Karnataka Assembly Election 2023 Highlights: ಟಿಕೆಟ್ ತಪ್ಪಿರುವ ಕಾರಣ ಎಸ್ಎ ರಾಮದಾಸ್ ಅವರಿಗೆ ನೋವಾಗಿದೆ ಎಂದ ಸಂಸದ ಪ್ರತಾಪ್ ಸಿಂಹ
Breaking News Today Highlights Updates: ರಾಜಕೀಯ ಕುರುಕ್ಷೇತ್ರದಲ್ಲಿ ನಡೆಯುವ ಕ್ಷಣ ಕ್ಷಣದ ಬದಲಾವಣೆ, ಬೆಳವಣಿಗೆಯ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಬಿಸಿಲಿನ ತಾಪಮಾನ ಏರಿಕೆಯಾಗುವಂತೆ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಮುಖ ಮೂರು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿವೆ. ಟಿಕೆಟ್ ಕೈ ತಪ್ಪಿದಕ್ಕೆ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಇದರಲ್ಲಿ ಬಿಜೆಪಿಯ ಘಟಾನುಘಟಿ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಒಬ್ಬರು. ಈಗಾಗಲೆ ಶೆಟ್ಟರ್ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇಂದು (ಏ.17) ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದಲ್ಲಿದ್ದು, ನಿನ್ನೆ (ಏ.16) ಕೋಲಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
LIVE NEWS & UPDATES
-
Karnataka Assembly Election 2023 Live: ರಾಮದಾಸ್ ಅವರೇ ನನ್ನನ್ನು ಮನೆಮನೆಗೆ ಕರೆದೊಯ್ಯುತ್ತಾರೆ
ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀವತ್ಸಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ಬಿಜೆಪಿ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ ಎಂದು ಟಿವಿ9ಗೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹೇಳಿದರು. ರಾಮದಾಸ್ ಅವರೇ ನನ್ನನ್ನು ಮನೆಮನೆಗೆ ಕರೆದೊಯ್ಯುತ್ತಾರೆ. ರಾಮದಾಸ್ ಬಂಡಾಯದ ಬಾವುಟ ಹಾರಿಸಲ್ಲವೆಂಬ ವಿಶ್ವಾಸವಿದೆ. ಎಸ್.ಎ.ರಾಮದಾಸ್ರನ್ನು ಪಕ್ಷ ಶಾಸಕ, ಸಚಿವರಾಗಿ ಮಾಡಿದೆ ಎಂದು ಹೇಳಿದರು.
-
Karnataka Assembly Election 2023 Live: ರೋಣ ಮತಕ್ಷೇತ್ರಕ್ಕೆ ಹಾಲಿ ಶಾಸಕ ಕಳಕಪ್ಪ ಬಂಡಿಗೆ ಮಣೆ
ಗದಗ: ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ತೀವ್ರ ವಿರೋಧದ ನಡುವೆಯೂ ಹಾಲಿ ಶಾಸಕ ಕಳಕಪ್ಪಗೆ ಟಿಕೆಟ್ ಫೈನಲ್ ಆಗಿದೆ. ಜಿಲ್ಲೆಯ ರೋಣ ಮತಕ್ಷೇತ್ರಕ್ಕೆ ಹಾಲಿ ಶಾಸಕ ಕಳಕಪ್ಪ ಬಂಡಿಗೆ ಮಣೆ ಹಾಕಲಾಗಿದೆ. ರೋಣ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
-
Karnataka Assembly Election 2023 Live: ಬಿಜೆಪಿಗೆ ಮತ್ತೆ ಅಧಿಕಾರ ಕೊಟ್ಟರೆ ರೈತರ ಹೊಟ್ಟೆ ಮೇಲೆ ಹೊಡೆಯುತ್ತಾರೆ
ಚಿಕ್ಕಬಳ್ಳಾಫುರ: ಪುನಃ ಬಿಜೆಪಿಯವರಿಗೆ ಅಧಿಕಾರ ಕೊಟ್ಟರೆ ರೈತರ ಹೊಟ್ಟೆ ಮೇಲೆ ಹೊಡೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ. ಸಿ.ಪಿ.ಐ(ಎಂ) ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರದಲ್ಲಿ ಭಾಗಿಯಾಗಿ ಹೇಳಿದ್ದಾರೆ.
Karnataka Assembly Election 2023 Live: ಶೆಟ್ಟರ್ಗೆ ಟಿಕೆಟ್ ನೀಡದಿರಲು ಕಾರಣವೇನು? ಏಕೆ ಕಡೆಗಣಿಸಿದರು?
