Karnataka Politics: ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ, ಸಿಎಂ ಪ್ರವಾಸ, ಬಿಜೆಪಿ ಜನೋತ್ಸವ, ಕರ್ನಾಟಕಕ್ಕೆ ವರಿಷ್ಠರ ಭೇಟಿ
ಮುಖ್ಯಮಂತ್ರಿಗಳು ಪ್ರವಾಸ ಮಾಡಲಿರುವ 50 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಮತ್ತು ಸೋಲನುಭವಿಸಿದ ಕ್ಷೇತ್ರಗಳು ಇರುವಂತೆ ಎಚ್ಚರ ವಹಿಸಲಾಗಿದೆ.
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Legislative Assembly Elections 2023) ಬಿಜೆಪಿ ಚುರುಕಿನ ಸಿದ್ಧತೆ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ಕಾರ್ಯಕರ್ತರನ್ನು ಸಂಘಟಿಸಲಿದ್ದಾರೆ. ಈ ವೇಳೆ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸಿ ಹೇಳಲು ಬೊಮ್ಮಾಯಿ ಪ್ರಯತ್ನ ಮಾಡಲಿದ್ದಾರೆ. ಮುಖ್ಯಮಂತ್ರಿ ಪ್ರವಾಸ ನಡೆಸಲಿರುವ ಕ್ಷೇತ್ರಗಳನ್ನು ಅತ್ಯಂತ ಎಚ್ಚರಿಕೆಯಿಂದ ಆರಿಸಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ನಡೆ ಹೇಗಿರುತ್ತದೆ ಎನ್ನುವುದನ್ನು ಈ ಪ್ರವಾಸ ನಿರ್ಧರಿಸಲಿದೆ.
ಮುಖ್ಯಮಂತ್ರಿಗಳು ಪ್ರವಾಸ ಮಾಡಲಿರುವ 50 ಕ್ಷೇತ್ರಗಳ ಪೈಕಿ ಬಿಜೆಪಿ ಗೆಲುವು ಸಾಧಿಸಿದ ಮತ್ತು ಸೋಲನುಭವಿಸಿದ ಕ್ಷೇತ್ರಗಳನ್ನು ಜಾಣತನದಿಂದ ಆಯ್ಕೆ ಮಾಡಲಾಗಿದೆ. ಎರಡು ದಿನಕ್ಕೆ ನಾಲ್ಕು ಕ್ಷೇತ್ರಗಳಲ್ಲಿ ಸಂಚಾರ ನಡೆಸುವ ರೀತಿಯಲ್ಲಿಯೇ ಪ್ರವಾಸವನ್ನು ಆಯೋಜಿಸಲಾಗಿದೆ. ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ಸಿಎಂ ಕಳುಹಿಸಿಕೊಟ್ಟಿದ್ದಾರೆ. ಪಕ್ಷದ ಸಮ್ಮತಿ ಸಕ್ಕ ನಂತರ ವೇಳಾಪಟ್ಟಿಯನ್ನು ಅಂತಿಮಗೊಳಿಸಿ, ದಿನಾಂಕ ಘೋಷಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳ ಪ್ರವಾಸ ಆರಂಭವಾಗುವ ನಿರೀಕ್ಷೆಯಿದ್ದು, ಕಾರ್ಯಕರ್ತರಿಗೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮತ್ತೆ ಸಂಪುಟ ವಿಸ್ತರಣೆ ಚರ್ಚೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ‘ಬಿಜೆಪಿ ಜನೋತ್ಸವ’ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಆಹ್ವಾನಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಾರೆ ಎನ್ನುವುದು ಅರಿವಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಇಂದು (ಆಗಸ್ಟ್ 17) ಸಚಿವ ಸ್ಥಾನದ ಆಕಾಂಕ್ಷಿ ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿ ಕೆಲಸ ಸಮಯ ಚರ್ಚಿಸಿದರು. ನಿನ್ನೆಯಷ್ಟೇ ಕಟೀಲ್ ಅವರನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಯಾಗಿದ್ದರು.
