ನಮ್ಮ ನಡೆ ಮತಗಟ್ಟೆಯ ಕಡೆ: ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗದಿಂದ ವಿನೂತನ ಪ್ರಯತ್ನ

|

Updated on: Apr 29, 2023 | 7:58 PM

ಸಾರ್ವಜನಿಕರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಚುನಾವಣಾ ಆಯೋಗವು ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದ 58,000 ಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ನಮ್ಮ ನಡೆ ಮತಗಟ್ಟೆಯ ಕಡೆ: ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗದಿಂದ ವಿನೂತನ ಪ್ರಯತ್ನ
'ಮ್ಮ ನಡೆ ಮತಗಟ್ಟೆಯ ಕಡೆ' ಚುನಾವಣೆ ಆಯೋಗದಿಂದ ವಿನೂತನ ಜಾಗೃತಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ರ (Karnataka Assembly Elections 2023) ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಮತದಾರನು ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಟ ದೇಶ ಕಟ್ಟುವಂತಾಗಲಿ ಎಂಬುದೇ ಚುನಾವಾಣಾ ಆಯೋಗದ (Karnataka Election Commission) ಸದಾಶಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಮತದಾನಕ್ಕೆ ಪ್ರೇರೇಪಿಸಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಹಮ್ಮಿಕೊಂಡು ಬಂದಿದೆ. ಇದೇ ಹಾದಿಯಲ್ಲಿನ ಮತ್ತೊಂದು ಪ್ರಯತ್ನವೇ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ. ಸಾರ್ವಜನಿಕರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರಾಜ್ಯದ 58,000 ಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಚುನಾವಣೆಯ ಮತದಾನ ಪ್ರಕ್ರಿಯೆ ಮೇ 10 ರಂದು ನಡೆಯಲಿದ್ದು, ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮವನ್ನು ಏಪ್ರಿಲ್ 30 ರಂದು ಬೆಳಿಗ್ಗೆ 8:00 ಗಂಟೆಗೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರತಿ ಮತಗಟ್ಟೆಯನ್ನು ಮತದಾರರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಂದು ‘ಪ್ರಜಾಪ್ರಭುತ್ವದ ಹಬ್ಬ’- ‘ಮೇ 10 ಮತದಾನ’ ಎಂಬ ದ್ಯೇಯ ಒಳಗೊಂಡಿರುವ ಬಾವುಟವನ್ನು ಪ್ರತಿ ಮತಗಟ್ಟೆಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಮತದಾರರನ್ನು ಸೆಳೆಯಲು ಸ್ಥಳೀಯ ಜನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾಲ್ನಡಿಗೆ ಜಾಥ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಪ್ರಚಾರದ ಮತ್ತೊಂದು ಮುಖ: ಚುನಾವಣಾ ಆಯೋಗಕ್ಕೆ ಹರಿದು ಬರುತ್ತಿವೆ ಪಕ್ಷಗಳ ಕಿರುಚಿತ್ರ​ಗಳು, ಪ್ರತಿದಿನ 100 ವಿಡಿಯೋ ಪರಿಶೀಲನೆ

ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತ್ರತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಬಿತ್ತಿಪತ್ರಗಳ ವಿತರಣೆ, ಎಲ್ಇಡಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಭಾರತ ಚುನಾವಣಾ ಆಯೋಗ ನೈತಿಕ ಚುನಾವಣೆ ನಡೆಸಲು ಮತದಾರರಿಗಾಗಿ ಹೊರ ತಂದಿರುವ ಸಿವಿಜಿಲ್, ಕೆವೈಸಿ, ಚುನಾವಣಾ, ಸಕ್ಷಮ್ ಆ್ಯಪ್​ಗಳು ಸೇರಿದಂತೆ ಸಹಾಯವಾಣಿ 1950 ಬಗ್ಗೆ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಮತದಾನದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ ವಿನೂತನವಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