Karnataka Assembly Elections 2023 Live News Updates: ರಾಜ್ಯ ವಿಧಾನಸಭಾ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಭ್ಯರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡಿ ಮತದಾರ ಪ್ರಭುಗಳ ಮನ ಗೆಲ್ಲಲು ಕಸರತ್ತು ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ತಮ್ಮ ಪಕ್ಷದ ಬಾವುಟ ಹಾರಿಸಲೇಬೇಕೆಂದು ರಾಷ್ಟ್ರ ನಾಯಕರು ರಾಜ್ಯದತ್ತ ಮುಗಿಬಿದ್ದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪರ ಮತಯಾಚಿಸಲಿದ್ದಾರೆ. ಯಾದಗಿರಿಯಲ್ಲಿ ರೋಡ್ಶೋ ನಡೆಸಲಿದ್ದಾರೆ. ಹಾಗೂ ಪ್ರಿಯಾಂಕಾ ಗಾಂಧಿಯವರು ಇಂದು ಚಾಮರಾಜನಗರ ಜಿಲ್ಲೆ ಹನೂರಿಗೆ ಭೇಟಿ ನೀಡಿ ಬೇಡಗಂಪಣರು, ಗಿರಿಜನ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ಟಿ.ನರಸೀಪುರ, ಕೆ.ಆರ್.ನಗರದಲ್ಲಿ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಹೆಚ್ಡಿ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಹೆಚ್ಡಿ ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಲು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಚಾರಕ್ಕಿಳಿದಿದ್ದಾರೆ. ಬನ್ನಿ ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರು ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮುಂದುವರಿಸಿದ್ದಾರೆ. ಬುಧವಾರ ಬೆಳಿಗ್ಗೆ 10 ಗಂಟೆಗೆ ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಲಿರುವ ಅವರು ಬಳಿಕ 11 ಗಂಟೆಗೆ ನಗರದ ಜ್ಞಾನಯೋಗಶ್ರಮಕ್ಕೆ ಭೇಟಿ ನೀಡಲಿದ್ದಾರೆ. 11-25 ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಅಪರಾಹ್ನ 12 ಗಂಟೆಗೆ ಬಬಲೇಶ್ವರ ಕ್ಷೇತ್ರದ ತಿಕೋಟಾ ತಾಲೂಕಿನ ಕನಮಡಿ ಬಳಿಯ ಧರಿ ದೇವರ ದೇವಸ್ಥಾನ ದರ್ಶನ ಮಾಡಲಿದ್ದಾರೆ. 12-30 ಕ್ಕೆ ಕನಮಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಪರ ಪ್ರಚಾರ ನಡೆಸಿ ಮತಯಾಚಿಸಲಿದ್ದಾರೆ. ಸ್ಥಳಿಯ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ
ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ, ಕಾಂಗ್ರೆಸ್ ಪರ ಅಲೆಯಿದೆ ಎಂದು ಬೆಳಗಾವಿ ಜಿಲ್ಲೆ ರಾಯಭಾಗದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನ ಬೇಸತ್ತಿದ್ದಾರೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ, ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ಬಡವರು, ಅಲ್ಪಸಂಖ್ಯಾತರು, ದಲಿತರ ಪರವಾಗಿರುವ ಪಕ್ಷವಲ್ಲ. ಒಂದು ಕ್ಷೇತ್ರದಲ್ಲಾದರೂ ಮುಸ್ಲಿಂ, ಕ್ರೈಸ್ತರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಮೋದಿ ಬಾಯಲ್ಲಿ ಮಾತ್ರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಂತಾರೆ. ಎಲ್ಲರೂ ದ್ವೇಷದ ರಾಜಕಾರಣ ಮಾಡ್ತಾರೆ. ಕಳೆದ 28 ವರ್ಷಗಳಿಂದ ಜಾರಿಯಲ್ಲಿದ್ದ 2ಬಿ ಮೀಸಲಾತಿ ರದ್ದುಮಾಡಿದ್ರಿ. ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ. 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿ ಕೆಟ್ಟ ಸ್ಥಿತಿಗೆ ತಂದಿದ್ದೀರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಯಾದಗಿರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ. ರಾಜ್ಯದ ಬಿಜೆಪಿ ಪರ ಅಲೆ ಇದೆ, ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು. ಆದರೆ, ಮುಂದಿನ ಮುಖ್ಯಮಂತ್ರಿ ಬಗ್ಗೆ ಸುಳಿವು ಬಿಟ್ಟುಕೊಡಲಿಲ್ಲ.
ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜಿನಿಂದ ಶಾಸ್ತ್ರಿ ಸರ್ಕಲ್‌ವರೆಗೂ ಅಮಿತ್ ಶಾ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು. ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಪ್ರಚಾರ ಮಾಡಿದರು. ಅಮಿತ್ ಶಾ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾದರು.
