Puttur Constituency: ಪುತ್ತೂರಿನಲ್ಲಿ ಬಿಜೆಪಿ ವರ್ಸಸ್ ಹಿಂದುತ್ವ ಫೈಟ್; ಯಾರಿಗೆ ಒಲಿಯಲಿದೆ ಜಯದ ಮಾಲೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ಕ್ಷೇತ್ರ ಪುತ್ತೂರನ್ನು ಗೆಲ್ಲುವುದು ಬಿಜೆಪಿಗೆ ಇದೀಗ ಸವಾಲಾಗಿ ಪರಿಣಮಿಸಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಂಡಾಯವೆದ್ದು ಪಕ್ಷೇತರವಾಗಿ ನಿಂತಿರುವುದು ಬಿಜೆಪಿಗೆ ಸಂಚಕಾರ ತಂದೊಡ್ಡಿದೆ. ಇದೀಗ ಬಂಡಾಯ ಅಭ್ಯರ್ಥಿಯನ್ನ ಸೋಲಿಸಲು ಆರ್.ಎಸ್.ಎಸ್ ಪಣತೊಟ್ಟಿದ್ದು ನಾಯಕರ ನಡುವೆ ವಾಕ್ಸಮರವು ನಡೆಯುತ್ತಿದೆ.
ದಕ್ಷಿಣಕನ್ನಡ: ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(BJP) ವರ್ಸಸ್ ಹಿಂದುತ್ವ ಫೈಟ್ ಜೋರಾಗಿದೆ. ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ(Arun Kumar Puttila) ಸೋಲಿಸಲು ಆರ್.ಎಸ್.ಎಸ್ ಪಣತೊಟ್ಟಿದೆ. ಮನೆ ಮನೆ ಪ್ರಚಾರ ತಂತ್ರಕ್ಕೆ ಬೇರೆ ಬೇರೆ ಊರಿನಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು ಪುತ್ತೂರಿಗೆ ಆಗಮಿಸಿದ್ದಾರೆ. ಪುತ್ತೂರನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾದ ಕಾರಣ ನಾನ ಕಸರತ್ತು ನಡೆಸಲಾಗುತ್ತಿದೆ. ಈ ನಡುವೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್(Kalladka Prabhakar Bhat) ಅವರು ಅರುಣ್ ಕುಮಾರ್ ಪುತ್ತಿಲ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ಮತ್ತು ಹಿಂದುತ್ವ ಅಂತ ಇಲ್ಲ, ಬಿಜೆಪಿಯೇ ಹಿಂದುತ್ವ. ಸ್ವಾರ್ಥಕ್ಕೋಸ್ಕರ ಹುಡುಗರನ್ನ ಬಡಿದೆಬ್ಬಿಸಲು ಏನು ಬೇಕಾದರೂ ಮಾತನಾಡಬಹುದು. ಹಿಂದುತ್ವ ಎನ್ನುವವರು ಬಿಜೆಪಿಗೆ ಮಾತ್ರ ಓಟ್ ಹಾಕಬೇಕು ಎಂದು ಹೇಳಿದ್ದಾರೆ. ಆರ್.ಎಸ್.ಎಸ್ ಕಾರ್ಯಕರ್ತರು ಎಲ್ಲಾ ಕಡೆಯಿಂದ ಬಂದಿದ್ದಾರೆ. ನೂರು ಶೇಕಡಾ ಬಿಜೆಪಿಗೋಸ್ಕರ ನಾವು ಕೆಲಸ ಮಾಡುತ್ತೆವೆ ಎಂದಿದ್ದಾರೆ.
ಇನ್ನು ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿದ್ದು, ಯುವ ಪಡೆ ಇವರ ಬೆನ್ನಿಗೆ ನಿಂತಿದೆ. ಬಿಜೆಪಿಯಂತೆ ಇವರಿಗೆ ಬೂತ್ ಇಲ್ಲದಿದ್ದರೂ ಗ್ರಾಮ ಗ್ರಾಮಗಳಲ್ಲಿ ಜನ ಸೇರಿಸಿ ಚುನಾವಣಾ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಕೆಲ ಕಡೆಗಳಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ ಪಂಚಾಯತ್ ಸದಸ್ಯರು, ಆರ್.ಎಸ್.ಎಸ್‌ನ ಹಿರಿಯರು, ಸಂಘಟನೆ ಪದಾಧಿಕಾರಿಗಳು ಜೊತೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ನಡೆಸುವ ಈ ರೀತಿಯ ಸಭೆಗಳಿಗೆ ಗ್ರಾಮ ಗ್ರಾಮಗಳಲ್ಲಿ ಜನ ಸೇರುತ್ತಿರುವುದು ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಅರುಣ್ ಕುಮಾರ್ ಪುತ್ತಿಲ ವಿರುದ್ದ ಪಕ್ಷದ ನಾಯಕರು, ಸಂಘಟನೆಯಲ್ಲಿರುವ ಕೆಲ ನಾಯಕರು ವಾಕ್ಸಮರ ನಡೆಸುತ್ತಿದ್ದಾರೆ. ಈ ಬಗ್ಗೆ ಟಿ.ವಿ 9 ಜೊತೆ ಮಾತನಾಡಿರುವ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನ ಮತದಾರ ಯಾರನ್ನು, ಯಾತಕ್ಕಾಗಿ ಗೆಲ್ಲಿಸಬೇಕೆಂಬ ಸಂಕಲ್ಪ ಮಾಡಿದ್ದಾನೆ. ಬೇರೆ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತಂದು ಪ್ರಚಾರ ಕಾರ್ಯ ಮಾಡುತ್ತಿರುವುದು ದುರಂತ ಅಂದಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ: ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು
ಕಾಂಗ್ರೆಸ್‌ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ 2008ರಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಾಗ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆದ್ರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ಜನರ ಒಲವು ಜಾಸ್ತಿಯಿದೆ. ಈ ನಡುವೆ ಬಿಜೆಪಿಯ ಮತ ವಿಭಜನೆಯಾಗಿ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈಗೆ ಲಾಭವಾಗುವ ಚರ್ಚೆಯು ನಡೆಯುತ್ತಿದೆ. ಒಟ್ಟಿನಲ್ಲಿ ಮೇ 13ಕ್ಕೆ ಫಲಿತಾಂಶ ಹೊರಬೀಳಲಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ವರದಿ: ಅಶೋಕ್ ಟಿವಿ 9 ಮಂಗಳೂರು
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