ವರಿಷ್ಠರು ಸೂಚಿಸಿದ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಕೈಗೆತ್ತಿಕೊಳ್ಳಲಿದ್ದಾರೆ. ಈ ಮಧ್ಯೆ ಕೆಲವು ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸುವ ಮೂಲಕ ಪಕ್ಷಕ್ಕೆ ಬಲ ತುಂಬಲು ದೆಹಲಿಯಲ್ಲಿರುವ ರಾಷ್ಟ್ರಮಟ್ಟದ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ವರಿಷ್ಠರ ನಿರ್ದೇಶನದಂತೆ ಮತ್ತೊಮ್ಮೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರಕ್ರಿಯೆ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಜನೋತ್ಸವದಲ್ಲಿ ರಿಪೋರ್ಟ್ ಕಾರ್ಡ್ ಬಹಿರಂಗ: ಸುಧಾಕರ್
ದೊಡ್ಡಬಳ್ಳಾಪುರದಲ್ಲಿ ಆಗಸ್ಟ್ 28ರಂದು ಜನೋತ್ಸವ ಕಾರ್ಯಕ್ರಮ ನಡೆಸಲು ಬಿಜೆಪಿ ಮತ್ತೆ ಸಿದ್ಧತೆ ಆರಂಭಿಸಿದೆ. ಈ ಮೊದಲು ಜುಲೈ 28ರಂದು ಜನೋತ್ಸವ ನಡೆಯಬೇಕೆಂದು ದಿನಾಂಕ ನಿಗದಿಯಾಗಿತ್ತು. ಆದರೆ ಸುಳ್ಯ ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ನಂತರ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದೀಗ ಮತ್ತೊಮ್ಮೆ ಜನೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಕರ್ನಾಟಕ ಘಟಕದ ನಾಯಕರು ರಾಷ್ಟ್ರೀಯ ನಾಯಕರ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ ಕೆ.ಸುಧಾಕರ್, ಜನೋತ್ಸವದಲ್ಲಿ ಯಡಿಯೂರಪ್ಪ ಸರ್ಕಾರದ ಎರಡು ವರ್ಷ, ಬೊಮ್ಮಾಯಿ ಆಡಳಿತದ ಒಂದು ವರ್ಷದಲ್ಲಿ ಆದ ಬದಲಾವಣೆಗಳು ಮತ್ತು ಪ್ರಗತಿಯನ್ನು ಜನರ ಮುಂದೆ ಇರಿಸುತ್ತೇವೆ. ಈ ಭಾಗದಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲು ಪಕ್ಷವು ತೀರ್ಮಾನಿಸಿದೆ. ಈ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಆ ಭಾಗದ ಜನಪ್ರತಿನಿಧಿಗಳು ಸಭೆ ನಡೆಸಿದ್ದೇವೆ ಎಂದು ಹೇಳಿದರು.
ನಮ್ಮ ರಾಷ್ಟ್ರೀಯ ನಾಯಕರು ಯಾವ ಸಮಯ ಕೊಡುತ್ತಾರೆ ನೋಡಬೇಕಾಗಿದೆ. ಇವತ್ತು ರಾತ್ರಿ ಅಥವಾ ನಾಳೆ ದಿನಾಂಕ ನಿಗದಿಯಾಗುತ್ತದೆ. ಅದರೆ ಕಾರ್ಯಕ್ರಮದ ಸ್ಥಳ ಮಾತ್ರ ದೊಡ್ಡಬಳ್ಳಾಪುರವೇ ಆಗಿರುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆಗೆ ಮತ್ತೊಬ್ಬ ಪ್ರಮುಖ ನಾಯಕನನ್ನು ಆಹ್ವಾನ ಮಾಡಬೇಕು ಎಂದುಕೊಂಡಿದ್ದೇವೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಭಾಗದಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದ ರಿಪೋರ್ಟ್ ಕಾರ್ಡ್ 2018ರಲ್ಲಿ ಬಂದಿತ್ತು. 128 ಇದ್ದ ಆ ಪಕ್ಷದ ಶಾಸಕರ ಸಂಖ್ಯೆಯು 78ಕ್ಕೆ ಇಳಿದಿತ್ತು. ಈಗ ನಾವು 121 ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಜನರು ಯಾವ ರಿಪೋರ್ಟ್ ಕಾರ್ಡ್ ಕೊಡುತ್ತಾರೆ ನೋಡೋಣ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡವನಿಗೆ ನಮ್ಮ ಸರ್ಕಾರ ಕರೆಂಟ್ ಉಚಿತವಾಗಿ ಕೊಟ್ಟಿದೆ. ಇಲ್ಲಿವರೆಗೆ ಯಾವ ಸರ್ಕಾರವು ಕೊಟ್ಟಿಲ್ಲ. ಕಾಂಗ್ರೆಸ್ ಏನೆಲ್ಲ ಹೇಳುತ್ತಿದೆ ಅದು ಸತ್ಯಕ್ಕೆ ದೂರವಾದುದು. ಯಾರನ್ನು ತೆಗೆಯಬೇಕು ಯಾರನ್ನ ಕೂರಿಸಬೇಕು ಅನ್ನೋದು ಜನರಿಗೆ ಬಿಟ್ಟಿದ್ದು. ಜನರ ಕೋರ್ಟ್ ಅಂತಿಮ ಎಂದು ಹೇಳಿದರು.
Published On - 12:33 pm, Wed, 17 August 22