ಲೋಕಸಭೆ ಚುನಾವಣೆಯ ( Lok Saba Elections 2024) ಪ್ರಚಾರ ಭರದಿಂದ ಸಾಗಿದ್ದು, ಏಪ್ರಿಲ್ 19ರಿಂದ ಜೂನ್ 1ವರೆಗೆ 7 ಹಂತದಲ್ಲಿ ಮತದಾನ ನಡೆಯಲಿದೆ. ಮತದಾನದ ಸಂದರ್ಭ ನಾವು ಮತ ಚಲಾಯಿಸಿ ಆದ ಬಳಿಕ ಬೆರಳಿಗೆ ಶಾಯಿಯನ್ನು ಹಾಕುವುದು ತಿಳಿದ ವಿಚಾರ. ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬಳಸಲಾಗುವ ಈ ಶಾಯಿ ತಯಾರಾಗುವುದು ಮೈಸೂರಿನಲ್ಲಿ! ಹೌದು, ಆ ಶಾಯಿಯನ್ನು ಮೈಸೂರಿನಲ್ಲಿ ಮಾತ್ರ ತಯಾರಿಸಲಾಗುತ್ತದೆ. ಶಾಯಿ ತಯಾರಾಗುವ ಕಂಪನಿ, ಶಾಯಿ ತಯಾರಿಯ ಇತಿಹಾಸ ಹಾಗೂ ಅದಕ್ಕೆ ಸಂಬಂಧಿಸಿ ಕುತೂಹಲಕಾರಿ ವಿಚಾರಗಳು ಇಲ್ಲಿವೆ.
ಮೈಸೂರಿನ ಪ್ರಸಿದ್ಧ ‘ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್’ ಕಂಪನಿಯು ಮತದಾನದ ನಂತರ ಬೆರಳುಗಳಿಗೆ ಹಚ್ಚುವ ಶಾಯಿಯನ್ನು ಉತ್ಪಾದಿಸುತ್ತದೆ. 1962 ರಿಂದ ಈವರೆಗೆ ದೇಶದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಈ ಶಾಯಿಯನ್ನು ಮಾತ್ರ ಬಳಸಲಾಗಿದೆ. 1962 ರಲ್ಲಿ ಚುನಾವಣಾ ಆಯೋಗವು ಮೊದಲ ಬಾರಿಗೆ ‘ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್’ಗೆ ಬೆರಳಿನ ಶಾಯಿಯ ಗುತ್ತಿಗೆ ನೀಡಿತು. ಅಂದಿನಿಂದ ಈವರೆಗೆ ಇಲ್ಲಿಯೇ ಶಾಯಿ ಉತ್ಪಾದಿಸಲಾಗುತ್ತಿದ್ದು, ಇದನ್ನು ಮಾತ್ರವೇ ಚುನಾವಣೆಗೆ ಬಳಸಲಾಗುತ್ತದೆ. ಇದನ್ನು ಪ್ರಜಾಪ್ರಭುತ್ವದ ಶಾಯಿ ಎಂದೂ ಕರೆಯುತ್ತಾರೆ.
ಶಾಯಿಯ ಬಣ್ಣದ ಬಗ್ಗೆಯೂ 1962 ರಲ್ಲೇ ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿತ್ತು. ನಕಲಿ ಮತದಾನ ಮತ್ತು ನಕಲು ತಡೆಯಲು ಬೆರಳುಗಳ ಮೇಲೆ ಇದನ್ನು ಬಳಸಲಾಗುತ್ತದೆ. ಆದಾಗ್ಯೂ, ಈ ಶಾಯಿ ತಯಾರಿಕೆಗೆ ಯಾವ ರೀತಿಯ ರಾಸಾಯನಿಕ ಅಥವಾ ಬಣ್ಣವನ್ನು ಬಳಸಲಾಗಿದೆ ಎಂಬುದು ಗೌಪ್ಯವಾಗಿದೆ. ಚುನಾವಣೆ ಹಾಗೂ ಮತದಾನದ ಭದ್ರತೆಯ ದೃಷ್ಟಿಯಿಂದ ಈ ಮಾಹಿತಿಯನ್ನು ಕಂಪನಿಯಾಗಲೀ ಚುನಾವಣಾ ಆಯೋಗವಾಗಲೀ ಬಹಿರಂಗಪಡಿಸುವುದಿಲ್ಲ. ಕೆಲವರು ಅದರಲ್ಲಿ ಸಿಲ್ವರ್ ನೈಟ್ರೇಟ್ ಬಳಸಲಾಗುತ್ತದೆ ಎಂದು ಹೇಳುತ್ತಾರಾದರೂ ಇದಕ್ಕೆ ದಾಖಲೆಗಳಿಲ್ಲ. 1962ರಲ್ಲಿ ಚುನಾವಣಾ ಆಯೋಗ ನೀಡಿದ ಸೂತ್ರದ ಆಧಾರದ ಮೇಲೆ ರಾಸಾಯನಿಕ ಮತ್ತು ಬಣ್ಣ ಸಂಯೋಜನೆಯನ್ನು ಬಳಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಕುಮಾರಸ್ವಾಮಿ ಅವರು ‘ಟಿವಿ9 ಗೆ ತಿಳಿಸಿದ್ದಾರೆ.
