ಹಾಸನದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಘೋಷಣೆ
ಹಾಸನ ಟಿಕೆಟ್ ಫೈಟ್ ಮಧ್ಯೆ ಜಿಲ್ಲೆಯಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಎ ಮಂಜುಗೆ ಜೆಡಿಎಸ್ ರೆಡ್ ಕಾರ್ಪೆಟ್ ಹಾಕಿದೆ. ಪಕ್ಷದ ಹಾಲಿ ಶಾಸಕರಿದ್ದರೂ ಸಹ ತಮ್ಮ ಕುಟುಂಬದ ರಾಜಕೀಯ ವಿರೋಧಿ ಮಂಜುಗೆ ,ಕುಮಾರಸ್ವಾಮಿ ಟಿಕೆಟ್ ಆಫರ್ ನೀಡಿದ್ದು, ಸಂಚಲನ ಮೂಡಿಸಿದೆ.
ಬೆಂಗಳೂರು/ಹಾಸನ: ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಟಿಕೆಟ್ಗಾಗಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಹಾಸನ ಜಿಲ್ಲಾ ಜೆಡಿಎಸ್ನಲ್ಲಿ (Hassan JDS Politics) ರಾಜಕೀಯ ಬಿರುಸು ಪಡೆದುಕೊಳ್ಳುತ್ತಿದೆ. ಹಾಸನ ಜೆಡಿಎಸ್ ಟಿಕೆಟ್ಗಾಗಿ ಹೆಚ್ಡಿ ರೇವಣ್ಣ ಕುಟುಂಬ ಹಾಗೂ ಹೆಚ್ಡಿ ಕುಮಾರಸ್ವಾಮಿ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ಇದು ತಣ್ಣಗಾಗುವ ಮೊದಲೇ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಅರಕಲಗೂಡಿನಲ್ಲಿ ಹಾಲಿ ಜೆಡಿಎಸ್ ಶಾಸಕ ಎ. ಟಿ. ರಾಮಸ್ವಾಮಿ ಇದ್ದರೂ ಸಹ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ವಿರೋಧಿ ಎ.ಮಂಜುಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಮಂಜು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ಮೊದಲೇ ಹೆಚ್ಡಿಕೆ ಜೆಡಿಎಸ್ನಿಂದ ಟಿಕೆಟ್ ಆಫರ್ ನೀಡಿದ್ದು, ಹಾಸನ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು….ಇಂದು (ಫೆಬ್ರವರಿ 04) ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಅರಕಲಗೂಡು ಕ್ಷೇತ್ರದಿಂದ ಮಂಜು ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಈಗಾಗಲೇ ಮಂಜು ಜೊತೆ ಮಾತುಕತೆ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ. ಎಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಕಳೆದ ಎರಡು ವರ್ಷಗಳಿಂದ ನಮ್ಮ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ, ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂತಸ ವ್ಯಕ್ತಪಡಿಸಿದ ಎ ಮಂಜು
ಇನ್ನು ಈ ಬಗ್ಗೆ ಎ.ಮಂಜು ಪ್ರತಿಕ್ರಿಯಿಸಿದ್ದು, ನಾನು ಅವರು ಮಾತನಾಡಿದ್ದು ನಿಜ. ದೇವೇಗೌಡರು, ರೇವಣ್ಣ ಮಾತನಾಡಿದ್ದು ಸತ್ಯ, ನಾನು ಸೀರಿಯಸ್ ಆಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಾಂಗ್ರೆಸ್‌ನವರು ನಮ್ಮನ್ನು ಗುರುತಿಸುವಲ್ಲಿ ವಿಫಲರಾದರು. ನಾನು ಕಾಂಗ್ರೆಸ್‌ನಲ್ಲಿದ್ದಾಗ 16 ಜಿಲ್ಲಾ ಪಂಚಾಯಿತಿ, ಒಂದು ಎಂಎಲ್‌ಸಿ ಗೆಲ್ಲಿಸಿ ದಾಖಲೆ ಮಾಡಿದ್ದೆ. ಅದನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರು. ನಾನು ಸುರ್ಜೆವಾಲ, ಡಿಕೆಶಿ ಜೊತೆ ಮಾತನಾಡಿದ್ದೆ. ಅವರು ಹೊಳೆನರಸೀಪುರದಲ್ಲಿ ನಿಲ್ಲು ಎಂದಿದ್ದರು. ನಾನು ಅರಕಲಗೂಡು ಬಿಟ್ಟು ಹೋಗಲ್ಲ ಅಂದಿದ್ದೆ. ಈಗ ಜೆಡಿಎಸ್ ನವರು ನನ್ನನ್ನು ಗುರುತಿಸಿದ್ದಾರೆ. ಕುಮಾರಸ್ವಾಮಿಗೆ ಅಭಾರಿಯಾಗಿರುತ್ತೇನೆ ಎಂದು ಸಂತಸ ವ್ಯಕ್ತಡಿಸಿದರು.
