Karnataka Assembly Poll 2023: ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೇಂದ್ರ ಚುನಾವಣಾಧಿಕಾರಿಗಳಿಂದ ಪೂರ್ವ ತಯಾರಿ ಪರಿವೀಕ್ಷಣೆ
ಕೇಂದ್ರ ಚುನಾವಣೆ ಆಯೋಗದ ಅಧಿಕಾರಿಗಳು ಕರ್ನಾಟಕ ವಿಧಾನಸಭೆ ಚುನಾವಣೆಯ ಪೂರ್ವ ತಯಾರಿ ಪರಿವೀಕ್ಷಣೆ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.
ಬೆಂಗಳೂರು: ಒಂದೆಡೆ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು ರಾಜ್ಯ ರಾಜಕಾರಣದಲ್ಲಿ ರಂಗೇರುತ್ತಿದೆ. ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗ (central election commission) ಸಹ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು(ಜನವರಿ 03) ವಿಧಾನಸಭೆ ಚುನಾವಣೆ ಪೂರ್ವ ತಯಾರಿ ಪರಿವೀಕ್ಷಣೆ ಮಾಡಿದೆ.
ವಿಧಾನಸಭೆ ಚುನಾವಣೆ ಪೂರ್ವ ತಯಾರಿ ಕಾರ್ಯಗಳ ಪರಿವೀಕ್ಷಣೆಗೆ ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು, ಇಂದು 224 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅವರ ಸಂಬಂಧಿಸಿದ ಅಧಿಕಾರಿಗಳ ತಂಡಗಳ ಜೊತೆ ವರ್ಚ್ಯುಯಲ್ ಮೂಲಕ ಸಭೆ ನಡೆಸಿದರು.
ಇದೇ ತಿಂಗಳು ಪ್ರಕಟವಾಗಲಿರುವ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಅಂತಿಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಮೃತ ಪಟ್ಟವರ ಹೆಸರುಗಳನ್ನು ತೆಗೆದು ಹಾಕುವುದು, ವಿಳಾಸ ಬದಲಾದವರ ಹೆಸರುಗಳ ವರ್ಗಾವಣೆ ಮತ್ತು ಹೊಸ ಯುವ ಮತದಾರರ ಹೆಸರುಗಳ ಸೇರ್ಪಡೆ ಕುರಿತಂತೆ ಅನುಸರಿಸಬೇಕಾದ ವಿಧಾನಗಳ ಕುರಿತು ಹೆಚ್ಚು ಒತ್ತು ನೀಡುವಂತೆ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆ ತಯಾರಿ: ಹೈದರಾಬಾದ್ನಿಂದ ಬೆಂಗಳೂರಿಗೆ ಬಂದ ಮತಯಂತ್ರಗಳು
ಮೈಸೂರಿಗೆ ಬಂದ ಇವಿಎಂ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣ ರಂಗೇರಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಚುನಾವಣೆ ತಯಾರಿಯಲ್ಲಿ ತೊಡಗಿಕೊಂಡಿವೆ. ಇದರ ಮಧ್ಯೆ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಮೈಸೂರು (Mysuru) ಜಿಲ್ಲೆಗೆ ಹೊಸ ಇವಿಎಂ (EVM Machines) ಗಳು ಬಂದಿವೆ.
ಬೆಂಗಳೂರಿಗೆ ಬಂದ ಮತಯಂತ್ರಗಳು
ಮೊದಲ ಹಂತದಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಮತಯಂತ್ರಗಳು (voting machines) ಆಗಮಿಸಿವೆ. 7,465 ಬ್ಯಾಲೆಟ್ ಯೂನಿಟ್, 5,558 ಕಂಟ್ರೋಲ್ ಯೂನಿಟ್ ಯಂತ್ರಗಳು ಬಂದಿವೆ. ಎರಡನೇ ಹಂತದಲ್ಲಿ ವಿವಿ ಪ್ಯಾಟ್ಗಳು ಬರಲಿವೆ. ಬೆಂಗಳೂರಿಗೆ ಬಂದಿರುವ 7,465 ಬ್ಯಾಲೆಟ್ ಯೂನಿಟ್, 5,558 ಕಂಟ್ರೋಲ್ ಯೂನಿಟ್ ಯಂತ್ರಗಳನ್ನು ಕಂದಾಯ ಭವನದ ಸ್ಟ್ರಾಂಗ್ ರೂಮ್ನಲ್ಲಿ ಸಿಬ್ಬಂದಿ ಮತಯಂತ್ರಗಳನ್ನು ಇಟ್ಟಿದ್ದಾರೆ.
ಈ ಸ್ಟ್ರಾಂಗ್ ರೂಂ ಅನ್ನು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಪರಿಶೀಲಿಸಿದ್ದಾರೆ. ಸ್ಟ್ರಾಂಗ್ ರೂಂಗೆ ದಿನದ 24 ಗಂಟೆಯೂ ಭದ್ರತೆ, ಸಿಸಿಟಿವಿ ಕಣ್ಗಾವಲು ಇರುತ್ತದೆ. ಭದ್ರತೆಗೆ ರಾತ್ರಿ, ಬೆಳಗ್ಗೆ ಪಾಳಯದಲ್ಲಿ 4 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.