ಚಾಮರಾಜನಗರ: ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹನೂರಿನ ಹೊಸಪೋಡಿನ ಗಿರಿಜನ ಮಹಿಳೆಯನ್ನು ತಬ್ಬಿಕೊಂಡು ಮಾತನಾಡಿದರು. ಇದರಿಂದ ಹರ್ಷಗೊಂಡ ಮಹಿಳೆ, ನಾನು ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾ ಗಾಂಧಿ ನೋಡಿದ್ದೇನೆ. ನಮಗೆ ಶಾಲೆ, ರಸ್ತೆ ಮೂಲಭೂತ ಸೌಕರ್ಯ ಕೊರತೆ ಇದೆ ಎಂದು ಕೇಳಿಕೊಂಡೆ. ಎಲ್ಲ ಕೆಲಸವನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು. ಇಂದಿರಾ ಗಾಂಧಿ ನಮಗೆ ಜಮೀನನ್ನು ಕೊಡಿಸಿದ್ರು.
ಬೇರೆಯವರು ಮನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಇದೀಗಾ ಅದು ತಪ್ಪಿದ್ದಂತಾಗಿದೆ ಎಂದು ಹೇಳಿದರು.
ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂದು ಮೈಸೂರಿನ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಹೆಚ್ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂಬ ಅಶಾಭಾವ ರಾಜ್ಯದ ಜನರಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಜೆಡಿಎಸ್ ಪರ ಅಲೆ ಇದೆ. ನನಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ದೇವೇಗೌಡರು ಈ ವಯಸ್ಸಿನಲ್ಲೂ ಬಿಡುವಿಲ್ಲದೆ ಪ್ರಚಾರ ಮಾಡ್ತಿದ್ದಾರೆ. ಕಷ್ಟಪಡುವ ನಮ್ಮನ್ನು ನೋಡಿ ಪಕ್ಷಕ್ಕಾಗಿ ದುಡಿಯಿರಿ. ಸರ್ಕಾರ ಮಾಡಲು ನಾನು ಸಿದ್ಧ, ಇದು ನೂರಕ್ಕೆ ನೂರರಷ್ಟು ಸತ್ಯ
JDS ಅಧಿಕಾರಕ್ಕೆ ಬಂದರೆ ವರ್ಷಕ್ಕೆ 5 ಅಡುಗೆ ಸಿಲಿಂಡರ್ ಕೊಡ್ತೇವೆ. ಮೇ 18ಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ ಇದೆ. ಚಾಮರಾಜ ಕ್ಷೇತ್ರದಲ್ಲಿ ಗೆದ್ದು ದೇವೇಗೌಡರಿಗೆ ಗಿಫ್ಟ್ ಕೊಡಿ ಎಂದು ಕುಮಾರಸ್ವಾಮಿ ಹೇಳಿದರು.
ವಿಜಯಪುರ: ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಯತ್ನಾಳ್ ಅವರೇ ಅದರಲ್ಲಿ ಹೊಸದೇನಿದೆ? ಕಾಂಗ್ರೆಸ್ನವರು ನಿಜಲಿಂಗಪ್ಪರಿಗೂ ಅಪಮಾನ ಮಾಡಿದ್ದಾರೆ, ವೀರೇಂದ್ರ ಪಾಟೀಲ್ರಿಗೂ ಅಪಮಾನ ಮಾಡಿದ್ದಾರೆ, ಯಡಿಯೂರಪ್ಪರನ್ನ ಕುರ್ಚಿಯಿಂದ ಕೆಳಗೆ ಇಳಿಸುವ ಕೆಲಸ ಮಾಡಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಪದೇ ಪದ ಲಿಂಗಾಯತರಿಗೆ ಅಪಮಾನ ಮಾಡುತ್ತಲೇ ಬಂದಿದೆ. ಇಂದು ನಮ್ಮಲ್ಲಿರುವ ಒಂದಿಬ್ಬರು ನಾಯಕರು ಅಲ್ಲಿಗೆ ಹೋಗಿದ್ದಕ್ಕೆ ಗೆದ್ದು ಬಿಡುತ್ತೇವೆ ಅಂದುಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.
ವಿಜಯಪುರ: ಉತ್ತರ ಕರ್ನಾಟಕಕ್ಕೆ ಯಾವಾಗಲೂ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್ ಸರ್ಕಾರದಿಂದ ಆತ್ರ ಆಗಿದೆ. ಬಿಜೆಪಿ ಸರ್ಕಾರ ಬಂದಮೇಲೆ ಕಿತ್ತೂರು ಕರ್ನಾಟಕ ಮಾಡಿ ಅಭಿವೃದ್ಧಿ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದರು. ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, 2 ಲಕ್ಷ 34 ಸಾವಿರ ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದೆ. ಬಡವರಿಗೆ ನಾಲ್ಕು ಲಕ್ಷ ಮನೆ, ಬಡವರಿಗೆ ಉಚಿತ ಅಕ್ಕಿ ಕೊಡಲಾಗಿದೆ. ಉಚಿತ ಗ್ಯಾಸ್ ಕೊಡಲಾಗಿದೆ, ವಿಮಾ ಕೊಡಲಾಗಿದೆ. ಕರ್ನಾಟಕದ ವಿಕಾಸವನ್ನು ಮೋದಿ ಮಾತ್ರ ಮಾಡಲು ಸಾಧ್ಯ. ಅಯ್ಯೋದ್ಯೆಯಲ್ಲಿ ರಾಮ ಮಂದಿರ ಆಗಬೇಕೋ ಬೇಡವೋ? ಕಾಂಗ್ರೆಸ್ ವರ್ಷಗಳಿಂದ ರಾಮ ಮಂದಿರ ಆಗೋದನ್ನು ತಡೆದಿತ್ತು. ಮೋದಿ ಬಂದಮೇಲೆ ಭೂಮಿ ಪೂಜೆ ಮಾಡಿ, ಇದೀಗ ಭವ್ಯ ರಾಮಮಂದಿರ ಆಗುತ್ತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುವಂತೆ ಮಾಡಬೇಕು, ವಿಜಯಪುದಲ್ಲಿ 8 ರಲ್ಲಿ 7 ಸೀಟ್ ಬರಬೇಕು. ಎರಡೂ ಕೈ ಮೇಲೆ ಎತ್ತಿ ಮೋದಿಜಿ ಅವರಿಗೆ ಮತ್ತೆ ಪ್ರಧಾನಿ ಮಾಡುವ ಸಂಕಲ್ಪ ಮಾಡಿ ಎಂದು ಹೇಳಿದರು.