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಭ್ರಷ್ಟರಾ, ಸಿಡಿ ಇದೆಯಾ ಎಂದು ಶಿಲ್ಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಕಟ್ಟಿ ಹೊರಗೆ ಹೋಗಬೇಕಾದ ಸ್ಥಿತಿ ಕಂಡು ತೀವ್ರ ಬೇಸರವಾಗಿದೆ. ದೇವರು ನಮಗೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
Karnataka Assembly Election 2023 Live: ಶೆಟ್ಟರ್ ಕತ್ತಲ್ಲಿ ಕಾಂಗ್ರೆಸ್ ಶಾಲು ಹಾಕಿದ್ದನ್ನು ನೋಡಿ ಕಣ್ಣೀರು ಬಂತು
ಹುಬ್ಬಳ್ಳಿ: ಪತಿ ಶೆಟ್ಟರ್ ಕೊರಳಲ್ಲಿ ಕಾಂಗ್ರೆಸ್ ಬಾವುಟ ನೋಡಿ ನೋವಾಯಿತು ಎಂದು ಮಾಜಿ ಸಿಎಂ ಶೆಟ್ಟರ್ ಪತ್ಮಿ ಶಿಲ್ಪಾ ಶೆಟ್ಟರ್ ಹೇಳಿದ್ದಾರೆ. ಜೀವನದಲ್ಲಿ ಶಾಲು ಬದಲಾಗುತ್ತೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಶೆಟ್ಟರ್ ಕತ್ತಲ್ಲಿ ಕಾಂಗ್ರೆಸ್ ಶಾಲು ಹಾಕಿದ್ದನ್ನು ನೋಡಿ ಕಣ್ಣೀರು ಬಂತು ಎಂದಿದ್ದಾರೆ.
Karnataka Assembly Election 2023 Live: ಬಿಜೆಪಿ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ: ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಸುಭದ್ರವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಹೇಳಿದರು. ಸಿಎಂ, ರಾಜ್ಯ ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವರು ತೀರ್ಮಾನಿಸಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಗೆಲ್ಲುತ್ತೇವೆ. ಬಿಜೆಪಿ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಜಗದೀಶ್ ಶೆಟ್ಟರ್ ಜತೆ 6 ಚುನಾವಣೆಯಲ್ಲಿ ನಾನೂ ಕೆಲಸ ಮಾಡಿದ್ದೇನೆ. ಬಿಜೆಪಿ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.
Karnataka Assembly Election 2023 Live: ಸಿನಿಮಾನೇ ಬೇರೆ, ರಾಜಕೀಯವೇ ಬೇರೆ ಎಂದ ಸುರ್ಜೇವಾಲ
ಬೆಂಗಳೂರು: ಸುದೀಪ್ ಜಾಹೀರಾತುಗಳಿಗೆ ಚುನಾವಣಾ ಆಯೋಗ ನಿರ್ಬಂಧ ಹೇರಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕಿಡಿಕಾರಿದ್ದಾರೆ. ಬಿಜೆಪಿ ಸಮಾವೇಶಗಳಲ್ಲಿ ಖಾಲಿ ಚೇರ್‌ಗಳನ್ನು ನೋಡಬಹುದಾಗಿದೆ. ಹೀಗಾಗಿ ಸಿನಿಮಾ ನಟರನ್ನು ಚುನಾವಣಾ ಪ್ರಚಾರಕ್ಕೆ ಕರೆತರುತ್ತಿದ್ದಾರೆ. ಸಿನಿಮಾನೇ ಬೇರೆ, ರಾಜಕೀಯವೇ ಬೇರೆ ಎಂದು ರಣದೀಪ್ ಸುರ್ಜೇವಾಲ ವಾಗ್ದಾಳಿ ಮಾಡಿದ್ದಾರೆ.
Karnataka Assembly Election 2023 Live: ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ-ಸುರ್ಜೇವಾಲ
ಬೆಂಗಳೂರು: ರಾಜ್ಯ ಸರ್ಕಾರ ಚುನಾವಣಾ ಆಯೋಗದ ನಿಯಮ ಗಾಳಿಗೆ ತೂರಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕಿಡಿಕಾರಿದ್ದಾರೆ. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಟೆಂಡರ್ ಹಂಚಿಕೆಯಲ್ಲಿ ನಿರತವಾಗಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ಹೇಳಿದರು.
Karnataka Assembly Election 2023 Live: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮಾತು ಕೇಳಿ ಆಘಾತವಾಯ್ತು
ಹುಬ್ಬಳ್ಳಿ: ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ ವರಿಷ್ಠರಿಗೆ ಕೇಳಿದ್ದೆ. ನಿಮಗೆ ಟಿಕೆಟ್ ಕೊಡಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೇಳಿದ್ದರು. ನೀವೇ ಚುನಾವಣೆಗೆ ಆಸಕ್ತಿಯಿಲ್ಲವೆಂದು ಹೇಳಿಬಿಡಿ ಸಹ ಎಂದು ಹೇಳಿದ್ದರು. ಒಂದು ಪತ್ರ ಕಳುಹಿಸುತ್ತೇವೆಂದು ಸಹಿ ಮಾಡಿ ಕಳಿಸಿ ಎಂದಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮಾತು ಕೇಳಿ ಆಘಾತವಾಯ್ತು. ಸೌಹಾರ್ದಯುತವಾಗಿ ಕರೆದು ಮಾತಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರ ತಂದಿದೆ.
