ಸುಧಾಕರ್ ಮಾಡಿದ್ದು ಒಂದೇ ಕೆಲಸ, ಅದು ಲೂಟಿ ಮಾತ್ರ: ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ರಾಜ್ಯಾದ್ಯಂತ ಪ್ರಜಾಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ ಕೈಗೊಂಡಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ತಯಾರಿ ನಡೆಸುತ್ತಿರುವ ಕಾಂಗ್ರೆಸ್, ರಾಜ್ಯಾದ್ಯಂತ ಪ್ರಜಾಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ (Congress Bus Yatra) ಕೈಗೊಂಡಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ವಾಗ್ದಾಳಿ ನಡೆಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಸಿದ್ದರಾಮಯ್ಯ, ಎತ್ತಿನಹೊಳೆ ಯೋಜನೆ ಮತ್ತು ಹೆಚ್.ಎನ್.ವ್ಯಾಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಆದರೆ ಇದೆಲ್ಲವನ್ನೂ ನಾವು ಮಾಡಿದ್ದು ಎಂದು ಸುಧಾಕರ್ ಹೇಳುತ್ತಾನೆ. ಆದರೆ ಸುಧಾಕರ್ ಮಾಡಿದ್ದು ಒಂದೇ ಕೆಲಸ ಅದು ಲೂಟಿ ಮಾತ್ರ. ಕೆಲಸ ಮಾಡುವುದು ನಾವು ಕಮಿಷನ್ ಹೊಡೆದಿದ್ದು ಸುಧಾಕರ್ ಎಂದು ವಾಗ್ದಾಳಿ ನಡೆಸಿದರು.
ಹೇಳಿ ಕೇಳಿ ಸುಧಾಕರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದ ನಂತರ ಪಕ್ಷ ತೊರೆದು ಕೇಸರಿ ಪಡೆ ಸೇರಿದವರು. ಆದರೆ ಸುಧಾಕರ್ಗೆ ಟಿಕೆಟ್ ನೀಡಿದ ಬಗ್ಗೆ ಸಿದ್ದರಾಮಯ್ಯಗೆ ಪಶ್ಚಾತಾಪ ಇದೆಯಂತೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಡಾ.ಕೆ.ಸುಧಾಕರ್ ಒಬ್ಬ ಫ್ರಾಡ್, ಅವರಿಗೆ ಟಿಕೆಟ್ ನೀಡಬೇಡಿ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಆದರೂ ನಾವು ಟಿಕೆಟ್ ನೀಡಿದ್ದೆವು. ಆದರೆ ಇಂದು ಸುಧಾಕರ್ಗೆ ಟಿಕೆಟ್ ನೀಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ, ನಾನು ಕೂಡ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಬರೀ ಡ್ರಾಮ ಅಷ್ಟೆ, ಸಿದ್ದು ನಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಬಿ.ಎಸ್.ಯಡಿಯೂರಪ್ಪ
ಸುಧಾಕರ್ ಮತ್ತೆ ಶಾಸಕ ಆಗಬಾರದು. ಸುಧಾಕರ್ನನ್ನು ಚುನಾವಣೆಯಲ್ಲಿ ಸೋಲಿಸುವಂತವರನ್ನು ಅವರ ವಿರುದ್ಧ ಕಣಕ್ಕಿಳಿಸಿ. ನಿಮಗೆ ದಮ್ಮಯ್ಯ ಅಂತೀನಿ ಸುಧಾಕರ್ನನ್ನು ಸೋಲಿಸಿ. ಜನರು ಯಾರಿಗೆ ಹೇಳುತ್ತೀರೋ ಅವರಿಗೆ ಟಿಕೆಟ್ ಕೋಡುತ್ತೇನೆ ಎಂದರು. ಈ ವೇಳೆ ಕೊತ್ತುರು ಮಂಜುನಾಥ ಹೆಸರು ಕಾರ್ಯಕರ್ತರು ಕೂಗಿದರು. ಈ ವೇಳೆ ಕೊತ್ತೂರ ಮಂಜುನಾಥ ಅವರು ಎದ್ದು ನಿಂತರು.
ಬಾಂಬೆಗೆ ಓಡಿಹೋದ ಸುಧಾಕರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾನೆ: ಸಿದ್ದರಾಮಯ್ಯ
ಆಪರೇಷನ್ ಕಮಲಕ್ಕೆ ಬಲಿಯಾಗಿ ರಾತ್ರಿ 1 ಗಂಟೆ ಸುಮಾರಿಗೆ ಪ್ರಮಾಣ ಮಾಡಿ ಬೆಳಗ್ಗೆ ಬಾಂಬೆಗೆ ಓಡಿಹೋದ ಸುಧಾಕರ್ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮ ಜೊತೆಯಲ್ಲೇ ಇದ್ದ. ಆಗ ಸುಮ್ಮನಿದ್ದು ಈಗ ಆರೋಪ ಮಾಡುತ್ತಿದ್ದಾನೆ ಈ ಆಸಾಮಿ ಎಂದು ಏಕವಚನದಲ್ಲೇ ಸುಧಾಕರ್ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.
ಲೋಕಾಯುಕ್ತ ಮುಚ್ಚಿರಲಿಲ್ಲ, ಅದು ಇತ್ತು ಎಂದ ಸಿದ್ದರಾಮಯ್ಯ
ನಿಮ್ಮ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಜನಜನಿತವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ. ನಮ್ಮ ಸರ್ಕಾರದ್ದು ಕೂಡ ತನಿಖೆ ನಡೆಸಿ ಎಂದು ಸವಾಲು ಹಾಕಿದರು. ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ನಾವು ಲೋಕಾಯುಕ್ತ ಕ್ಲೋಸ್ ಮಾಡಿದ್ದು ನಾವು ಅಂತ ಹೇಳುತ್ತಿದ್ದಾರೆ. ಲೋಕಾಯುಕ್ತ ಮುಚ್ಚಿರಲಿಲ್ಲ ಅದು ಇತ್ತು. ಕೋರ್ಟ್ ಆದೇಶದ ಮೇಲೆ ಲೋಕಾಯುಕ್ತ ಮುಚ್ಚಬೇಕಾಯಿತು. ದೇಶದ ಹಲವು ರಾಜ್ಯಗಳಲ್ಲಿ ಎಸಿಬಿ ಇದೆ, ಇದಕ್ಕೆ ಏನ್ ಹೇಳುತ್ತೀಯಾ ಸುಧಾಕರ್ ಎಂದು ಪ್ರಶ್ನಿಸಿದರು.
ಸಿಎಂ ಸುಧಾಕರ್ ಎಂದ ಸಿದ್ದರಾಯ್ಯ
ಭಾಷಣ ಮಾಡುವ ಅಬ್ಬರದಲ್ಲಿ ಸಿದ್ದರಾಮಯ್ಯ ಅವರು ಸುಧಾಕರ್ ಅವರನ್ನು ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಟೀಕಾಪ್ರಹಾರ ನಡೆಸುವ ಭರದಲ್ಲಿ ಕರ್ನಾಟಕದ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದರೆ ಅದು ಮುಖ್ಯಮಂತ್ರಿ ಸುಧಾಕರ್ ಎಂದು ಹೇಳಿಕೆ ನೀಡಿದ್ದಾರೆ. ಬಾಯಿತಪ್ಪಿ ಮಂತ್ರಿ ಎನ್ನುವ ಬದಲು ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 pm, Mon, 23 January 23