ಯಾವತ್ತು ಎ.ಮಂಜು ಒಂದೇ ರೀತಿನೇ ಇರೋದು. ನಾನು ದೇವೇಗೌಡರು, ರೇವಣ್ಣ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಮಗನಿಗೆ ಹೇಳೋದು ಇಷ್ಟೇ ನನ್ನ ತತ್ವ ಸಿದ್ದಾಂತದಲ್ಲಿ ಬದಲಾವಣೆ ಇಲ್ಲ. ಅವನಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ. ನನ್ನ ಫಾಲೋ ಮಾಡಿದ್ರೆ ಅವನಿಗೆ ಒಳ್ಳೆಯದು ಅಂತ ನನ್ನ ಭಾವನೆ. 1994 ನೇ ಇಸವಿಯಲ್ಲಿ ದೇವೇಗೌಡರಿಗೆ ಲೋಕಸಭಾ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ, ಮೂರು ಸಾವಿರ ಓಟಿನಲ್ಲಿ ಗೆದ್ದಾಗ ನಾನು ಸಹಾಯ ಮಾಡಿದ್ದೇನೆ. ನನಗೆ ರಾಜಕೀಯದಲ್ಲಿ ಶತ್ರನೂ ಇಲ್ಲ, ಮಿತ್ರನೂ ಇಲ್ಲ. ನಾನು ಕುಮಾರಸ್ವಾಮಿ ಹೇಳಿರುವುದನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.
ನಾನು ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂದು ತೀರ್ಮಾನ ಮಾಡಿದ್ದೆ. ಜನ ಯಾವುದಾದರೂ ಒಂದು ಪಕ್ಷದಿಂದ ಸ್ಪರ್ಧಿಸಬೇಕು ಎಂದಿದ್ದರು. ಅದರಂತೆ ನಾನು ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತೇನೆ. ಈ ಹಿಂದೆ HDK ಜತೆ ಚರ್ಚಿಸಿದ್ದೆ, ಆದ್ರೆ ಟಿಕೆಟ್ ಬಗ್ಗೆ ಮಾತಾಡಿರಲಿಲ್ಲ. ಆಗ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ಗೆ ಆಹ್ವಾನ ಮಾಡಿದ್ದು ನಿಜ. ಆಗ ನಾನು ನೋಡೋಣ ಜನರ ಜೊತೆ ಮಾತಾಡಿ ಹೇಳ್ತೀನಿ ಎಂದಿದ್ದೆ. ಕಾಂಗ್ರೆಸ್ ಅವಕಾಶ ಕೊಡಲಿಲ್ಲ, ಜೆಡಿಎಸ್ನವರು ಅವಕಾಶ ಕೊಟ್ಟಿದ್ದಾರೆ.
ಎ.ಮಂಜು ನಡೆದುಬಂದ ರಾಜಕೀಯ ಹಾದಿ
ಹಾಸನ ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದ ಎ ಮಂಜು ಜೆಡಿಎಸ್ನಿಂದ ಸ್ಪರ್ಧಿಸುವುದು ಖಚಿತವಾಗಿದೆ. 1999 ರಲ್ಲಿ ಬಿಜೆಪಿಯಿಂದ ಅರಕಲಗೂಡು ವಿಧಾನಸೌಧದಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2008 ಮತ್ತು 2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅರಕಲಗೂಡು ಶಾಸಕರಾಗಿ ಪುನರಾಯ್ಕೆಯಾಗಿದ್ದರು. ಅಲ್ಲದೇ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡು 2019 ರಲ್ಲಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಕೆಲ ತಿಂಗಳಿಂದ ಬಿಜೆಪಿಯಿಂದ ದೂರ ಉಳಿದಿದ್ದ ಎ ಮಂಜು, ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಕಾಂಗ್ರೆಸ್ ಸೇರ್ಪಡೆಗೆ ತಯಾರಿ ನಡೆಸಿದ್ದರು. ಆದ್ರೆ, ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಆಫರ್ ಸದುಪಯೋಗ ಪಡಿಸಿಕೊಳ್ಳಬೇಕು ತೀರ್ಮಾನಿಸಿದ್ದಾರೆ.