Karnataka Assembly Election 2023 Live: ಜಗದೀಶ್ ಶೆಟ್ಟರ್ ಆಪ್ತ ಮಲ್ಲಿಕಾರ್ಜುನ ಸಾಹುಕಾರ್ ರಾಜೀನಾಮೆ
ಜಗದೀಶ್ ಶೆಟ್ಟರ್ ಆಪ್ತ ಮಲ್ಲಿಕಾರ್ಜುನ ಸಾಹುಕಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಲ್ಲಿಕಾರ್ಜುನ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
Karnataka Assembly Election 2023 Live: ನಿಪ್ಪಾಣಿ BJP ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ ನಾಮಪತ್ರ
ಚಿಕ್ಕೋಡಿ: ಜಿಲ್ಲೆಯ ನಿಪ್ಪಾಣಿ ಬಿಜೆಪಿ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ಸಚಿವೆ ಶಶಿಕಲಾ ಜೊಲ್ಲೆ ನಾಮಪತ್ರ ಸಲ್ಲಿಸಿದರು. ಪ್ರಮುಖ ಮುಖಂಡರ ಜೊತೆ ಆಗಮಿಸಿ ನಿಪ್ಪಾಣಿ ತಹಶಿಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಏ.20ರಂದು ಬೆಂಬಲಿಗರ ಜೊತೆಗೆ ಬೃಹತ್ ರ‍್ಯಾಲಿ ನಡೆಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
Karnataka Assembly Election 2023 Live: ರಾತ್ರಿ ಅಥವಾ ನಾಳೆ ಉಳಿದ 2 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ
ಬೆಂಗಳೂರು: ರಾತ್ರಿ ಅಥವಾ ನಾಳೆ ಉಳಿದ 2 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಬಹುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಯಾರೇ ಪಕ್ಷ ಬಿಡಲಿ ನಾವಂತೂ ಸರ್ಕಾರ ರಚಿಸುವುದು ನಿಶ್ಚಿತ. ನಾಳೆ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬರುತ್ತಾರೆ. ರಾಷ್ಟ್ರೀಯ ನಾಯಕರ ಪ್ರವಾಸ ಬಳಿಕ ನಮ್ಮ ಪರ ವಾತಾವರಣ ನಿರ್ಮಾಣವಾಗಿದೆ. 2-3 ದಿನಗಳ ಬಳಿಕ ಹುಬ್ಬಳ್ಳಿಗೆ ಹೋಗುತ್ತೇನೆ ಎಂದು ಹೇಳಿದರು.
Karnataka Assembly Election 2023 Live: ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಹಿಂದಿನ 2 ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಇದೀಗ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
BJP Candidates List: ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಟಿಕೆಟ್? ಇಲ್ಲಿದೆ ನೋಡಿ
Karnataka Assembly Election 2023 Live: ನನ್ನ ವಿರುದ್ಧ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ
ಹುಬ್ಬಳ್ಳಿ: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಹಾನಿ ಆಗಿದೆ.
Karnataka Assembly Election 2023 Live: ಗ್ಯಾರೆಂಟಿ ಕಾರ್ಡ್ ಬಗ್ಗೆ ಡಿಕೆ ಶಿವಕುಮಾರ್ ಭರವಸೆ
ಮಡಿಕೇರಿ: ನಾವು ರಾಜ್ಯದ ಜನತೆಗೆ ಹಲವು ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದೇವೆ. ತಿಂಗಳಿಗೆ 200 ಯೂನಿಟ್ ವಿದ್ಯುತ್ಚ್ಛಕ್ತಿ ಉಚಿತ ನೀಡುತ್ತೇವೆ. ಮಹಿಳೆಯರಿಗೆ ತಿಂಗಳಿಗೆ 2000 ರೂ ಹಣ ನೀಡುತ್ತೇವೆ. ತಿಂಗಳಿಗೆ ಹತ್ತು ಕೆಜಿ ಅಕ್ಕಿ ಉಚಿತ, ಪದವೀಧರರಿಗೆ ತಿಂಗಳಿಗೆ 3000 ರೂ, ಡಿಪ್ಲೊಮಾ ಪದವಿದರರಿಗೆ 1.500 ರೂ. ಈ ಗ್ಯಾರಂಟಿ ನಾವು ನೀಡಲಿಲ್ಲ ಎಂದಾದರೆ ಇನ್ನು ಮುಂದೆ ಯಾವತ್ತೂ ಓಟು ಕೇಳಲು ಬರುವುದಿಲ್ಲ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
Karnataka Assembly Election 2023 Live: ಜಗದೀಶ್ ಶೆಟ್ಟರ್ ನಿಲುವಿನ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ
ಉಡುಪಿ: ಜಗದೀಶ್ ಶೆಟ್ಟರ್ ನಿಲುವಿನ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಉಡುಪಿಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಶೆಟ್ಟರ್ಗೆ ಬಿಜೆಪಿ ಎಲ್ಲಾ ರೀತಿಯ ಅವಕಾಶ ನೀಡಿದೆ. ಅವಕಾಶ ಸಿಗದಿದ್ದಾಗ ಪಕ್ಷಾಂತರ ಒಳ್ಳೆಯ ಬೆಳವಣಿಗೆ ಅಲ್ಲ. ಜಗದೀಶ್ ಶೆಟ್ಟರ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ನಿಂದ ಶೆಟ್ಟರ್ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
Karnataka Assembly Election 2023 Live: ನಾಮಪತ್ರ ಸಲ್ಲಿಸಿದ ಸಂತೋಷ್ ಲಾಡ್
ಧಾರವಾಡ: ಇವತ್ತು ನಾಮಪತ್ರ ಸಲ್ಲಿಸಿದ್ದೇನೆ. ಜನರನ್ನು ಈ ಬಾರಿ ನಾವ ಕರೆಸಿಲ್ಲ ಅವರೇ ಬಂದಿದ್ದಾರೆ ಎಂದು ಜಿಲ್ಲೆಯ ಕಲಘಟಗಿಯಲ್ಲಿ ಸಂತೋಷ್ ಲಾಡ್ ಹೇಳಿದರು. ಈ ಬಾರಿ ಒಳ್ಳೆ ಪ್ರತಿಫಲ ಸಿಕ್ಕಿದೆ. ಜಗದೀಶ್ ಶೆಟ್ಟರ್ ಅವರಿಗೆ ಅವರದೆ ಆದ ಬೆಂಬಲಿಗರು ಇದಾರೆ. 30 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಂದ ನಾವು ಕಲಿಯಬೇಕು ಎಂದು ಹೇಳಿದರು.
