತ ನೆಟ್ಟಿದೆ. ಅದರಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಸಿದ್ದರಾಮಯ್ಯನವರನ್ನು ಮಣಿಸುವುದಕ್ಕೆ ನಿಂತಿವೆ. ಇದರ ಮಧ್ಯೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರು ಸಿದ್ದರಾಮಯ್ಯ ಸೋಲುವುದು ಬೇಡ, ಈ ಬಾರಿ ಅವರು ಗೆಲ್ಲಲಿ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುಧಾಕರ್ ಮಾಡಿದ್ದು ಒಂದೇ ಕೆಲಸ, ಅದು ಲೂಟಿ ಮಾತ್ರ: ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
ಚಿಕ್ಕಬಳ್ಳಾಪುರದಲ್ಲಿ ಇಂದು (ಫೆಬ್ರವರಿ 04) ಸ್ತ್ರೀ ಶಕ್ತಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸುಧಾಕರ್, ನನ್ನ ಸೋಲಿಸಬೇಕೆಂದು ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ. ಆದರೆ ನಾನು ಸಿದ್ದರಾಮಯ್ಯ ರೀತಿ ಹೇಳಲ್ಲ. ಸಿದ್ದರಾಮಯ್ಯ ಸೋಲುವುದು ಬೇಡ, ಈ ಬಾರಿ ಅವರು ಗೆಲ್ಲಲಿ. 5 ವರ್ಷಗಳ ಕಾಲ ನಿಮ್ಮ ಜತೆ ನಾನು ವಿಶ್ವಾಸಾರ್ಹವಾಗಿ ಇದ್ದೆ. ನಾನು ಹೋರಾಟ ಮಾಡಿ ಮೆಡಿಕಲ್ ಕಾಲೇಜು ತರಬೇಕಾಯ್ತು. ನಾನು ನನ್ನ ಕ್ಷೇತ್ರ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಂಡು ನನ್ನನ್ನು ಸೋಲಿಸಲು ಹೇಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರೇ ನನ್ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು ಎಂದು ಹೇಳಿದರು.
ಸುಧಾಕರ್ನನ್ನು ಸೋಲಿಸಿ ಎಂದಿದ್ದ ಸಿದ್ದರಾಮಯ್ಯ
ಇತ್ತೀಚೆಗೆ ಚಿಕ್ಕಬಳ್ಳಾಪುರಲದಲ್ಲಿ ನಡೆದಿದ್ದ ಪ್ರಜಾಧ್ವನಿ ಯಾತ್ರೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿ, ಈ ಬಾರಿ ಅವರನ್ನು ಸೋಲಿಸಿ ಎಂದು ಕರೆಕೊಟ್ಟಿದ್ದರು. ಡಾ.ಕೆ.ಸುಧಾಕರ್ ಒಬ್ಬ ಫ್ರಾಡ್, ಅವರಿಗೆ ಟಿಕೆಟ್ ನೀಡಬೇಡಿ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಆದರೂ ನಾವು ಟಿಕೆಟ್ ನೀಡಿದ್ದೆವು. ಆದರೆ ಇಂದು ಸುಧಾಕರ್ಗೆ ಟಿಕೆಟ್ ನೀಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ, ನಾನು ಕೂಡ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿದ್ದರು.
ಆಪರೇಷನ್ ಕಮಲಕ್ಕೆ ಬಲಿಯಾಗಿ ರಾತ್ರಿ 1 ಗಂಟೆ ಸುಮಾರಿಗೆ ಪ್ರಮಾಣ ಮಾಡಿ ಬೆಳಗ್ಗೆ ಬಾಂಬೆಗೆ ಓಡಿಹೋದ ಸುಧಾಕರ್ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾನೆ. ಸುಧಾಕರ್ ಮತ್ತೆ ಶಾಸಕ ಆಗಬಾರದು. ಸುಧಾಕರ್ನನ್ನು ಚುನಾವಣೆಯಲ್ಲಿ ಸೋಲಿಸುವಂತವರನ್ನು ಅವರ ವಿರುದ್ಧ ಕಣಕ್ಕಿಳಿಸಿ. ನಿಮಗೆ ದಮ್ಮಯ್ಯ ಅಂತೀನಿ ಸುಧಾಕರ್ನನ್ನು ಸೋಲಿಸಿ. ಜನರು ಯಾರಿಗೆ ಹೇಳುತ್ತೀರೋ ಅವರಿಗೆ ಟಿಕೆಟ್ ಕೋಡುತ್ತೇನೆ ಎಂದಿದ್ದರು.