ರಾಜ್ಯ ಬಿಜೆಪಿಯ ಈ ಬೆಳವಣಿಗೆ ಒಳ್ಳೆಯದಲ್ಲ: ಗಾಲಿ ಜನಾರ್ದನ ರೆಡ್ಡಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕೆಎಸ್ ಈಶ್ವರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗಾಲಿ ಜನಾರ್ದನ ರೆಡ್ಡ, ಈ ಬೆಳವಣಿಗೆ ಒಳ್ಳೆಯದಲ್ಲ ಎಂದಿದ್ದಾರೆ.
ಕೊಪ್ಪಳ: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ನಿನ್ನೆ (ಏಪ್ರಿಲ್ 11) ಬಿಡುಗಡೆಯಾಗಿದ್ದು, ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ (KS Eshwarappa), ಲಕ್ಷ್ಮಣ ಸವದಿಗೆ (Laxman Savadi) ಟಿಕೆಟ್ ಕೈತಪ್ಪಿದೆ. ಇನ್ನು, ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದ್ದು, ಇಂದು ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಆರ್ಪಿಪಿ ಮುಖ್ಯಸ್ಥ ಗಾಲಿ ಜನಾರ್ದನ ರೆಡ್ಡಿ (Gali Janardhan Reddy), ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಅವರಂತಹ ನಾಯಕರನ್ನು ಕಡೆಗಣಿಸಿದ್ದು ಸರಿ ಅಲ್ಲ ಎಂದರು.
ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮಾತನಾಡಿದ ಜನಾರ್ದನ ರೆಡ್ಡ, ಹಿಂದೆ ಯಾವ ಗುಂಪು ನನ್ನನ್ನ ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳಬಾರದು ಎಂದು ತಡೆದಿತ್ತೋ ಅದೇ ಗುಂಪು ಇಂದು ಯಡಿಯೂರಪ್ಪ ಅವರಿಗೆ ಫುಲ್ ಸ್ಟಾಪ್ ಇಟ್ಟಿದೆ. ಅವರು ವಿಧಾನಸೌಧದಲ್ಲಿ ಕಣ್ಣೀರುಡುವಂತೆ ಮಾಡಿತು, ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷಕ್ಕಾಗಿ 30 ವರ್ಷ ದುಡಿದಿದ್ದಾರೆ. ಅವರಿಗೆ ಟಿಕೆಟ್ ಇಲ್ಲ ಅನ್ನೋದು ಸರಿಯಲ್ಲ ಎಂದರು.
ಇದನ್ನೂ ಓದಿ: ಹಿಂದೆ ಕೆಲವರು ನನ್ನನ್ನು ಫುಟ್‌ಬಾಲ್‌ನಂತೆ ಬಳಸಿಕೊಂಡರು ಎಂದು ಹಳೆ ದಿನಗಳನ್ನು ಮೆಲಕು ಹಾಕಿದ ಜನಾರ್ದನ ರೆಡ್ಡಿ
75ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇತಿಹಾಸ ಸೃಷ್ಟಿಯಾಗುವಂತೆ ಕೆಲಸ ಮಾಡಿದ್ದರು. ಜಗದೀಶ್ ಶೆಟ್ಟರ್ ಅವರಿಗೆ ರಾಜಕೀಯ ಮಾಡದೇ ಇರುವಂತ ಪರಸ್ಥಿತಿ ಬಂದಿಲ್ಲ. ಜನಾರ್ದನ ರೆಡ್ಡಿಯನ್ನ ಕಡೆಗಣೆಸಿದ್ದು ಅದು ಬೇರೆ. ಆದರೆ ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪ ಅಂತವರನ್ನ ಕಡೆಗಣಿಸಿದ್ದು ಸರಿಯಲ್ಲ. ಇವರೆಲ್ಲರೂ ಪಕ್ಷಕ್ಕಾಗಿ ದುಡಿದ್ದಾರೆ. ಕೆಲವೇ ದಿನಗಳಲ್ಲಿ ಈ ಬೆಳವಣಿಗಳ ಬಗ್ಗೆ ಬಹಳ ವಿಸ್ತ್ರತವಾಗಿ ಮಾತನಾಡುತ್ತೇನೆ. ನಿಮ್ಮ ಮುಂದೆ ಎಲ್ಲವನ್ನ ಹಂಚಿಕೊಳ್ಳುತ್ತೆನೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು.
ಬಿಎಲ್ ಸಂತೋಷ್ಗೆ ಟಾಂಗ್ ಕೊಟ್ಟ ರೆಡ್ಡಿ
ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಗೂಳಿಹಟ್ಟಿ ಶೇಖರ್ ಅವರು ಇಂದು ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡ, ಈಗಾಗಲೇ ನನ್ನ ಜೊತೆ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ. ಇವತ್ತು ನಾಳೆಯೊಳಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಥಣಿಯಲ್ಲಿ ಈಗಾಗಲೇ ಕ್ಯಾಂಡಿಡೇಟ್ ಹಾಕಿದ್ದೇನೆ. ಅಲ್ಲಿ ಪ್ರಶ್ನೆಯೇ ಬರುವುದಿಲ್ಲ ಎಂದರು. ಯಾರ ಸಂತೋಷಕ್ಕಾಗಿ ಬಿಜೆಪಿ ಈ ರೀತಿ ಮಾಡುತ್ತಿದೆ ಎನ್ನೋ ಪ್ರಶ್ನೆಗೆ ನಗುತ್ತಲೇ ನಿಮ್ಮ ಪ್ರಶ್ನೆಯಲ್ಲೆ ಉತ್ತರವಿದೆ ಎನ್ನುತ್ತ ಪರೋಕ್ಷವಾಗಿ ಬಿ.ಎಲ್ ಸಂತೋಷಗೆ ಟಾಂಗ್ ನೀಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