Karnataka Assembly Election 2023 Live: ಶಾಮನೂರ ಶಿವಶಂಕರಪ್ಪ ನಾಮಪತ್ರ ಸಲ್ಲಿಕೆ
ದಾವಣಗೆರೆ: ಕಾಂಗ್ರೆಸ್ ಹಿರಿಯಮುಖಂಡ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಗರದ ಮಹಾನಗರ ಪಾಲಿಕೆಯಲ್ಲಿ ಇರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಅಧಿಕಾರಿ ರೇಣುಕಾ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸಾಂಕೇತಿಕವಾಗಿ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಜನ ಸಂಖ್ಯೆ ಇರುವ ಮುಸ್ಲಿಂ , ಲಿಂಗಾಯತ, ಮರಾಠ ಸೇರಿದ ಪ್ರಮುಖರ ಜೊತೆ ಬಂದು ನಾಮಪತ್ರ ಸಲ್ಲಿಸಿದರು.
Karnataka Assembly Election 2023 Live: ಹು-ಧಾ ಸೆಂಟ್ರಲ್ ಕ್ಷೇತ್ರ ಸೇರಿ 12 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟ
ಧಾರವಾಡ: ಬಾಕಿ ಉಳಿದ 12 ಕ್ಷೇತ್ರಗಳಿಗೆ ಇಂದೇ ಅಭ್ಯರ್ಥಿ ಪಟ್ಟಿ ಪ್ರಕಟ ಆಗುತ್ತದೆ ಎಂದು ಜಿಲ್ಲೆಯ ನವಲಗುಂದದಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರ ಸೇರಿ 12 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟವಾಗಲಿದೆ. ಶೀಘ್ರದಲ್ಲೇ ಮೋದಿ, ಅಮಿತ್ ಶಾ ಚುನಾವಣಾ ರ‍್ಯಾಲಿ ಮಾಡುತ್ತಾರೆ. ಎಲ್ಲೆಲ್ಲಿ ರ‍್ಯಾಲಿ ಮಾಡುತ್ತಾರೆ ಎಂಬುದು ಏ.21ರಂದು ಫೈನಲ್ ಆಗುತ್ತೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಡಬಾರದಿತ್ತು, ಹೋಗಿದ್ದಾರೆ. ಪಕ್ಷ ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಎಂದು ಹೇಳಿದರು.
Karnataka Assembly Election 2023 Live: ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಕಣ್ಣೀರು
ಹುಬ್ಬಳ್ಳಿ: ಕಾಂಗ್ರೆಸ್ ಸೇರ್ಪಡೆ ನಂತರ ನಿವಾಸಕ್ಕೆ ಹಿಂದಿರುಗಿದ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಕಣ್ಣೀರು ಹಾಕಿದ್ದಾರೆ. ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ನಿವಾಸದಲ್ಲಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಜಗದೀಶ್ ಶೆಟ್ಟರ್ ಕೂಡ ಭಾವುಕರಾಗಿದ್ದಾರೆ. ಜಗದೀಶ್ ಶೆಟ್ಟರ್ ದಂಪತಿಯನ್ನು ಬೆಂಬಲಿಗರು, ಅಭಿಮಾನಿಗಳು ಸಂತೈಸಿದ್ದಾರೆ.
