ಬೆಂಗಳೂರು: ಮುಳಬಾಗಿಲು ಪಕ್ಷೇತರ ಶಾಸಕ ಹೆಚ್.ನಾಗೇಶ್ (H Nagesh) ಹಾಗೂ ಜೆಡಿಎಸ್ ಮಾಜಿ ಶಾಸಕ ವೈಎಸ್‌ವಿ ದತ್ತಾ (YSV Datta) ಅವರು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರ್ಪಡೆಯಾದರು. ಇಂದು(ಜನವರಿ 14) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ದತ್ತಾ , ನಾಗೇಶ್ ಮತ್ತು ಮೈಸೂರಿನ ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಕೂಡ ಕಾಂಗ್ರೆಸ್ ಸೇರಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇವತ್ತು ಮಕರ ಸಂಕ್ರಮಣ ರೈತರ ಬದುಕು ಶುಭಾರಂಭ ಆಗುವ ಕ್ಷಣ. ಇಂತಹ ಪವಿತ್ರ ದಿನದಂದು ಪಕ್ಷ ಸೇರ್ಪಡೆ ಆಗಿದ್ದಾರೆ. ಆಡಳಿತ ಪಕ್ಷದ ವಿರುದ್ಧ ದಿನೇ ದಿನೇ ವಿಶ್ವಾಸ ಕಡಿಮೆ ಆಗುತ್ತಿದೆ. ಜನರಿಗೆ ಉತ್ತಮ ಆಡಳಿತ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಬಹಳ ಜನ ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಪ್ರಮುಖ ಇಬ್ಬರು ನಾಯಕರಾದ ವೈಎಸ್‌ವಿ ದತ್ತಾ, ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್. ನಾಗೇಶ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಕೊಟ್ಟ ಅಧಿಕಾರವನ್ನ ತ್ಯಾಗ ಮಾಡಿ ನಾಗೇಶ್ ಸೇರ್ಪಡೆ ಆಗಲು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾಗೇಶ್ ಅವರಿಗೆ ಸ್ವಾಗತ ಬಯಸುತ್ತೇನೆ. ವೈಎಸ್‌ವಿ ದತ್ತಾ ಅವರನ್ನ 48 ವರ್ಷದಿಂದ ಬಲ್ಲೆ. ದತ್ತಾ ಅವರು ಪಾಠ ಹೇಳುವಾಗ ನ್ಯಾಷನಲ್ ಕಾಲೇಜಿನಲ್ಲಿ ನಾನು ಸ್ಟೂಡೆಂಟ್ ಆಗಿದ್ದೆ. ಕಡೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು. ಜೆಡಿಎಸ್ ನಲ್ಲಿ ಹಲವು ಹುದ್ದೆಗಳಿದ್ದವರು. ಅಲ್ಲಿ ನಮಗೆ ಭವಿಷ್ಯ ಇಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿದ್ದು, ಅವರಿಗೆ ಸ್ವಾಗತ ಬಯಸುತ್ತೇನೆ. ಮೈಸೂರಿನ ಮೂಡ ಅಧ್ಯಕ್ಷರಾಗಿದ್ದವರು ಮೋಹನ್ ಹಿಂದೆ ಪಕ್ಷದಲ್ಲಿ ಕೆಲಸ ಮಾಡಿದ್ದವರು. ಬಿಜೆಪಿ ತೊರೆದು ಪಕ್ಷ ಸೇರ್ಪಡೆ ಆಗಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ ಎಂದರು.
. ಇದು ಆರಂಭ ಅಷ್ಟೇ ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ಮುಂದೆ ಪ್ರವಾಸಕ್ಕೆ ಹೋದಾಗ ಅಲ್ಲಿಯೂ ಸೇರ್ಪಡೆ ಆಗುವ ಕಾರ್ಯಕ್ರಮಗಳು ಇವೆ. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಇದು ಕಾಂಗ್ರೆಸ್ ಪರ್ವ. ಸಾಕಷ್ಟು ಸರ್ವೆಗಳಾಗಿವೆ. ಎಲ್ಲವೂ ನಮ್ಮ ಪರವಾಗಿವೆ. ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಪಕ್ಷಕ್ಕೆ ಸೇರುವವರೆಲ್ಲರೂ ಕಾರ್ಯಕರ್ತರಾಗಿ, ನಾಯಕರಾಗಿ ದುಡಿಯಬೇಕು. 28 ಜನ ವೀಕ್ಷಕರು ಲೋಕಸಭಾ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಪ್ರಿಯಾಂಕಾ ಗಾಂಧಿ ಅವರು ನಾ ನಾಯಕಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾರೂ ಗಂಡು ಮಕ್ಕಳು ಸಮಾವೇಶಕ್ಕೆ ಬರಬೇಡಿ. ನಾವೂ ಕೂಡ ವೇದಿಕೆ ಎದುರು ಕೂಡುತ್ತೇವೆ. ಸಮಾವೇಶದ ಎಲ್ಲ ಜವಾಬ್ದಾರಿಯನ್ನು ಹೆಣ್ಣುಮಕ್ಕಳಿಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