ಗುಜರಾತ್, ಹಿಮಾಚಲ್ ಆಯ್ತು ಈಗ ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ-ಶಾ ತಂತ್ರ, ಕಟೀಲ್ ಜತೆ ಮಹತ್ವದ ಚರ್ಚೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2022 | 10:01 PM

Karnataka Assembly Election 2023,: ಗುಜರಾತ್, ಹಿಮಾಚಲ್ ಆಯ್ತು ಈಗ ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ-ಶಾ ತಂತ್ರ ರೂಪಿಸಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಗುಜರಾತ್, ಹಿಮಾಚಲ್ ಆಯ್ತು ಈಗ ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ-ಶಾ ತಂತ್ರ, ಕಟೀಲ್ ಜತೆ ಮಹತ್ವದ ಚರ್ಚೆ
Narendra Modi And amit shah
Follow us on

ನವದೆಹಲಿ/ಬೆಂಗಳೂರು: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (Gujarat, Himachal Pradesh Assembly Election 2022) ಅಂತ್ಯವಾಗಿದ್ದು, ಎರಡು ರಾಜ್ಯಗಳ ಎಕ್ಸಿಟ್ ಪೋಲ್ ರಿಪೋರ್ಟ್ ( Exit Poll Results 2022) ಬಂದಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಯ ನಾಗಲೋಟ ಕಮಲ ಪಾಳಯದಲ್ಲಿ ಹುಮ್ಮಸ್ಸು ತುಂಬಿದೆ. ಗುಜರಾತ್ ಗುಡಿಸಿ, ಹಿಮಾಚಲ ಪ್ರದೇಶವನ್ನ ಬುಟ್ಟಿಗೆ ಹಾಕಿಕೊಳ್ಳೋದು ಪಕ್ಕಾ ಎಂದು ಗೊತ್ತಾದ ಬಳಿಕ ಬಿಜೆಪಿ ರಣತಂತ್ರವೇ ಬದಲಾಗಿದೆ. ಮೋದಿ ಹಾಗೂ ಅಮಿತ್ ಶಾ (Narendra Modi And amit shah) ಜೋಡಿಯ ಮುಂದಿನ ಬೇಟೆಯೇ ಕರ್ನಾಟಕ(Karnataka Assembly Election 2023).

ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ ತಂತ್ರ

ಹೌದು…ದೇಶಾದ್ಯಂತ ಕಮಲ ಅರಳಿಸಲು ಸ್ಕೆಚ್ ರೆಡಿಯಾಗಿದೆ. ವೃತ್ತ ಬರೆದಾಗಿದೆ. ಗೆರೆ ಹಾಕಾಗಿದೆ. ಮೋದಿ ತವರು ಗುಜರಾತ್‌ನಲ್ಲಿ ಕಮಲ ಅರಳೋದು ಎಕ್ಸಿಟ್ ಪೋಲ್ ಪ್ರಕಾರ ಪಕ್ಕಾ ಆಗಿದೆ. ಹಿಮಾಚಲ ಪ್ರದೇಶದಲ್ಲೂ ಇತಿಹಾಸ ನಿರ್ಮಿಸಿರೋ ಮೋದಿ, ಅಮಿತ್ ಶಾ ಜೋಡಿಯ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ ರಣತಂತ್ರ ರೂಪಿಸುತ್ತಿದ್ದಾರೆ.

ಇದನ್ನೂ ಓದಿ: Gujarat Exit Poll 2022 ಗುಜರಾತ್‌ನಲ್ಲಿ ಮತ್ತೆ ಕೇಸರಿ ಬಾವುಟ ಹಾರಾಡೋದು ಫಿಕ್ಸ್, ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಗುಜರಾತ್, ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲಿ ವಿಜಯದ ಬಾವುಟ ಹಾರಿಸ್ಬೇಕು. ಗೆಲುವಿನ ನಗಾರಿ ಬಾರಿಸ್ಬೇಕು ಅಂತಾ ಮೋದಿ ಪ್ಲ್ಯಾನ್ ಮಾಡಿದ್ದಾರೆ. ಇಂದು(ಡಿಸೆಂಬರ್ 05) ಮಹತ್ವದ ಮೀಟಿಂಗ್ ನಡೆಸಿದ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮುಂದೆ ನಡೆಯೋ ಚುನಾವಣಾ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿದ್ದಾರೆ. ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತ್ರಿಪುರ ರಾಜ್ಯಗಳ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಇಲ್ಲಿ, ಎಲ್ಲದಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ರೀತಿ ತಂತ್ರ ರೂಪಿಸ್ಬೇಕು ಅನ್ನೋ ಬಗ್ಗೆ ಚರ್ಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಇತ್ತ ರಾಜ್ಯ ಬಿಜೆಪಿಯಲ್ಲೂ ಗೆಲುವಿನ ಮಂತ್ರ!