ವಿಜಯಪುರ: ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಪಾಕ್ನಿಂದ ನಿರಂತರ ದಾಳಿ ನಡೆಯುತ್ತಿತ್ತು. ಗಡಿಯಲ್ಲಿ ನುಸುಳಿಕೊಂಡು ಬಂದು ಯೋಧರ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ತಡೆಯುವ ಧೈರ್ಯ ಕಾಂಗ್ರೆಸ್ ಮಾಡಿರಲಿಲ್ಲ ಎಂದು ಅಮಿತ್ ಶಾ ಹೇಳಿದರು. ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಬಂದ ಮೇಲೆ ಉಗ್ರರ ಅಡಗುಣದಾಣಗಳಿಗೆ ನುಗ್ಗಿ ಧ್ವಂಸಗೊಳಿಸಲಾಗಿದೆ. ಯೋಧರ ಏರ್ಸ್ಟ್ರೈಕ್ಗೆ ರಾಹುಲ್ ಗಾಂಧಿ ಪುರಾವೆ ನೀಡಿ ಅಂತಿದ್ದಾರೆ. ಇಷ್ಟೆಲ್ಲಾ ಕಣ್ಮುಂದೆ ಸಾಕ್ಷಿ ಇದ್ದರೂ ಪುರಾವೆ ಕೇಳ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ವಿಜಯಪುರ: ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲುತ್ತಾರೆ ಎಂದು ಅಮಿತ್ ಶಾ ಹೇಳಿದರು. ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಶೆಟ್ಟರ್ ವಿರುದ್ಧ ಮಹೇಶ್ 25,000 ಮತಗಳ ಅಂತರದಿಂದ ಗೆಲ್ಲುತ್ತಾರೆ. ಕಾಂಗ್ರೆಸ್ಗೆ ವೋಟ್ ಕೊಟ್ಟರೆ PFI ನಿಷೇಧ ವಾಪಸ್ ಪಡೆಯುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿ, ಮುಳವಾಡ, ಬೂದಿಹಾಳ ನೀರಾವರಿ ಯೋಜನೆಗಳನ್ನು ನೀಡಲಾಗಿದೆ. ನಿಂಬೆ ಅಭಿವೃದ್ಧಿ ಮಂಡಳಿ, ದ್ರಾಕ್ಷಿ ವೈನ್ ಬೋರ್ಡ್ ಸ್ಥಾಪಿಸಲಾಗಿದೆ. ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ‘ಕೈ’ ನಾಯಕರು ಮಾಡಿಲ್ಲ ಎಂದರು.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿಗೆ ಸಚಿವ ಅಮಿತ್ ಶಾ ತೇರದಾಳದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ದೇವರಹಿಪ್ಪರಗಿ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಿದರು.
ನನ್ನ ಪ್ರೀತಿಯ ಸಹೋದರಿಯರೇ ಸಹೋದರರೆ. ಎಲ್ಲರಿಗೂ ನಮಸ್ಕಾರ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ದಾರಿಯಲ್ಲಿ ಬರುವಾಗ ಹಸಿರು ನೋಡಿ ಖುಷಿಯಾಯಿತು. ಇದು ಕಾವೇರಿ ಹಾಗೂ ಕಬಿನಿಯ ಸಂಗಮ. ದೇವಸ್ಥಾನಗಳ ನಗರ ಇದಾಗಿದೆ. ಇಲ್ಲಿ ಬಂದಿದ್ದು ತುಂಬಾ ಖುಷಿಯಾಗಿದೆ. ಇದೊಂದು ಪವಿತ್ರವಾದ ಸ್ಥಳವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಂದಿದ್ದೇನೆ. ಚುನಾವಣೆ ವೇಳೆ ಬೇರೆ ಬೇರೆ ನಾಯಕರು ಬಂದು ಮಾತನಾಡುತ್ತಾರೆ. ಒಬ್ಬರು ಮತ್ತೊಬ್ಬರನ್ನು ಟೀಕಿಸುವ ಕೆಲಸ ಮಾಡುತ್ತಾರೆ. ನೀವು ಹೇಗೆ ನಿರ್ಧಾರ ಮಾಡುತ್ತೀರಾ? ಯಾರು ಸರಿ ಯಾರು ತಪ್ಪು? ಎಂದರು.
ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರ ವ್ಯಾಪ್ತಿಯ ರಬಕವಿಬನಹಟ್ಟಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್, ಸವದಿ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಿಂಗಾಯತರಿಗೆ ಅವಮಾನ ಮಾಡಿರುವ ಪಕ್ಷಕ್ಕೆ ಹೋಗಿದ್ದಾರೆ. ಕಾಂಗ್ರೆಸ್ಗೆ ಆ ಇಬ್ಬರು ನಾಯಕರಿಂದ ಯಾವುದೇ ಲಾಭವಿಲ್ಲ. ಲಿಂಗಾಯತ ಸಿಎಂಗಳನ್ನು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದೆ. ಮಾಜಿ ಸಿಎಂ ಬಿಎಸ್ವೈಗೆ ಮೋಸ ಮಾಡಿದ್ದು ಜೆಡಿಎಸ್ನವರು. ಜೆಡಿಎಸ್ ಎಷ್ಟೇ ಸೀಟ್ ಗೆದ್ದರೂ ಕಾಂಗ್ರೆಸ್ ಜತೆ ಹೋಗ್ತಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಸ್ಪಷ್ಟ ಬಹುಮತ ನೀಡಿ. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಗೈದಿದ್ದು ಪಿಎಫ್ಐನವರು. ಪಿಎಫ್ಐ ಸಂಘಟನೆಯನ್ನು ಮೋದಿ ಸರ್ಕಾರ ನಿಷೇಧಿಸಿದೆ ಎಂದರು.
#WATCH | It clearly shows that there is bankruptcy in your party (Congress) when you fight elections depending on leaders who have joined Congress leaving the BJP: Union Home Minister & BJP leader Amit Shah in Karnataka's Bagalkote pic.twitter.com/Z6PSyTLgEz
— ANI (@ANI) April 25, 2023
ಸಿದ್ದರಾಮಯ್ಯ ಸೋಲಿಸಲು ಬಿಜೆಪಿ, ಜೆಡಿಎಸ್ ಒಂದಾಗಿವೆ ಎಂದು ಟಿವಿ9ಗೆ ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಲಾಗಿದೆ. ಚಾಮುಂಡೇಶ್ವರಿ ಚುನಾವಣೆಯಂತೆ ಈ ಬಾರಿಯೂ ಒಂದಾಗಿವೆ. ಬಿಜೆಪಿ ಆದೇಶದಂತೆ ವರುಣದಲ್ಲಿ ಅಭ್ಯರ್ಥಿ ಬದಲು ಮಾಡಿದ್ದಾರೆ. ಸಿದ್ದರಾಮಯ್ಯ ಸೋಲಿಸಲು ರಾಹು ಕೇತು ಶನಿ ಒಂದಾಗಿದ್ದಾರೆ. ಕಾಂಗ್ರೆಸ್ ವೋಟ್ ಒಡೆಯಲು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿ ಅನಿತಾ ಕುಮಾರಸ್ವಾಮಿಯವರು ಪತಿ ಹೆಚ್ಡಿ ಕುಮಾರಸ್ವಾಮಿಯವರಿಗೆ ಮತ ಹಾಕುವಂತೆ ಮತಯಾಚನೆ ಮಾಡಿದ್ದಾರೆ. ಸುಳ್ಳು ಮಾತುಗಳನ್ನ ನಂಬಬೇಡಿ. ಮನೆ ಮಗನನ್ನ ಉಳಿಸಿ. ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಬೇಕು. ಕುಮಾರಸ್ವಾಮಿ ಅಭ್ಯರ್ಥಿ ಅಲ್ಲ. ನೀವೆ ಅಭ್ಯರ್ಥಿ. ಚನ್ನಪಟ್ಟಣ ಹಳೇ ಕ್ಷೇತ್ರ. ಚನ್ನಪಟ್ಟಣ ಕ್ಷೇತ್ರದಲ್ಲಿ ನನಗೆ ಒಡನಾಟ ಇದೆ ಎಂದರು.
ರಬಕವಿ ಬನಹಟ್ಟಿ ನಗರಕ್ಕೆ ಅಮಿತ್ ಶಾ ಆಗಮನ ವಿಳಂಬವಾದ ಹಿನ್ನೆಲೆ ಜೈನ ಬಸದಿಗೆ ಭೇಟಿ ರದ್ದು ಮಾಡಲಾಗಿದೆ. ಹುಬ್ಬಳ್ಳಿಯಿಂದ ತಡವಾಗಿ ಆಗಮಿಸಿದ್ದರಿಂದ ಅಮಿತ್ ಶಾ ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಅಮಿತ್ ಶಾ ಜೈನ ಬಸದಿಗೆ ಭೇಟಿ ನೀಡಿದಾಗ ಅವರಿಗೆ ಉಡುಗರೆ ನೀಡಲೆಂದು ಮಕ್ಕಳು ವಿಶೇಷ ಉಡುಗೊರೆ ತಂದಿದ್ದರು. ಆದ್ರೆ ಅಮಿತ್ ಶಾ ಭೇಟಿ ರದ್ದಾಗಿದ್ದು ಮಕ್ಕಳಿಗೆ ನಿರಾಸೆಯಾಗಿದೆ.
