Laxman Savadi: ಟಿಕೆಟ್ ತಪ್ಪಿದ್ದರಿಂದ ಪಕ್ಷ ಬಿಡುತ್ತಿಲ್ಲ; ಬಿಜೆಪಿ ಬಿಡುತ್ತಿರುವುದಕ್ಕೆ ಬೇರೆಯೇ ಕಾರಣ ನೀಡಿದ ಲಕ್ಷ್ಮಣ ಸವದಿ
ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿತು ಎಂಬ ಕಾರಣಕ್ಕಾಗಿ ಪಕ್ಷ ಬಿಡುತ್ತಿಲ್ಲ ಎಂದು ಲಕ್ಷ್ಮಣ ಸವದಿ ಗುರುವಾರ ಹೇಳಿದ್ದಾರೆ.
ಬೆಳಗಾವಿ: ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿತು ಎಂಬ ಕಾರಣಕ್ಕಾಗಿ ಪಕ್ಷ ಬಿಡುತ್ತಿಲ್ಲ ಎಂದು ಲಕ್ಷ್ಮಣ ಸವದಿ (Laxman Savadi) ಗುರುವಾರ ಹೇಳಿದ್ದಾರೆ. ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಅನೇಕ ಮುಖಂಡರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಬೇಸರವಾಗಿದೆ. ನನಗೆ ಆಂತರಿಕವಾಗಿ ಬಹಳಷ್ಟು ನೋವು ಮತ್ತು ಹಿಂಸೆ ಆಗಿದೆ. ಆದರೂ ಪಕ್ಷ ನನ್ನ ತಾಯಿ ಎಂದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೆ ಸೂಚನೆ ನೀಡದೆ ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರೂ ಸುಮ್ಮನಿದ್ದೆ. ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಟಿಪ್ಪಣಿ ಮಾಡಿಲ್ಲ. ಆದಾಗ್ಯೂ ಕಡೆಗಣಿಸಿರುವುದು ಬೇಸರ ತಂದಿದೆ. ಹೀಗಾಗಿ ಪಕ್ಷದಿಂದ ಹೊರ ಹೋಗಲು ತೀರ್ಮಾನ ಮಾಡಿದ್ದೇನೆ ಎಂದು ಸವದಿ ಹೇಳಿದ್ದಾರೆ.
ಹೊಸದಾಗಿ ಪಕ್ಷಕ್ಕೆ ಬಂದವರ ಮೇಲೆ ಈಗ ಮೋಹ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಗುರು ಬಿಎಲ್ ಸಂತೋಷ್ ಕರೆ ಮಾಡಿದರೂ ಸ್ವೀಕರಿಸಿಲ್ಲ. ಗುರುವಿನ ಮನಸಿಗೆ ನೋವು ಆಗಬಾರದು ಎಂದು ಕರೆ ಸ್ವೀಕರಿಸಲಿಲ್ಲ. ಇದೇ ಕಾರಣಕ್ಕೆ ನಾನು ಮೊದಲೇ ಕ್ಷಮೆಯಾಚನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಕರೆ ಮಾಡಿಲ್ಲ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನಗೆ ಕರೆ ಮಾಡಿಲ್ಲ. ಬೇರೆಯವರ ಮುಖಾಂತರ ಸಂಪರ್ಕ ಮಾಡಿದ್ದಾರೆ ಎಂದು ಸವದಿ ತಿಳಿಸಿದ್ದಾರೆ.
ನಾಳೆ ರಾಜೀನಾಮೆ ಎಂದ ಸವದಿ
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುತ್ತೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವೆ. ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ವಿಧಾನಪರಿಷತ್ ಸಭಾಪತಿಗೆ ಈಗಾಗಲೇ ಸಮಯ ಕೇಳಿದ್ದೇನೆ. ಶುಕ್ರವಾರ ಮಧ್ಯಾಹ್ನ ಭೇಟಿಯಾಗಲು ಸಭಾಪತಿ ಸಮಯ ಕೊಟ್ಟಿದ್ದಾರೆ. ಇಂದು ರಾತ್ರಿ ಬೆಂಗಳೂರಿಗೆ ತೆರಳಿ, ನಾಳೆ ರಾಜೀನಾಮೆ ಕೊಡಲಿದ್ದೇನೆ.
ಇದನ್ನೂ ಓದಿ: ರಾಜ್ಯ ಬಿಜೆಪಿಯ ಈ ಬೆಳವಣಿಗೆ ಒಳ್ಳೆಯದಲ್ಲ: ಗಾಲಿ ಜನಾರ್ದನ ರೆಡ್ಡಿ
ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಹೈಕಮಾಂಡ್ ಕಳುಹಿಸಿಲ್ಲ. ನನ್ನ ಮೇಲಿನ ಅಭಿಮಾನದಿಂದ ಹಾಗೂ ಸ್ನೇಹಿತನಾಗಿ ಅವರು ಬಂದಿದ್ದರು ಎಂದೂ ಸವದಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