Karnataka Assembly Election 2023 Live: ಮಂಗಳೂರು ಕ್ಷೇತ್ರದ SDPI ಅಭ್ಯರ್ಥಿಯಾಗಿ ರಿಯಾಜ್ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ನ ಯು.ಟಿ.ಖಾದರ್ ಎದುರು ರಿಯಾಜ್ ಫರಂಗಿಪೇಟೆ ಸ್ಪರ್ಧೆಗಿಳಿಯಲಿದ್ದಾರೆ. ಎಸ್ಡಿಪಿಐ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಆಗಮಿಸಿ ಉಳ್ಳಾಲ ನಗರಸಭೆ ಕಚೇರಿಯಲ್ಲಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಸಿದ್ದಾರೆ.
Karnataka Assembly Election 2023 Live: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಡಗುತ್ತೆ
ಬೀದರ್: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಡಗುತ್ತೆ ಎಂದು ಜಿಲ್ಲೆಯ ಹುಮ್ನಾಬಾದ್ನಲ್ಲಿ ರಾಹುಲ್ ಗಾಂಧಿ ಹೇಳಿದರು. ಬಿಜೆಪಿ ಶಾಸಕರನ್ನು ಖರೀದಿ ಮಾಡುತ್ತೆ. ರಾಜ್ಯದಲ್ಲಿ ಬಿಜೆಪಿ 40ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬಾರದು. ನಾನು ಎಂದಿಗೂ ಯಾವ ಸಮುದಾಯವನ್ನೂ ಅಪಮಾನ ಮಾಡಿಲ್ಲ ಎಂದು ಹೇಳಿದರು.
Karnataka Assembly Election 2023 Live: ಚನ್ನಪಟ್ಟಣ JDS ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲ್ಲಿಸಿದ್ದಾರೆ.
Karnataka Assembly Election 2023 Live: ಹೆಚ್.ಕೆ.ಪಾಟೀಲ್ ನಾಮಪತ್ರ ಸಲ್ಲಿಕೆ
ಗದಗ: ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಕೆ.ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಹೆಚ್.ಕೆ.ಪಾಟೀಲ್ ನಾಮಪತ್ರ ಸಲ್ಲಿಸಿದರು.
Karnataka Election Live: ಮನೆದೇವರ ಮುಂದೆ ಕುಳಿತು ನಾಮಪತ್ರಕ್ಕೆ ಸಹಿ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಬೆಳಗಾವಿ ಗ್ರಾಮಾಂತರ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಚಿಕ್ಕಹಟ್ಟಿಹೊಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರಕ್ಕೆ ಸಹಿ ಮಾಡಿದ್ದಾರೆ. ನಾಳೆ ತಹಶಿಲ್ದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
Karnataka Election Live: ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ, ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಏಪ್ರಿಲ್ 19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
Karnataka Election Live: ಗೌರಿ ಶಂಕರ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂಕೋರ್ಟ್
ಬೆಂಗಳೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನಕಲಿ ಬಾಂಡ್ ವಿತರಿಸಿ ಮತದಾರರಿಗೆ ಆಮಿಷ ಒಡ್ಡಿದ ಆರೋಪ ಸಾಬೀತಾಗಿ ಶಾಸಕ ಸ್ಥಾನವನ್ನು ಅಸಿಂಧುಗೊಂಡಿತ್ತು.
Karnataka Election Live: ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಕೆ
ಬೆಂಗಳೂರು: ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಸಿದ್ದಾರೆ. ಗೂಡ್ಶೆಡ್ ರಸ್ತೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
Karnataka Election Live: ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ನಾಮಪತ್ರ ಸಲ್ಲಿಕೆ
ಕಲಬುರಗಿ: ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಬೆಂಬಲಿಗರ ಜತೆ ಆಗಮಿಸಿ ಜಿಲ್ಲೆಯ ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ನಾಮಪತ್ರ ಸಲ್ಲಿಸಿದ್ದಾರೆ.
Karnataka Election Live: ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ನಾಮಪತ್ರ ಸಲ್ಲಿಕೆ
ಧಾರವಾಡ: ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ನಾಮಪತ್ರ ಸಲ್ಲಿಸಿದ್ದಾರೆ.
Karnataka Election Live: ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ ನಾಮಪತ್ರ ಸಲ್ಲಿಕೆ
ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ ಮಲ್ಲೇಶ್ವರಂನ BWSSB ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
Karnataka Election Live: ನಾಮಪತ್ರ ಸಲ್ಲಿಸಿದ ಹೆಚ್ಡಿ ರೇವಣ್ಣ
ಹಾಸನ: ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ ರೇವಣ್ಣ ಸಹಾಯಕ ಚುನಾವಣಾಧಿಕಾರಿ ನಯೀಮ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
Karnataka Election Live: ಕುಂದಗೋಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಚಿಕ್ಕನಗೌಡರ್
ಹುಬ್ಬಳ್ಳಿ: ಕುಂದಗೋಳ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಐ.ಚಿಕ್ಕನಗೌಡ್ರ ನಾಮಪತ್ರ ಸಲ್ಲಿಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
Karnataka Election Live: ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ: ಸುಮಲತಾ ಅಂಬರೀಶ್
ಮಂಡ್ಯ: ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ. ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
Karnataka Election Live: ಪಕ್ಷೇತರವಾಗಿ ಸ್ಪರ್ಧಿಸಲಿರುವ ಅಖಂಡ ಶ್ರೀನಿವಾಸ್ ಮೂರ್ತಿ
ಬೆಂಗಳೂರು: ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
Karnataka Election Live: ಕೋಲಾರದಲ್ಲಿ ವರ್ತೂರ್ ಪ್ರಕಾಶ್ ನಾಮಪತ್ರ ಸಲ್ಲಿಕೆ
ಕೋಲಾರ: ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಕುರುಡುಮಲೆ ಗಣೇಶ, ಕೋಲಾರಮ್ಮ, ಸೋಮೇಶ್ವರ ದೇವಾಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Karnataka Election Live: ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ನಾಮಪತ್ರ ಸಲ್ಲಿಕೆ
ಶಿವಮೊಗ್ಗ: ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ನಾಮಪತ್ರ ಸಲ್ಲಿಕೆ ಹಿನ್ನಲೆ ರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡ ಭಾಗಿ..