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಬಿ.ಇನಾಮದಾರ್ ನಿಧನ ಹಿನ್ನೆಲೆ ಇಂದು ಬೆಳಗಾವಿ ಜಿಲ್ಲೆ ಕಿತ್ತೂರು ಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ರೋಡ್ಶೋ ರದ್ದು ಮಾಡಲಾಗಿದೆ. ಕಿತ್ತೂರು ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ನಿಗದಿಯಂತೆ ಸಿಎಂ ಪ್ರಚಾರ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಹಿರೇಬಾಗೇವಾಡಿ, ಬೆಳಗಾವಿ ನಗರ, ಬೈಲಹೊಂಗಲದಲ್ಲಿ ನಿಗದಿಯಂತೆ ಸಿಎಂ ರೋಡ್ ಶೋ ನಡೆಯಲಿದೆ.
ನಿನ್ನೆ, ಇಂದು, ನಾಳೆಯೂ ಹೇಳ್ತೀನಿ ರಾಷ್ಟ್ರದ್ರೋಹಿ ಮುಸ್ಲಿಮರ ಮತ ಬೇಡ. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿ ಜೊತೆಯೇ ಇದ್ದಾರೆ ಎಂದು ಕೆಎಸ್ ಈಶ್ವರಪ್ಪ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಿಜೆಪಿಯನ್ನ ಜಾತಿವಾದಿ ಅಂತಾರೆ. ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಸಿಎಂ ಆಗ್ತೀನಿ ಅಂತಾರೆ. ಸಿದ್ದು-ಡಿಕೆಶಿ ನೇರವಾಗಿ ಜಾತಿ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಗೆ ಕೋಮುವಾದಿ ರಾಜಕಾರಣ ಅಂತಾರೆ. ಸಿ.ಟಿ.ರವಿ, ಬಿಜೆಪಿ ರಾ.ಪ್ರ.ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ.ರವಿ, ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ ಎಂದರು.
ಮುಸ್ಲಿಂರ 2ಬಿ ಮೀಸಲಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ರಾಜ್ಯ ಸರ್ಕಾದ ಮುಸ್ಲಿಂ 2ಬಿ ಮೀಸಲಾತಿ ರದ್ದತಿಗೆ ಸುಪ್ರಿಂಕೋರ್ಟ್ ತಡೆ#Muslim #2breservation #SupremeCourthttps://t.co/EQE8PYL9KR
— TV9 Kannada (@tv9kannada) April 25, 2023
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಗೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುಂಜೂರು ಆರ್ ಶ್ರೀನಿವಾಸರೆಡ್ಡಿ ಪರ ಪ್ರಚಾರ ಮಾಡಲಿದ್ದಾರೆ.ಕ್ಷೇತ್ರದ ಯಲ್ದೂರು ಗ್ರಾಮ ಸೇರಿದಂತೆ ಹಲವೆಡೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಗೋವಿಂದರಾಜನಗರದಲ್ಲಿ ನನ್ನ ಅಭಿವೃದ್ಧಿ ಕೆಲಸಗಳು ಪಕ್ಷಕ್ಕೆ ಶ್ರೀರಕ್ಷೆ ಆಗಲಿದೆ. ಕಾಂಗ್ರೆಸ್ ನಿಂದ ನಿಂತಿರುವ ಅಭ್ಯರ್ಥಿಗಳಾದ ಅಪ್ಪ-ಮಗನ ಕೊಡುಗೆ ಶೂನ್ಯ. ಅಪ್ಪನೂ 15 ವರ್ಷ ಏನೂ ಮಾಡಿಲ್ಲ, ಮಗ ಒಂಬತ್ತೂವರೆ ವರ್ಷ ಏನೂ ಮಾಡಿಲ್ಲ. ಈಗ ಮತ್ತೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹವರನ್ನು ಅಭ್ಯರ್ಥಿ ಮಾಡಿದೆ. ನನ್ನ ಕೆಲಸಗಳು ಉಮೇಶ್ ಶೆಟ್ಟಿಗೆ ಶ್ರೀರಕ್ಷೆ ಆಗಿಲಿದೆ ಎಂದು ಬೆಂಗಳೂರಿನಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು. ಈ ಚುನಾವಣೆ ಅಭಿವೃದ್ಧಿ ಮತ್ತು ಪಾಪದ ಹಣ ಮಧ್ಯೆ ನಡೆಯುತ್ತದೆ. ಅಪ್ಪ-ಮಕ್ಕಳು ಸಾವಿರಾರು ಜನರಿಗೆ ವಂಚನೆ ಮಾಡಿದ್ದಾರೆ. ತಾವರೆಕೆರೆಯಿಂದ ದೊಡ್ಡಾಲದಮರದವರೆಗೆ ಹೋದರೆ ಇವರ ಬಣ್ಣ ಗೊತ್ತಾಗುತ್ತದೆ. ಅಂತಾ ಪಾಪಿಗಳಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕುತ್ತದೆ ಅಂತಾದ್ರೆ? ಇಂತಹವರನ್ನು ಅಭ್ಯರ್ಥಿ ಮಾಡಿದ್ದಾರಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತಾಡಲು ಏನು ನೈತಿಕತೆ ಇದೆ? ಎಂದರು.
