ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ದಿನಗಣನೆ ಶುರುವಾಗಿದ್ದು ರಾಜಕೀಯ ರಣಕಣ ರಂಗೇರಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ. ಇಂದು ಸಂಜೆ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು ನೈಸ್ ರಸ್ತೆಯಿಂದ ಸುಮ್ಮನಹಳ್ಳಿ ಜಂಕ್ಷನ್ವರೆಗೆ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು ಹಾಕಲಾಗಿದೆ. ಹಾಘೂ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
2 ದಿನ ರಾಜ್ಯ ಪ್ರವಾಸ ಮಾಡಲಿರುವ ಮೋದಿ, 6 ಸಮಾವೇಶ 2 ರೋಡ್ಶೋ ನಡೆಸಲಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಮೋದಿ ಸಂಚರಿಸುವ ರಸ್ತೆಯುದ್ದಕ್ಕೂ 1 ಸಾವಿರ ಮನೆ ಮತ್ತು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಮೋದಿ ರೋಡ್ ಶೋ ಭದ್ರತೆಗೆ 2,600 ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 6 ಡಿಸಿಪಿ, 18 ಎಸಿಪಿ, 120ಕ್ಕೂ ಹೆಚ್ಚು ಪಿಐ, 250 ಪಿಎಸ್ಐ, 2,600ಕ್ಕೂ ಹೆಚ್ಚು ಪಿಸಿಗಳು, ಕೆಎಸ್ಆರ್ಪಿ ಸಿಬ್ಬಂದಿ ಮೋದಿ ರೋಡ್ಶೋ ಭದ್ರತೆಗೆ ನಿಯೋಜಿಸಲಾಗಿದೆ. ಮೋದಿ ರೋಡ್ಶೋ ವೇಳೆ ರಸ್ತೆ ಬಳಿಯ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗುತ್ತೆ. ರಸ್ತೆಯ ಒಂದು ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಒಟ್ಟು 6 ಕಿ.ಮೀ. ರೋಡ್ ಶೋ ನಡೆಯಲಿದ್ದು ಮೋದಿ ರೋಡ್ ಶೋಗೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆದಿದೆ.
ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಸುಮನಹಳ್ಳಿ ಸರ್ಕಲ್ವರೆಗೂ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಇಂದು ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಓಲ್ಡ್ ಏರ್‌ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್‌ಸನ್ ರಸ್ತೆ, ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ.ಆರ್.ಸರ್ಕಲ್, ಆರ್.ವಿ.ಕಾಲೇಜ್ ರಸ್ತೆ, ಲಾಲ್‌ಬಾಗ್ ಮುಖ್ಯ ರಸ್ತೆ, ಬಸನವಗುಡಿ 50 ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಾಗಡಿ TO ಬೆಂಗಳೂರು ಸಂಚರಿಸುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ. ಮಾಗಡಿಯಿಂದ ತುಮಕೂರು ರಸ್ತೆಯತ್ತ ಸಾಗುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೊಂಡೇಕೊಪ್ಪ ನೆಲಮಂಗಲ ಮೂಲಕ ಸಂಚರಿಸಬಹುದು. ತುಮಕೂರಿಂದ ನೈಸ್ ರಸ್ತೆ ಕಡೆ ಹೋಗುವವರು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ-ತಾವರೆಕೆರೆ – ಹೆಮ್ಮಿಗೆಪುರ-ಕೊಮ್ಮಘಟ್ಟ-ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು. ಬೆಂಗಳೂರು TO ಮಾಗಡಿರಸ್ತೆ ಕಡೆ ಓಡಾಡುವವರು ಎಂ.ಸಿ. ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ-ಕೆಂಗೇರಿ – ಕೊಮ್ಮಘಟ್ಟ – ಹೆಮ್ಮಿಗೆಪುರ – ತಾವರೆಕೆರೆ ಮೂಲಕ ಸಂಚರಿಸಬಹುದು. ಇನ್ನು ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಹೋಗಲು ನಾಯಂಡಹಳ್ಳಿ ಜಂಕ್ಷನ್ ಮೂಲಕ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ ಆರ್ ಆರ್ ಕಾಲೇಜು ರಸ್ತೆ ಮೂಲಕ ತೆರಳಬೇಕು. ಬಳಿಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್, ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು. ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗಲು ಗೊರಗುಂಟೆಪಾಳ್ಯ – ವೆಸ್ಟ್ ಆಫ್ ಕಾರ್ಡ್ ರಸ್ತೆ – ಎಂ.ಸಿ ಸರ್ಕಲ್ – ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
ಮೋದಿ ರೋಡ್ ಶೋ ವೇಳೆ ಬುಲೆಟ್ ಪ್ರೂಫ್ ವಾಹನದಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ದೆಹಲಿಯಿಂದ ಬಂದಿರುವ ಪ್ರತ್ಯೇಕ ಬುಲೆಟ್ ಪ್ರೂಫ್ ವಾಹನದಲ್ಲೇ ಮೋದಿ ರೋಡ್ ಶೋ ಮಾಡಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:15 am, Sat, 29 April 23