Karnataka Election Live: ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್: ಏ.18 ರಂದು ಹುಬ್ಬಳ್ಳಿಗೆ ಜೆಪಿ ನಡ್ಡಾ ಭೇಟಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇನಾಳೆ (ಏ.18) ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
Karnataka Election Live: ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ: ಸಿಎಂ ಬೊಮ್ಮಾಯಿ
ಬೆಂಗಳೂರು: ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ. ಚುನಾವಣೆ ವೇಳೆ ಕಾಂಗ್ರೆಸ್‌ಗೆ ಲಿಂಗಾಯತರ ಬಗ್ಗೆ ಪ್ರೀತಿ ಬಂದಿದೆ. ಬಿಎಸ್ ಯಡಿಯೂರಪ್ಪ ಅವರು ಇರುವವರೆಗೂ ಲಿಂಗಾಯಿತ ಸಮುದಾಯ ನಮನ್ನ ಬಿಟ್ಟು ಹೋಗೋದಿಲ್ಲ ಎಂದು ಬೆಂಗಳೂಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Karnataka Election Live: ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರೋದು ಮನಸಿಗೆ ನೋವಾಗಿದೆ: ಪ್ರದೀಪ್ ಶೆಟ್ಟರ್
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರೋದು ಮನಸಿಗೆ ನೋವಾಗಿದೆ. ನಾನು ಬಿಜೆಪಿಯಲ್ಲಿ ಇರುತ್ತೇನೆ. ಮನಸ್ಸಿಗೆ ನೋವಾಗಿದೆ ಮಾತೇ ಬರ್ತಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷನೇ ಬೇರೆ ವಯಕ್ತಿಕ ಬೇರೆ. ಈ ಬಗ್ಗೆ ಜಾಸ್ತಿ ನಾನು ಮಾತಾಡಲ್ಲ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ.
Karnataka Election Live: ಕಾಂಗ್ರೆಸ್ ಬಿ ಫಾರಂ ಪಡೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್
ಬೆಂಗಳೂರು: ಜಗದೀಶ್ ಶೆಟ್ಟರ್ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆದರು.
Karnataka Election Live: ಸ್ವಾರ್ಥಕ್ಕಾಗಿ ಶೆಟ್ಟರ್ರನ್ನು ಬಲಿಕೊಡುವ ಕೆಲಸ ಮಾಡಲಾಗಿದೆ: ಸಿದ್ದರಾಮಯ್ಯ
ಬೆಂಗಳೂರು: ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಕಾಂಗ್ರೆಸ್‌ಗೆ ಸ್ವಾಗತ ಮಾಡುತ್ತೇನೆ. ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ, ನಾನು ವಿಪಕ್ಷ ನಾಯಕನಾಗಿದ್ದೆ. ಸ್ವಾರ್ಥಕ್ಕಾಗಿ ಶೆಟ್ಟರ್ರನ್ನು ಬಲಿಕೊಡುವ ಕೆಲಸ ಮಾಡಲಾಗಿದೆ. ಶೆಟ್ಟರ್ ಉತ್ತರ ಕರ್ನಾಟಕಕ್ಕೆ ಅಷ್ಟೇ ಸೀಮಿತವಾದ ನಾಯಕರಲ್ಲ. ಜಗದೀಶ್ ಶೆಟ್ಟರ್ ಇಡೀ ರಾಜ್ಯದ ನಾಯಕರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Election Live: ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ: ಸಿಟಿ ರವಿ
ಚಿಕ್ಕಮಗಳೂರು: ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನಿಲ್ಲ ಸ್ಥಾನ ನೀಡಬಹುದು ಅದನ್ನೆಲ್ಲ ಕೊಟ್ಟಿದೆ. ಜಗದೀಶ್ ಶೆಟ್ಟರ್ ಪಕ್ಷ ತೊರೆದು ಯಾವ ಮೆಸೇಜ್ ನೀಡಿದರು. ಸೈದ್ಧಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರಲಿಲ್ಲವಾ ? ವೈಯಕ್ತಿಕ ಲಾಭ ನಷ್ಟವನ್ನು ಹಾಕಿ ನನಗೆ ಲಾಭ ಆದರೆ ಮಾತ್ರ ಬಿಜೆಪಿ. ಇನ್ನೊಬ್ಬರಿಗೆ ಅಂದ್ರೆ ಬಿಜೆಪಿ ಅಲ್ಲ ಎಂಬ ಮನಸ್ಥಿತಿ ಆಶ್ಚರ್ಯ ತರಿಸಿದೆ. ಜಗದೀಶ್ ಶೆಟ್ಟರ್ ಅವರಿಂದ ಇಂತಹದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
Karnataka Election Live: ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ, ಅದಕ್ಕಾಗಿ ಹೊರ ಹಾಕಿದರು: ಜಗದೀಶ್ ಶೆಟ್ಟರ್