ಏ.27ರಂದು ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ. ರಾಜ್ಯದ 50 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 1680 ಜಿ.ಪಂ.ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ವೀಕ್ಷಣೆಗೆ 650 ಎಲ್ಇಡಿ ಪರದೆಗಳ ಅಳವಡಿಸಲಾಗಿದ್ದು 24 ಲಕ್ಷ ಕಾರ್ಯಕರ್ತರಿಗೆ ಮೋದಿ ಆ್ಯಪ್ ಲಿಂಕ್ ಕಳುಹಿಸಿದ್ದೇವೆ. ಮೋದಿ ಆ್ಯಪ್ ಮೂಲಕವೂ ಸಂವಾದ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕೆ.ಹೆಚ್.ಮುನಿಯಪ್ಪರನ್ನು ಸೋಲಿಸದವರು ಕಾಂಗ್ರೆಸ್ನವರು. ಜಿ.ಪರಮೇಶ್ವರ್ರನ್ನು ಸೋಲಿಸಿದವರು ಕೂಡ ಕಾಂಗ್ರೆಸ್ನವರು ಎಂದು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಅಖಂಡ ಶ್ರೀನಿವಾಸ್ ಮನೆ ಸುಟ್ಟು ನಿರ್ಗತಿಕರನ್ನಾಗಿ ಮಾಡಿದರು. ಅಖಂಡ ಶ್ರೀನಿವಾಸ್ ಮೂರ್ತಿಗೆ ಕನಿಷ್ಟ ಸಾಂತ್ವನ ಸಹ ಹೇಳಲಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇಂತಹ ನೀಚ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಕೇಂದ್ರ ಸಚಿವ ಅಮಿತ್ ಶಾ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡಲಿ ಎಂದು ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ನ ಅವಿಭಾಜ್ಯ ಅಂಗ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಬೈಕ್ ರ್ಯಾಲಿ ಮುಖಾಂತರ ಪ್ರಚಾರ ನಡೆಸುತ್ತಿದ್ದಾರೆ. ಅಶೋಕ ಪಿಲ್ಲರ್ ನಿಂದ ನೂರಾರು ಕಾರ್ಯಕರ್ತರ ಜೊತೆ ಬೈಕ್ ರ್ಯಾಲಿ ಮೂಲಕ ಟೌನ್ ಹಾಲ್ ಬಳಿಯಿಂದ ಸಜ್ಜನ್ ರಾವ್ ಸರ್ಕಲ್ ತಲುಪಿ ಮತದಾರರ ಗಮನ ಸೆಳೆಯುತ್ತಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ್ರು. ಕುಮಾರಸ್ವಾಮಿಗೆ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸಾಥ್ ನೀಡಿದ್ರು. H.D.ಕುಮಾರಸ್ವಾಮಿ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಇಂದು ಲಂಚ ಕೊಡದೆ ಯಾವುದೇ ಕೆಲಸ ಆಗ್ತಿಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಈಗ ಕೆಟ್ಟ ಹೆಸರು ಬಂದಿದೆ. 40% ಕಮಿಷನ್ ಬಗ್ಗೆ ಗುತ್ತಿಗೆದಾರರು ಆರೋಪ ಮಾಡಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿಗೂ ಗುತ್ತಿಗೆದಾರರು ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತುಮಕೂರು: ಚುನಾವಣಾ ಸಮಯದಲ್ಲಿ ಕಾಂಗ್ರೆಸ್ಗೆ ಬಿಜೆಪಿ ಟಕ್ಕರ್ ಕೊಟ್ಟಿದೆ. ಎಲೆಕ್ಷನ್ ಹೊತ್ತಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಕಾಂಗ್ರೆಸ್ ತೊರೆದು 300 ಕ್ಕೂ ಹೆಚ್ಚು ಸ್ಥಳೀಯ ಮುಖಂಡರು ಬಿಜೆಪಿ ಸೇರಿದ್ದಾರೆ. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ನೇತೃತ್ವದಲ್ಲಿ 300 ಕ್ಕೂ ಹೆಚ್ಚು ಮುಖಂಡರು ಶಾಸಕ ಮಸಾಲೆ ಜಯರಾಮ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಬಿ.ಇನಾಮಾದಾರ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 5 ಬಾರಿ ಕಿತ್ತೂರು ಕ್ಷೇತ್ರದ ಶಾಸಕರಾಗಿದ್ದ ಡಿ.ಬಿ.ಇನಾಮಾದಾರ್, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅರಸು, S.M.ಕೃಷ್ಣ, ಎಸ್.ಬಂಗಾರಪ್ಪ ಸರ್ಕಾರದಲ್ಲಿ ಇವರು ಸಚಿವರಾಗಿದ್ದರು.
ರಾಮನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಆದರೂ ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ. ನನಗೆ ಆತಂಕ ಇಲ್ಲ, ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಾರೆ. ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ಕೂಡ ಗಮನಿಸಿದ್ದೇನೆ. 4 ತಿಂಗಳಿನಿಂದ ನಡೆಸಿದ ರೋಡ್ ಶೋ ಮುಂದೆ ಇದೇನು ಅಲ್ಲ. ನನ್ನ ಕಾರ್ಯುಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು. ನನ್ನ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕ್ರಮ ಸರಿಸಾಟಿ ಅಲ್ಲ ಎಂದು ಹೆಚ್ಡಿಕೆ ಟಾಂಗ್ ಕೊಟ್ಟರು.
ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ. K.R.ನಗರ, ಚಾಮರಾಜ, ವರುಣದಲ್ಲಿ ಪ್ರಚಾರ ಸಭೆ ಕರೆದಿದ್ದೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಶಾಸಕರಾಗಿ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಯೊಬ್ಬರು ವಿಶಿಷ್ಟ ಹರಕೆ ಕಟ್ಟಿದ್ದಾರೆ. ನಗರದ ಇಬ್ರಾಹಿಂಪುರದಿಂದ ಸಿದ್ದೇಶ್ವರ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಇಬ್ರಾಹಿಂಪುರ ನಿವಾಸಿ ವೀರೇಶ್ ಮಠಪತಿ ಎಂಬ ಯುವಕ ದೀರ್ಘದಂಡ ನಮಸ್ಕಾರ ಮಾಡಿದ್ದಾನೆ.
ರಾಜ್ಯದ ಮುಂದಿನ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಎಂದು ಕಾಲ ಭೈರವನ ಪ್ರತಿ ರೂಪವಾದ ಶ್ವಾನವೊಂದು ಭವಿಷ್ಯ ನುಡಿದಿದೆ. ಹೆಚ್.ಡಿ ಕುಮಾರಸ್ವಾಮಿಯ ಭಾವ ಚಿತ್ರ ಸೂಚಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆಂದು ಸುಳಿವು ನೀಡಿದೆ. ಮಂಡ್ಯದ ಅಶೋಕನಗರದ ನಿವಾಸದಲ್ಲಿ ಭೈರವ ಎಂಬ ಶ್ವಾನವೊಂದು ಮುಂದಿನ ಮುಖ್ಯ ಮಂತ್ರಿಯ ಕುರಿತು ಸುಳಿವು ನೀಡಿದೆ. ಮಾಲೀಕ ಗೋಪಿ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮುಂದಿನ ಸಿಎಂ ಬಗ್ಗೆ ಪ್ರಶ್ನೆ ಮಾಡಿದ್ದು ಚಿತ್ರ ತೋರಿಸುವ ಮೂಲಕ ಶ್ವಾನ ಭವಿಷ್ಯ ನುಡಿದಿದೆ. ಕಳೆದ ಎರಡು ವರ್ಷಗಳಿಂದ ಶ್ವಾನ ಸೂಚಿಸಿದ ಭವಿಷ್ಯ ನಿಜವಾಗುತ್ತಿದೆ ಎಂಬ ನಂಬಿಕೆ ಇದೆ.
ಜೆಡಿಎಸ್ ಅಭ್ಯರ್ಥಿ ಲೂಟಿಕೋರ, ಜನರ ಹಣ ಕೊಳ್ಳೆ ಹೊಡೆದು ಏಲೆಕ್ಷನ್ ಮಾಡ್ತಿದ್ದಾನೆ ಎಂದು ಪ್ರಚಾರದ ವೇಳೆ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ವಿರುದ್ದ ಸಂಸದ ಸಂಗಣ್ಣ ಕರಡಿ ವಾಗ್ದಾಳಿ ನಡೆಸಿದ್ದಾರೆ. ನಂಗೆ ಬ್ಲ್ಯಾಕ್ ಮೇಲ್ ಮಾಡಿ ಬಿಜೆಪಿ ಟಿಕೆಟ್ ತಂದಿದ್ದೇನೆ ಎನ್ನುತ್ತಾರೆ. ಹಾಗಿದ್ರೆ ಹುಲಿಗೆಮ್ಮ ದೇವಸ್ಥಾನಕ್ಕೆ ಬಂದು ಆಣೆ ಮಾಡುವಂತೆ ಸವಾಲ್ ಹಾಕಿದ್ದಾರೆ. ಜನ ಹಣ ಕೊಳ್ಳೆ ಹೊಡೆದು ಸಾವಿರ ಕೋಟಿ ದುಡ್ಡು ಮಾಡಿದ್ದಾನೆ. ಒಬ್ಬ ಸರ್ಕಾರಿ ನೌಕರ ಇಷ್ಟು ದುಡ್ಡು ಮಾಡೋಕೆ ಹೇಗೆ ಸಾಧ್ಯ ಎಂದು ಸಂಗಣ್ಣ ಕರಡಿ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಹಾಲಿ ಬಿಜೆಪಿ ಸದಸ್ಯರು ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ನಾಲ್ವರು ಬಿಜೆಪಿ ಸದಸ್ಯರು ಇಬ್ಬರು ಪಕ್ಷೇತರರು ಸೇರಿದಂತೆ ಆರು ಜನ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಯುವ ಅಭ್ಯರ್ಥಿ ದೀರಜ್ ಗೆ ಟಿಕೇಟ್ ನೀಡಿದಕ್ಕೆ ಮುನಿಸಿಕೊಂಡಿದ್ದ ಬಿಜೆಪಿ ನಗರಸಭೆ ಸದಸ್ಯರು ಬಂಡಾಯ ಶಮನವಾಗದ ಹಿನ್ನೆಲೆ ಕಾಂಗ್ರೆಸ್ ಸೇರಿದ್ದಾರೆ. ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಹಾಲಿ ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಹಾಲಿ ಸದಸ್ಯರು ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ ವೇಳೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭೆ ಕ್ಷೇತ್ರದ ಶಾಸಕಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿಯನ್ನು ಗಿಫ್ಟ್ ಮಾಡಿದ್ದಾರೆ. ಈ ವೇಳೆ ಕಾರ್ಯಕರ್ತರು ಮೇಕೆ ಮರಿಗೂ ಬಿಜೆಪಿ ಶಾಲು ಹಾಕಿದರು. ಪ್ರೀತಿಯಿಂದ ಕಾರ್ಯಕರ್ತರು ಅನೇಕ ಕಡೆ ಕುರಿ-ಮೇಕೆ ನೀಡಿದ್ದಾರೆ. ಉಡುಗೊರೆ ಬಂದ ಮೇಕೆ ಮರಿ ನಮ್ಮ ಫಾರಂನಲ್ಲಿ ಸಾಕುತ್ತೇನೆಂದ ಸಾಮಾಜಿಕ ಜಾಲತಾಣದಲ್ಲಿ ಮೇಕೆ ಗಿಫ್ಟ್ ಪಡೆದ ವಿಚಾರವನ್ನು ಪೂರ್ಣಿಮಾ ಶೇರ್ ಮಾಡಿದ್ದಾರೆ.