ಇದರ ವಿಶೇಷತೆ ಏನೆಂದರೆ, ಉಗುರುಗಳು ಮತ್ತು ಬೆರಳುಗಳ ಚರ್ಮದ ಮೇಲೆ ಹಚ್ಚಿದ 30 ಸೆಕೆಂಡ್ಗಳಲ್ಲಿ ಅದರ ಬಣ್ಣ ಕಪ್ಪಾಗಲು ಆರಂಭವಾಗುತ್ತದೆ. ಒಮ್ಮೆ ಬೆರಳುಗಳ ಮೇಲೆ ಹಚ್ಚಿದರೆ ಎಷ್ಟೇ ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
‘ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್’ ಕಂಪನಿಯನ್ನು 1937 ರಲ್ಲಿ ಮೈಸೂರಿನ ಮಹಾರಾಜ ಕೃಷ್ಣದೇವರಾಜ ಒಡೆಯರು ಪ್ರಾರಂಭಿಸಿದರು. ಈಗ ಈ ಕಂಪನಿಯು ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಂಪನಿಯು 10 ಸೀಷೆಯ (ಬಾಟಲ್) ಕಟ್ಟನ್ನೊಳಗೊಂಡ 1,30,000 ದಷ್ಟು ಶಾಯಿಯನ್ನು ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದೆ ಎಂದು ಕಂಪನಿಯ ಎಂಡಿ ತಿಳಿಸಿದ್ದಾರೆ. ಇದರ ಜತೆಗೆ ಕಂಪನಿಯು ಇವಿಎಂ ಯಂತ್ರಗಳನ್ನು ಸೀಲಿಂಗ್ ಮಾಡಲು ಬಳಸುವ 90,000 ಸೀಲ್ ವ್ಯಾಕ್ಸ್‌ಗಳನ್ನೂ ಚುನಾವಣಾ ಆಯೋಗಕ್ಕೆ ಪೂರೈಸಿದೆ.
ಸದ್ಯ ಶಾಯಿ ಬೆಲೆ 164 ರೂ. ಆಗಿದ್ದು, ವೆಚ್ಚದ ನಿರ್ಣಯವು ಅದರಲ್ಲಿ ಬಳಸಿದ ಕಚ್ಚಾ ವಸ್ತುಗಳ ಬೆಲೆಯನ್ನು ಅವಲಂಬಿಸಿರುತ್ತದೆ. 2024ರ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದು, 2024 ರ ಸಾರ್ವತ್ರಿಕ ಚುನಾವಣೆಗಾಗಿ, 30 ಲಕ್ಷ ಸೀಷೆ ಅಳಿಸಲಾಗದ ಶಾಯಿಗಾಗಿ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಅದರ ಮೇಲೆ ಕಂಪನಿಯು ಕೆಲಸವನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ. ಈ ಶಾಯಿಯನ್ನು ಆರು ತಿಂಗಳವರೆಗೆ ಮಾತ್ರ ಬಳಸಬಹುದು. ಚುನಾವಣೆಯ ನಿಗದಿತ ದಿನಾಂಕಕ್ಕಿಂತ 1 ರಿಂದ 3 ತಿಂಗಳ ಮೊದಲು ಅದರ ತಯಾರಿಗೆ ಅಧಿಕೃತ ಆರ್ಡರ್ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ಈ ವಿಶೇಷ ಶಾಯಿ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಚುನಾವಣಾ ಆಯೋಗವು 1 ರಿಂದ 3 ತಿಂಗಳ ಮುಂಚಿತವಾಗಿ ಅಧಿಕೃತ ಖರೀದಿಯ ಆರ್ಡರ್ ನೀಡುತ್ತದೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದ ನಂತರವೂ 1.25 ಕೋಟಿಯಷ್ಟು ಕಟ್ಟು ಶಾಯಿ (10 ಸೀಷೆಯ ಒಂದು ಕಟ್ಟು) ತಯಾರಿಸಲು 1 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಲೇಷ್ಯಾ, ಕಾಂಬೋಡಿಯಾ, ದಕ್ಷಿಣ ಆಫ್ರಿಕಾ, ಕೆನಡಾ, ಮಾಲ್ಡೀವ್ಸ್, ಟರ್ಕಿ, ನೇಪಾಳ ಅಫ್ಘಾನಿಸ್ತಾನ, ನೈಜೀರಿಯಾ, ಘಾನಾ, ಪಪುವಾ ನ್ಯೂಗಿನಿಯಾ, ಬುರ್ಕಿನಾ ಫಾಸೊ, ಬುರುಂಡಿ, ಟೋಗೊ ಮತ್ತು ಸಿಯೆರಾ ಲಿಯೋನ್ ಸೇರಿದಂತೆ ಏಷ್ಯಾದ ಒಟ್ಟು 30 ದೇಶಗಳಿಗೆ ಶಾಯಿ ರಫ್ತು ಮಾಡಲಾಗುತ್ತಿದೆ. ಆಫ್ರಿಕನ್ ರಾಷ್ಟ್ರಗಳ ಚುನಾವಣೆಯಲ್ಲಿ ಬಳಸಲು ಮೈಸೂರಿನಿಂದ ಈ ಶಾಯಿ ರಫ್ತಾಗುತ್ತದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Wed, 3 April 24