ಬೆಂಗಳೂರು: ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದೇನೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಿದ್ದೇನೆ, ನನಗೆ ಅಧಿಕಾರ ಬೇಕಿಲ್ಲ. ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಂಟ್ರೋಲ್ನಲ್ಲಿ ಇದೆ. ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡ್ತಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಈ ರೀತಿ ಮಾಡಿದರು ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
Karnataka Election Live: ಬಿಜೆಪಿ ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ: ಜಗದೀಶ್ ಶೆಟ್ಟರ್
ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರ್ತಾ ಇದ್ದೇನೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಹಳ ಜನರಿಗೆ ಅಶ್ಚರ್ಯ ಆಗಿದೆ. ಯಾಕೆ ಕಾಂಗ್ರೆಸ್ ಸೇರ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಹಲವಾರು ತಿಂಗಳ ಹಿಂದೆ ಹಿರಿಯ ನಾಯಕನಾಗಿ ನನಗೆ ಏನು ವೇದನೆ ಆಗಿದೆ ಅದು ಯಾರ ಗಮನಕ್ಕೂ ಬರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಮಾನಿ ಸಂಸದ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ಎಲ್ಲ ರೀತಿ ಗೌರವ ಸ್ಥಾನಮಾನ ನೀಡಿದೆ. ಅದಕ್ಕೆ ಪ್ರತಿಯಾಗಿ ನಾನೂ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಆದರೆ ಆರು ಬಾರಿ 1994 ರಿಂದ ಸ್ಪರ್ಧೆ ಮಾಡಿದ್ದೇನೆ. ಇದು ಏಳನೇ ಬಾರಿ ನಾನು ಸ್ಪರ್ಧೆ ಮಾಡಬೇಕಾಗಿದೆ. ಸಹಜವಾಗಿ ಟಿಕೇಟ್ ಇಲ್ಲ ಅಂದಾಗ ಆಘಾತ ಆಯ್ತು ವೇದನೆ ಆಯ್ತು. ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Karnataka Election Live: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ: ಜಗದೀಶ್ ಶೆಟ್ಟರ್
ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ನನಗೆ ಎಲ್ಲಾ ಗೌರವ ಹಾಗೂ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ಕಳೆದ 6 ತಿಂಗಳಿನಿಂದ ನನ್ನನ್ನು ಕಡೆಗಣಿಸಿದ್ದರು ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
Karnataka Election Live: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.
Karnataka Election Live: ಪಕ್ಷೇತರನಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ,
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ನಾಳೆ (ಏ.18) ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಎದುರಾಳಿ ಇದ್ದರು ಬಿಜೆಪಿ ವರ್ಸಸ್ ಹಿಂದುತ್ವ ನಡುವೆ ಹಣಾಹಣಿ ಏರ್ಪಟ್ಟಿದೆ.
Karnataka Election Live: ಇಂದು ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಪ್ರವಾಸ
ಬೀದರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಏ.17) ಬೀದರ್ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಭಾಲ್ಕಿ, ಹುಮ್ನಾಬಾದ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಬೀದರ್ಗೆ ರಾಹುಲ್ ಆಗಮಿಸಲಿದ್ದು ಬೀದರ್ ಏರ್ಬೇಸ್ನಿಂದ ಭಾಲ್ಕಿ ಪಟ್ಟಣಕ್ಕೆ ತೆರಳಲಿ ಭಾಲ್ಕಿ ಪಟ್ಟಣದಲ್ಲಿ ನಡೆಯುವ ಜನಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹುಮ್ನಾಬಾದ್ನಲ್ಲಿ ನಡೆಯುವ ಸಮಾವೇಶದಲ್ಲೂ ಭಾಗಿಯಾಗಲಿದ್ದಾರೆ. ಹುಮ್ನಾಬಾದ್ನಿಂದ ಹೆಲಿಕಾಪ್ಟರ್ ಮೂಲಕ ಬೀದರ್ಗೆ ಪ್ರಯಾಣಿಸಿ ಬೀದರ್ ಏರ್ಬೇಸ್ನಿಂದ ದೆಹಲಿಗೆ ತೆರಳಲಿದ್ದಾರೆ.
