ವರುಣಾದಲ್ಲಿ ಲಿಂಗಾಯತ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಅಮಿತ್ ಶಾ; ಸಿದ್ದರಾಮಯ್ಯ ಬಗ್ಗೆ ಹೇಳಿದ್ದೇನು?
ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಸಚಿವ ವಿ. ಸೋಮಣ್ಣ ಕಣಕ್ಕಿಳಿದಿರುವ ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದರು.
ಮೈಸೂರು: ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಸಚಿವ ವಿ. ಸೋಮಣ್ಣ ಕಣಕ್ಕಿಳಿದಿರುವ ವರುಣಾ (Varuna) ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮಂಗಳವಾರ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹಳ ಮುಖ್ಯ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ ನೀಡಿರುವ ಮೀಸಲಾತಿಯನ್ನು ತೆಗೆದುಹಾಕಲಿದೆ ಎಂದು ಹೇಳಿದರು. ಸುತ್ತೂರು ಮಠದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಶಾ ಹಾಗೂ ಯಡಿಯೂರಪ್ಪ ವರುಣಾ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರ ನಡೆಸಿದರು.
‘ವಿಧಾನಸಭೆ ಚುನಾವಣೆಯಲ್ಲಿ ವರುಣಾ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ. ಸೋಮಣ್ಣ ಅವರಿಗೆ ನೀವು ನೀಡುವ ಮತಗಳು ಕರ್ನಾಟಕವನ್ನು ಸುರಕ್ಷಿತವಾಗಿಡುತ್ತವೆ. ಸಿದ್ದರಾಮಯ್ಯ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್‌ಐ ಮೇಲಿನ ನಿಷೇಧ ವಾಪಸ್ ಪಡೆಯಲಿದ್ದಾರೆ’ ಎಂದು ಶಾ ಹೇಳಿದರು.
ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಸಿದ್ದರಾಮಯ್ಯ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಲಿಂಗಾಯತ ಸಮುದಾಯದ ಮೀಸಲಾತಿಯನ್ನು ತೆಗೆದುಹಾಕುತ್ತಾರೆ ಎಂದು ಅವರು ಹೇಳಿದರು.
ಮೈಸೂರು ಭಾಗದ ಟಿ ನರಸೀಪುರ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಇದನ್ನೂ ಓದಿ: PM Modi: ಕಾಂಗ್ರೆಸ್ನವರಿಗೆ ಹನುಮಂತನ ಕಂಡರೂ ಆಗಲ್ಲ; ಬಜರಂಗದಳ ನಿಷೇಧ ಪ್ರಸ್ತಾವಕ್ಕೆ ಮೋದಿ ಟಾಂಗ್
ಮಂಗಳವಾರ ಸಂಜೆ ಬೆಂಗಳೂರಿನ ಬಿಎಂಟಿ ಲೇಔಟ್ ಕ್ಷೇತ್ರದಲ್ಲಿಯೂ ಶಾ ರೋಡ್ ಶೋ ನಡೆಸಿದರು. ಬಿಟಿಎಂ ಲೇಔಟ್ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ರೋಡ್ ಶೋ ವೇಳೆ ಶಾ ಜೊತೆಗಿದ್ದರು. ಬಿಟಿಎಂ ಲೇಔಟ್ ನಿಂದ ಶ್ರೀಧರ್ ರೆಡ್ಡಿ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಕಣಕ್ಕಿಳಿದಿದ್ದಾರೆ.
ಶಾ ಅವರ ರೋಡ್ ಶೋ ವೇಳೆ ಮಡಿವಾಳ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಬೀಸಿದರು ಮತ್ತು ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು. ಕೇಂದ್ರ ಗೃಹ ಸಚಿವರ ಪಥಸಂಚಲನ ಆಡುಗೋಡಿ ಸಿಗ್ನಲ್‌ನಿಂದ ಆರಂಭವಾಗಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ಮುಕ್ತಾಯವಾಯಿತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Tue, 2 May 23