ಅತ್ತ ದೆಹಲಿಯಲ್ಲಿ ಕುಳಿತು ಕರ್ನಾಟಕದಲ್ಲಿ ಕಮಲ ಅರಳಿಸಲು ಮೋದಿ ಅಮಿತ್ ಶಾ ರಣತಂತ್ರ ರೂಪಿಸಿದ್ರೆ, ಇತ್ತ ರಾಜ್ಯ ಬಿಜೆಪಿಯಲ್ಲೂ ಗೆಲುವಿನ ಜಪ ಜೋರಾಗಿದೆ. ಗುಜರಾತ್, ಹಿಮಾಚಲ ಮಾದರಿಯಲ್ಲೇ ಕರ್ನಾಟಕದಲ್ಲೂ ಮೋದಿ ಹವಾ ನುಗ್ಗಬೇಕು ಎನ್ನುವ ನಿಟ್ಟಿನಲ್ಲಿ ತಂತ್ರ ರೂಪಿಸಲಾಗ್ತಿದೆ. ಮೋದಿ ಹವಾ, ಮೋದಿ ಇಮೇಜ್ ಜೊತೆಗೆ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಹೇಗಿದೆ ಅನ್ನೋ ಬಗ್ಗೆ ಕಮಲ ನಾಯಕರು ಎರಡರಿಂದ ಮೂರು ಸರ್ವೆ ಮಾಡಿಸಿದ್ದಾರೆ. ಈ ಸರ್ವೆ ಮುಂದಿಟ್ಟುಕೊಂಡು, ಗುಜರಾತ್, ಹಿಮಾಚಲ ಪ್ರದೇಶ ಗೆಲುವನ್ನ ಬೆನ್ನಿಗೆ ಕಟ್ಟಿಕೊಂಡು ಅಖಾಡಕ್ಕೆ ಧುಮಕಲು ಪ್ಲ್ಯಾನ್ ಮಾಡಿದ್ದಾರೆ.

2023ರಲ್ಲಿ ನೂರಕ್ಕೆ ನೂರು ಗೆಲುವು ನಮ್ಮದೇ ಎಂದ ಸುಧಾಕರ್!

ಬಿಜೆಪಿ ಸರ್ವೆ ಬಗ್ಗೆ ಸುಳಿವು ನೀಡಿರೋ ಸಚಿವ ಡಾ.ಕೆ ಸುಧಾಕರ್, ಮೂರು ಪಕ್ಷದವರು ಸರ್ವೆ ಮಾಡಿಸಿದ್ದಾರೆ. ಆದ್ರೆ, ನೂರಕ್ಕೆ ನೂರು ಈ ಬಾರಿ ಗೆಲುವು ನಮ್ಮದೇ. ಸ್ಪಷ್ಟ ಬಹುಮತ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಇಷ್ಟೇ ಅಲ್ಲ, ಒಂದೊಂದು ರಾಜ್ಯಕ್ಕೆ ಒಂದೊಂದು ತಂತ್ರ ಇರುತ್ತೆ. ರಾಜಕೀಯ ತಂತ್ರಗಳನ್ನ ರೂಪಿಸಿ, ಸರ್ಕಾರ ರಚನೆ ಮಾಡ್ತೀವಿ ಎಂದು ಸುಧಾಕರ್ ಹೇಳಿದ್ದಾರೆ.

ಕಾಂಗ್ರೆಸ್‌ನಿಂದಲೂ ರಾಜ್ಯದಲ್ಲಿ ಚುನಾವಣೋತ್ತರ ಸರ್ವೆ

ಬಿಜೆಪಿಗೆ ಮೋದಿ ಸ್ಟ್ರೆಂತ್ ಇದೆ. ಅಮಿತ್‌ ಶಾ ರಣತಂತ್ರವಿದೆ. ಆದ್ರೆ, ಇವೆರಡನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ತನ್ನ ಬಳಿ ಇರೋ ಬಾಣಗಳನ್ನ ರೆಡಿ ಮಾಡಿಕೊಳ್ಳುತ್ತಿದೆ . 40 ಪರ್ಸೆಂಟ್ ಕಮಿಷನ್, ಭ್ರಷ್ಟ ಆಡಳಿತ, ಪಿಎಸ್‌ಐ ಹಗರಣ, ರೌಡಿ ರಾಜಕೀಯ ಅನ್ನೋ ಬಾಂಬ್‌ಗಳನ್ನ ಬಿಜೆಪಿ ಮೇಲೆ ಎಸೆದು, ಕಮಲವನ್ನ ಚಿವುಟಿ ಹಾಕಲು ಕೈ ಪಡೆ ಸ್ಕೆಚ್ ಹಾಕಿದೆ. ಬಿಜೆಪಿಯನ್ನು ಬಡಿದು ಹಾಕಿ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಕಾಂಗ್ರೆಸ್ ಪಡೆಯೂ ಸಹ ತನ್ನದೇ ಸರ್ವೆ ಮಾಡಿಸಿ, ರಾಜ್ಯದಲ್ಲಿ ಹವಾ ಹೇಗಿದೆ ಅನ್ನೋದನ್ನ ಅರೆದು ಕುಡಿದಿದೆ.

ಇನ್ನೂ ಜೆಡಿಎಸ್‌ ಸಹ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಣಿಯಲು ರಣತಂತ್ರ ರೂಪಿಸಿದೆ. ಗುಜರಾತ್, ಹಿಮಾಚಲ ಪ್ರದೇಶದ ಗೆಲುವಿನ ಸುಳಿವು ಬಿಜೆಪಿ ಪಾಳಯದಲ್ಲಿ ಸಂಭ್ರಮ ತಂದಿದ್ದು, ಇದೇ ರಿಸಲ್ಟ್ ಕರ್ನಾಟಕದಲ್ಲೂ ಬರುತ್ತೆ ಅನ್ನೋ ವಿಶ್ವಾಸದಲ್ಲಿದೆ. ಸಮೀಕ್ಷೆಗಳು ಏನೇ ಹೇಳಿದ್ರೂ ಗೆಲುವು ನಮ್ಮದೇ ಅಂತಾ ಮೂರು ಪಕ್ಷಗಳು ಹೇಳುತ್ತಿವೆ.

ಒಟ್ಟಿನಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಮುಗಿಸಿ ಕೈತೊಳೆದುಕೊಂಡಿರುವ ಮೋದಿ-ಶಾ ಜೋಡಿಯ ಮುಂದಿನ ಟಾರ್ಗೆಟ್ ಕರ್ನಾಟಕವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:59 pm, Mon, 5 December 22