Karnataka Assembly Election 2023 Live: ಇಂದು ವರುಣಾ ಕ್ಷೇತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
ಬೆಂಗಳೂರು: ಇಂದು (ಏ.17) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಲಿದ್ದಾರೆ. ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಅವರು ನಂಜನಗೂಡು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು ಸಚಿವ ವಿ.ಸೋಮಣ್ಣಗೆ ಸಿಎಂ ಬೊಮ್ಮಾಯಿ ಸಾಥ್ ನೀಡಲಿದ್ದಾರೆ. ಸೋಮಣ್ಣ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದು ನಂಜನಗೂಡು ಪಟ್ಟಣದಲ್ಲಿ ಬಿಜೆಪಿಯಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
Karnataka Assembly Election 2023 Live: ಕಾಂಗ್ರೆಸ್ನ ಮಾಜಿ ಶಾಸಕಿ ಅನಸೂಯಮ್ಮ ಬಿಜೆಪಿ ಸೇರ್ಪಡೆ
ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ನ ಮಾಜಿ ಶಾಸಕಿ ಅನಸೂಯಮ್ಮ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚಿಕ್ಕಬಳ್ಳಾಪುರದ ಸಚಿವ ಸುಧಾಕರ್ ಮನೆಯಲ್ಲಿ ಬಿಜೆಪಿ ಸೇರಿದ್ದಾರೆ. ಮಾಜಿ ಶಾಸಕಿಯ ಮಗ ನಗರಸಭಾ ಸದಸ್ಯ ಸಿಂದೂರ್ ಸಹ ಬಿಜೆಪಿ ಸೇರಿದ್ದಾರೆ.
Karnataka Assembly Election 2023 Live:ಬಿಜೆಪಿಗೆ ಸೂರ್ಯಕಾಂತ ನಾಗಮಾರಪಳ್ಳಿ ರಾಜೀನಾಮೆ
ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸೂರ್ಯಕಾಂತ ನಾಗಮಾರಪಳ್ಳಿ ರಾಜೀನಾಮೆ ನೀಡಿದ್ದಾರೆ. ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯಕಾಂತದ ಬದಲು ಈಶ್ವರ ಸಿಂಗ್ ಠಾಕೂರ್ ಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಅಪ್ಪಟ ಹಿಂದುತ್ವವಾಧಿ ಈಶ್ವರ ಸಿಂಗ್ ಠಾಕೂರ್ ಗೆ ಟಿಕೇಟ್ ಕೊಟ್ಟಿದ್ದು ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ನಿಂದ ಸ್ಪರ್ಧಿಸಲು ಸೂರ್ಯಕಾಂತ ನಿರ್ಧಾರ ಮಾಡಿದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಸುಪುತ್ರ. ಕಳೆದ ಭಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ 63 ಸಾವಿರ ಮತಗಳನ್ನ ಪಡೆದು ಸೋತಿದ್ದರು.
Karnataka Election Live: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶಂಸೆ
ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ಭವನ ಉದ್ಘಾಟಿಸಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದು ಡಿಕೆ ಶಿವಕುಮಾರ್ರನ್ನು ಹೊಗಳಿದ್ದಾರೆ. ಇಡೀ ದೇಶದಲ್ಲಿ ಈ ರೀತಿಯ ಹೈಟೆಕ್ ಕಚೇರಿ ಕಾಂಗ್ರೆಸ್‌ಗೆ ಇಲ್ಲ. ಡಿಕೆಶಿ ಬಹಳ ಲಕ್ಕಿ ಇದ್ದಾನೆ, ಹೈಟೆಕ್ ಆಗಿ ಕಟ್ಟಡ ನಿರ್ಮಿಸಿದ್ದಾರೆ. ಡಿಕೆಶಿ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸ ಬಿಡದೆ ಡಿ.ಕೆ.ಶಿವಕುಮಾರ್ ಮಾಡಿ ಮುಗಿಸುತ್ತಾನೆ. ಸಿದ್ದರಾಮಯ್ಯ ಸೇರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡ್ತಾರೆ. ಹೀಗಾಗಿ ಸೋನಿಯಾ, ರಾಹುಲ್, ಪ್ರಿಯಾಂಕಾಗೆ ಡಿಕೆಶಿ ಇಷ್ಟ. ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಾನೇ ಹೇಳಿದ್ದೆ. 150 ಸೀಟ್ ಗೆಲ್ಲಬೇಕು ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಸುಮ್ಮನೆ ನಂಬರ್‌ಗಳನ್ನ ಹೇಳಲ್ಲ. ನಮ್ಮ ಗ್ಯಾರಂಟಿಗಳ ಮೂಲಕ 150ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನ ಜಾರಿಗೆ ತರಬೇಕು. ಈ ಮೂಲಕ ಜನರ ವಿಶ್ವಾಸಗಳಿಸಬೇಕು ಎಂದರು.
Karnataka Election Live: ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಜಗದೀಶ್ ಶೆಟ್ಟರ್ ಬೆಳಗ್ಗೆ 8.15ಕ್ಕೆ ಕಾಂಗ್ರೆಸ್ ಪಕ್ಷ ಸೇರು ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶೆಟ್ಟರ್ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು.
Published On - Apr 17,2023 7:53 AM