ರಾಣೇಬೆನ್ನೂರು: ಸ್ಟೀಲ್ ಬುಟ್ಟಿಯಲ್ಲಿ 10 ಸಾವಿರ ನಾಣ್ಯ ತಂದಿಟ್ಟ ಎಎಪಿ ಅಭ್ಯರ್ಥಿ, ಚುನಾವಣಾಧಿಕಾರಿಗಳು ಬೇಸ್ತು!
ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಅಭ್ಯರ್ಥಿಯೊಬ್ಬರು ರಾಶಿ ರಾಶಿ ನಾಣ್ಯಗಳನ್ನು ತಂದು ಮುಂದಿಟ್ಟಿದ್ದರಿಂದ ಚುನಾವಣಾ ಅಧಿಕಾರಿಗಳು ಬೇಸ್ತು ಬಿದ್ದ ಅಪರೂಪದ ವಿದ್ಯಮಾನ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.
ಹಾವೇರಿ: ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಅಭ್ಯರ್ಥಿಯೊಬ್ಬರು ರಾಶಿ ರಾಶಿ ನಾಣ್ಯಗಳನ್ನು ತಂದು ಮುಂದಿಟ್ಟಿದ್ದರಿಂದ ಚುನಾವಣಾ ಅಧಿಕಾರಿಗಳು ಬೇಸ್ತು ಬಿದ್ದ ಅಪರೂಪದ ವಿದ್ಯಮಾನ ಜಿಲ್ಲೆಯ ರಾಣೇಬೆನ್ನೂರಿನಲ್ಲಿ (Ranebennur) ನಡೆದಿದೆ. ಆಮ್ ಆದ್ಮಿ ಪಕ್ಷದ (AAP) ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಅವರು ಸೋಮವಾರ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಠೇವಣಿ ಇಡುವುದಕ್ಕಾಗಿ ಅವರು ಕೂಡಿಟ್ಟ ನಾಣ್ಯಗಳೊಂದಿಗೆ ಬಂದಿದ್ದಾರೆ. 10 ಸಾವಿರ ರೂಪಾಯಿ ನಾಣ್ಯಗಳನ್ನೇ ಸ್ಟೀಲ್ ಬುಟ್ಟಿಯಲ್ಲಿ ತುಂಬಿಕೊಂಡು ಬಂದಿದ್ದ ಅವರು, ಅದನ್ನು ಚುನಾವಣಾ ಅಧಿಕಾರಿಗಳ ಮುಂದಿಟ್ಟರು.
ಹನುಮಂತಪ್ಪ ಕಬ್ಬಾರ ತಂದಿಟ್ಟ ನಾಣ್ಯಗಳನ್ನು ಎಣಿಸುವಂತೆ ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಡಮನಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ, 10 ಸಾವಿರ ನಾಣ್ಯಗಳನ್ನು ಎಣಿಸಲು ಸಿಬ್ಬಂದಿ ಸುಸ್ತಾದರು. ಕೊನೆಗೂ ಒಟ್ಟು ಲೆಕ್ಕ ಹಾಕಿ 10 ಸಾವಿರ ನಾಣ್ಯಗಳನ್ನು ಬ್ಯಾಂಕ್ಗೆ ನೀಡಿ ಅದರ ಬದಲಾಗಿ ನೋಟು ತೆಗೆದುಕೊಂಡು ಬಂದರು.
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ಈ ಬಾರಿ ಆಮ್ ಆದ್ಮಿ ಪಕ್ಷ ಕೂಡ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ಆಮ್ ಆದ್ಮಿ ಪಕ್ಷಕ್ಕೆ ಕಳೆದ ವಾರವಷ್ಟೇ ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಹೊಸ ಹುರುಪಿನೊಂದಿಗೆ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: AAP: ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿದ ಕೇಂದ್ರ ಚುನಾವಣಾ ಆಯೋಗ
ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆಮ್ ಆದ್ಮಿ ಪಕ್ಷ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಮಂಗಳೂರು ನಗರ ದಕ್ಷಿಣ, ಮುಲ್ಕಿ-ಮೂಡಬಿದರೆ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಗಳೂರು ನಗರ ದಕ್ಷಿಣ ದಿಂದ ಸಂತೋಷ್ ಕಾಮತ, ಮುಲ್ಕಿ-ಮೂಡಬಿದರೆಯಿಂದ ವಿಜಯನಾಥ ವಿಠಲ ಶೆಟ್ಟಿ, ಸುಳ್ಯದಿಂದ ಸುಮನಾ ಸ್ಪರ್ಧಿಸುತ್ತಿದ್ದಾರೆ. 224 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಎಎಪಿ ಇತ್ತೀಚೆಗೆ ಘೋಷಿಸಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