ಹುಣಸೂರು ಬಿಜೆಪಿ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ತಂದೆ ವಿಧಿವಶರಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣೇಗೌಡ 70 ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ದೇವಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಹುಣಸೂರು ಬಿಜೆಪಿ ಅಭ್ಯರ್ಥಿಗೆ ಪಿತೃ ವಿಯೋಗ@BJP4Karnataka #hunsur #Mysuru https://t.co/iMZbY2FnT1
— TV9 Kannada (@tv9kannada) April 25, 2023
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಣಿಯಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ಪರ ವರುಣಾದಲ್ಲಿ ಪ್ರಚಾರ ಮಾಡಲಿದ್ದಾರೆ. ಅಹಿಂದಾ ಸಮಾವೇಶದ ಹೆಸರಿನಲ್ಲಿ ಸಂಜೆ 4 ಗಂಟೆಗೆ ವರುಣಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಟಿ.ನರಸೀಪುರದ ತ್ರಿವೇಣಿ ಸಂಗಮ ಸ್ಥಳದಲ್ಲಿ ಪ್ರಚಾರ ಸಭೆ ನಡೆಯಲಿದೆ. ಈ ಬಾರಿ ಸಿದ್ದು ಅಣಿಯಲು ದಲಿತ ಅಸ್ತ್ರ ಬಿಟ್ಟಿದ್ದಾರೆ.
ಮೈಸೂರು: ಲಿಂಗಾಯತ ಸಿಎಂ ಬಗ್ಗೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಪರ ಡಾ ಯತೀಂದ್ರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಲಿಂಗಾಯತ ಹೇಳಿಕೆ ಬಗ್ಗೆ ತಮ್ಮ ಪ್ರಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಬಸವಣ್ಣನವರ ಅನುಯಾಯಿ. ಅವರು ಸಿಎಂ ಆಗಿದ್ದು ಬಸವ ಜಯಂತಿ ದಿನ. ಅವರೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಸಿದ್ದು, ಬಿಜೆಪಿಗೆ ಸೋಲಿನ ಭಯ ಶುರವಾಗಿದೆ. ಅದಕ್ಕೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಅಪಪ್ರಚಾರ ಸತ್ಯಕ್ಕೆ ದೂರವಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಪ್ರಚಾರದ ವೇಳೆ ಡಾ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ಆರಂಭಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಗಳೂರಿನಲ್ಲಿ ಬಿಎಸ್‌ವೈ ರೋಡ್ ಶೋ ನಡೆಯಲಿದ್ದು ಮಧ್ಯಾಹ್ನ 3 ಗಂಟೆಗೆ ಬಾಡ ಗ್ರಾಮದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಯಲಿದೆ. ರಾತ್ರಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ B.S.ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಅಥಣಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಬಳಿಕ ನಾಳೆ ಮಧ್ಯಾಹ್ನ 1 ಗಂಟೆಗೆ ಕುಡಚಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ಮಾಡಿ ಮಧ್ಯಾಹ್ನ 3 ಗಂಟೆಗೆ ಖಾನಾಪುರದಲ್ಲಿ ಸಾರ್ವಜನಿಕ ಪ್ರಚಾರ ಸಭೆ ಮಾಡಲಿದ್ದಾರೆ. ನಂತರ ನಾಳೆ ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿ ಏ.27ರ ಬೆಳಗ್ಗೆ 11 ಗಂಟೆಗೆ ಬಸವನಬಾಗೇವಾಡಿಯಲ್ಲಿ, ಮಧ್ಯಾಹ್ನ 12.30ಕ್ಕೆ ಮುದ್ದೇಬಿಹಾಳದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಇಂಡಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಗುರುವಾರ ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
Published On - 8:24 am, Tue, 25 April 23