ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುವುದು ಬೇಡ: ಸಿಎಂ ಆಯ್ಕೆಯ ಬಗ್ಗೆ ಈಗಲೇ ಏನೂ ಹೇಳಲ್ಲ ಎಂದ ಖರ್ಗೆ
ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುವುದು ಬೇಡ. ಸಿಎಂ ಆಯ್ಕೆಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಫಲಿತಾಂಶದ ಬಳಿಕ ಎಲ್ಲಾ ನಿರ್ಧಾರ ಮಾಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರು: ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುವುದು ಬೇಡ. ಸಿಎಂ ಆಯ್ಕೆಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಫಲಿತಾಂಶದ ಬಳಿಕ ಎಲ್ಲಾ ನಿರ್ಧಾರ ಮಾಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿಎಂ ಯಾರಾಗ್ತಾರೆ ಎಂಬ ವಿಚಾರವಾಗಿ ಅವರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ವಿಶ್ವಾಸದ ಬಗ್ಗೆ ನಾನು ಮಾತಾಡಲ್ಲ, ನಮಗೆ ಬಹುಮತ ಬರುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರಿಂದ ಸಭೆ
ನಾಳೆ ರಾಜ್ಯದ 224 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹಿನ್ನೆಲೆ ಶುಕ್ರವಾರ ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರಿಂದ ಸಭೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭಾಗಿಯಾಗಿದ್ದರು. ನಾಳೆ ಫಲಿತಾಂಶ ಬಳಿಕ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತೆ, ನಮ್ಮ ಅಭ್ಯರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ -ಸಿ.ಎಂ.ಇಬ್ರಾಹಿಂ
ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಲು ಹೆಚ್‌ಡಿ ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎಂದ ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಲು ಹೆಚ್‌ಡಿ ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗಲು ಒಂದು ದಿನ ಬಾಕಿ ಇರುವಾಗಲೇ ಅವರಿಂದ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಂತ್ರ ವಿಧಾನಸಭೆ ಸಾಧ್ಯತೆ ಇಲ್ಲ. ಒಂದು ವೇಳೆ, ಹಾಗಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಅದಕ್ಕೆ ಕುಮಾರಸ್ವಾಮಿ ಬೆಂಬಲ ನೀಡಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Karnataka Election Result: ಮತ ಎಣಿಕೆಗೆ ಬೆಂಗಳೂರು ಸನ್ನದ್ಧ, ಹಲವೆಡೆ ಸಂಚಾರ ನಿರ್ಬಂಧ; ಇಲ್ಲಿದೆ ವಿವರ
ಕಾಂಗ್ರೆಸ್ ಪಕ್ಷವು 2004 ಮತ್ತು 2018 ರಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿತ್ತು. ಎರಡೂ ಸಂದರ್ಭಗಳಲ್ಲಿ, ಪೂರ್ಣಾವಧಿ ಸರ್ಕಾರ ನೀಡಲು ಸಾಧ್ಯವಾಗಿರಲಿಲ್ಲ.
ನಮಗೆ ಮ್ಯಾಜಿಕ್ ನಂಬರ್ ದಾಟುವ ವಿಶ್ವಾಸವಿದೆ -ಸಿಎಂ ಬೊಮ್ಮಾಯಿ
ಮತ್ತೊಂದೆಡೆ ಬಿಜೆಪಿಗೆ ಬಹುಮತ ಬರುವ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಗ್ರೌಂಡ್ ರಿಪೋರ್ಟ್ ತಂದಿದ್ದೇವೆ. ನಮಗೆ ಮ್ಯಾಜಿಕ್ ನಂಬರ್ ದಾಟುವ ವಿಶ್ವಾಸವಿದೆ. ಮೈತ್ರಿ ಸರ್ಕಾರ ರಚಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಕೇಂದ್ರ ನಾಯಕರಿಗೆ ನಾನೇ ವಾಸ್ತವ ಸ್ಥಿತಿಯನ್ನು ತಿಳಿಸಿದ್ದೇನೆ. ಕೇಂದ್ರ ನಾಯಕರಿಗೂ ಬಹುಮತ ಬರುವ ವಿಶ್ವಾಸ ಇದೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Fri, 12 May 23